ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯದ ಕರೆ: ಮಗುವಿಗೆ ಜನ್ಮ ನೀಡಿ ಒಂದೇ ತಿಂಗಳಲ್ಲಿ ಕಚೇರಿಗೆ ಐಎಎಸ್‌ ಅಧಿಕಾರಿ 

Last Updated 13 ಏಪ್ರಿಲ್ 2020, 9:04 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ದೇಶವನ್ನು ಕೊರೊನಾ ವೈರಸ್‌ ಸೋಂಕು ಸಂಕಷ್ಟಕ್ಕೆ ಸಿಲುಕಿಸಿದ್ದು, ಸರ್ಕಾರದ ಅಧಿಕಾರಿಗಳ ಕಾರ್ಯನಿರ್ವಹಣೆ ಹಿಂದಿಗಿಂತಲೂ ಚುರುಕಾಗಿದೆ. ಸೋಂಕು ನಿಯಂತ್ರಣ ಹಾಗೂ ನಿತ್ಯ ಬದುಕಿಗೆ ತೊಂದರೆಯಾಗದಂತೆ ಹಲವು ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಆಡಳಿತ ವರ್ಗ ಮಹತ್ತರ ಪಾತ್ರವಹಿಸುತ್ತಿದೆ. ತಿಂಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿರುವ ಐಎಎಸ್‌ ಅಧಿಕಾರಿ, ಅದಾಗಲೇ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗ್ರೇಟರ್‌ ವಿಶಾಖಪಟ್ಟಣಂ ಮುನಿಸಿಪಲ್‌ ಕಾರ್ಪೊರೇಷನ್‌ನ ಆಯುಕ್ತರಾಗಿರುವ ಸೃಜನಾ ಗುಮಾಲಾ ಕೈಮೇಲೆ ಮಗುವನ್ನು ಮಲಗಿಸಿಕೊಂಡೇ ಕರ್ತವ್ಯ ನಿರ್ವಹಣೆ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮಗಳು, ಐಎಎಸ್‌ ಅಸೋಸಿಯೇಷನ್‌, ಹಿರಿಯ ಅಧಿಕಾರಿಗಳು ಹಾಗೂ ಸಚಿವರು ಸೃಜನಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2013ರ ಬ್ಯಾಚ್‌ ಐಎಎಸ್‌ ಅಧಿಕಾರಿಯಾಗಿರುವ ಸೃಜನಾ, 'ಇಂಥ ಸಮಯದಲ್ಲಿ ಆಡಳಿತದಲ್ಲಿ ಸಹಕಾರ ನೀಡುವುದು ನನ್ನ ಜವಾಬ್ದಾರಿಯಾಗಿದೆ. ಈಗ ನಾವೆಲ್ಲರೂ ಒಗ್ಗಟಿನಿಂದ ಕಾರ್ಯನಿರ್ವಹಿಸುವ ಮೂಲಕ ಒಬ್ಬರಲ್ಲೊಬ್ಬರು ಸಾಮರ್ಥ್ಯ ಹೆಚ್ಚಿಸಬೇಕಿದೆ. ಇದು ನನ್ನ ಪಾಲಿಗೆ ಬಂದ ಕರ್ತವ್ಯದ ಕರೆ...' ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರದ ನಿಯಮಗಳ ಪ್ರಕಾರ, ಉದ್ಯೋಗದಲ್ಲಿರುವ ಮಹಿಳೆಯರಿಗೆ 6 ತಿಂಗಳ ವರೆಗೂ ವೇತನ ಸಹಿತ ಹೆರಿಗೆ ರಜೆ ಪಡೆಯಲು ಅವಕಾಶವಿದೆ. ಕಳೆದ ವಾರದಿಂದಲೇ ಸೃಜನಾ ಕಾರ್ಯನಿರ್ವಹಣೆಯಲ್ಲಿ ತೊಡಗಿದ್ದಾರೆ.

'ಇಂಥ ಕೊರೊನಾ ಯೋಧರನ್ನು ಪಡೆದಿರುವುದು ದೇಶದ ಸುಕೃತವಾಗಿದೆ. ಕರ್ತವ್ಯ ಬದ್ಧತೆಗೆ ನೇರ ಉದಾಹರಣೆಯಾಗಿರುವುದಕ್ಕೆ ತುಂಬು ಹೃದಯದ ಕೃತಜ್ಞತೆಗಳು,..' ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಟ್ವೀಟಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಒಟ್ಟು 427 ಕೋವಿಡ್‌–19 ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 7 ಮಂದಿ ಸಾವಿಗೀಡಾಗಿದ್ದಾರೆ. ಈಗಾಗಲೇ ದೇಶದಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳು 9,000 ದಾಟಿದ್ದು, 308 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT