ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಕುಟುಂಬ ವ್ಯವಸ್ಥೆ ಬಗ್ಗೆ ಗೌರವ ಇದೆಯಾ?: ಚಂದ್ರಬಾಬು ನಾಯ್ಡು ವಾಗ್ದಾಳಿ

Last Updated 10 ಫೆಬ್ರುವರಿ 2019, 16:16 IST
ಅಕ್ಷರ ಗಾತ್ರ

ಹೈದರಾಬಾದ್: ಭಾನುವಾರ ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ್ದರು.

ಗುಂಟೂರಿನ ಪ್ರಜಾ ಚೈತನ್ಯ ಸಭಾದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ,ಚಂದ್ರಬಾಬು ನಾಯ್ಡು ಅವರು ಎನ್‍ಟಿ ರಾಮರಾವ್ ಅವರ ಬೆನ್ನಿಗೆ ಚೂರಿ ಹಾಕಿದವರು. ನಾಯ್ಡು ಅವರು ಬೆನ್ನಿಗೆ ಚೂರಿ ಹಾಕುವುದರಲ್ಲಿ ಹಿರಿಯರು ಎಂದಿದ್ದರು.

ಮೋದಿಯವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ನಾಯ್ಡು, ಪ್ರಧಾನಿಯವರ ಸ್ಥಾನಕ್ಕೆ ಈ ಮಾತು ಶೋಭೆ ತರುವುದಿಲ್ಲ ಎಂದಿದ್ದಾರೆ.
ವಿಜಯವಾಡಾದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಾಯ್ಡು, ಮೋದಿಯವರು ಅಡ್ವಾಣಿ ಜತೆ ಏನು ಮಾಡಿದ್ದರು? ವಾಜಪೇಯಿ ಅವರು ರಾಜೀನಾಮೆ ಕೇಳಿದಾಗ ಅಡ್ವಾಣಿಯವರೇ ಮೋದಿಯನ್ನು ಕಾಪಾಡಿದ್ದರು.ಅಡ್ವಾಣಿಯವರು ಮೋದಿಯನ್ನು ಬೆಳೆಸಿದರು. ಆದರೆ ಮೋದಿ ಅಡ್ವಾಣಿ ನಮಸ್ಕಾರ ಮಾಡಿದಾಗ ತಿರುಗಿ ನಮಸ್ಕಾರವನ್ನೂ ಮಾಡಲಿಲ್ಲ. ಇದು ಅವರ ಸಂಸ್ಕಾರ ಎಂದಿದ್ದಾರೆ.

ಮೋದಿ ತಮ್ಮ ಭಾಷಣದಲ್ಲಿ ನಾಯ್ಡು ಅವರನ್ನು ಲೋಕೇಶನ ಅಪ್ಪ ಎಂದು ಹೇಳಿದ್ದು, ಆಂಧ್ರದ ಮುಖ್ಯಮಂತ್ರಿ ರಾಜ್ಯದ ಅಭಿವೃದ್ದಿ ಗಿಂತ ಮಗನ ಪ್ರಚಾರಕ್ಕೆ ಹೆಚ್ಚು ಗಮನ ನೀಡುತ್ತಿದ್ದಾರೆ ಎಂದಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ ನಾಯ್ಡು, ಲೋಕೇಶ್ ನನ್ನ ಮಗ. ನಿಮಗೆ ಮಗ ಇಲ್ಲ.ನಿಮಗೆ ಕುಟುಂಬವೂ ಅಲ್ಲ, ನಿಮಗೆ ಸಂಬಂಧಿಕರು ಇಲ್ಲ. ನಾನು ಕುಟುಂಬ ಸಂಬಂಧಗಳಿಗೆ ಬೆಲೆ ಕೊಡುತ್ತೇನೆ. ನಾನು ನನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತೇನೆ.ಪ್ರತಿಯೊಬ್ಬರಿಗೆ ಕುಟುಂಬವೊಂದಿದ್ದರೆ ಅವರು ಖುಷಿಯಾಗಿರುತ್ತಾರೆಎಂಬ ನಂಬಿಕೆಯುಳ್ಳವನು ನಾನು.

ಪ್ರಧಾನಿಯವರಿಗೆ ಕುಟುಂಬ ವ್ಯವಸ್ಥೆ ಬಗ್ಗೆ ಗೌರವ ಇದೆಯೇ? ಇದರ ಬಗ್ಗೆ ಅವರು ಎಂದಾದರೂ ಮಾತನಾಡಿದ್ದಾರಾಎಂದು ನಾಯ್ಡು ಪ್ರಶ್ನಿಸಿದ್ದಾರೆ.
ನಾನು ಯಾರ ವಿರುದ್ಧವೂ ವೈಯಕ್ತಿಕ ದಾಳಿ ನಡೆಸುವುದಿಲ್ಲ.ಆದರೆ ಮೋದಿ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿದ್ದರಿಂದ ತಿರುಗೇಟು ನೀಡಬೇಕಾಗಿ ಬಂತು.

ಮೋದಿಯವರಿಗೆ ಪತ್ನಿ ಇದ್ದಾರೆ ಎಂಬುದು ನಿಮಗೆ ಗೊತ್ತೇ? ಮಹಿಳೆಯರ ಮೇಲಿನ ಅನ್ಯಾಯವನ್ನು ತಡೆಯಲು ಮೋದಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಕೈಗೊಂಡರು, ಅದೇ ಕಾನೂನಿನಡಿಯಲ್ಲಿ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದವರನ್ನು ವಿಚಾರಣೆ ನಡೆಸಬೇಕು.ಜಶೋದಾಬೆನ್ ಅವರ ಬಗ್ಗೆ ಯಾರಾದರೂ ಕೇಳಿದರೆ ನೀವು ಮುಖ ಹೇಗೆ ತೋರಿಸುತ್ತೀರಿ? ನೀವು ಆಕೆಗೆ ವಿಚ್ಛೇದನವನ್ನೂ ನೀಡಿಲ್ಲ.ನಿಮ್ಮಲ್ಲಿ ಗೌರವವಿಲ್ಲ ಎಂದು ನಾಯ್ಡು ಹೇಳಿದ್ದಾರೆ.

ಕಾಂಗ್ರೆಸ್ ಜತೆ ಸೇರುವ ಮೂಲಕ ನಾಯ್ಡು ಯೂ ಟರ್ನ್ ತೆಗೆದುಕೊಂಡಿದ್ದಾರೆ ಎಂದು ಮೋದಿ ಹೇಳುತ್ತಿದ್ದಾರೆ. ನಾನು ಯೂಟರ್ನ್ ಅಲ್ಲ ಸರಿಯಾದ ಟರ್ನ್ ತೆಗೆದುಕೊಂಡಿದ್ದೇನೆ. ನೀವು ಭರವಸೆ ನೀಡಿ ಯೂಟರ್ನ್ ತೆಗೆದುಕೊಂಡಿದ್ದೀರಿ.

ಮಹಾಮೈತ್ರಿ ಕಲುಷಿತವಾಗಿದೆ ಎಂದು ಹೇಳುತ್ತಿದ್ದೀರಿ.ನಿಮ್ಮಂತ ಸರ್ವಾಧಿಕಾರಿ ವಿರುದ್ದ ಎಲ್ಲ ಪಕ್ಷಗಳು ಒಗ್ಗೂಡಿ ವಿರೋಧಿಸುತ್ತಿವೆ.ನಿಮ್ಮನ್ನು ನಿಂದಿಸುವುದಕ್ಕೋಸ್ಕರ ನಾನು ಮೈತ್ರಿ ಸೇರಿಕೊಂಡಿಲ್ಲ.ನೀವು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಿದ ಕಾರಣ ನಾನು ಮಹಾಮೈತ್ರಿ ಜತೆ ಸೇರಿದೆ ಎಂದಿದ್ದಾರೆ.

ಇದೇ ವೇಳೆ ವೈಎಸ್ಆರ್‌ಸಿಪಿ ವಿರುದ್ದವೂ ನಾಯ್ಡು ಕಿಡಿ ಕಾರಿದ್ದಾರೆ.ಬಿಜೆಪಿ ಕಾರ್ಯಕ್ರಮಕ್ಕೆ ಇಷ್ಟೊಂದು ಜನರು ಬಂದು ಸೇರುವುದಿಲ್ಲ. ಹಾಗಾಗಿ ಜನ ಸೇರಿಸಲು ಬಿಜೆಪಿಗೆ ವೈಎಸ್ಆರ್‌ಸಿಪಿ ಸಹಾಯ ಮಾಡಿದೆ ಎಂದು ನಾಯ್ಡು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT