ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನದು ಗಲಭೆಮುಕ್ತ ಆಡಳಿತ, ಮೋದಿ ಅಧಿಕಾರದುದ್ದಕ್ಕೂ ಗಲಭೆಗಳೇ ತುಂಬಿವೆ: ಮಾಯಾವತಿ

Last Updated 15 ಮೇ 2019, 7:50 IST
ಅಕ್ಷರ ಗಾತ್ರ

ಲಖನೌ:‘ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆಗಳು ನಡೆದಿರಲಿಲ್ಲ’ ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತಿನ ಚಾಟಿ ಬೀಸಿದ ಮಾಯಾವತಿ, ‘ಮೋದಿ ಅವರು ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಗಿಂತಲೂ ಹೆಚ್ಚುಕಾಲ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದವರು. ಆದರೆ, ಅವರ ಆಡಳಿತವು ಬಿಜೆಪಿಗೆ ಕಪ್ಪು ಚುಕ್ಕೆಯಾಗಿದೆ. ನನ್ನ ಆಡಳಿತಾವಧಿಯಲ್ಲಿ ಉತ್ತರ ಪ್ರದೇಶವು ಗಲಭೆ ಹಾಗೂ ಅರಾಜಕತೆಯಿಂದ ಮುಕ್ತವಾಗಿತ್ತು’ ಎಂದಿದ್ದಾರೆ.

ವಾಗ್ದಾಳಿ ಮುಂದುವರಿಸಿದ ಅವರು, ‘ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಲ್ಲಿ ನನ್ನ ಸರ್ಕಾರವು ಸಮರ್ಥವಾಗಿತ್ತು. ಆದರೆ ಅದೇ ವಿಚಾರದಲ್ಲಿ ಬಿಜೆಪಿ ‘ಅಸಮರ್ಥ’ವಾಗಿದೆ. ಪ್ರಧಾನಿಯಾಗಿ ಹಾಗೂ ಮುಖ್ಯಮಂತ್ರಿಯಾಗಿ ಮೋದಿ ಅವರ ಅಧಿಕಾರಾವಧಿಯುದ್ದಕ್ಕೂ ಗಲಭೆಗಳೇ ತುಂಬಿವೆ. ಅವರು ಸಾರ್ವಜನಿಕ ಕಚೇರಿಯನ್ನು ಮುನ್ನಡೆಸಲು ಅಸಮರ್ಥರು’ ಎಂದು ಗುಡುಗಿದರು.

ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕುಬಾರಿ ಅಧಿಕಾರ ನಡೆಸಿದ್ದರು. 1995 ಹಾಗೂ 1997ರಲ್ಲಿ ಎರಡು ಬಾರಿ ಅಲ್ಪ ಅವಧಿಗೆ ಆಯ್ಕೆಯಾಗಿದ್ದರು. ನಂತರ 2002ರಿಂದ 2003ರ ವರೆಗೆ ಹಾಗೂ 2007ರಿಂದ 2012ರ ವರೆಗೆ ಅಧಿಕಾರಕ್ಕೇರಿದ್ದರು.

ಬಿಎಸ್‌ಪಿಯನ್ನು ‘ಬೆಹನ್‌ಜೀ ಕಿ ಸಂಪತ್ತಿ ಪಾರ್ಟಿ’(ಸೋದರಿಯ ಸಂಪತ್ತಿನ ಪಕ್ಷ) ಎಂದುಮೋದಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಬಿಎಸ್‌ಪಿಯ ರಾಷ್ಟ್ರೀಯ ಅಧ್ಯಕ್ಷಳಾಗಿ ನಾನು ಇಂದು ಏನಾಗಿದ್ದೀನೋ ಅದನ್ನು ನನ್ನ ಹಿತೈಷಿಗಳು ಹಾಗೂ ಈ ಸಮಾಜ ನೀಡಿದ್ದು. ನಾನು ಸರ್ಕಾರದಿಂದ ಯಾವುದನ್ನೂ ಮುಚ್ಚಿಟ್ಟಿಲ್ಲ’ ಎಂದರು. ಮುಂದುವರಿದು ಬಿಜೆಪಿಯು ಅತ್ಯಂತ ಭ್ರಷ್ಟ ಸದಸ್ಯರನ್ನು ಹೊಂದಿದೆ ಎಂದೂ ಆರೋಪಿಸಿದರು.

ಕೊನೆ ಹಂತದ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಆರೋಪ ಪ್ರತ್ಯಾರೋಪಗಳು ಜೋರಾಗಿಯೇ ನಡೆಯುತ್ತಿವೆ. ಉತ್ತರಪ್ರದೇಶದ 13ಕ್ಷೇತ್ರಗಳಿಗೆ ಮೇ 19ರಂದು ಏಳನೇ ಹಂತದಲ್ಲಿ ಮತದಾನವಾಗಲಿದೆ. ಫಲಿತಾಂಶ ಇದೇ ತಿಂಗಳು 23ರಂದು ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT