ಮಂಗಳವಾರ, ಜನವರಿ 28, 2020
20 °C
ದೇಶದಲ್ಲಿ ದೊಂಬಿ, ಹಿಂಸಾಚಾರಕ್ಕೆ ಕಾಂಗ್ರೆಸ್‌ ಕಾರಣ: ಪ್ರಹ್ಲಾದ ಜೋಷಿ

ಎಲ್ಲ ಮುಸ್ಲಿಮರಿಗೂ ಆಶ್ರಯ ನೀಡಲು ಧರ್ಮಛತ್ರವಲ್ಲ: ಸಚಿವ ಪ್ರಹ್ಲಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ಬಂದ ಬಳಿಕವೂ ನೆರೆಯ ದೇಶಗಳಿಂದ ಶರಣಾಗಿ ಬರುವ ಮುಸ್ಲಿಮರು ಅರ್ಜಿ ಸಲ್ಲಿಸಿದರೆ ಸಹಜವಾಗಿ ಪೌರತ್ವ ಸಿಗುತ್ತದೆ. ಆದರೆ, ಜಗತ್ತಿನ ಎಲ್ಲ ದೇಶಗಳ ಮುಸ್ಲಿಮರಿಗೆ ಆಶ್ರಯ ನೀಡಲು ಭಾರತ ‘ಧರ್ಮಛತ್ರ’ ಅಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

‘ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಮತೀಯ ಕಾರಣಕ್ಕೆ ದೌರ್ಜನ್ಯಕ್ಕೆ ಸಿಲುಕಿ ನಿರಾಶ್ರಿತರಾಗಿ ಬಂದ ಹಿಂದೂ, ಸಿಖ್‌, ಬೌದ್ಧ, ಪಾರ್ಸಿ, ಕ್ರೈಸ್ತ ಧರ್ಮಕ್ಕೆ ಸೇರಿದ ಸುಮಾರು 5 ಲಕ್ಷ ಕುಟುಂಬಗಳಿಗೆ ಪೌರತ್ವದ ಸೌಲಭ್ಯ ಸಿಗುತ್ತದೆ. ಈ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಪೌರತ್ವ ತಿದ್ದುಪಡಿಗೂ ರಾಷ್ಟ್ರೀಯ ನಾಗರಿಕ ನೋಂದಣಿಗೂ (ಎನ್‌ಆರ್‌ಸಿ) ಸಂಬಂಧವಿಲ್ಲ. ಮೋದಿ ಸರ್ಕಾರದ ವಿರುದ್ಧ ಅಸೂಯೆಯಿಂದ ಹಗೆತನ ಸಾಧಿಸುತ್ತಿರುವ ಕಾಂಗ್ರೆಸ್‌ ಮತ್ತು ಇತರ ಶಕ್ತಿಗಳು ದುರುದ್ದೇಶದಿಂದ ಮುಸ್ಲಿಮರನ್ನು ದಾರಿ ತಪ್ಪಿಸಿ, ಹಿಂಸೆಗೆ ಪ್ರಚೋದಿಸುತ್ತಿದ್ದಾರೆ’ ಎಂದು ದೂರಿದರು.

‘ಪಾಕಿಸ್ತಾನದಲ್ಲಿ 1947ರಲ್ಲಿ ಶೇ18.7ರಷ್ಟು ಹಿಂದೂ, ಸಿಖ್ ಜನಸಂಖ್ಯೆಇತ್ತು. 2015ರಲ್ಲಿ ಆ ಪ್ರಮಾಣ ಶೇ 1.6ಕ್ಕೆ ಇಳಿದಿದೆ. ಬಾಂಗ್ಲಾದೇಶ ವಿಮೋಚನೆಗೊಂಡಾಗ ಶೇ 22ರಷ್ಟು ಇದ್ದದ್ದು ಈಗ ಶೇ 8.5ಕ್ಕೆ ಇಳಿದಿದೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತಕ್ಕೆ ಮುನ್ನ 2 ಲಕ್ಷ ಹಿಂದೂ, ಸಿಖ್ಖರು ಇದ್ದರು. ಈಗ ಆಸಂಖ್ಯೆ ಕೇವಲ 500. ಅಲ್ಲಿ ಅಲ್ಪಸಂಖ್ಯಾತರ ಮೇಲೆ ಯಾವ ಪರಿ ದೌರ್ಜನ್ಯ ನಡೆದಿದೆ ಎಂಬುದಕ್ಕೆ ಈ ಅಂಕಿ–ಸಂಖ್ಯೆಗಳೇ ನಿದರ್ಶನ’ ಎಂದು ವಿವರಿಸಿದರು.

‘ಮಮತಾ ದೇಶದ್ರೋಹಿ’

 ಪೌರತ್ವ ಕಾಯ್ದೆ ಕುರಿತು ಜನಮತ ಗಣನೆ ಮಾಡಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು ಎಂದು ಹೇಳುವ ಮೂಲಕ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇಶ ದ್ರೋಹ ಎಸಗಿದ್ದಾರೆ. ಅವರಿಗೆ ದೇಶದ ಹಿತಾಸಕ್ತಿಗಿಂತ ಮತ ಬ್ಯಾಂಕ್‌ ಮುಖ್ಯ ಎಂದು ಪ್ರಹ್ಲಾದ ಜೋಷಿ ಹರಿಹಾಯ್ದರು.

ಮಮತಾ ಬ್ಯಾನರ್ಜಿ ಮಾತ್ರ ಅಲ್ಲ ಯಾವುದೇ ಶಕ್ತಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯನ್ನು ತಡೆಯಲು ಸಾಧ್ಯವಿಲ್ಲ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು