ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2002ರ ಗುಜರಾತ್‌ ಗಲಭೆ: ನರೇಂದ್ರ ಮೋದಿ ಆರೋಪಮುಕ್ತ

ಗುಜರಾತ್‌ ವಿಧಾನಸಭೆಯಲ್ಲಿ ನಾನಾವತಿ ಆಯೋಗದ ವರದಿ ಮಂಡನೆ
Last Updated 11 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಗಾಂಧಿನಗರ: 2002ರಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಿ.ಟಿ. ನಾನಾವತಿ ನೇತೃತ್ವದ ಆಯೋಗವು ಸಲ್ಲಿಸಿದ್ದ ಅಂತಿಮ ವರದಿ
ಯನ್ನು ಬುಧವಾರ ಗುಜರಾತ್‌ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಗಲಭೆಯ ಸಂದರ್ಭದಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಆಯೋಗವು ಕ್ಲೀನ್‌ಚಿಟ್‌ ನೀಡಿದೆ.

‘ರಾಜ್ಯದ ಯಾವುದೇ ಸಚಿವರು ಗಲಭೆಗೆ ಪ್ರಚೋದನೆ ಅಥವಾ ಪ್ರೇರಣೆ ನೀಡಿದ್ದಾರೆ ಎಂದು ಪ್ರತಿಪಾದಿಸಲು ಸಾಕ್ಷ್ಯಾಧಾರ ಲಭಿಸುವುದಿಲ್ಲ ಎಂದು ಆಯೋಗ ಹೇಳಿದೆ. ಆಯೋಗವು 2014ರಲ್ಲಿ ಈ ವರದಿಯನ್ನು ಗುಜರಾತ್‌ ಸರ್ಕಾರಕ್ಕೆ ಸಲ್ಲಿಸಿತ್ತು.

‘ಪೊಲೀಸರ ಸಂಖ್ಯೆ ಕಡಿಮೆ ಇದ್ದುದು ಮತ್ತು ಗಲಭೆಕೋರರನ್ನು ತಡೆಯಬಲ್ಲಂಥ ಶಸ್ತ್ರಾಸ್ತ್ರಗಳು ಪೊಲೀಸರ ಕೈಯಲ್ಲಿ ಇಲ್ಲದಿದ್ದುದು ಹಿಂಸಾಚಾರ ಹೆಚ್ಚಲು ಕಾರಣವಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗುಜರಾತ್‌ನ ಐಪಿಎಸ್‌ ಅಧಿಕಾರಿಗಳಾಗಿದ್ದ ಸಂಜೀವ ಭಟ್‌, ರಾಹುಲ್‌ ಶರ್ಮಾ ಹಾಗೂ ಆರ್‌.ಬಿ. ಶ್ರೀಕುಮಾರ್‌ ಅವರ ವಿಶ್ವಾಸಾರ್ಹತೆಯನ್ನು ಆಯೋಗ ಪ್ರಶ್ನಿಸಿದೆ. ‘ಗೋಧ್ರೋತ್ತರ ಗಲಭೆಗಳಲ್ಲಿ ರಾಜ್ಯ ಸರ್ಕಾರದ ಕೈವಾಡವಿತ್ತು’ ಎಂದು ಈ ಮೂವರು ಅಧಿಕಾರಿಗಳು ಆರೋಪಿಸಿದ್ದರು.

ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿ 59 ಕರಸೇವಕರನ್ನು ಹತ್ಯೆ ಮಾಡಿದ ನಂತರ ಗುಜರಾತ್‌ನಲ್ಲಿ ಗಲಭೆಗಳು ನಡೆದಿದ್ದವು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು 2002ರಲ್ಲಿ ಅಂದಿನ ಮುಖ್ಯಮಂತ್ರಿ ಮೋದಿ ಅವರು ಈ ಆಯೋಗವನ್ನು ರಚಿಸಿದ್ದರು.

ಐದು ವರ್ಷದ ಬಳಿಕ ಮಂಡನೆ

ಗಲಭೆಯ ತನಿಖೆಗಾಗಿ ಮೋದಿ ಅವರು 2002ರಲ್ಲಿ ಏಕವ್ಯಕ್ತಿ ಆಯೋಗವನ್ನು ರಚಿಸಿದ್ದರು. ಆನಂತರ ಅದನ್ನು ಪುನಾರಚಿಸಿ, ನಾನಾವತಿ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ನ್ಯಾಯಮೂರ್ತಿ ಕೆ.ಜಿ. ಶಾ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿತ್ತು. ಶಾ ಅವರ ನಿಧನದ ನಂತರ ನ್ಯಾಯಮೂರ್ತಿ ಅಕ್ಷಯ್‌ ಮೆಹತ ಆಯೋಗದ ಸದಸ್ಯರಾದರು.

ಆಯೋಗ ನೀಡಿದ್ದ ವರದಿಯ ಮೊದಲ ಭಾಗವನ್ನು 2009ರ ಸೆ. 25ರಂದು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು.

ಎರಡನೆಯ ಮತ್ತು ಅಂತಿಮ ಭಾಗವನ್ನು 2014ರ ನ. 28ರಂದು ಸರ್ಕಾರಕ್ಕೆ ಸಲ್ಲಿಸಿದ್ದರೂ ಅದನ್ನು ವಿಧಾನಸಭೆಯಲ್ಲಿ ಮಂಡಿಸಿರಲಿಲ್ಲ. ಸರ್ಕಾರದ ನಿಲುವನ್ನು ಪ್ರಶ್ನಿಸಿ ಮಾಜಿ ಪೊಲೀಸ್‌ ಅಧಿಕಾರಿ ಆರ್‌.ಬಿ. ಶ್ರೀಕುಮಾರ್‌ ಅವರು ಗುಜರಾತ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಸರ್ಕಾರವು, ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಕೋರ್ಟ್‌ಗೆ ಭರವಸೆ ನೀಡಿತ್ತು.

ವರದಿಯಮುಖ್ಯಾಂಶಗಳು

-ಗೋಧ್ರಾ ಘಟನೆಯಿಂದಾಗಿ ಹಿಂದೂ ಸಮುದಾಯ ಸಿಟ್ಟಿಗೆದ್ದಿತ್ತು. ಪರಿಣಾಮ, ಅಲ್ಪ ಸಂಖ್ಯಾತ ಸಮುದಾಯ ಮತ್ತು ಅವರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿತು.

-ಗಲಭೆಯಲ್ಲಿ ಯಾವುದೇ ರಾಜಕೀಯ ಪಕ್ಷ, ಧಾರ್ಮಿಕ ಸಂಘಟನೆ ಭಾಗಿಯಾಗಿರುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಆದರೆ ಕೆಲವು ಕಡೆ ವಿಶ್ವಹಿಂದೂ ಪರಿಷತ್‌ ಮತ್ತು ಬಜರಂಗ ದಳದ ಕಾರ್ಯಕರ್ತರು ಭಾಗಿಯಾಗಿರುವುದು ಕಂಡುಬಂದಿದೆ.

-ಗೋಧ್ರೋತ್ತರ ಗಲಭೆಯು ಪೂರ್ವನಿಯೋಜಿತ ಪಿತೂರಿಯಾಗಿರಲಿಲ್ಲ. ಗಲಭೆಗಳಿಗೆ ಸರ್ಕಾರ ಕುರುಡಾಗಿತ್ತು ಎಂಬ ಆರೋಪವು ವಾಸ್ತವಕ್ಕೆ ದೂರವಾದುದು.

-ಅಹಮದಾಬಾದ್‌ ನಗರದಲ್ಲಿ ನಡೆದ ಕೆಲವು ಗಲಭೆಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ತಮ್ಮ ಸಾಮರ್ಥ್ಯವನ್ನಾಗಲಿ ಉತ್ಸಾಹವನ್ನಾಗಲಿ ತೋರಿಸಲಿಲ್ಲ.

-ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದ ಸರ್ಕಾರವು, ಆಯೋಗ ರಚನೆಯಾದ ನಂತರ ಆ ಕ್ರಮವನ್ನು ಸ್ಥಗಿತಗೊಳಿಸಿತ್ತು. ಅಂಥ ಅಧಿಕಾರಿಗಳ ವಿರುದ್ಧದ ವಿಚಾರಣೆಯನ್ನು ಇನ್ನು ಮುಂದುವರಿಸಬೇಕು.

***

ಗಲಭೆಯನ್ನೇ ಮುಂದಿಟ್ಟುಕೊಂಡು ಕೆಲವು ಸರ್ಕಾರೇತರ ಸಂಘಟನೆಗಳು, ಕಾಂಗ್ರೆಸ್‌ ಪಕ್ಷವು ಮೋದಿ ಅವರ ಮಾನಹಾನಿ ಮಾಡಲು ರೂಪಿಸಿದ್ದ ಸಂಚು ಈಗ ಬಯಲಾಗಿದೆ

ಪ್ರದೀಪ್‌ಸಿನ್ಹ ಜಡೇಜ, ಗುಜರಾತ್‌ನ ಗೃಹಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT