ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯಾ: ಹಂತಕರ ಗಲ್ಲಿಗೆ ಸಿದ್ಧತೆ?

ಮಂಡೋಲಿ ಜೈಲಿನಲ್ಲಿದ್ದ ಅಪರಾಧಿ ತಿಹಾರ್‌ಗೆ ಸ್ಥಳಾಂತರ * ತೀರ್ಪು ಮರುಪರಿಶೀಲನೆಗೆ ಮನವಿ
Last Updated 11 ಡಿಸೆಂಬರ್ 2019, 1:58 IST
ಅಕ್ಷರ ಗಾತ್ರ

ನವದೆಹಲಿ:ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾಗಿ ಮಂಡೋಲಿ ಜೈಲಿನಲ್ಲಿದ್ದ ಪವನ್‌ ಕುಮಾರ್‌ ಗುಪ್ತ ಎಂಬುವನನ್ನು ತಿಹಾರ್‌ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮರಣದಂಡನೆಗೆ ಒಳಗಾದ ಮುಕೇಶ್‌ ಸಿಂಗ್‌, ವಿನಯ್‌ ಶರ್ಮಾ ಹಾಗೂ ಅಕ್ಷಯ್‌ ಈಗಾಗಲೇ ತಿಹಾರ್‌ ಜೈಲಿನಲ್ಲಿದ್ದಾರೆ. ಪವನ್‌ ಕುಮಾರ್‌ನನ್ನೂ ಈಗ ಇದೇ ಜೈಲಿಗೆ ಸ್ಥಳಾಂತರಿಸಲಾಗಿದೆ.

‘ಅಪರಾಧಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾ ಮೂಲಕ ಅವರ ಮೇಲೆ ನಿಗಾ ಇರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾರದೊಳಗೆ ಹತ್ತು ನೇಣು ಹಗ್ಗಗಳನ್ನು ತಯಾರಿಸಿ ಕೊಡುವಂತೆ ಬಕ್ಸರ್‌ ಜೈಲು ಸಿಬ್ಬಂದಿಗೆ ಈಚೆಗೆ ಸೂಚನೆ ನೀಡಿರುವುದು, ನಿರ್ಭಯಾ ಅತ್ಯಾಚಾರ ಅಪರಾಧಿಯನ್ನು ತಿಹಾರ್‌ ಜೈಲಿಗೆ ಸ್ಥಳಾಂತರಿಸಿದ್ದೇ ಮುಂತಾದ ಬೆಳವಣಿಗೆಗಳು ನಿರ್ಭಯಾ ಅತ್ಯಾಚಾರಿಗಳನ್ನು ನೇಣಿಗೇರಿಸಲುಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆಯೇ? ಎಂಬ ಊಹಾಪೋಹ ಹುಟ್ಟಿಕೊಳ್ಳಲು ಕಾರಣವಾಗಿವೆ. ತಿಹಾರ್‌ನ ಜೈಲು ನಂ. 3ರಲ್ಲಿ ಆರೋಪಿಗಳನ್ನು ಗಲ್ಲಿಗೇರಿಸುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಮರು ಪರಿಶೀಲನಾ ಅರ್ಜಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್‌ ಕುಮಾರ್‌ ಸಿಂಗ್‌ (31) ಬುಧವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾನೆ.

2012ರಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿ ಅಕ್ಷಯ್‌ ಹಾಗೂ ಇತರ ಮೂವರಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

ಇತರ ಮೂವರು ಅಪರಾಧಿಗಳು ಈ ಹಿಂದೆಯೇ ತೀರ್ಪಿನ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರು. ಅದನ್ನು 2018ರ ಜುಲೈ 19ರಂದು ಕೋರ್ಟ್‌ ತಳ್ಳಿಹಾಕಿತ್ತು. ಆ ಮೂವರ ಜತೆಗೆ ಅಕ್ಷಯ್‌ ಕುಮಾರ್‌ ಅರ್ಜಿ ಸಲ್ಲಿಸಿರಲಿಲ್ಲ. ಈಗ ತನ್ನ ವಕೀಲ ಎ.ಪಿ. ಸಿಂಗ್‌ ಮೂಲಕ ಆತ ತೀರ್ಪಿನ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾನೆ. ರಾಮ್‌ ಸಿಂಗ್‌ ಎಂಬ ಇನ್ನೊಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ.

‘ಮೇಕ್‌ ಇನ್‌ನಿಂದ ರೇಪ್ ಇನ್’: ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಲೋಕಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್‌ ಮುಖಂಡ ಅಧಿರ್‌ ರಂಜನ್‌ ಚೌಧರಿ, ‘ಭಾರತವು ನಿಧಾನವಾಗಿ ಮೇಕ್‌ ಇನ್‌ ಇಂಡಿಯಾದಿಂದ ರೇಪ್‌ ಇನ್‌ ಇಂಡಿಯಾ ಕಡೆಗೆ ಸಾಗುತ್ತಿದೆ’ ಎಂದರು.

ಉನ್ನಾವ್‌ನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಸಂತ್ರಸ್ತೆಯ ಹತ್ಯೆ ಘಟನೆಯನ್ನು ಶೂನ್ಯ ವೇಳೆಯಲ್ಲಿ ಉಲ್ಲೇಖಿಸಿ ಮಾತನಾಡಿದ ಅವರು, ‘ಕಠುವಾದಿಂದ ಉನ್ನಾವ್‌ವರೆಗೆ, ದೇಶದಲ್ಲಿ ಅನೇಕ ಸಾಮೂಹಿಕ ಅತ್ಯಾಚಾರ ಘಟನೆಗಳು ನಡೆದಿವೆ. ಇಂಥ ಘಟನೆಗಳು ವರದಿಯಾದಾಗ ನಾಚಿಕೆ ಎನಿಸುತ್ತದೆ. ಆದರೆ ಸರ್ಕಾರದ ಯಾವ ಹಿರಿಯ ನಾಯಕರೂ ಈವರೆಗೆ ಈ ವಿಚಾರದಲ್ಲಿ ಹೇಳಿಕೆ ನೀಡಿಲ್ಲ’ ಎಂದು ಅವರು ಆಕ್ಷೇಪಿಸಿದರು.

ಮರು ಪರಿಶೀಲನಾ ಅರ್ಜಿಯಲ್ಲಿ ಏನಿದೆ?

‘ಗಲ್ಲು ಶಿಕ್ಷೆಯಿಂದ ಅಪರಾಧಿಯನ್ನು ಕೊನೆಗೊಳಿಸಬಹುದೇ ವಿನಾ ಅಪರಾಧವನ್ನಲ್ಲ. ಆದ್ದರಿಂದ ನಮಗೆ ಮರಣದಂಡನೆ ವಿಧಿಸಿ ನೀಡಿದ್ದ ತೀರ್ಪನ್ನು ಮರು ಪರಿಶೀಲನೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿಅಕ್ಷಯ್‌ ಕುಮಾರ್‌ ಹೇಳಿದ್ದಾನೆ. ಆತ ಹೇಳಿದ್ದು...

*ಅತ್ಯಾಚಾರ ಅಪರಾಧಿಗಳಿಗೆ ಗಲ್ಲುಶಿಕ್ಷೆ ನೀಡಬಾರದು. ಬದಲಿಗೆ ಅವರಲ್ಲಿ ಬದಲಾವಣೆ ತರಲು ಕ್ರಮಬದ್ಧವಾದ ಯೋಜನೆ ರೂಪಿಸಬೇಕು

*ಗಲ್ಲು ಶಿಕ್ಷೆ ನೀಡುವುದರಿಂದ ಇಂಥ ಅಪರಾಧಗಳನ್ನು ತಡೆಯಲು ಸಾಧ್ಯ ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ

*ಮರಣ ದಂಡನೆ ನೀಡಿದರೆ ಅಪರಾಧಿಗೆ ಸುಧಾರಣೆಯ ಅವಕಾಶವನ್ನು ನಿರಾಕರಿಸಿದಂತಾಗುತ್ತದೆ

*‘ಬಡತನದ ಹಿನ್ನೆಲೆಯಿಂದ ಬಂದ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗುವ ಅಪಾಯ ಹೆಚ್ಚು ಇದೆ’ ಎಂಬ ನ್ಯಾಯಮೂರ್ತಿ ಪಿ.ಎನ್‌. ಭಗವತಿ ಅವರ ವಾದವನ್ನು ಉಲ್ಲೇಖಿಸಿ, ‘ನ್ಯಾಯ ವ್ಯವಸ್ಥೆಯು ಸ್ಥಿರ ಗುಣಮಟ್ಟ ಕಾಯ್ದುಕೊಳ್ಳುವುದಿಲ್ಲ ಎಂದಾದರೆ ಯಾರು ಬದುಕಬೇಕು, ಯಾರು ಸಾಯಬೇಕು ಎಂದು ನಿರ್ಧರಿಸುವ ಅಧಿಕಾರ ನ್ಯಾಯಾಂಗಕ್ಕೆ ಎಲ್ಲಿದೆ?

*ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿ ಜೀವಿತಾವಧಿ ಕಡಿಮೆಯಾಗುತ್ತಲೇ ಇದೆ. ಹೀಗಿರುವಾರ ಮರಣದಂಡನೆ ನೀಡುವ ಅಗತ್ಯವೇನು?

*ಮನುಷ್ಯರು ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು ಎಂದು ವೇದ–ಪುರಾಣಗಳು ಉಲ್ಲೇಖಿಸುತ್ತವೆ. ಕಲಿಯುಗದಲ್ಲಿ ಜೀವಿತಾವಧಿ 50–60 ವರ್ಷಗಳಿಗೆ ಇಳಿದಿದೆ. ಈಗಲೂ ಮರಣದಂಡನೆ ಬೇಕೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT