ಗುರುವಾರ , ಜೂಲೈ 2, 2020
28 °C

ಆರ್ಥಿಕ ಪ್ಯಾಕೇಜ್ | ರಾಜ್ಯಗಳು ಸಾಲ ಪಡೆಯುವ ನಿರ್ಬಂಧದಲ್ಲಿ ವಿನಾಯ್ತಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರ ಘೋಷಿಸಿರುವ ₹ 20 ಕೋಟಿ ಮೌಲ್ಯದ ಆರ್ಥಿಕ ಪ್ಯಾಕೇಜ್‌ನ ಕೊನೆಯ ಕಂತಿನ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.

12.45– ತಮ್ಮ ಮಾತು ಮುಗಿಸಿದ ನಿರ್ಮಲಾ ಪತ್ರಕರ್ತರ ಪ್ರಶ್ನೆಗಳನ್ನು ಆಹ್ವಾನಿಸಿದರು. 

12.30– ಜಿಎಸ್‌ಡಿಪಿ (ರಾಜ್ಯಗಳ ಆರ್ಥಿಕ ವೃದ್ಧಿ ದರ) ಮೊತ್ತದ ಶೇ 5ರಷ್ಟು ಪ್ರಮಾಣದ ಸಾಲ ಪಡೆದುಕೊಳ್ಳಲು ಅವಕಾಶ ನೀಸಲಾಗಿದೆ. ಅಂದರೆ ರಾಜ್ಯಗಳು ₹ 4.28 ಲಕ್ಷ ಕೋಟಿ ಹಣವನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲು ಅವಕಾಶ ನೀಡಿದಂತೆ ಆಗಿದೆ. ಈ ಹಿಂದೆ ರಾಜ್ಯಗಳ ಜಿಡಿಪಿಯ ಶೇ 3ರಷ್ಟು ಮೊತ್ತವನ್ನು ಮಾತ್ರ ಸಾಲ ಪಡೆಯಲು ಅವಕಾಶ ನೀಡಲಾಗಿತ್ತು. ರಾಜ್ಯಗಳು ಈವರೆಗೆ ಕೇವಲ ಶೇ 14ರಷ್ಟು ಪ್ರಮಾಣದ ಸಾಲ ಮಾತ್ರ ಪಡೆದುಕೊಂಡಿವೆ. ಶೇ 86ರಷ್ಟು ಅನುಮೋದಿತ ಮೊತ್ತ ಹಾಗೆಯೇ ಉಳಿದಿದೆ.

12.26– ಕೇಂದ್ರದಂತೆ ರಾಜ್ಯಗಳಿಗೂ ಸಂಪನ್ಮೂಲ ಸಂಗ್ರಹದಲ್ಲಿ ಸಮಸ್ಯೆಯಾಗಿದೆ. ವಿವಿಧ ರಾಜ್ಯಗಳಿಗೆ ತೆರಿಗೆ ಪಾಲು ₹ 46,038 ಕೋಟಿಯನ್ನು ನೀಡಲಾಗಿದೆ. ₹ 12 ಸಾವಿರ ಕೋಟಿಯನ್ನು ಸಮಯಕ್ಕೆ ಸರಿಯಾಗಿ ನೀಡಲಾಗಿದೆ. ವೈದ್ಯಕೀಯ ಸಚಿವಾಲಯವು ಹೆಚ್ಚುವರಿಯಾಗಿ ₹ 14 ಸಾವಿರ ಕೋಟಿ ಬಿಡುಗಡೆ ಮಾಡಿದೆ. ರಾಜ್ಯಗಳಿಗೆ ಹಣಕಾಸು ಪಡೆದುಕೊಳ್ಳಲು ವಿಧಿಸಲಾಗಿದ್ದ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೇ 60ಕ್ಕೆ ಹೆಚ್ಚಿಸಿದೆ. ತ್ರೈಮಾಸಿಕವೊಂದರಲ್ಲಿ ರಾಜ್ಯವೊಂದು ಓವರ್‌ಡ್ರಾಫ್ಟ್‌ ವಿದ್ಯಮಾನದ ಮಾದರಿಯಲ್ಲಿ ಪರಿಸ್ಥಿತಿ ನಿರ್ವಹಿಸಲು ಇದ್ದ ಅವಕಾಶವನ್ನೂ ವಿಸ್ತರಿಸಲಾಗಿದೆ.

12.14– ಎಲ್ಲ ಕ್ಷೇತ್ರಗಳಲ್ಲೂ ಖಾಸಗಿ ಕಂಪನಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗುವುದು. ಅತಿ ಮುಖ್ಯ ಮತ್ತು ಸೂಕ್ಷ್ಮ ಕ್ಷೇತ್ರಗಳಲ್ಲಿ ಈ ಹಿಂದಿನಂತೆಯೇ ಸರ್ಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಅಂಥ ಕ್ಷೇತ್ರಗಳನ್ನು ಶೀಘ್ರ ಘೋಷಿಸಲಾಗುವುದು. ಅತಿಮುಖ್ಯ ಕ್ಷೇತ್ರಗಳಲ್ಲಿ ಒಂದು ಸರ್ಕಾರಿ ಸಂಸ್ಥೆ ಇರುತ್ತದೆ. ಉಳಿದಂತೆ ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅವಕಾಶ ಇರುತ್ತದೆ.

(ವಿತ್ತ ಸಚಿವರ ಈ ಹೀಳಿಕೆಯನ್ನು ಸರ್ಕಾರಿ ಉದ್ದಿಮೆಗಳ ಖಾಸಗೀಕರಣಕ್ಕೆ ಮುನ್ನುಡಿ ಎಂದೇ ವಿಶ್ಲೇಷಿಸಲಾಗುತ್ತಿದೆ).

12.11– ಕಂಪನಿ ಕಾಯ್ದೆಯನ್ನು ಅಪರಾಧ ವಿಚಾರಣೆ ಪ್ರಕ್ರಿಯೆಯಿಂದ ಹೊರಗೆ ತರಲಾಗಿದೆ. ಇನ್ನು ಮುಂದೆ ಆಂತರಿಕ ಹೊಂದಾಣಿಕೆ ವಿಚಾರಗಳ ಮೂಲಕ ಕಂಪನಿ ಕಾಯ್ದೆ ತಕರಾರುಗಳನ್ನು ನಿರ್ವಹಿಸಲಾಗುವುದು.

12.02– ಕೋವಿಡ್–19ರ ಕಾರಣದಿಂದ ಸಾಲ ಮರುಪಾವತಿ ಮಾಡಲು ವಿಫಲವಾದ ಕಂಪನಿಗಳಿಗೆ ಸರ್ಕಾರ ನೆರವಾಗಲಿದೆ. ಸಾಲ ಮರು ಪಾವತಿ ಮಾಡಲು ಸಾಧ್ಯವಾಗದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ವಿರುದ್ಧ ಈ ವರ್ಷ ದಿವಾಳಿ ಪ್ರಕ್ರಿಯೆ ನಡೆಸಲು ಹೊಸ ನಿಬಂಧನೆಗಳು ಜಾರಿಯಾಗಲಿವೆ.

11:58– ‘ದೀಕ್ಷಾ’ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ‘ಒಂದು ದೇಶ ಒಂದು ಡಿಜಿಟಲ್ ವೇದಿಕೆ’ ಆರಂಭಿಸಲಾಗುವುದು. ವಿವಿಧ ತರಗತಿಗಳಿಗೆ ಪ್ರತ್ಯೇಕ ಚಾನಲ್‌ಗಳನ್ನು ಶುರು ಮಾಡಲಾಗುವುದು. ರೇಡಿಯೊ ಮತ್ತು ಪೊಡ್‌ಕಾಸ್ಟ್‌ ತಂತ್ರಗಳ ಬಳಕೆಯನ್ನೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿಸಲಾಗುವುದು. ಅಂಗವಿಕಲ (ಅಂಥ ಮತ್ತು ಶ್ರವಣ ದೋಷವುಳ್ಳ) ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ದೇಶದ 100 ಮುಖ್ಯ ವಿಶ್ವವಿದ್ಯಾಲಯಗಳು ಆನ್‌ಲೈನ್‌ ತರಗತಿಗಳನ್ನು ಆರಂಭಿಸಲಿವೆ.

11:52– ಸಾರ್ವಜನಿಕ ಆರೋಗ್ಯಕ್ಕಾಗಿ ಸರ್ಕಾರ ಮಾಡುತ್ತಿದ್ದ ವೆಚ್ಚವನ್ನು ಹೆಚ್ಚಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಸಾಂಕ್ರಾಮಿಕ ರೋಗಗಳ ಚಿಕಿತ್ಸಾ ಘಟಕ ಆರಂಭಿಸಲಾಗುವುದು. ಎಲ್ಲ ವಲಯಗಳ (ಬ್ಲಾಕ್) ಮಟ್ಟದಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.

11.47– ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚುವರಿಯಾಗಿ ₹ 40 ಸಾವಿರ ಕೋಟಿ ನೀಡಲು ಸರ್ಕಾರ ಒಪ್ಪಿದೆ. ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ₹ 61,000 ಕೋಟಿ ಮೀಸಲಿಡಲಾಗಿತ್ತು. ಇದರ ಜೊತೆಗೆ ಹೆಚ್ಚುವರಿಯಾಗಿ ₹ 40 ಸಾವಿರ ಕೋಟಿ ಒದಗಿಸಲಾಗುವುದು.

11.44– ದೇಶದಲ್ಲಿ ಕೋವಿಡ್–19 ಹರಡುವುದನ್ನು ತಡೆಯಲೆಂದು ಸಾಕಷ್ಟು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿತು. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಗತ್ಯ ವಸ್ತುಗಳ ಖರೀದಿಗಾಗಿ ರಾಜ್ಯಗಳಿಗೆ ₹ 15,000 ಕೋಟಿ ಒದಗಿಸಲಾಯಿತು. ಪ್ರಯೋಗಾಲಯಗಳು, ಕಿಟ್‌ಗಳು ಮತ್ತು ಟೆಲಿ ಕಮ್ಯುನಿಕೇಶನ್ ಸೇವೆಗಳನ್ನು ಸುಧಾರಿಸಲು ಒತ್ತು ನೀಡಲಾಯಿತು. ಆರೋಗ್ಯ ಸೇತು ಆ್ಯಪ್ ಇಂದು ನೆರವಾಗುತ್ತಿದೆ. ವೈದ್ಯಕೀಯ ಸೇವೆ ಒದಗಿಸುವವರ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ ಪಿಪಿಇ ಕಿಟ್‌ಗಳೂ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿವೆ, ಲಭ್ಯವಿದೆ.

11.40– ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಶಾಲೆಗಳು ಬಳಸುವ ಡೈರೆಕ್ಟ್‌ ಟೆಲಿಕಾಸ್ಟ್ ಮೋಡ್‌ನಲ್ಲಿ 12 ಹೆಚ್ಚುವರಿ ಚಾನೆಲ್‌ಗಳು ಲಭ್ಯವಿವೆ. ಇದು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ನಿರಂತರತೆ ಕಾಯ್ದುಕೊಳ್ಳಲು ಸಹಕಾರಿ. ಪಾಠಗಳನ್ನು ನೇರ ಪ್ರಸಾರ ಮಾಡುವುದು ಸುಲಭವಾಗಿದೆ. ಟಾಟಾ ಸ್ಕೈ ಡಿಟಿಎಚ್‌ನಂಥ ಕೆಲ ಖಾಸಗಿ ಸಂಸ್ಥೆಗಳೊಂದಿಗೂ ನಾವು ಒಪ್ಪಂದ ಮಾಡಿಕೊಂಡಿದ್ದೇವೆ.

11.36– ದೇಶದ 2.2 ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ವಿವಿಧ ರಾಜ್ಯ ಸರ್ಕಾರಗಳು ₹ 3950 ಕೋಟಿ ಸಹಾಯಧನ ಬಿಡುಗಡೆ ಮಾಡಿವೆ.

11.34– ಪಠ್ಯಕ್ರಮವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದೆ. ಸ್ವಯಂಪ್ರಭ ಚಾನೆಲ್ ಮೂಲಕ ಮಕ್ಕಳಿಗೆ ಪಾಠ ಮಾಡಲು ನೆರವು ನೀಡಲಾಗಿದೆ. ಆನ್‌ಲೈನ್‌ ತರಗತಿಗಳು ದೊಡ್ಡಮಟ್ಟದಲ್ಲಿ ಆರಂಭವಾಗಿವೆ.

11.32– ಕಂಪನಿಗಳ ಆಡಳಿತ ಮಂಡಳಿ ಸಭೆಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಬಹುದು. ರೈಟ್ಸ್‌ ಇಶ್ಯೂ ಸಹ ವಿಡಿಯೊ ಕಾನ್ಫರೆನ್ಸ್‌ ಮೂಲಕವೇ ನಿರ್ವಹಿಸಬಹುದು. ಇದು ಆಡಳಿತದಲ್ಲಿ ತಂತ್ರಜ್ಞಾನ ಬಳಕೆಗೆ ಪೂರಕವಾದ ಕ್ರಮ.

11.27– ನೇರ ನಗದು ವರ್ಗಾವಣೆ ಮೂಲಕ 8.19 ಕೋಟಿ ರೈತರಿಗೆ ₹ 16,394 ಕೋಟಿ ಸಹಾಯಧನ ಒದಗಿಸಲಾಗಿದೆ. 10 ಕೋಟಿ ಮಹಿಳೆಯರಿಗೆ ₹ 10,025 ಸಿಕ್ಕಿದೆ. ಅಡುಗೆ ಅನಿಲವನ್ನೂ ಬಡವರಿಗೆ ತಕ್ಷಣ ಒದಗಿಸಲಾಯಿತು.

11.25– ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ₹20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ನ ಕೊನೆಯ ಮತ್ತು 5ನೆಯ ವಿವರಣೆ ಇದು. ಅರ್ಥ ವ್ಯವಸ್ಥೆಗೆ ಪುನಶ್ಚೇತನ ನೀಡುವ ಹಲವು ಕ್ರಮಗಳನ್ನು ಇಂದು ಪ್ರಕಟಿಸಲಾಗವುದು.

11:23– ಇಂದು ಏಳು ವಿಚಾರಗಳನ್ನು ಪ್ರಕಟಿಸುತ್ತೇನೆ
1) ಉದ್ಯೋಗ ಖಾತ್ರಿ
2) ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳು
3) ವ್ಯಾಪಾರ–ವಹಿವಾಟು
4) ಕಂಪನಿಗಳ ವಿರುದ್ಧ ವಿವಿಧ ಇಲಾಖೆಗಳು ಹೂಡಿರುವ ವ್ಯಾಜ್ಯಗಳು
5) ವ್ಯಾಪಾರಕ್ಕೆ ಸಹಕಾರ
6) ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು
7) ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ಸಂಪನ್ಮೂಲಗಳು

11:20– ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ನೆರವಾಗಲು ವಿಶೇಷ ರೈಲುಗಳನ್ನು ಓಡಿಸಲಾಯಿತು. ರೈಲು ನಿರ್ವಹಣೆ ಖರ್ಚಿನಲ್ಲಿಯೂ ಬಹುತೇಕ ಭಾಗವನ್ನು ಕೇಂದ್ರ ಸರ್ಕಾರವೇ ವಹಿಸಿಕೊಂಡಿತು. ರೈಲಿನಲ್ಲಿದ್ದವರಿಗೆ ಉಚಿತ ಆಹಾರ ನೀಡಲಾಗಿತ್ತು.

11:19– ಲಾಕ್‌ಡೌನ್ ವಿಸ್ತರಣೆಯಾದ ನಂತರ ಎರಡು ತಿಂಗಳ ಪಡಿತರವನ್ನು ಮುಂಚಿತವಾಗಿಯೇ ನೀಡಲಾಯಿತು. ನೇರ ನಗದು ವರ್ಗಾವಣೆ ಮೂಲಕ ಬಡವರಿಗೆ ಸರ್ಕಾರ ನೆರವಾಗಿದೆ.

11:16– ಪತ್ರಿಕಾಗೋಷ್ಠಿಯಲ್ಲಿ ಪ್ರಥಾನಿ ನರೇಂದ್ರ ಮೋದಿ ಅವರ ಮಾತು ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್. ‘ಸ್ವಾಭಿಮಾನಿ ಭಾರತ ನಿರ್ಮಾಣವೇ ನಮ್ಮ ಗುರಿ. ಭೂಮಿ, ಕಾರ್ಮಿಕರು, ಹಣಕಾಸು ಲಭ್ಯತೆ ಮತ್ತು ಕಾನೂನನ್ನು ಇದಕ್ಕೆ ಅನುಗುಣವಾಗಿ ಇರಬೇಕು’ ಎಂಬ ಹೇಳಿಕೆ ನೆನಪಿಸಿಕೊಂಡರು. ಈಗಾಗಲೇ ಇದಕ್ಕಾಗಿ ಹಲವು ಕ್ರಮಗಳನ್ನು ಘೋಷಿಸಿದ್ದೇನೆ. ಅದು ಮುಂದುವರಿಯುತ್ತದೆ ಎಂದರು.

11:10– ಸುದ್ದಿಗೋಷ್ಠಿ ಆರಂಭ. ಜೀವ ಇದ್ದರೆ ಜೀವನ ಎಂಬ ನರೇಂದ್ರ ಮೋದಿ ಅವರ ಮಾತು ನೆನಪಿಸಿಕೊಂಡ ನಿರ್ಮಲಾ

11:00– ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಗೂ ಮೊದಲು ಟ್ವೀಟ್ ಮಾಡಿ ವ್ಯಂಗ್ಯವಾಡಿದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ

 

ನಿನ್ನೆ (ಮೇ 17) ಮಾತನಾಡಿದ್ದ ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಾಮಗ್ರಿ ತಯಾರಿ, ಕಲ್ಲಿದ್ದಲು, ಗಣಿಗಾರಿಕೆ, ವಿಮಾನಯಾನ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದರು.

ಉಪಗ್ರಹಗಳು, ಉಡ್ಡಯನ ಮತ್ತು ಬಾಹ್ಯಾಕಾಶ ಆಧರಿತ ಸೇವೆಗಳಲ್ಲಿ ಖಾಸಗಿ ವಲಯದ ಕಂಪನಿಗಳಿಗೆ ಅವಕಾಶ ದೊರೆಯಲಿದೆ. ಇಸ್ರೊದ ಸೌಲಭ್ಯಗಳನ್ನು ಖಾಸಗಿ ಕಂಪನಿಗಳು ಬಳಸಿಕೊಂಡು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದ್ದರು.

ಇದನ್ನೂ ಓದಿ: ಹೂಡಿಕೆ ಕಡಿವಾಣ ಸಡಿಲ: ರಕ್ಷಣಾ ತಯಾರಿ, ಗಣಿ ಕ್ಷೇತ್ರಗಳಲ್ಲಿ ಬಂಡವಾಳಕ್ಕೆ ಅವಕಾಶ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು