ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹರ್‌ ಹರ್‌ ಮೋದಿ’ ಅನುರಣನ

ನಾಮಪತ್ರ ಸಲ್ಲಿಕೆಗೂ ಮುನ್ನಾದಿನ ಪ್ರಧಾನಿಯಿಂದ ಭಾರಿ ರೋಡ್‌ ಷೋ
Last Updated 25 ಏಪ್ರಿಲ್ 2019, 19:35 IST
ಅಕ್ಷರ ಗಾತ್ರ

ವಾರಾಣಸಿ:ರಸ್ತೆಯ ಇಕ್ಕೆಲದಲ್ಲಿ ಕಿಕ್ಕಿರಿದು ತುಂಬಿದ್ದ ಜನ, ಕಟ್ಟಡಗಳ ಬಾಲ್ಕನಿ–ತಾರಸಿಗಳ ಮೇಲೂ ಜನಜಂಗುಳಿ. ಭಾರಿ ಭದ್ರತೆಯ ಎಸ್‌ಯುವಿಯ ಸನ್‌ರೂಫ್‌ನಲ್ಲಿ ಹೊರಇಣುಕಿ ಕೈಬೀಸುತ್ತಿದ್ದ ಪ್ರಧಾನಿಯನ್ನು ನೋಡುತ್ತಿದ್ದ ಜನಸಾಗರದಿಂದ ‘ಮೋದಿ, ಮೋದಿ’ ಎಂಬ ಉದ್ಘಾರ ಕೇಳುತ್ತಿತ್ತು.

ಮೆರವಣಿಗೆಯು ಪ್ರತಿ ಬೀದಿಯನ್ನು ಪ್ರವೇಶಿಸಿದಾಗಲೂ ಸಾರ್ವಜನಿಕರು ಹೂದಳಗಳನ್ನು ಎರಚಿ ಸ್ವಾಗತಿಸಿದರು. ವಾರಾಣಸಿಯ ಬೀದಿಗಳು ಕೇಸರಿಮಯವಾಗಿದ್ದವು. ಜನರ ತಲೆಗಳಲ್ಲಿ ಕೇಸರಿ ಬಣ್ಣದ ಪೇಟ, ರುಮಾಲು, ಕೈಗಳಲ್ಲಿ ಬಿಜೆಪಿಯ ಕಮಲದ ಧ್ವಜ ರಾರಾಜಿಸುತ್ತಿದ್ದವು.

ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ಗುರುವಾರ ನಡೆಸಿದ ಭಾರಿ ರೋಡ್‌ ಷೋನಲ್ಲಿ ಕಂಡುಬಂದ ದೃಶ್ಯಗಳಿವು.

ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆ ಬಯಸಿರುವ ಮೋದಿ, ಶುಕ್ರವಾರ (ಏಪ್ರಿಲ್ 26) ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ ಅದಕ್ಕೂ ಒಂದು ದಿನ ಮೊದಲೇ ವಾರಾಣಸಿ ನಗರದಲ್ಲಿ ಭಾರಿ ರೋಡ್‌ ಷೋ ನಡೆಸಿ ತಮ್ಮ ಬಲ ಪ್ರದರ್ಶಿಸಿದ್ದಾರೆ.

ಮಧ್ಯಾಹ್ನದಿಂದ ಆರಂಭವಾದ ರೋಡ್‌ ಷೋ ರಾತ್ರಿ ಎಂಟರವರೆಗೂ ನಡೆಯಿತು. ಮೆರವಣಿಗೆಯುದ್ದಕ್ಕೂ ಮೋದಿ, ತಮ್ಮ ವಾಹನದಲ್ಲಿ ನಿಂತೇ ಇದ್ದರು. ತಮ್ಮತ್ತ ಕೈಬೀಸಿದ ಜನರತ್ತ ಕೈಬೀಸಿದರು, ಕೈ ಮುಗಿದವರಿಗೆ ಕೈ ಮುಗಿದರು.ರೋಡ್‌ ಷೋ ಮಧ್ಯೆ ಅಲ್ಲಲ್ಲಿ ಕಿರುಭಾಷಣ ಮಾಡಿದ ಮೋದಿ, ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

ಶುಕ್ರವಾರ ನಾಮಪತ್ರ ಸಲ್ಲಿಕೆ:ಶುಕ್ರವಾರ ಬೆಳಿಗ್ಗೆ ಮೋದಿ ವಾರಾಣಸಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಆನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

* ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹೊರಆವರಣದಲ್ಲಿರುವ ಮದನ ಮೋಹನ ಮಾಳವೀಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ.ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಹಲವು ಕೇಂದ್ರ ಸಚಿವರು ಮೋದಿಗೆ ಜತೆಯಾದರು

* ನಂತರ ವಾರಾಣಸಿಯ ಲಂಕಾ ಘಾಟ್ ಪ್ರದೇಶದಲ್ಲಿ ಮೋದಿ ಮೆರವಣಿಗೆ. ಅಲ್ಲಿಂದ ಮುಮುಕ್ಷು ಭವನದತ್ತ ಮೆರವಣಿಗೆ. ರಸ್ತೆಯ ಇಕ್ಕೆಲದಲ್ಲಿ ಕಿಕ್ಕಿರಿದು ತುಂಬಿದ್ದ ಜನರತ್ತ ಕೈಬೀಸಿದ ಮೋದಿ. ಎಲ್ಲೆಡೆ ‘ಮೋದಿ, ಮೋದಿ’ ಜಪ

* ಗಂಗಾ ನದಿ ದಡದಲ್ಲಿರುವ ಏಯ್ಟಿ ಘಾಟ್ ಪ್ರದೇಶಕ್ಕೆ ಪಯಣ. ಮೋದಿಯನ್ನು ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು. ವಾರಾಣಸಿಯ ಅತ್ಯಂತ ಹಳೆಯ (522 ವರ್ಷ) ರಾಮಕಥಾ ಪ್ರದರ್ಶನ ತಂಡ ‘ಮೌನಿ ಬಾಬಾ ರಾಮಲೀಲಾ ಸಮಿತಿ’ಯಿಂದ ಮೋದಿಯ ಸ್ವಾಗತ. ಮೆರವಣಿಗೆಯುದ್ದಕ್ಕೂ ರಾಮಕಥಾ ಪ್ರದರ್ಶನ

* ಬಂಗಾಳದ ಜನರ ಪ್ರಾಬಲ್ಯವಿರುವ ಸೋನಾರ್‌ಪುರ ಪ್ರದೇಶದಲ್ಲಿ ಮೆರವಣಿಗೆ. ಸಾರ್ವಜನಿಕರನ್ನು ಕುರಿತು ಮಾತನಾಡಿದ ಮೋದಿ

* ಹರಿಶ್ಚಂದ್ರ ಘಾಟ್ ಪ್ರದೇಶಕ್ಕೆ ಭೇಟಿ. ಅಲ್ಲಿಂದ ಮುಸ್ಲಿಂ ನೇಕಾರರ ಪ್ರಾಬಲ್ಯವಿರುವ ಮದನಪುರದತ್ತ ಮೋದಿ ರೋಡ್‌ ಷೋ. ಮೋದಿಯನ್ನು ಸ್ವಾಗತಿಸಿದ ನೇಕಾರರು

* ದಶಾಶ್ವಮೇಧ ಘಾಟ್‌ನಲ್ಲಿ ರೋಡ್‌ಷೋ ಅಂತ್ಯ. ನಂತರ ಗಂಗೆಗೆ ಆರತಿ ಬೆಳಗಿದ ಮೋದಿ

5 ಕಿ.ಮೀ. ರೋಡ್‌ ಷೋ ಕ್ರಮಿಸಿದ ಅಂದಾಜು ದೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT