ಶನಿವಾರ, ಆಗಸ್ಟ್ 24, 2019
23 °C
ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ಚುನಾವಣಾ ಗಲಭೆ

ಹಿಂಸಾಚಾರಕ್ಕೆ ಬಲಿಯಾದ ಕಾರ್ಯಕರ್ತರ ಕುಟುಂಬದವರಿಗೆ ಮೋದಿ ಪ್ರಮಾಣವಚನಕ್ಕೆ ಆಹ್ವಾನ

Published:
Updated:

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರಕ್ಕೆ ಬಲಿಯಾದ ಪಕ್ಷದ ಕಾರ್ಯಕರ್ತರ ಕುಟುಂಬದವರನ್ನು ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ಆಹ್ವಾನಿಸಿದೆ.

ಪಕ್ಷದ ಕಾರ್ಯಕರ್ತರ ಕುಟುಂಬದ ಸುಮಾರು 50 ಮಂದಿಯನ್ನು ವಿಶೇಷ ಆಹ್ವಾನಿತರನ್ನಾಗಿ ಪರಿಗಣಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇವರ ಕುಟುಂಬದವರು ಕಳೆದ 6 ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆ ಮತ್ತು ಇತ್ತೀಚಿನ ಲೋಕಸಭೆ ಚುನಾವಣೆ ಸಂದರ್ಭ ಸಂಭವಿಸಿದ ಹಿಂಸಾಚಾರಗಳಲ್ಲಿ ಮೃತಪಟ್ಟಿದ್ದರು.

ಇದನ್ನೂ ಓದಿ: ಮೇ 30 ಸಂಜೆ 7 ಗಂಟೆಗೆ ಮೋದಿ ಪ್ರಮಾಣ ವಚನ ಸ್ವೀಕಾರ​

ಪಶ್ಚಿಮ ಬಂಗಾಳದ ಮಿಡ್ನಾಪುರದ ಬಿಜೆಪಿ ಕಾರ್ಯಕರ್ತ, ದಿವಂಗತ ಮನು ಹನ್ಸ್‌ದಾ ಅವರ ಪುತ್ರ ಕೂಡ ಸಮಾರಂಭಕ್ಕೆ ಆಹ್ವಾನಿತರಾಗಿದ್ದಾರೆ. ‘ನನ್ನ ತಂದೆಯನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆ ಮಾಡಿದ್ದರು. ನಾವೀಗ ದೆಹಲಿಗೆ ತೆರಳುತ್ತಿರುವ ಬಗ್ಗೆ ಸಂತಸವಿದೆ. ನಮ್ಮ ಪ್ರದೇಶದಲ್ಲಿ ಈಗ ಶಾಂತಿ ನೆಲೆಸಿದೆ’ ಎಂಬ ಹನ್ಸ್‌ದಾ ಪುತ್ರ ಅವರ ಹೇಳಿಕೆಯನ್ನು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಎಡಪಕ್ಷಗಳ ಮತಬುಟ್ಟಿಗೆ ಕೈಹಾಕಿದ ಬಿಜೆಪಿ​

ಹನ್ಸ್‌ದಾ ಅವರು ಚುನಾವಣಾ ಹಿಂಸಾಚಾರದಲ್ಲಿ ಮೃತಪಟ್ಟಿದ್ದರು. ಲೋಕಸಭೆ ಚುನಾವಣೆಯಲ್ಲಿ ಮಿಡ್ನಾಪುರ ಕ್ಷೇತ್ರದಲ್ಲಿ ಬಿಜೆಪಿಯ ದಿಲೀಪ್ ಘೋಷ್ ಅವರು ಟಿಎಂಸಿಯ ಮಾನಸ್ ಭುನಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಟಿಎಂಸಿ ಭದ್ರಕೋಟೆಯಲ್ಲಿ ಅರಳಲಿದೆ 'ಕಮಲ'​

ಲೋಕಸಭೆ ಚುನಾವಣೆಯ ಎಲ್ಲ ಹಂತಗಳಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿತ್ತು. ರಾಜ್ಯದ ಒಟ್ಟು 42 ಲೋಕಸಭಾ ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿ ಜಯಗಳಿಸಿದೆ.

ಇದನ್ನೂ ಓದಿ: ಬಂಗಾಳ ರಾಜಕಾರಣಕ್ಕೆ ಅಂಟಿದ ಹಿಂಸೆಯ ನಂಟು​

ನಾಳೆ ಪ್ರಮಾಣವಚನ: ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಮಂತ್ರಿಯಾಗಿ ಗುರುವಾರ ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಮಾರಂಭದಲ್ಲಿ ಸುಮಾರು 7,000 ಜನ ಭಾಗಿಯಾಗುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಸಮಾರಂಭಕ್ಕೆ ಹಾಜರಾಗುವ ಸಾಧ್ಯತೆ ಇದೆ.

‘ಆಹ್ವಾನ ಬಂದಿದೆ. ಇತರ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಮಾತುಕತೆ ನಡೆಸಿದ್ದೇನೆ. ಇದೊಂದು ಔಪಚಾರಿಕ ಕಾರ್ಯಕ್ರಮ. ಹಾಗಾಗಿ ಭಾಗವಹಿಸಲು ಯತ್ನಿಸುತ್ತೇನೆ’ ಎಂದು ಅವರು ಈಗಾಗಲೇ ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ಪ್ರಮಾಣಕ್ಕೆ ಮಮತಾ​

Post Comments (+)