ಸೋಮವಾರ, ಜೂನ್ 1, 2020
27 °C
2014ರಲ್ಲಿ ಆಯ್ಕೆಯಾದ ಬಿಜೆಪಿ ಸಂಸದರಲ್ಲಿ ಶೇ 44.4 ಮಂದಿಗೆ ಕುಟುಂಬ ರಾಜಕಾರಣ ಹಿನ್ನೆಲೆ

ಬಿಜೆಪಿ ‘ವಂಶ ಪಾರಂಪರ್ಯ’ ರಾಜಕಾರಣದಿಂದ ಮುಕ್ತವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್ ಮತ್ತು ಇತರ ಪಕ್ಷಗಳು ವಂಶ ಪಾರಂಪರ್ಯ ರಾಜಕಾರಣ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅನೇಕ ಬಾರಿ ಟೀಕಿಸಿದ್ದಾರೆ. ಈಚೆಗೆ ನಡೆದ ಪಂಚ ರಾಜ್ಯ ಚುನಾವಣಾ ಪ್ರಚಾರ ಸಂದರ್ಭದಲ್ಲೂ ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ಬಗ್ಗೆ ಮೋದಿ ಕಿಡಿಕಾರಿದ್ದರು. ಆದರೆ, ಬಿಜೆಪಿಯಲ್ಲೂ ವಂಶ ಪಾರಂಪರ್ಯ ರಾಜಕಾರಣ ಢಾಳಾಗಿ ವ್ಯಾಪಿಸಿರುವುದು ಈಗ ಬಯಲಾಗಿದೆ.

ಹಾಂಕಾಂಗ್ ವಿಶ್ವವಿದ್ಯಾಲಯದ ವಿದ್ವಾಂಸ ರೊಮೈನ್ ಕಾರ್ಲೆವಾನ್ ಎಂಬುವವರು ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ, ಪ್ರಸಕ್ತ ಲೋಕಸಭೆಯಲ್ಲಿ ಶೇ 22ರಷ್ಟು ವಂಶ ಪಾರಂಪರ್ಯ ಹಿನ್ನೆಲೆಯ ಸದಸ್ಯರಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. 15ನೇ ಲೋಕಸಭೆಯ ಶೇ 30ರಷ್ಟು ಸದಸ್ಯರು ಕುಟುಂಬ ರಾಜಕಾರಣ ಹಿನ್ನೆಲೆಯವರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸಂಸತ್‌ಗೆ ಆಯ್ಕೆಯಾದವರ ಪೈಕಿ ಶೇ 44ರಷ್ಟು ಮಂದಿ ವಂಶಾಡಳಿತ ಹಿನ್ನೆಲೆಯವರು. ಕುಟುಂಬ ರಾಜಕಾರಣದ ಹಿನ್ನೆಲೆಯುಳ್ಳ ಸಚಿವರೂ ಮೋದಿ ಸಂಪುಟದಲ್ಲಿ ಇದ್ದಾರೆ ಎಂಬುದು ತಿಳಿದುಬಂದಿದೆ. ಆದಾಗ್ಯೂ, ಪಕ್ಷದಲ್ಲಿ ರಾಜಕೀಯ ಹಿನ್ನೆಲೆಯುಳ್ಳವರು ಇರುವುದನ್ನು ಮರೆಮಾಚುವುದರಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎನ್ನಲಾಗಿದೆ.

ಖ್ಯಾತ ನಾಯಕರ ಮಕ್ಕಳು ಅನೇಕರು ಬಿಜೆಪಿಯ ಪ್ರಮುಖ ಹುದ್ದೆಗಳಲ್ಲಿರುವುದು ತಿಳಿದುಬಂದಿದೆ. ವಿವಿಧ ರಾಜ್ಯಗಳಲ್ಲಿ ವಂಶ ಪಾರಂಪರ್ಯ ಹಿನ್ನೆಲೆಯುಳ್ಳ ಅನೇಕರಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಖಬರ್‌ಬಾರ್ ಸುದ್ದಿತಾಣ ವರದಿ ಮಾಡಿದೆ.

ಎಲ್ಲ ಪಕ್ಷಗಳಲ್ಲೂ ಇದೆ ವಂಶ ರಾಜಕಾರಣ

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಲ್ಲಿರುವಂತೆ ಸಮಾಜವಾದಿ ಪಕ್ಷ, ಜೆಡಿಎಸ್, ಟಿಆರ್‌ಎಸ್ ಮತ್ತಿತರ ಪ್ರಾದೇಶಿಕ ಪಕ್ಷಗಳಲ್ಲಿಯೂ ವಂಶ ಪಾರಂಪರ್ಯ ರಾಜಕಾರಣ ಮನೆ ಮಾಡಿದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮಾಜಿ ಪ್ರಧಾನಿಯಾಗಿದ್ದರೆ, ಅವರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಈಗ ಕರ್ನಾಟಕದ ಮುಖ್ಯಮಂತ್ರಿ. ಕಾಂಗ್ರೆಸ್‌ನ ಹಿರಿಯ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ವಿಧಾನಸಭಾ ಕ್ಷೇತ್ರ ವರುಣಾದ ಶಾಸಕ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಅಖಿಲೇಶ್ ಯಾದವ್ ಸಹ ಮಾಜಿ ಮುಖ್ಯಮಂತ್ರಿ. ಹೀಗಿರುವಾಗ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳ ವಿರುದ್ಧ ಮಾತ್ರ ಟೀಕೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಈಚೆಗೆ ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಮಾತನಾಡಿದ್ದ ಮೋದಿ, ‘ಕಾಂಗ್ರೆಸ್, ಟಿಆರ್‌ಎಸ್, ಟಿಡಿಪಿ, ಎಐಎಂಐಎಂ ವಂಶ ರಾಜಕಾರಣ ನಡೆಸುತ್ತಿವೆ. ಈ ಪಕ್ಷಗಳು ತಮ್ಮ ಕುಟುಂಬದವರ ಹಿತ ಮಾತ್ರ ನೋಡಿಕೊಳ್ಳುತ್ತಿವೆ. ಆದರೆ, ಬಿಜೆಪಿ ಮಾತ್ರ ತೆಲಂಗಾಣದ ಜನರ ಒಳಿತಿನ ಬಗ್ಗೆ ಕಾಳಜಿ ವಹಿಸುತ್ತಿದೆ’ ಎಂದು ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿದೆ.

ವಂಶ ರಾಜಕಾರಣ ಹಿನ್ನೆಲೆಯುಳ್ಳ ಬಿಜೆಪಿಗರ ಪಟ್ಟಿ (ರಾಜ್ಯವಾರು)

ಕರ್ನಾಟಕ

* ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ.


ಬಿ.ವೈ.ರಾಘವೇಂದ್ರ

* ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅತ್ತೆ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಶಾಸಕಿಯಾಗಿದ್ದರು. ನಿರ್ಮಲಾ ಪತಿಯ ತಂದೆ ಪರಕಳ ಶೇಷಾವತಾರಮ್‌ 1970ರ ದಶಕದಲ್ಲಿ ಆಂಧ್ರ ಪ್ರದೇಶದಲ್ಲಿ ಸಚಿವರಾಗಿದ್ದರು.

ಮಹಾರಾಷ್ಟ್ರ

* ವಿದ್ಯುತ್, ಕಲ್ಲಿದ್ದಲು ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪೀಯೂಷ್ ಗೋಯಲ್ ಮಾಜಿ ಸಚಿವ ಹಾಗೂ ಬಿಜೆಪಿಯ ಮಾಜಿ ಖಜಾಂಚಿ ದಿ. ವೇದಪ್ರಕಾಶ್ ಗೋಯಲ್ ಅವರ ಮಗ.

* ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ರಾಜ್ಯ ಶಾಸನಸಭೆಯ ಮಾಜಿ ಸದಸ್ಯ ದಿ. ಗಂಗಾಧರಪಂತ್ ಫಡಣವೀಸ್ ಅವರ ಪುತ್ರ. ಇವರ ಚಿಕ್ಕಮ್ಮ ಶೋಭಾ ಫಡಣವೀಸ್ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವೆಯಾಗಿದ್ದರು.

* ಪಾರ್ಲಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ, ಸಚಿವೆ ಪಂಕಜಾ ಮುಂಡೆ ಕೇಂದ್ರದ ಮಾಜಿ ಸಚಿವ ದಿ. ಗೋಪಿನಾಥ್ ಮುಂಡೆ ಅವರ ಮಗಳು. ಪಂಕಜಾ ಸಹೋದರಿ ಪ್ರೀತಮ್ ಮುಂಡೆ 2014ರಲ್ಲಿ ಬೀಡ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಗೋಪಿನಾಥ್ ಮುಂಡೆ 2014ರ ಜೂನ್‌ನಲ್ಲಿ ದೆಹಲಿಯಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಬಳಿಕ ಬೀಡ್ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿತ್ತು.

* ಮುಂಬೈ ಉತ್ತರ–ಕೇಂದ್ರ ಕ್ಷೇತ್ರದ ಸಂಸದೆ ಪೂನಮ್ ಮಹಾಜನ್ ಬಿಜೆಪಿಯ ಹಿರಿಯ ನಾಯಕ ದಿ. ಪ್ರಮೋದ್ ಮಹಾಜನ್ ಪುತ್ರಿ.


ಪೂನಮ್ ಮಹಾಜನ್

* ಬಿಜೆಪಿಯ ಹಿರಿಯ ನಾಯಕ ಏಕನಾಥ್ ಖಡ್ಸೆ ಅವರ ಸೊಸೆ ರಕ್ಷಾ ಮಹಾರಾಷ್ಟ್ರದ ರಾವೇರ್ ಕ್ಷೇತ್ರದ ಸಂಸದೆ.

ಉತ್ತರ ಪ್ರದೇಶ

* ಮೋದಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಉತ್ತರ ಪ್ರದೇಶದ ಫಿಲಿಬಿತ್ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾದವರು. ಇವರ ಪುತ್ರ ವರುಣ್ ಗಾಂಧಿ ಉತ್ತರ ಪ್ರದೇಶದ ಸುಲ್ತಾನ್‌ಪುರ ಕ್ಷೇತ್ರದ ಸಂಸದ.


ಪುತ್ರ ವರುಣ್ ಗಾಂಧಿ ಜತೆ ಮನೇಕಾ ಗಾಂಧಿ

* ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಪುತ್ರ ರಾಜವೀರ್ ಇಟಾ ಕ್ಷೇತ್ರದ ಸಂಸದ.

* ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್ ಅವರು ಬಿಜೆಪಿಯ ಉತ್ತರ ಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿ.


ರಾಜನಾಥ್ ಸಿಂಗ್ ಮತ್ತು ಪುತ್ರ ಪಂಕಜ್ ​

* ಲಖನೌ ಪೂರ್ವ ವಿಧಾನಸಭೆ ಕ್ಷೇತ್ರದ ಶಾಸಕ ಆಶುತೋಷ್ ಬಿಜೆಪಿ ಹಿರಿಯ ನಾಯಕ ಲಾಲ್‌ಜಿ ಟಂಡನ್ ಮಗ.

* ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಅವರ ಬಾಮೈದ.

* ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಾಂತ್ ಆದಿತ್ಯನಾಥ್ ಅವರ ಉತ್ತರಾಧಿಕಾರಿ.

* ‘ಸಂತಕಬೀರ ನಗರ’ ಕ್ಷೇತ್ರದ ಸಂಸದ ಶರದ್ ತ್ರಿಪಾಠಿ ಬಿಜೆಪಿಯ ಉತ್ತರ ಪ್ರದೇಶ ಘಟಕದ ಮಾಜಿ ಅಧ್ಯಕ್ಷ ರಾಮಪತಿ ರಾಮ್ ತ್ರಿಪಾಠಿ ಅವರ ಪುತ್ರ.

ರಾಜಸ್ಥಾನ

* ರಾಜಸ್ಥಾನದ ನಿರ್ಗಮಿತ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಪುತ್ರ ದುಷ್ಯಂತ್ ಸಿಂಗ್ ಲೋಕಸಭಾ ಸಂಸದ. ರಾಜೆ ಅವರ ಸಹೋದರಿ ಯಶೋಧರಾ ರಾಜೆ ಸಿಂಧಿಯಾ ಮಧ್ಯ ಪ್ರದೇಶದ ಕೈಗಾರಿಕಾ ಸಚಿವೆ. ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ (ಕಾಂಗ್ರೆಸ್‌ನ ಹಿರಿಯ ನಾಯಕ ಮಾಧವರಾವ್ ಸಿಂಧಿಯಾ ಅವರ ಮಗ) ವಸುಂಧರಾ ರಾಜೆ ಸೋದರಳಿಯ.


ಪುತ್ರ ದುಷ್ಯಂತ್ ಸಿಂಗ್ ಜತೆ ವಸುಂಧರಾ ರಾಜೆ

* ಕೇಂದ್ರ ಸಾಂಖ್ಯಿಕ ಮತ್ತು ಯೋಜನಾನುಷ್ಠಾನ ಇಲಾಖೆಯ ರಾಜ್ಯ ಖಾತೆ ಸಚಿವ ವಿಜಯ್ ಗೋಯಲ್ ದೆಹಲಿ ವಿಧಾನಸಭೆಯ ಮೊದಲ ಸ್ಪೀಕರ್ ಛಾರ್ತಿಲಾಲ್ ಗೋಯಲ್ ಪುತ್ರ.

ದೆಹಲಿ

* ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹೀಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ಪಶ್ಚಿಮ ದೆಹಲಿ ಕ್ಷೇತ್ರದ ಸಂಸದ.

* ಬಿಜೆಪಿಯ ಹಿರಿಯ ನಾಯಕ ವಿ.ಎಲ್‌. ಮಲ್ಹೊತ್ರಾ ಅವರ ಮಗ ಅಜಯ್ ಮಲ್ಹೊತ್ರಾ 2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಬಿಜೆಪಿ ನಾಯಕ ಒ.ಪಿ.ಬಬ್ಬರ್ ಪುತ್ರ ರಾಜೀವ್ ಬಬ್ಬರ್ ಅವರಿಗೂ ದೆಹಲಿ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಲಾಗಿತ್ತು.

ಹರಿಯಾಣ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹೋದರಿ ವಂದನಾ ಶರ್ಮಾ ಹರಿಯಾಣದ ಸಫೀದೋಂ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.

* ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ 1990ರಿಂದ 1993ರ ವರೆಗೆ ಮಿಜೋರಾಂನ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.


ಪತಿ ಸ್ವರಾಜ್ ಕೌಶಲ್ ಜತೆ ಸುಷ್ಮಾ ಸ್ವರಾಜ್ ​

ಮಧ್ಯಪ್ರದೇಶ

* ರಾಜ್ಯದ ಸಂಸ್ಕೃತಿ ಸಚಿವ ಸುರೇಂದ್ರ ಪಟ್‌ವಾ ಮಾಜಿ ಮುಖ್ಯಮಂತ್ರಿ ಸುಂದರ್‌ಲಾಲ್ ಪಟ್‌ವಾ ಅವರ ಮಗ.

* ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಂದೋರ್–3 ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯ ಅವರ ಪುತ್ರ ಆಕಾಶ್ ಅವರನ್ನು ಕಣಕ್ಕಿಳಿಸಲಾಗಿತ್ತು.

* ಮೊರೆನಾ ಕ್ಷೇತ್ರದ ಸಂಸದ ಅನೂಪ್ ಮಿಶ್ರಾ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರಳಿಯ.

 ಹಿಮಾಚಲ ಪ್ರದೇಶ

* ಹಮೀರ್‌ಪುರದ ಸಂಸದ ಅನುರಾಗ್ ಠಾಕೂರ್ ಇವರು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಲ್ ಪುತ್ರ.

* ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಜಬಲ್‌ಪುರದ ಮಾಜಿ ಸಂಸದೆ ಜಯಶ್ರೀ ಬ್ಯಾನರ್ಜಿ ಅಳಿಯ.


ಜೆ.ಪಿ. ನಡ್ಡಾ

ಗುಜರಾತ್

ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವ ಜಸ್ವಂತ್‌ಸಿನ್ಹ ಭಭೊರ್ ಒಮ್ಮೆ ಬಿಜೆಪಿ ಹಾಗೂ ಮತ್ತೊಮ್ಮೆ ಜನತಾ ದಳದಿಂದ ಗುಜರಾತ್ ವಿಧಾನಸಭೆ ಚುನಾವಣೆ ಸ್ಪರ್ಧಿಸಿದ್ದ ಸುಮನ್‌ಭಾಯಿ ಭಭೊರ್ ಪುತ್ರ.

* ಜಮಾನಗರದ ಸಂಸದೆ ಪೂನಮ್ ಮದಾಮ್ ಖಂಭಾಲಿಯಾದಲ್ಲಿ ನಾಲ್ಕು ಬಾರಿ ಸಂಸದೆಯಾಗಿದ್ದ ಹೇಮತ್‌ಭಾಯಿ ಮದಾಮ್ ಪುತ್ರಿ.

ಜಾರ್ಖಂಡ್

* ಹಜಾರಿಬಾಗ್ ಸಂಸದ ಜಯಂತ್ ಸಿನ್ಹಾ ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಮಗ.

ಛತ್ತೀಸಗಡ

* ರಾಜನಂದಗಾಂವ್ ಸಂಸದ ಅಭಿಷೇಕ್ ಛತ್ತೀಸಗಡದ ನಿರ್ಗಮಿತ ಮುಖ್ಯಮಂತ್ರಿ ರಮಣ್ ಸಿಂಗ್ ಮಗ.

ಅರುಣಾಚಲ ಪ್ರದೇಶ

* ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಕಿರಣ್ ರಿಜಿಜು ಕಾಂಗ್ರೆಸ್ ಶಾಸಕ ರಿಂಚಿನ್ ಖರುವಾಸ್ ಪುತ್ರ.

ತಮಿಳುನಾಡು

* ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ, ಬಿಜೆಪಿ ವಕ್ತಾರೆ ಲಲಿತಾ ಕುಮಾರಮಂಗಲಂ ಸಮಾಜವಾದಿ ನಾಯಕ ಮೋಹನ್ ಕುಮಾರಮಂಗಲಂ ಅವರ ಪುತ್ರಿ ಮತ್ತು ಬಿಜೆಪಿಯ ಮಾಜಿ ಸಚಿವ ಆರ್. ಕುಮಾರಮಂಗಲಂ ಸಹೋದರಿ.


ಲಲಿತಾ ಕುಮಾರಮಂಗಲಂ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು