ಶುಕ್ರವಾರ, ಜುಲೈ 1, 2022
26 °C

ಜಾಕೀರ್‌ನಾಯಕ್‌ ಹಸ್ತಾಂತರಕ್ಕೆ ಮೋದಿ ಮನವಿ ಮಾಡಿಲ್ಲ: ಮಲೇಷ್ಯಾ ಪ್ರಧಾನಿ

ಪಿಟಿಐ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ: ಹಣ ಸಾಗಣೆ, ಭಯೋತ್ಪಾದನೆ ಆರೋಪಗಳಿಗೆ ಸಂಬಂಧಿಸಿ ಭಾರತಕ್ಕೆ ಬೇಕಾಗಿರುವ ಜಾಕೀರ್‌ ನಾಯಕ್‌ನನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಜೊತೆ ಚರ್ಚಿಸಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹತೀರ್ ಮೊಹಮ್ಮದ್ ತಿಳಿಸಿದ್ದಾರೆ.

53 ವರ್ಷ ವಯಸ್ಸಿನ ಮುಸ್ಲಿಂ ಧರ್ಮ ಪ್ರಚಾರಕ ನಾಯಕ್‌, 2016ರಲ್ಲಿ ಭಾರತ ಬಿಟ್ಟು ಹೋಗಿದ್ದು, ಮುಸ್ಲಿಮರು ಹೆಚ್ಚಿರುವ ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದಾನೆ. ಅಲ್ಲಿ ಆತನಿಗೆ ಶಾಶ್ವತ ಪೌರತ್ವ ದೊರೆತಿದೆ.

ಕಳೆದ ತಿಂಗಳು ರಷ್ಯಾದಲ್ಲಿ ತಾವು ಮೋದಿ ಅವರನ್ನು ಭೇಟಿ ಮಾಡಿದ್ದಾಗ, ವಿವಾದಿತ ಮುಸ್ಲಿಂ ಧರ್ಮ ಪ್ರಚಾರಕನ ಹಸ್ತಾಂತರಕ್ಕೆ ಅವರಿಂದ ಮನವಿ ಬರಲಿಲ್ಲ. ಈ ಕುರಿತು ನವದೆಹಲಿಯಿಂದ ಅಧಿಕೃತ ನೋಟಿಸ್‌ ಅಷ್ಟೇ ತಲುಪಿದೆ ಎಂದು ಮಹತೀರ್‌ ತಿಳಿಸಿದರು.

ಈ ಮಧ್ಯೆ, ಪ್ರಧಾನಮಂತ್ರಿಗಳ ದ್ವಿಪಕ್ಷೀಯ ಮಾತುಕತೆ ಕುರಿತು ಸುದ್ದಿಗಾರರಿಗೆ ವಿವರ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಅವರು, ‘ನಾಯಕ್‌ ಹಸ್ತಾಂತರ ಕುರಿತು ಮೋದಿ ಚರ್ಚಿಸಿದ್ದಾರೆ’ ಎಂದರು.

‘ಹಲವು ರಾಷ್ಟ್ರಗಳಿಗೆ ಆತ ಬೇಕಿಲ್ಲ. ನಾನು ಮೋದಿ ಅವರನ್ನು ಭೇಟಿ ಮಾಡಿದ್ದೆ. ಈತನಿಗಾಗಿ ಅವರು ಕೋರಿಕೆ ಮಂಡಿಸಲಿಲ್ಲ’ ಎಂದು ಮಲೇಷ್ಯಾ ಪ್ರಧಾನಿ ರೇಡಿಯೊ ವಾಹಿನಿ ಜೊತೆ ಚರ್ಚಿಸುತ್ತಾ ಹೇಳಿದರು.

ನಾಯಕ್‌ ಇತ್ತೀಚೆಗೆ ಹಿಂದೂ ಮತ್ತು ಚೀನಿ ಮಲೇಷಿಯನ್ನರ ಭಾವನೆಗಳಿಗೆ ಧಕ್ಕೆ ತರುವಂತೆ ಮಾತನಾಡಿದ್ದು, ಮಲೇಷ್ಯಾದಿಂದ ಅವನನ್ನು ಸೂಕ್ತ ಪ್ರದೇಶಕ್ಕೆ ಕಳುಹಿಸಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

 ‘ಆತ ದೇಶದ ಪೌರನಲ್ಲ. ಹಿಂದಿನ ಸರ್ಕಾರ ಆತನಿಗೆ ಪೌರತ್ವ ನೀಡಿದೆ. ಶಾಶ್ವತ ಪೌರತ್ವ ಪಡೆದವರು ದೇಶದ ವ್ಯವಸ್ಥೆ, ರಾಜಕಾರಣ ಕುರಿತು ಹೇಳಿಕೆ ನೀಡಬಾರದು’ ಎಂದು ಮಹತೀರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು