ಮಿಜೋರಾಂನಲ್ಲಿ ಎಂಎನ್‌ಎಫ್ ಮೇಲುಗೈ: ನೀವು ತಿಳಿಯಬೇಕಾದ 10 ಅಂಶಗಳು

7
ಪಾನನಿಷೇಧದ ಆಶ್ವಾಸನೆಗೆ ಒಲಿದ ಮತದಾರರು

ಮಿಜೋರಾಂನಲ್ಲಿ ಎಂಎನ್‌ಎಫ್ ಮೇಲುಗೈ: ನೀವು ತಿಳಿಯಬೇಕಾದ 10 ಅಂಶಗಳು

Published:
Updated:

ಮಿಜೋರಾಂನಲ್ಲಿ ಮಿಜೊ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ನಿಚ್ಚಳ ಬಹುಮತ ದಾಖಲಿಸಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ. ಮಿಜೊರಾಂನ ಒಟ್ಟು 40 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಎಂಎನ್‌ಎಫ್ ಜಯಗಳಿಸಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ನ ಲಾಲ್ ತಾನ್‌ವಹ್ಲಾ ಚಂಪಾಯಿ ದಕ್ಷಿಣ ಕ್ಷೇತ್ರದಲ್ಲಿ ಎಂಎನ್‌ಎಫ್‌ನ ಟಿ.ಜೆ.ಲಲ್‌ನುಟುಲಂಗಾ ಎದುರು ಸೋತಿದ್ದಾರೆ. ಈ ಬಾರಿ ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಬಿಜೆಪಿ ಒಂದು, ಇತರ ಪಕ್ಷಗಳು ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿವೆ. 

ಕ್ರಿಶ್ಚಿಯನ್ ಸಮುದಾಯ ಬಹುಸಂಖ್ಯಾತವಾಗಿರುವ ಮಿಜೋರಾಂ ವಿಧಾನಸಭೆ ಚುನಾವಣೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳು ಇಲ್ಲಿವೆ...

1) ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ ನ.28ರಂದು ಚುನಾವಣೆ ನಡೆಯಿತು. ಒಟ್ಟು 210 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತದಾನದ ಪ್ರಮಾಣ ಶೇ 80 ದಾಟಿತ್ತು. 

2) ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ಎದುರಾಗಿ ಎಂಎನ್‌ಎಫ್ ಮತ್ತು ಬಿಜೆಪಿ ಸ್ಪರ್ಧಿಸಿದ್ದವು. ಹೀಗಾಗಿ ತ್ರಿಪಕ್ಷೀಯ ಸ್ಪರ್ಧೆಗೆ ಮಧ್ಯಪ್ರದೇಶದ ಜನರು ಸಾಕ್ಷಿಯಾದರು.

3) ಮುಖ್ಯಮಂತ್ರಿ ಲಾಲ್‌ ತನ್‌ವಹ್ಲಾ ಮೂರನೇ ಬಾರಿಗೆ ಆಡಳಿತ ನಡೆಸುವ ಕನಸು ಕಂಡಿದ್ದರು. 1987ರ ನಂತರ ಮಿಜೋರಾಂನಲ್ಲಿ ಯಾವುದೇ ಪಕ್ಷ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿಲ್ಲ.

4)  ಮುಖ್ಯಮಂತ್ರಿ ಲಾಲ್‌ ತನ್‌ವಹ್ಲಾ ನೇತೃತ್ವದಲ್ಲಿ ಕಾಂಗ್ರೆಸ್‌ ಮತ್ತು ಜೊಮತಂಗಾ ನೇತೃತ್ವದಲ್ಲಿ ಎಂಎನ್‌ಎಫ್ ಚುನಾವಣೆ ಎದುರಿಸಿದವು. ಅತಂತ್ರ ವಿಧಾನಸಭೆ ರೂಪುಗೊಂಡರೆ ಜೊರೊಮ್ ಪೀಪಲ್ಸ್ ಮೂಮೆಂಟ್ ಮತ್ತು ಬಿಜೆಪಿ ಕಿಂಗ್‌ಮೇಕರ್‌ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು.

5) ಎಂಎನ್‌ಎಫ್ ನಿಚ್ಚಳ ಬಹುಮತ ದಾಖಲಿಸಿರುವುದು ಮಿಜೊರಾಂ ಜನರಲ್ಲಿ ಅಚ್ಚರಿ ತಂದಿಲ್ಲ. ಎಲ್ಲ ಮತಗಟ್ಟೆ ಸಮೀಕ್ಷೆಗಳೂ ಎಂಎನ್‌ಎಫ್ ಜಯಸಾಧಿಸಲಿದೆ ಎಂದು ಸಾರಿ ಹೇಳಿದ್ದವು. 

6) ಎಂಎನ್‌ಎಫ್ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯದ ಎಲ್ಲ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಬಿಜೆಪಿ 39 ಮತ್ತು ಜೊರೊಮ್ ಪೀಪಲ್ಸ್ ಮೂಮೆಂಟ್ 35 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದವು.

7) ಪಾನನಿಷೇಧ ಮತ್ತು ಅಭಿವೃದ್ಧಿ ಚುನಾವಣೆಯ ಮುಖ್ಯ ವಿಷಯಗಳಾಗಿದ್ದವು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪಾನನಿಷೇಧ ತೆರವುಗೊಳಿಸಿ ಪರ್ಮಿಟ್ ವ್ಯವಸ್ಥೆ ಜಾರಿ ಮಾಡಿತ್ತು. ಅಧಿಕಾರಕ್ಕೆ ಬಂದರೆ ಮತ್ತೆ ಸಂಪೂರ್ಣ ಪಾನನಿಷೇಧ ಜಾರಿ ಮಾಡುವುದಾಗಿ ಎಂಎನ್‌ಎಫ್ ಭರವಸೆ ನೀಡಿತ್ತು. ಚರ್ಚ್‌ ಎಂಎನ್‌ಎಫ್‌ಗೆ ಬೆಂಬಲ ನೀಡಿತ್ತು. ಶೇ 87ರಷ್ಟು ಮತದಾರರು ಕ್ರಿಶ್ಚಿಯನ್ನರೇ ಆಗಿರುವ ಮಿಜೋರಾಂನಲ್ಲಿ ಸಹಜವಾಗಿಯೇ ಎಂಎನ್‌ಎಫ್‌ ಗೆಲುವನ್ನು ಇದು ಸುಲಭಗೊಳಿಸಿತು.

8) ಮಿಜೋರಾಂನ ಚುನಾವಣೆಯಲ್ಲಿ ಚರ್ಚ್‌ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ಚರ್ಚ್‌ ಬೆಂಬಲಿತ ಮಿಜೋರಾಂ ಪೀಪಲ್ಸ್‌ ಫೋರಂ ಚುನಾವಣಾ ಕಣ್ಗಾವಲು ಪಡೆಯಾಗಿ ಕೆಲಸ ಮಾಡುತ್ತದೆ. 2003ರ ವಿಧಾನಸಭೆ ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಮಣಿಪುರದಲ್ಲಿ ನೆಲೆ ಹೊಂದಿರುವ ತೀವ್ರವಾದಿಗಳು ತಮ್ಮ ಇಷ್ಟದ ಅಭ್ಯರ್ಥಿಗಳನ್ನು ಗೆಲ್ಲಿಸಲು ಹಿಂಸಾಚಾರ ಪ್ರಚೋಚಿಸಿದ್ದರು. ಇದನ್ನು ಅರಿತ ಚರ್ಚ್‌ ಶಾಂತಿ ಕಾಪಾಡಲು ಕಣ್ಗಾವಲು ಸಮಿತಿ ರಚಿಸಿತು. ನಂತರದ ದಿನಗಳಲ್ಲಿ ಚುನಾವಣೆಗಳು ಶಾಂತಿಯುತವಾಗಿ ನಡೆಯುತ್ತಿವೆ

9) ಮಿಜೋರಾಂನ ಪ್ರತಿ ಕ್ಷೇತ್ರದಲ್ಲಿಯೂ ಸರಾಸರಿ ಮತದಾರರ ಸಂಖ್ಯೆ 19,000. ಹಿಂಸಾಚಾರಕ್ಕೆ ಹೆದರಿ 1997ರಲ್ಲಿ ರಾಜ್ಯದಿಂದ ಓಡಿಹೋಗಿರುವ ಬ್ರೂಸ್ ಬುಡಕಟ್ಟಿನ ಮತದಾರರು ಹಚ್ಚೆಕ್, ಡಂಪಾ ಮತ್ತು ಮಮಿತ್ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತಾರೆ.

10) 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 34, ಎಂಎನ್‌ಎಫ್ ಐದು ಮತ್ತು ಮಿಜೋರಾಮ್ ಪೀಪಲ್ಸ್ ಕಾನ್‌ಫರೆನ್ಸ್ ಒಂದು ಕ್ಷೇತ್ರದಲ್ಲಿ ಜಯಗಳಿಸಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !