ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ನಿಂದನೆ: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ

ನ್ಯಾಯಕ್ಕಾಗಿ ಆನ್‌ಲೈನ್‌ ಅಭಿಯಾನಕ್ಕೆ ಭಾರಿ ಬೆಂಬಲ
Last Updated 27 ಮೇ 2019, 19:17 IST
ಅಕ್ಷರ ಗಾತ್ರ

ಮುಂಬೈ: ಆತ್ಮಹತ್ಯೆ ಮಾಡಿಕೊಂಡ ವೈದ್ಯ ವಿದ್ಯಾರ್ಥಿನಿ ಡಾ.ಪಾಯಲ್‌ ತಡ್ವಿ (26) ಅವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಆರಂಭವಾಗಿರುವ ಆನ್‌ಲೈನ್‌ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ.

ಹಿರಿಯ ವಿದ್ಯಾರ್ಥಿಗಳು ಜಾತಿ ನಿಂದನೆ ಮಾಡುತ್ತಿದ್ದರು ಎಂಬ ಕಾರಣಕ್ಕೆ ಪಾಯಲ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮುಂಬೈನ ಬಿ.ವೈ.ಎಲ್‌. ನಾಯರ್‌ ಆಸ್ಪತ್ರೆಯಲ್ಲಿ ಇದೇ 22ರಂದು ಪಾಯಲ್‌ ಅವರ ಮೃತದೇಹ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಜಲಗಾಂವ್‌ನ ಬುಡಕಟ್ಟು ಮುಸ್ಲಿಂ ಕುಟುಂಬದ ಪಾಯಲ್‌ ಅವರು ಟೋಪಿವಾಲಾ ನ್ಯಾಷನಲ್‌ ಮೆಡಿಕಲ್‌ ಕಾಲೇಜಿನಲ್ಲಿ ಸ್ತ್ರೀರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ಕಳೆದ ವರ್ಷ ಸೇರಿದ್ದರು. ನಾಯರ್‌ ಆಸ್ಪತ್ರೆಯು ಈ ಕಾಲೇಜಿನ ಭಾಗವಾಗಿದೆ. ಹಿರಿಯ ವಿದ್ಯಾರ್ಥಿಗಳು ಜಾತಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ತಮ್ಮ ಮನೆಯವರಿಗೆ ಪಾಯಲ್‌ ಕಳೆದ ಡಿಸೆಂಬರ್‌ನಲ್ಲಿ ತಿಳಿಸಿದ್ದರು. ಅವರ ಗಂಡ ಡಾ. ಸಲ್ಮಾನ್‌ ತಡ್ವಿ ಅವರು ಕಾಲೇಜಿಗೆ ದೂರನ್ನೂ ಕೊಟ್ಟಿದ್ದರು.

ಹಿರಿಯ ವಿದ್ಯಾರ್ಥಿಗಳಾದ ಡಾ. ಹೇಮಾ ಅಹುಜಾ, ಡಾ. ಭಕ್ತಿ ಮೆಹರ್‌ ಮತ್ತು ಡಾ. ಅಂಕಿತಾ ಖಂಡೇಲ್‌ವಾಲ್‌ ಅವರ ವಿರುದ್ಧ ಜಾತಿ ನಿಂದನೆ ಮತ್ತು ಕಿರುಕುಳದ ಆರೋಪ ಮಾಡಲಾಗಿದೆ. ಈ ಮೂವರೂ ತಲೆಮರೆಸಿಕೊಂಡಿ ದ್ದಾರೆ ಎನ್ನಲಾಗಿದೆ. ಇವರನ್ನು ಆಸ್ಪತ್ರೆಯ ಆಡಳಿತ ಮಂಡಳಿಯು ಅಮಾನತು ಮಾಡಿದೆ.

ಪಾಯಲ್‌ ಅವರನ್ನು ಮೂವರು ವೈದ್ಯ ವಿದ್ಯಾರ್ಥಿನಿಯರು ಜಾತಿ ಹೆಸರಿನಲ್ಲಿ ನಿಂದಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹವಾದ ಪುರಾವೆಗಳಿವೆ ಎಂದು ಮಹಾರಾಷ್ಟ್ರ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ಸಂಘದ (ಎಂಎಆರ್‌ಡಿ) ಅಧಿಕಾರಿಗಳು ಹೇಳಿದ್ದಾರೆ.

‘ಹಿರಿಯ ವಿದ್ಯಾರ್ಥಿಗಳು ಪಾಯಲ್‌ ಅವರನ್ನು ಬೆದರಿಸಿದ್ದಾರೆ. ಅವರು ಬುಡಕಟ್ಟು ಜಾತಿಗೆ ಸೇರಿದವರಾದ್ದರಿಂದ ಶಸ್ತ್ರಚಿಕಿತ್ಸೆ ಕೊಠಡಿಗೆ ಪ್ರವೇಶಿಸಲು ಅಥವಾ ಹೆರಿಗೆ ಮಾಡಿಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಬುಡಕಟ್ಟು ಜಾತಿಯವರಾಗಿದ್ದು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಇರುವುದಕ್ಕೂ ಅವರನ್ನು ಹಂಗಿಸಿದ್ದರು’ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ವಿಭಾಗ ಮುಖ್ಯಸ್ಥ ಡಾ. ಯಿ ಚಿಂಗ್‌ ಲಿಂಗ್‌ ಮತ್ತು ಸ್ತ್ರೀರೋಗಶಾಸ್ತ್ರ ಘಟಕದ ಮುಖ್ಯಸ್ಥ ಡಾ. ಎಸ್‌.ಡಿ. ಶಿರೋಡ್ಕರ್‌ ಅವರಿಗೆ ನೋಟಿಸ್‌ ನೀಡಲಾಗಿದೆ.

‘ಜಸ್ಟಿಸ್‌ ಫಾರ್‌ ಪಾಯಲ್‌’ ಎಂಬ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದಂತೆಯೇ ಅದು ಮಹಾರಾಷ್ಟ್ರ ಸರ್ಕಾರದ ಗಮನವನ್ನೂ ಸೆಳೆದಿದೆ.

ಆರೋಪಿಗಳು ಎಂಎಆರ್‌ಡಿಗೆ ಪತ್ರ ಬರೆದಿದ್ದಾರೆ. ‘ಕಾಲೇಜಿನ ವತಿಯಿಂದ ನ್ಯಾಯಯುತವಾದ ತನಿಖೆ ನಡೆಯಬೇಕು. ಪೊಲೀಸ್‌ ಬಲ ಉಪಯೋಗಿಸಿ ಮಾಧ್ಯಮದ ಮೂಲಕ ಒತ್ತಡ ಹೇರಿ ತನಿಖೆ ನಡೆಸುವುದು ಸರಿಯಲ್ಲ. ನಮ್ಮ ವಾದ ಏನು ಎಂಬುದನ್ನೂ ಕೇಳಬೇಕು’ ಎಂದಿದ್ದಾರೆ.

ದಿಕ್ಕೆಟ್ಟ ತಾಯಿ
‘ಇದೇ 10ರಂದು ಮಗಳು ಕರೆ ಮಾಡಿ ಅತ್ತಳು. ಕಿರುಕುಳ ಸಹಿಸಲಾಗುತ್ತಿಲ್ಲ ಎಂದು ಹೇಳಿದಳು. ಇದರಿಂದ ನನಗೆ ದಿಕ್ಕೆಟ್ಟು ಹೋಯಿತು. ಅದೇ ರಾತ್ರಿ ನಾನು ದೂರು ಬರೆದೆ. ದೂರು ಕೊಡುವುದಕ್ಕಾಗಿ 13ರಂದು ಆಸ್ಪತ್ರೆಯ ಡೀನ್‌ ಅವರನ್ನು ಭೇಟಿ ಮಾಡಲು ಹೋದೆ. ಆದರೆ, ನನ್ನನ್ನು ಒಳಗೆ ಬಿಡಲೇ ಇಲ್ಲ. ಬದಲಿಗೆ ಡಾ. ಚಿಂಗ್‌ ಅವರನ್ನು ಭೇಟಿ ಮಾಡಲು ಹೇಳಿದರು. ಚಿಂಗ್‌ ಅವರು ಜೋರಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ ಹೋದರು. ನನಗೆ ಏನೂ ಅರ್ಥವಾಗಲಿಲ್ಲ’ ಎಂದು ಪಾಯಲ್‌ ಅವರ ತಾಯಿ ಆಬಿದಾ ತಡ್ವಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT