ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ಒಂದು, ಸವಾಲು ಹಲವು

ಎನ್‌ಡಿಎ 2.0: ಮೊದಲ ವರ್ಷ ಪೂರ್ಣ, ಪಕ್ಷದ ಕಾರ್ಯಸೂಚಿ ಜಾರಿ: ಆರ್ಥಿಕ ಪ್ರಗತಿ ಕುಂಠಿತ, ಕೋವಿಡ್‌ ಇಕ್ಕಟ್ಟು
Last Updated 30 ಮೇ 2020, 2:32 IST
ಅಕ್ಷರ ಗಾತ್ರ

ಕೇಂದ್ರದ ಎನ್‌ಡಿಎ 2.0 ಸರ್ಕಾರಕ್ಕೆ ವರ್ಷ ತುಂಬಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಗೆಲುವು ಆಡಳಿತಾರೂಢ ಬಿಜೆ‍ಪಿಗೆ ದಕ್ಕಿತ್ತು. ಆದರೆ, ಅಧಿಕಾರದ ಮೊದಲ ವರ್ಷವು ತಮ್ಮನ್ನು ಈ ಮಟ್ಟದಲ್ಲಿ ಒರೆಗೆ ಹಚ್ಚಬಹುದು ಎಂಬ ಅಂದಾಜು ಪಕ್ಷ ಮತ್ತು ಸರ್ಕಾರದ ನಾಯಕತ್ವ ವಹಿಸಿದವರಿಗೇ ಇರಲಿಲ್ಲ. ಬಿಜೆಪಿಯ ಕಾರ್ಯಸೂಚಿಯಲ್ಲಿ ಬಹಳ ಹಿಂದಿನಿಂದಲೂ ಇದ್ದ ಕೆಲವು ವಿಚಾರಗಳಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಅದಕ್ಕೆ ಪ್ರತಿರೋಧ ಎದುರಾಗಬಹುದು ಎಂಬುದು ಸಾಮಾನ್ಯ ಅರಿವು. ಆದರೆ, ಪ್ರತಿಭಟನೆಗಳು ಪಡೆದುಕೊಂಡ ಭಿನ್ನ ಸ್ವರೂಪ ಸ್ವತಂತ್ರ ಭಾರತವು ಹಿಂದೆಂದೂ ಕಂಡರಿಯದ್ದು. ಸರ್ಕಾರಕ್ಕೆ ವರ್ಷ ತುಂಬಿದ ಈ ಹೊತ್ತಿನಲ್ಲಿ ಕೋವಿಡ್‌ ಪಿಡುಗು ನಿರ್ವಹಣೆಯಲ್ಲಿ ಅರ್ಧ ಹಾದಿಯೂ ಸಾಗಿ ಆಗಿಲ್ಲ. ಆದರೆ, ಸರ್ಕಾರವು ಪಿಡುಗನ್ನು ನಿಭಾಯಿಸಲು ಕೈಗೊಂಡ ತೀರ್ಮಾನಗಳು, ಲಾಕ್‌ಡೌನ್‌ ಹೇರಿಕೆ ಬಗ್ಗೆ ಮೆಚ್ಚುಗೆ ಮತ್ತು ಟೀಕೆಗಳೆರಡೂ ವ್ಯಕ್ತವಾಗಿವೆ. ಒಂದು ವರ್ಷದಲ್ಲಿ ಭಾರಿ ಚರ್ಚೆಗೆ ಆಸ್ಪದವಿತ್ತ ವಿಚಾರಗಳು ಇಂತಿವೆ:

ಕಾಶ್ಮೀರದ ವಿಶೇಷಾಧಿಕಾರಕ್ಕೆ ಕತ್ತರಿ

ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಜಮ್ಮು ಕಾಶ್ಮೀರ ರಾಜ್ಯಕ್ಕೆ ಇದ್ದ ವಿಶೇಷಾಧಿಕಾರವನ್ನು ರದ್ದು ಮಾಡಿ, ಜಮ್ಮು–ಕಾಶ್ಮೀರ ಮತ್ತು ಲಡಾಖ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳ ರಚನೆ ಎನ್‌ಡಿಎ 2.0 ಸರ್ಕಾರದ ಮೊದಲ ಮಹತ್ವದ ನಿರ್ಧಾರ. ಈ ನಿರ್ಧಾರದಿಂದಾಗಿ ಯಾವುದೇ ರೀತಿಯ ಅಶಾಂತಿ, ಪ್ರತಿಭಟನೆ, ಹಿಂಸೆ ತಡೆಯುವುದಕ್ಕಾಗಿ ಜಮ್ಮು–ಕಾಶ್ಮೀರದಲ್ಲಿ ಕಠಿಣ ನಿರ್ಬಂಧಗಳನ್ನು ಹೇರಲಾಯಿತು. ಸಂವಹನ ವ್ಯವಸ್ಥೆಯನ್ನು ಬಹುತೇಕ ಸ್ಥಗಿತಗೊಳಿಸಲಾಗಿತ್ತು ಮತ್ತು ಹಿರಿಯ ಮುಖಂಡರನ್ನು ಸಾರ್ವಜನಿಕ ಸುರಕ್ಷತೆ ಕಾಯ್ದೆ ಅಡಿಯಲ್ಲಿ ಬಂಧಿಸಲಾಯಿತು. ಸರ್ಕಾರದ ಈ ಕ್ರಮಕ್ಕೆ ದೇಶದಲ್ಲಿ ಟೀಕೆ ವ್ಯಕ್ತವಾಗಿತ್ತು; ಇದು ಜಾಗತಿಕ ಮಟ್ಟದಲ್ಲಿಯೂ ಗಮನ ಸೆಳೆದಿತ್ತು. ಈ ನಿರ್ಧಾರವನ್ನು ಜಾಗತಿಕ ಮಟ್ಟದಲ್ಲಿ ಸಮರ್ಥಿಸಿಕೊಳ್ಳುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಭಾರತದ ವಿರುದ್ಧ ಜಾಗತಿಕ ಬೆಂಬಲ ಪಡೆಯಲು ಪಾಕಿಸ್ತಾನವು ನಿರಂತರ ಯತ್ನವನ್ನೂ ನಡೆಸಿತ್ತು. ಆದರೆ, ಹೆಚ್ಚಿನ ದೇಶಗಳ ಬೆಂಬಲ ಪಡೆಯುವಲ್ಲಿ ಭಾರತ ಯಶಸ್ವಿ ಆಯಿತು.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿ (ಸಿಎಎ, ಎನ್‌ಆರ್‌ಸಿ)

ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ನಿಜವಾದ ಅಗ್ನಿಪರೀಕ್ಷೆಯಾಗಿದ್ದು ಸಿಎಎ ಮತ್ತು ಎನ್‌ಆರ್‌ಸಿ. ಯಾರೂ ಊಹಿಸದ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದವು. ಸೃಜನಶೀಲ ಅಭಿವ್ಯಕ್ತಿ ಈ ಬಾರಿಯ ಪ್ರತಿಭಟನೆಯ ವೈಶಿಷ್ಟ್ಯ. 2019ರಲ್ಲಿ ಆರಂಭವಾದ ಪ್ರತಿಭಟನೆಗಳು ದೇಶದ ವಿವಿಧ ಭಾಗಗಳನ್ನು ವ್ಯಾಪಿಸಿದವು. ವಿಶ್ವವಿದ್ಯಾಲಯ ಮತ್ತು ಕಾಲೇಜು ವಿದ್ಯಾರ್ಥಿಗಳೇ ಪ್ರತಿಭಟನೆಯನ್ನು ಮುಂದಕ್ಕೆ ಒಯ್ದರು. ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವು ಪ್ರತಿರೋಧದ ಕಿಡಿ ಹಚ್ಚಿತು. ಪ್ರತಿಭಟನೆಯು ಸಾಮಾಜಿಕ ಚಳವಳಿಯ ರೂಪ ಪಡೆಯಿತು. ಹಾಡು, ಕವಿತೆ, ಕಲಾಕೃತಿಗಳೆಲ್ಲವೂ ಪ್ರತಿಭಟನೆಯ ಭಾಗವಾದವು. ದೆಹಲಿಯ ಶಹೀನ್‌ಬಾಗ್‌ ಸಿಎಎ ವಿರೋಧದ ಕೇಂದ್ರ ಸ್ಥಾನವಾಗಿ ಮಾರ್ಪಟ್ಟಿತು. ರಸ್ತೆಯಲ್ಲಿ ಧರಣಿ ಕುಳಿತ ಮುಸ್ಲಿಂ ಮಹಿಳೆಯರ ಗುಂಪು, ಕೊರೊನಾ ವೈರಾಣು ತಡೆಗೆ ಲಾಕ್‌ಡೌನ್‌ ಘೋಷಿಸುವ ವರೆಗೆ ಅಲ್ಲಿಯೇ ಇತ್ತು. ನೂರು ದಿನ ಅವರು ಪ್ರತಿಭಟನೆಯನ್ನು ಮುನ್ನಡೆಸಿದ್ದರು.

ಚೇತರಿಸದ ಅರ್ಥ ವ್ಯವಸ್ಥೆ

2018ರ ಬಳಿಕ ಭಾರತದ ಅರ್ಥ ವ್ಯವಸ್ಥೆಯ ಪ್ರಗತಿಯು ಕುಂಟತೊಡಗಿತ್ತು. 2018ರ ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ಪ್ರಗತಿ ದರ ಶೇ 8.1ರಷ್ಟು ಎಂಬುದು ಸರ್ಕಾರವೇ ಕೊಟ್ಟ ಅಂಕಿ ಅಂಶ. ಆದರೆ, 2019ರ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಪ್ರಗತಿ ದರವು ಶೇ 4.5ಕ್ಕೆ ಇಳಿದಿತ್ತು. ಆರ್ಥಿಕತೆ ಸಂಕಷ್ಟದಲ್ಲಿದೆ ಎಂಬುದನ್ನು ಸರ್ಕಾರ ಒಪ್ಪುವುದಕ್ಕೇ ಹಿಂದೇಟು ಹಾಕಿತ್ತು. ಆದರೆ, ಉತ್ಪಾದಕತೆ, ಮಾರಾಟ, ಬೇಡಿಕೆ ಕುಸಿತ 2019ನೇ ಆರ್ಥಿಕ ವರ್ಷದಲ್ಲಿ ತೀವ್ರವಾಗಿ ಮುಂದುವರಿದಿತ್ತು. ಹಲವು ಉದ್ಯಮಗಳಲ್ಲಿ, ಭಾರಿ ಪ್ರಮಾಣದಲ್ಲಿ ಉದ್ಯೋಗ ನಷ್ಟ ಆರಂಭವಾಗಿತ್ತು. ಹೀಗಾಗಿ, ಕೊನೆಗೂ ಸರ್ಕಾರ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕಾಯಿತು. ಆದರೆ, ಇದು ತಾತ್ಕಾಲಿಕ, ಪ್ರಗತಿ ಸರಪಣಿಯ ಒಂದು ಸ್ಥಿತಿ ಎಂದು ಹೇಳಿತು. ಆದರೆ, ಸತತ ಎಂಟು ತ್ರೈಮಾಸಿಕಗಳಲ್ಲಿ ಪ್ರಗತಿ ದರ ಕುಸಿತವು ಈ ವಿವರಣೆಯ ವ್ಯಾಪ್ತಿಗೆ ಸೀಮಿತವೇ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳು ಎತ್ತುತ್ತಲೇ ಇವೆ.

2016ರಲ್ಲಿ ಕೈಗೊಂಡ ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿ ನಿರ್ಧಾರಗಳು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಪ್ರಗತಿಗೆ ಈಗಲೂ ತೊಡಕಾಗಿದೆ ಎಂಬ ವಾದ ಮುಂದುವರಿದಿದೆ. ಅದೇನ ಇದ್ದರೂ, ಕೊರೊನಾ ಸೋಂಕು ಹರಡುವಿಕೆ ತಡೆಗೆ ಹೇರಲಾದ ಲಾಕ್‌ಡೌನ್‌, ಪ್ರಗತಿಯ ದರವನ್ನು ಪಾತಾಳಕ್ಕೆ ಇಳಿಸಿದೆ.

ಹೈರಾಣಾಗಿಸಿದ ಕೊರೊನಾ ಪಿಡುಗು

ಕೊರೊನ ವೈರಾಣು ಪಿಡುಗು ಜಗತ್ತಿನ ಯಾವುದೇ ಸರ್ಕಾರಕ್ಕೆ ಹೊಸದಾದ ಸವಾಲು. ಎನ್‌ಡಿಎ 2.0 ಸರ್ಕಾರದ ಮೊದಲ ವರ್ಷ ಕೊನೆಯಾಗುವ ಹೊತ್ತಿಗೆ ಬಂದ ಈ ಸಂಕಷ್ಟವು ಮೊದಲ ವರ್ಷದ ಸಂಭ್ರಮಕ್ಕೆ ಅವಕಾಶವೇ ಇಲ್ಲದಂತೆ ಮಾಡಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಇನ್ನಿಲ್ಲದ ಗಮನ ಹರಿಸಬೇಕಾದ ಅನಿವಾರ್ಯವನ್ನು ಇದು ಸೃಷ್ಟಿಸಿದೆ. ಆರೋಗ್ಯ ಮತ್ತು ಅರ್ಥ ವ್ಯವಸ್ಥೆ ಎರಡರಲ್ಲಿ ಯಾವುದು ಮುಖ್ಯ ಎಂದು ಸರ್ಕಾರ ಹೊಯ್ದಾಡುವಂತಾಗಿದೆ. ಮಾರ್ಚ್‌ 24ರಿಂದ ಆರಂಭವಾದ ಲಾಕ್‌ಡೌನ್‌, ವಿವಿಧ ಹಂತಗಳ ಮೂಲಕ ಮೇ 31ರವರೆಗೆ ಜಾರಿಯಲ್ಲಿದೆ. ಇದು ಜಗತ್ತಿನಲ್ಲಿಯೇ ಅತ್ಯಂತ ದೀರ್ಘವಾದ ಲಾಕ್‌ಡೌನ್‌. ನಿರ್ಬಂಧ ಇದ್ದರೂ ಈಗ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿರುವ ಒಂಬತ್ತನೇ ದೇಶವಾಗಿದೆ. ಲಾಕ್‌ಡೌನ್‌ನಿಂದ ಏನನ್ನು ಸಾಧಿಸಲಾಯಿತು ಎಂಬ ಪ್ರಶ್ನೆಯನ್ನು ವಿರೋಧ ಪಕ್ಷ ಎತ್ತಿದೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದೆ. ದೇಶದ ಆರೋಗ್ಯ ರಕ್ಷಣೆ ವ್ಯವಸ್ಥೆಗೆ ಇದೊಂದು ಸತ್ವ ಪರೀಕ್ಷೆಯ ಕಾಲ. ಆರೋಗ್ಯ ವ್ಯವಸ್ಥೆಯ ಮೇಲೆ ಎಷ್ಟು ಗಮನ ಹರಿಸಬೇಕು ಎಂಬುದಕ್ಕೆ ಹೊಸ ಲೆಕ್ಕಾಚಾರವನ್ನೇ ಈ ಪಿಡುಗು ನೀಡಿದೆ. ಅರ್ಥ ವ್ಯವಸ್ಥೆಯನ್ನು ಲಾಕ್‌ಡೌನ್‌ ಮೂಲೆಗೆ ತಳ್ಳಿದೆ. ಈಗ, ಆರೋಗ್ಯ ಮತ್ತು ಅರ್ಥ ವ್ಯವಸ್ಥೆಗಳೆರಡನ್ನೂ ಕಟ್ಟಿ ನಿಲ್ಲಿಸಬೇಕಾಗಿದೆ.

ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕರು ಮರಳಿ ಮನೆಯತ್ತ ನಡೆದ ವಿದ್ಯಮಾನವು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿದೆ. ನಡೆದು ಹೋಗಿ ದಣಿದು ಸತ್ತವರು, ಆಹಾರ ಇಲ್ಲದೆ ಸತ್ತವರು, ಅಪಘಾತದಲ್ಲಿ ಸತ್ತವರು ಹೀಗೆ ವಲಸೆ ಕಾರ್ಮಿಕರ ಸ್ಥಿತಿಯು ಸಮಾಜದ ಮನ ಕಲಕಿದೆ. ವಲಸೆ ಕಾರ್ಮಿಕರ ಸಂಕಷ್ಟ ನಿವಾರಣೆಗೆ ಸರ್ಕಾರಗಳು ಕ್ರಮ ಕೈಗೊಂಡಿದ್ದರೂ ಲೋಪಗಳು ಹೆಚ್ಚೇ ಇವೆ ಎಂದು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಚೀನಾ ಗಡಿಯಲ್ಲಿ ಗಡಿಬಿಡಿ

ಗಡಿ ರಕ್ಷಣೆ ವಿಚಾರದಲ್ಲಿ ಯಾವ ರಾಜಿಯೂ ಇಲ್ಲ ಎಂಬುದು ಈ ಸರ್ಕಾರದ ಘೋಷಿತ ನಿಲುವು. ಪೌರುಷದ ರಾಷ್ಟ್ರೀಯತೆಯನ್ನು ಬಿಜೆಪಿ ಪ್ರತಿಪಾದಿಸುತ್ತಿದೆ. ಆದರೆ, ಇತ್ತೀಚೆಗೆ ಚೀನಾ ಜತೆಗಿನ ನೈಜ ನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಬೆಳವಣಿಗೆ ವರ್ಷ ತುಂಬುತ್ತಿರುವ ಸರ್ಕಾರಕ್ಕೆ ಶುಭ ಸುದ್ದಿಯೇನಲ್ಲ. ಪೂರ್ವ ಲಡಾಕ್‌ನಲ್ಲಿ ಎಲ್‌ಎಸಿಯ ಆಚೆಗೆ ಚೀನಾದ ಸೈನಿಕರು ಬೀಡು ಬಿಟ್ಟಿದ್ದಾರೆ. ಈಚೆ ಭಾಗದಲ್ಲಿ ಭಾರತದ ಯೋಧರು ಜಮಾಯಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿಲ್ಲ ಎಂಬುದು ಸಮಾಧಾನ. ಕೋವಿಡ್‌ ವಿರುದ್ಧದ ಹೋರಾಟದ ನಡುವಲ್ಲಿ ಚೀನಾದ ಜೊತೆಗೆ ಸಂಘರ್ಷಕ್ಕೆ ನಿಲ್ಲುವುದು ದೊಡ್ಡ ಸರಳವೇನಲ್ಲ.

ತಕ್ಷಣದ ಸವಾಲುಗಳೇನು?

* ಕೊರೊನಾ ವೈರಾಣು ಸೋಂಕು ಹರಡುವಿಕೆಗೆ ಅಂಕುಶ ಹಾಕಲೇಬೇಕು; ಆದರೆ, ಈ ನಿಯಂತ್ರಣ ಕ್ರಮಗಳು ಅರ್ಥ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದಲ್ಲಿ ಪ್ರತಿಕೂಲ ಪರಿಣಾಮ ಬೀರದಂತೆಯೂ ನೋಡಿಕೊಳ್ಳಬೇಕು. ಆರೋಗ್ಯ ಮತ್ತು ಆರ್ಥಿಕತೆಯ ನಡುವಣ ಸಮತೋಲನ ಸಾಧ್ಯವಾಗಬೇಕು

* ದೇಶದ ವಿವಿಧ ಭಾಗಗಳ ನಗರಗಳು ಮತ್ತು ಪಟ್ಟಣಗಳ ಪ್ರಗತಿ ಯಂತ್ರವೇ ಆಗಿದ್ದ ವಲಸೆ ಕಾರ್ಮಿಕರು ಕೊರೊನಾ ಲಾಕ್‌ಡೌನ್‌ ಪರಿಣಾಮವಾಗಿ ತಮ್ಮ ಊರಿಗೆ ಮರಳಿದ್ದಾರೆ. ಅವರು ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಬೇಕು. ನಗರಗಳು–ಪಟ್ಟಣಗಳಲ್ಲಿನ ಆರ್ಥಿಕ ಚಟುವಟಿಕೆಗೆ ವೇಗ ನೀಡಲು ಹೊಸ ಕಾರ್ಮಿಕರು ಬೇಕೇ ಬೇಕು

* ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಎಲ್ಲ ಕ್ಷೇತ್ರಗಳೂ ನಿರುದ್ಯೋಗದ ಹೊಡೆತಕ್ಕೆ ಸಿಕ್ಕಿದೆ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಹುಡುಕದಿದ್ದರೆ ಇದು ಆರ್ಥಿಕ ಸಮಸ್ಯೆಯ ಜತೆಗೆ ಸಾಮಾಜಿಕ ಸಮಸ್ಯೆಯಾಗಿಯೂ ಬದಲಾಗಬಹುದು

* ಚೀನಾ ಜತೆಗಿನ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ಇದೆ. ಸಮಸ್ಯೆಯನ್ನು ಸೌಹಾರ್ದದಿಂದಲೇ ಪರಿಹರಿಸಿಕೊಳ್ಳಬೇಕಿದೆ. ಜತೆಗೆ, ನೆರೆಯ ದೇಶಗಳಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿದೆ. ಅದಕ್ಕೆ ಕಡಿವಾಣ ಹಾಕುವ ಕೆಲಸವೂ ತುರ್ತಾಗಿ ಆಗಬೇಕಿದೆ

ಮತ್ತೆ ಆಪರೇಷನ್‌

ದೇಶದಲ್ಲಿ ಬಿಜೆಪಿಯ ಬಲವರ್ಧನೆಯಾದ ನಂತರ ‘ಆಪರೇಷನ್‌ ಕಮಲ’ ಎಂಬುದು ಆಗಾಗ ಕೇಳಿಬರುತ್ತಿದ್ದ ಮಾತಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಏರಿದ ಬಳಿಕವೂ ಆಪರೇಷನ್‌ ಕಮಲ ಅಸ್ತ್ರದ ಪ್ರಯೋಗ ಆಗಿದೆ.

ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ ಅವರು ಮುಖ್ಯಮಂತ್ರಿಯಾದ ದಿನದಿಂದಲೇ ಎಂಬಂತೆ ಅವರ ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಬಿಜೆಪಿ ಆರಂಭಿಸಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಬಿಜೆಪಿಗೆ ಸೆಳೆಯುವ ಮೂಲಕ ಅದನ್ನು ಕೊನೆಗೂ ಸಾಧಿಸಿತು.

ಕರ್ನಾಟಕದಲ್ಲಿ ಆ ಅಸ್ತ್ರವನ್ನು ಬಿಜೆಪಿ ಹಿಂದೆಯೂ ಪ್ರಯೋಗಿಸಿತ್ತು. ಸ್ವಲ್ಪ ವಿಳಂಬವಾಗಿಯಾದರೂ ಮತ್ತೆ ಅದನ್ನು ಪ್ರಯೋಗಿಸುವ ಮೂಲಕ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿಗೆ ಸಾಧ್ಯವಾಗಿದೆ.

ಮಹಾರಾಷ್ಟ್ರದಲ್ಲಿ ಶಿವಸೇನಾ ಜತೆ ಚುನಾವಣಾ ಪೂರ್ವದಲ್ಲಿ ಮಾಡಿಕೊಂಡ ಮೈತ್ರಿಯು ಅಧಿಕಾರದ ಹೊಸ್ತಿಲಲ್ಲಿದ್ದಾಗ ಮುರಿದುಬಿತ್ತು. ಎನ್‌ಸಿಪಿ, ಕಾಂಗ್ರೆಸ್‌ ಜತೆ ಕೈಜೋಡಿಸಿ ಶಿವಸೇನಾ ಅಲ್ಲಿ ಸರ್ಕಾರ ರಚಿಸಿತು. ಈ ‘ಮಹಾ ವಿಕಾಸ ಅಘಾಡಿ’ಯನ್ನು ಮುರಿಯುವ ಪ್ರಯತ್ನವನ್ನು ಆರಂಭದಲ್ಲೇ ಮಾಡಿದರೂ ಅದು ಕೈಗೂಡಲಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸುವ, ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಅಲ್ಲಿ ಪುನಃ ತೀವ್ರಗೊಂಡಿದೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆಯ ನಂತರ ದೆಹಲಿ, ಜಾರ್ಖಂಡ್‌ ಹಾಗೂ ಹರಿಯಾಣ ವಿಧಾನಸಭೆಗಳಿಗೆ ಚುನಾವಣೆ ನಡೆದಿದ್ದವು. ದೆಹಲಿಯಲ್ಲಿ ಅಧಿಕಾರ ಹಿಡಿಯುವ ಬಿಜೆಪಿಯ ಆಸೆ ಈಡೇರಲಿಲ್ಲ. ಜಾರ್ಖಂಡ್‌ನಲ್ಲಿ ಅಧಿಕಾರವನ್ನು ಕಳೆದುಕೊಂಡರೆ, ಹರಿಯಾಣದಲ್ಲಿ ಜೆಜೆಪಿ ಮೈತ್ರಿಯೊಂದಿಗೆ ಅಧಿಕಾರ ಹಿಡಿದಿದೆ.

ಮೊದಲ ವರ್ಷ ಏನೇನಾಯಿತು?

* ಕೊರೊನಾ ಲಾಕ್‌ಡೌನ್‌ನಿಂದ ಕಂಗೆಟ್ಟ ಅರ್ಥ ವ್ಯವಸ್ಥೆಗೆ ₹20 ಲಕ್ಷ ಕೋಟಿಯ ಪ್ಯಾಕೇಜ್ ಘೋಷಣೆ

*ಭಯೋತ್ಪಾದನೆ ವಿರುದ್ಧ ಕಾನೂನಿನ ಕೈಗೆ ಬಲ. ‘ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಮಸೂಗೆ ಸಂಸತ್ ಅಂಗೀಕಾರ

*ಮುಸ್ಲಿಂ ಹೆಣ್ಣುಮಕ್ಕಳ ವಿರುದ್ಧದ ದೌರ್ಜನ್ಯಗಳಿಗೆ ತಡೆ ಒಡ್ಡುವ ತ್ರಿವಳಿ ತಲಾಖ್ ಜಾರಿ

*ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗೆ ಮರಣದಂಡನೆ ಶಿಕ್ಷೆ ನೀಡುವ ಕಾಯ್ದೆ ಜಾರಿ

*ಪಾಕಿಸ್ತಾನದ ವಶದಲ್ಲಿರುವ ಕುಲಭೂಷಣ್ ಜಾಧವ್‌ಗೆ ಗಲ್ಲು ಶಿಕ್ಷೆ ನೀಡದಂತೆ ಅಂತರರಾಷ್ಟ್ರೀಯ ಕೋರ್ಟ್‌ ತಡೆ. ಭಾರತದ ವಾದಕ್ಕೆ ಮನ್ನಣೆ

*ಚಂದ್ರಯಾನದಲ್ಲಿ ನಿರೀಕ್ಷಿತ ಯಶಸ್ಸು ಲಭಿಸದಿದ್ದರೂ, ಈ ಸಾಧನೆ ಮಾಡಿದ ಜಗತ್ತಿನ ನಾಲ್ಕು ದೇಶಗಳ ಸಾಲಿಗೆ ಭಾರತ ಸೇರ್ಪಡೆ

*ಮೂರು ಕಂತುಗಳಲ್ಲಿ ರೈತರಿಗೆ ₹6000 ಸಹಾಯಧನ ನೀಡುವ ಯೋಜನೆ ಅನುಷ್ಠಾನ

*ಒಮ್ಮೆ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಮೋದಿ ಕರೆ. ಆಂದೋಲನ ಘೋಷಣೆಯಾದ ಕೇವಲ 15 ದಿನಗಳಲ್ಲಿ 13 ಸಾವಿರ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ

*ಸುಳ್ಳುಸುದ್ದಿ ಹರಡದಂತೆ ತಡೆಯಲು ಕ್ರಮ. ಈ ನಿಟ್ಟಿನಲ್ಲಿ ‘ಫ್ಯಾಕ್ಟ್‌ಚೆಕ್’ ವೇದಿಕೆ ಆರಂಭ. ಸರ್ಕಾರ ಹಾಗೂ ಅದರ ನೀತಿ ಕುರಿತ ಸುಳ್ಳು ಮಾಹಿತಿಗಳನ್ನು ಪತ್ತೆಹಚ್ಚಿ, ಅದನ್ನು ನಿಗ್ರಹಿಸುವುದು ಮುಖ್ಯ ಉದ್ದೇಶ

*ರಾಷ್ಟ್ರೀಯ ಮಟ್ಟದಲ್ಲಿ ವಾಯುಮಾಲಿನ್ಯ ತಡೆಗೆ ‘ರಾಷ್ಟ್ರೀಯ ಶುದ್ಧಗಾಳಿ ಕಾರ್ಯಕ್ರಮ’ (ಎನ್‌ಸಿಎಪಿ) ಜಾರಿ. 2024ರೊಳಗೆ ಶೇ 20ರಿಂದ ಶೇ 30ರಷ್ಟು ಮಾಲಿನ್ಯ (ಪಿಎಂ 10 ಮತ್ತು ಪಿಎಂ 2.5) ನಿಯಂತ್ರಣಕ್ಕೆ ಕಾಲಮಿತಿ ನಿಗದಿ

*ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆ ಸೃಷ್ಟಿಸಲು ಕಾರ್ಪೊರೇಟ್ ತೆರಿಗೆಯಲ್ಲಿ ಭಾರಿ ಕಡಿತ ಘೋಷಣೆ. ಭಾರತ ಈಗ ಕಡಿಮೆ ತೆರಿಗೆ ವಿಧಿಸುವ ದೇಶ ಎನಿಸಿದೆ

ಉತ್ತುಂಗದಲ್ಲಿ ಅಮಿತ್‌ ಶಾ

ಲೋಕಸಭಾ ಚುನಾವಣಾ ಪ್ರಕ್ರಿಯೆಯು ಕೊನೆಯ ಚರಣದಲ್ಲಿತ್ತು. ಪ್ರಧಾನಿ ಮೋದಿ ಮತ್ತು ಬಿಜೆಪಿಯ ಅಂದಿನ ಅಧ್ಯಕ್ಷ ಅಮಿತ್‌ ಶಾ ಅವರ ಪತ್ರಿಕಾಗೋಷ್ಠಿಗೆ ಮಾಧ್ಯಮದವರಿಗೆ ಆಹ್ವಾನ ಹೋಗಿತ್ತು. ಮೊದಲಬಾರಿಗೆ ಪ್ರಧಾನಿ ನೇರವಾಗಿ ಮಾಧ್ಯಮಗಳನ್ನು ಎದುರಿಸುತ್ತಿದ್ದಾರೆ ಎಂದು ಪತ್ರಕರ್ತರು ಧಾವಿಸಿದ್ದರು. ಗೋಷ್ಠಿಯಲ್ಲಿ ಸಾಕಷ್ಟು ದೀರ್ಘ ಭಾಷಣ ಮಾಡಿದ ಮೋದಿ, ಮಾಧ್ಯಮದವರು ಪ್ರಶ್ನೆಗಳನ್ನು ತೂರಿದಾಗ, ಶಾ ಅವರ ಕಡೆಗೆ ಬೊಟ್ಟುಮಾಡಿ, ‘ಪ್ರಶ್ನೆಗಳಿಗೆ ಪಕ್ಷದ ಅಧ್ಯಕ್ಷರು ಉತ್ತರಿಸುತ್ತಾರೆ’ ಎಂದು ಮೌನಿಯಾದರು. ಮಾಧ್ಯಮದವರ ಎಲ್ಲಾ ಪ್ರಶ್ನೆಗಳಿಗೆ ಅಮಿತ್‌ ಶಾ ಪ್ರತಿಕ್ರಿಯೆ ನೀಡಿದರು. ಅಮಿತ್‌ ಶಾ ಅವರು ಪಕ್ಷದಲ್ಲಿ ಉತ್ತುಂಗಕ್ಕೆ ಏರಲಿದ್ದಾರೆ ಎಂಬುದರ ಸೂಚನೆಯಂತೆ ಆ ಮಾಧ್ಯಮಗೋಷ್ಠಿ ಕಂಡಿತ್ತು.

ಹಾಗೆಯೇ ಆಯಿತು. ವರ್ಷದ ಹಿಂದೆ ‘ಬಿಜೆಪಿ 2.0’ ಸರ್ಕಾರ ಅಧಿಕಾರಕ್ಕೆ ಬಂದಾಗ, ಶಾ ಗೃಹಸಚಿವರ ಸ್ಥಾನದಲ್ಲಿ ಕುಳಿತು, ದೇಶದ ಎರಡನೇ ಅತಿ ಶಕ್ತಿಶಾಲಿ ವ್ಯಕ್ತಿ ಎನಿಸಿಕೊಂಡರು. ಪಕ್ಷದ ಒಳಗಿನವರೇ ಶಾ ಅವರನ್ನು ಅಗೋಚರ ಪ್ರಧಾನಿ, ಮೋದಿಯ ನೆರಳು ಎಂದೆಲ್ಲ ಬಣ್ಣಿಸಿದರು. ಅದು ವಾಸ್ತವವೂ ಆಗಿತ್ತು. ಸಂಸತ್ತಿನಲ್ಲಿ ಮತ್ತು ಹೊರಗೆ ಶಾ ಅವರ ಧ್ವನಿ ಮೋದಿಯಷ್ಟೇ ಪ್ರಭಾವಶಾಲಿಯಾಗಿ ಕೇಳಿಸುತ್ತಿದೆ.

ತ್ರಿವಳಿ ತಲಾಖ್‌ ರದ್ದತಿ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌... ಹೀಗೆ ಪ್ರಮುಖ ಸಂದರ್ಭಗಳಲ್ಲೆಲ್ಲ ಸಂಸತ್ತಿನಲ್ಲಿ ಮತ್ತು ಹೊರಗೆ ವಿರೋಧಪಕ್ಷಗಳ ದಾಳಿಯನ್ನು ಎದುರಿಸಿದ್ದು ಅಮಿತ್‌ ಶಾ ಅವರೇ. ಮೋದಿ ಅವರ ಮೊದಲ ಅಧಿಕಾರದ ಅವಧಿಯಲ್ಲಿ ಬಿಜೆಪಿಯ ಮೂಲ ಪ್ರಣಾಳಿಕೆ ನಿರೀಕ್ಷಿತ ಮಟ್ಟದಲ್ಲಿ ಜಾರಿಗೆ ಬಂದಿರಲಿಲ್ಲ. ಶಾ ಅವರು ಗೃಹಸಚಿವರ ಸ್ಥಾನದಲ್ಲಿ ಕುಳಿತ ನಂತರ ಅದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂಬ ಮಾತುಗಳು ಬಲಗೊಂಡದ್ದು ಆಗಲೇ.

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT