ಗುರುವಾರ , ಸೆಪ್ಟೆಂಬರ್ 19, 2019
22 °C

ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸಿದ ನರೇಂದ್ರ ಮೋದಿ

Published:
Updated:

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಅಮಿತ್‌ ಶಾ, ಉದ್ಧವ್ ಠಾಕ್ರೆ, ನಿತೀಶ್‌ ಕುಮಾರ್ ಸೇರಿದಂತೆ ಬಿಜೆಪಿ, ಎನ್‌ಡಿಎ ಮೈತ್ರಿಕೂಟ ಮತ್ತು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಮುನ್ನ ಕಾಶಿ ವಿಶ್ವನಾಥ ದೇಗುಲದಲ್ಲಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಅದಕ್ಕೂ ಮೊದಲು ಮುಂಜಾನೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡಿದರು. ‘ಕಾಶಿಯ ಎಲ್ಲ ಕಾರ್ಯಕರ್ತನೂ ಮೋದಿಯೇ. ದೇಶವನ್ನು ಪ್ರಗತಿಯತ್ತ ಮುನ್ನಡೆಸುವುದು ನಮ್ಮ ಧ್ಯೇಯ. ಹೊಸ ತಲೆಮಾರಿನ ಮತದಾರರಿಗೆ ಮತದಾನಕ್ಕೆ ಪ್ರೇರಣೆ ಕೊಡಿ’ ಎಂದು ಸಲಹೆ ಮಾಡಿದರು.

‘ಪ್ರಜಾಪ್ರಭುತ್ವದಲ್ಲಿ ಪಕ್ಷದ ಕಾರ್ಯಕರ್ತರೇ ನಿಜವಾದ ಅಭ್ಯರ್ಥಿಗಳು. ಪ್ರತಿ ಬೂತ್‌ನಲ್ಲಿಯೂ ನಮಗೆ ಮುನ್ನಡೆ ಸಿಗಬೇಕು. ನಾನು ಗೆಲ್ಲುವುದಕ್ಕಿಂತ ನೀವು ಗೆಲ್ಲುವುದು ಮುಖ್ಯ. ಪ್ರತಿ ಬೂತ್‌ನಲ್ಲಿಯೂ ಮುನ್ನಡೆ ಸಿಕ್ಕರೆ ನನಗೆ ಹೆಚ್ಚು ಸಂತಸವಾಗುತ್ತದೆ’ ಎಂದರು.

ಮೋದಿ ನಾಮಪತ್ರ ಸಲ್ಲಿಕೆಯ ಟೈಂಲೈನ್ ಇಲ್ಲಿದೆ...

12.02 ನಾಮಪತ್ರ ಸಲ್ಲಿಕೆಯ ವೀಡಿಯೊ

11.48 ನಾಮಪತ್ರ ಸಲ್ಲಿಸಿದ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶುಕ್ರವಾರ ಬೆಳಿಗ್ಗೆ 11.44ಕ್ಕೆ ನಾಮಪತ್ರ ಸಲ್ಲಿಸಿದರು. 2014ರಲ್ಲಿ ಇದೇ ಕ್ಷೇತ್ರದಲ್ಲಿ ಅವರು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.

11.47 ಗೆಲುವಿಗೆ ಹಾರೈಕೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್, ಎಐಎಡಿಎಂಕೆ ನಾಯಕರು, ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್, ಲೋಕ್ ಜನಶಕ್ತಿ ಪಕ್ಷದ ನಾಯಕ ರಾಮ್‌ ವಿಲಾಸ್ ಪಾಸ್ವಾನ್ ಸೇರಿದಂತೆ ಹಲವು ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ಅವರಿಗೆ ಶುಭ ಹಾರೈಸಿದರು.

11.46 ಎನ್‌ಡಿಎ ನಾಯಕರಿಂದ ಶುಭ ಹಾರೈಕೆ

ನಾಮಪತ್ರ ಸಲ್ಲಿಸಲು ವಾರಾಣಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಹಿರಿಯ ನಾಯಕರು ಶುಭ ಹಾರೈಸಿದರು.

11.45 ವಾರಾಣಸಿಯಲ್ಲಿ ನಾಯಕರ ಟೋಳಿ

ನಾಮಪತ್ರ ಸಲ್ಲಿಸಲು ವಾರಾಣಸಿ ಜಿಲ್ಲಾಧಿಕಾರಿ ಕಚೇರಿಯತ್ತ ಹೊರಟ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಗೃಹ ಸಚಿವ ರಾಜನಾಥ್ ಸಿಂಗ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಇತರರು ಕಾಯುತ್ತಿದ್ದರು.

10.25 ನನ್ನನ್ನು ಬೈದರೆ ಬೈಯಲಿ

ಎದುರಾಳಿಗಳು ನನ್ನನ್ನು ಹೇಗೆ ಬೇಕಿದ್ದರೂ ಟೀಕಿಸಲಿ. ನೀವು ತಿರುಗೇಟು ಕೊಡಲು ಹೋಗಬೇಡಿ. ಅವರ ಬೈಯ್ಗುಳಗಳನ್ನು ನನಗೆ ಕಳಿಸಿಕೊಡಿ. ಅಂಥ ಎಲ್ಲ ಕೆಟ್ಟ ವಿಚಾರ, ಶಬ್ದಗಳನ್ನು ಬಳಸಿ ರಸಗೊಬ್ಬರ ತಯಾರಿಸುವ ನೈಪುಣ್ಯ ನನ್ನಲ್ಲಿದೆ.

10.22 ರಾಜಕಾರಣದಲ್ಲಿ ಸೋದರತ್ವ ಮರುಕಳಿಸಲಿ

ರಾಜಕಾರಣದಲ್ಲಿದ್ದ ಮಾತ್ರಕ್ಕೆ ನನ್ನ ವಿರುದ್ಧ ಸ್ಪರ್ಧಿಸುವವರನ್ನು, ನನ್ನ ವಿಚಾರಗಳನ್ನು ವಿರೋಧಿಸುವವರನ್ನು ಶತ್ರುಗಳೆಂದು ಪರಿಗಣಿಸಿ ದ್ವೇಷಿಸಬೇಕಿಲ್ಲ. ಅವರನ್ನು ಗೌರವಿಸೋಣ. ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ.

10.17 ನನ್ನ ಸಾವಿನಿಂದ ನೀನು ಕಂಗೆಡಬೇಡ

ಈ ದೇಶದಲ್ಲಿ, ಈ ಕ್ಷೇತ್ರದಲ್ಲಿ ಮೋದಿ ಗೆಲ್ಲುವುದು–ಸೋಲುವುದು ಮುಖ್ಯವಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಗೆಲ್ಲಬೇಕಿದೆ. ದೇಶದ ಈವರೆಗಿನ ಎಲ್ಲ ದಾಖಲೆಗಳು ಮುರಿಯುವಷ್ಟರ ಪ್ರಮಾಣದಲ್ಲಿ ವಾರಾಣಸಿಯಲ್ಲಿ ಮತದಾನ ನಡೆಯಬೇಕು. ಪುರುಷರಿಗಿಂತ ಮಹಿಳೆಯರು ಶೇ5ರಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಅದಕ್ಕಾಗಿ ನೀವೆಲ್ಲರೂ ಶ್ರಮಿಸಬೇಕು.

10.13 ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

‘ಮುಂದಿನ ಸರ್ಕಾರ ನಾವು ರಚಿಸುತ್ತೇವೆ’ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಸರ್ಕಾರ ಆಗುವುದು ಜನರಿಂದ. ಅದನ್ನು ನಿರ್ವಹಿಸುವದಷ್ಟೇ ನಮ್ಮ ಜವಾಬ್ದಾರಿ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

10.10 ಆಡಳಿತ ಪರ ಅಲೆ ಕಂಡುಬರುತ್ತಿದೆ

ಇದು ಐತಿಹಾಸಿಕ ಚುನಾವಣೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಪರವಾದ ಅಲೆ ಕಂಡುಬರುತ್ತಿದೆ. ಜನರು ತಮ್ಮ ಮನಸ್ಸು ಗಟ್ಟಿ ಮಾಡಿಕೊಂಡಿದ್ದಾರೆ. ಅವರಿಗೆ ದೇಶದಲ್ಲಿ ಮೋದಿ ಸರ್ಕಾರ ಬೇಕಿದೆ. – ನರೇಂದ್ರ ಮೋದಿ

10.07 ಎದುರಾಳಿಗಳು ನನ್ನನ್ನು ಕಳ್ಳ ಅಂದ್ರೆ ಅನ್ನಲಿ ಪರವಾಗಿಲ್ಲ

ನನ್ನನ್ನು ಅವರು ಚೋರ ಎನ್ನಲಿ, ಸುಳ್ಳ ಎನ್ನಲಿ ನೀವು ಪ್ರತಿಕ್ರಿಯಿಸಬೇಡಿ. ಪ್ರೀತಿಸುವುದನ್ನು ನಿಲ್ಲಿಸಬೇಡಿ. ಪ್ರೀತಿಯ ರಾಜಕಾರಣ ಮಾಡೋಣ ನಾವೆಲ್ಲಾ. – ನರೇಂದ್ರ ಮೋದಿ

10.07 ಎದುರಾಳಿಗಳು ಶತ್ರುಗಳಲ್ಲ

ನನ್ನ ವಿರುದ್ಧ ಸ್ಪರ್ಧಿಸುವ ಯಾರನ್ನೂ ಶತ್ರುಗಳಂತೆ ನೋಡಬೇಡಿ. ಎಲ್ಲ ಉಮೇದುವಾರರೂ ಆದರಣೀಯರು. ಪ್ರಜಾಪ್ರಭುತ್ವ ಬಲಪಡಿಸಲು ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎನ್ನುವ ಭಾವನೆ ನಿಮಗಿರಲಿ. – ನರೇಂದ್ರ ಮೋದಿ

10.00 ಕಾರ್ಯಕರ್ತರಿಗೆ ಚಿರಋಣಿ ಎಂದ ಮೋದಿ

ರೋಡ್‌ ಷೋ ಯಶಸ್ವಿಯಾಗಲು ನನ್ನ ಕಾರ್ಯಕರ್ತರೇ ಮುಖ್ಯ ಕಾರಣ. ಬಿಸಿನಲ್ಲಿ ಬೆವರು ಸುರಿಸಿ ಮನೆಮನೆ ತಿರುಗಿ ಜನರನ್ನು ಆಮಂತ್ರಿಸಿದ್ದರು. ಅವರಿಂದಲೇ ರೋಡ್‌ ಷೋ ಯಶಸ್ವಿಯಾಯಿತು. ಕಾಶಿಯ ಎಲ್ಲ ನಿವಾಸಿಗಳೂ ನನ್ನನ್ನ ಆಶೀರ್ವದಿಸಿದ್ದಾರೆ. ನನ್ನ ಕಠಿಣ ಪರಿಶ್ರಮವನ್ನು ದೇಶದ ಜನರು ಗಮನಿಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹೊಸ ಉತ್ಸಾಹ ಕಂಡು ಬರುತ್ತಿದೆ. – ನರೇಂದ್ರ ಮೋದಿ

9.47 ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮೋದಿ ಭಾಷಣ

ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

9.54 ರೋಡ್ ಷೋ ವೀಡಿಯೊ ಟ್ವೀಟ್ ಮಾಡಿದ ಮೋದಿ

ವಾರಾಣಸಿಯಲ್ಲಿ ಗುರುವಾರ ನಡೆಸಿದ ರೋಡ್‌ ಷೋನಲ್ಲಿ ಭಾಗವಹಿಸಿದ್ದ ಭಾರಿ ಜನಸ್ತೋಮದ ವೀಡಿಯೊ ತುಣುಕನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮುಂಜಾನೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

9.45 ವಾರಾಣಸಿಯಲ್ಲಿ ಎನ್‌ಡಿಎ ಸಭೆ

ಮೋದಿ ನಾಮಪತ್ರ ಸಲ್ಲಿಕೆಗೂ ಮುನ್ನ ವಾರಾಣಸಿಯಲ್ಲಿ ಎನ್‌ಡಿಎ ನಾಯಕರ ಸಭೆಯಲ್ಲಿ ಮೋದಿ ಭಾಷಣ ಆರಂಭ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಪ್ರಮುಖ ನಾಯಕರು ಭಾಗಿ.


ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಾಮಪತ್ರ ಸಲ್ಲಿಸಲು ವಾರಾಣಸಿಗೆ ತೆರಳಿದ ತೆಲಂಗಾಣದ ರೈತರು

9.40 ಪ್ರಧಾನಿ ಮೋದಿ ವಿರುದ್ಧ 50 ಅರಿಶಿಣ ಬೆಳೆಗಾರರು ಸ್ಪರ್ಧೆ

ಅಖಿಲ ಭಾರತ ಅರಿಶಿಣ ಬೆಳೆಗಾರರ ಸಂಘದ ವತಿಯಿಂದ ಕನಿಷ್ಠ 50 ರೈತರು ಮೋದಿ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ವಿರುದ್ಧ ಇದೇ ಸಂಘಟನೆಯ 178 ರೈತರು ನಿಜಾಮಾಬಾದ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ ಈ 178ರಲ್ಲಿ ಒಬ್ಬರೂ ಮೋದಿ ವಿರುದ್ಧ ಸ್ಪರ್ಧಿಸುವುದಿಲ್ಲ. ಬೇರೆ ರೈತರು ಕಣಕ್ಕೆ ಇಳಿಯಲಿದ್ದಾರೆ ಎಂದು ಸಂಘವು ತಿಳಿಸಿದೆ.

ಪೂರ್ತಿ ಸುದ್ದಿ ಓದಿ


ಪ್ರಿಯಾಂಕಾ ಗಾಂಧಿ ವದ್ರಾ

9.30 ವಾರಾಣಸಿಯಿಂದ ‍ಪ್ರಿಯಾಂಕಾ ಗಾಂಧಿ ಸ್ಪರ್ಧೆ ಇಲ್ಲ

ಪ್ರಿಯಾಂಕಾ ಗಾಂಧಿ ಅವರು ಚುನಾವಣಾ ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್, ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಜಯ್ ರಾಯ್ ಅವರನ್ನು ಕಣಕ್ಕಿಳಿಸಿದೆ. 

ಪೂರ್ತಿ ಸುದ್ದಿ ಓದಿ


ವಾರಾಣಸಿಯಲ್ಲಿ ಗುರುವಾರ ನಡೆದ ರೋಡ್‌ ಷೋ

9.19 ವಾರಾಣಸಿ ಕೇಸರಿಮಯ, ಇಂದು ನರೇಂದ್ರ ಮೋದಿ ನಾಮಪತ್ರ

ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಗುರುವಾರ ಭಾರಿ ರೋಡ್‌ ಷೋ ನಡೆಸಿದರು. ಮೆರವಣಿಗೆಯು ಪ್ರತಿ ಬೀದಿಯನ್ನು ಪ್ರವೇಶಿಸಿದಾಗಲೂ ಸಾರ್ವಜನಿಕರು ಹೂದಳಗಳನ್ನು ಎರಚಿ ಸ್ವಾಗತಿಸಿದರು. ವಾರಾಣಸಿಯ ಬೀದಿಗಳು ಕೇಸರಿಮಯವಾಗಿದ್ದವು. ಜನರ ತಲೆಗಳಲ್ಲಿ ಕೇಸರಿ ಬಣ್ಣದ ಪೇಟ, ರುಮಾಲು, ಕೈಗಳಲ್ಲಿ ಬಿಜೆಪಿಯ ಕಮಲದ ಧ್ವಜ ರಾರಾಜಿಸುತ್ತಿದ್ದವು.

ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆ ಬಯಸಿರುವ ಮೋದಿ, ಶುಕ್ರವಾರ (ಏಪ್ರಿಲ್ 26) ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ ಅದಕ್ಕೂ ಒಂದು ದಿನ ಮೊದಲೇ ವಾರಾಣಸಿ ನಗರದಲ್ಲಿ ಭಾರಿ ರೋಡ್‌ ಷೋ ನಡೆಸಿ ತಮ್ಮ ಬಲ ಪ್ರದರ್ಶಿಸಿದ್ದಾರೆ.

ಪೂರ್ತಿ ಸುದ್ದಿ ಓದಿ

 

Post Comments (+)