ಸೋಮವಾರ, ಸೆಪ್ಟೆಂಬರ್ 23, 2019
28 °C

ನೇಪಾಳ ತೈಲ ಕೊಳವೆಮಾರ್ಗ ಉದ್ಘಾಟನೆ

Published:
Updated:
Prajavani

ನವದೆಹಲಿ: ಭಾರತ–ನೇಪಾಳದ ನಡುವಣ ತೈಲ ಕೊಳವೆಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಮಂಗಳವಾರ ವಿಡಿಯೊ ಸಂವಾದದ ಮೂಲಕ ಉದ್ಘಾಟಿಸಿದರು.

ದಕ್ಷಿಣ ಏಷ್ಯಾದ ಮೊದಲ ಅಂತರರಾಷ್ಟ್ರೀಯ ತೈಲ ಕೊಳವೆಮಾರ್ಗ ಇದಾಗಿದೆ. ಭಾರತದ ಬಿಹಾರದ ಮೋತಿಹರಿಯಿಂದ ನೇಪಾಳದ ಅಮ್ಲೇಖಗಂಜ್‌ ಮಧ್ಯೆ ಈ ಕೊಳವೆಮಾರ್ಗವನ್ನು ನಿರ್ಮಿಸಲಾಗಿದೆ.

ಈಗ ಕೊಳವೆ ಮಾರ್ಗದ ಮೂಲಕ ಭಾರತದಿಂದ ನೇಪಾಳಕ್ಕೆ ವರ್ಷಪೂರ್ತಿ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಇದರಿಂದ ಪೂರೈಕೆಯಲ್ಲಿನ ವಿಳಂಬ ಮತ್ತು ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ನೇಪಾಳದಲ್ಲಿ ಎಲ್ಲಾ ಸ್ವರೂಪದ ಇಂಧನದ ಬೆಲೆಯನ್ನು ಪ್ರತಿ ಲೀಟರ್‌ಗೆ ₹ 2ರಷ್ಟು ಕಡಿಮೆ ಮಾಡಲಾಗಿದೆ.

ಈ ಕೊಳವೆಮಾರ್ಗವು 69 ಕಿ.ಮೀ.ನಷ್ಟು ಉದ್ದವಿದೆ. ಭಾರತದಲ್ಲಿ 33 ಕಿ.ಮೀ. ಮತ್ತು ನೇಪಾಳದಲ್ಲಿ 36 ಕಿ.ಮೀ.ನಷ್ಟು ಕೊಳವೆಮಾರ್ಗವಿದೆ. ₹ 324 ಕೋಟಿ ವೆಚ್ಚದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈ ಕೊಳವೆ ಮಾರ್ಗವನ್ನು ನಿರ್ಮಿಸಿದೆ. ಅಮ್ಲೇಖಗಂಜ್‌ನಲ್ಲಿ ಸಂಗ್ರಹಾಗಾರವನ್ನು ₹ 75 ಕೋಟಿ ವೆಚ್ಚದಲ್ಲಿ ನೇಪಾಳ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ ಮರುವಿನ್ಯಾಸಗೊಳಿಸಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಉಸ್ತುವಾರಿಯಲ್ಲಿ ಸಂಗ್ರಹಾಗಾರದ ಮರುವಿನ್ಯಾಸ ಕಾರ್ಯ ನಡೆಸಲಾಗಿದೆ.

ನೇಪಾಳಕ್ಕೆ ಅಗತ್ಯವಿರುವ ತೈಲವನ್ನು ಭಾರತವು ‘ಪೂರೈಕೆ ಒಪ್ಪಂದ’ದ ಮೂಲಕ ರಫ್ತು ಮಾಡುತ್ತದೆ. ಪ್ರತಿ ಐದು ವರ್ಷಕ್ಕೆ ಒಮ್ಮೆ ಈ ಒಪ್ಪಂದವನ್ನು ನವೀಕರಿಸಲಾಗುತ್ತದೆ. ಈ ಮೊದಲು ರಸ್ತೆ ಮೂಲಕ ಟ್ಯಾಂಕರ್‌ಗಳಲ್ಲಿ ತೈಲೋತ್ಪನ್ನಗಳನ್ನು ನೇಪಾಳಕ್ಕೆ ಸಾಗಿಸಲಾಗುತ್ತಿತ್ತು. ಇದರಿಂದ ಎರಡೂ ದೇಶಗಳ ಗಡಿಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ತೈಲ ಪೂರೈಕೆಯಲ್ಲೂ ವಿಳಂಬವಾಗುತ್ತಿತ್ತು. ಮಳೆಗಾಲದಲ್ಲಿ ಹಲವು ಬಾರಿ ಪೂರೈಕೆ ಸ್ಥಗಿತವಾಗುತ್ತಿತ್ತು.

 

ಐಒಸಿಎಲ್‌ ಮತ್ತು ಎನ್‌ಒಸಿಎಲ್‌ ನಡುವೆ ಒಪ್ಪಂದ

ಪೆಟ್ರೋಲ್, ಡೀಸೆಲ್, ವಿಮಾನದ ಇಂಧನ ಮತ್ತು ಎಲ್‌ಪಿಜಿ ಪೂರೈಕೆ

ಸಾಗಣೆ ವೆಚ್ಚ ಮತ್ತು ಸಾಗಣೆ ಸೋರಿಕೆ–ನಷ್ಟ ಕಡಿತ

Post Comments (+)