ಗುರುವಾರ , ಜುಲೈ 29, 2021
23 °C

ಬಿಹಾರ | ಚುನಾವಣೆ ಭರವಸೆ: ಎಲ್ಲಾ ಕೃಷಿ ಭೂಮಿಗೂ ನೀರಾವರಿ –ನಿತೀಶ್‌ ಕುಮಾರ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಪಟ್ನಾ: ದೇಶದಲ್ಲಿ ಲಾಕ್‌ಡೌನ್‌ ಸಡಿಲಿಕೆಯ ಬೆನ್ನಲೇ ಬಿಹಾರದಲ್ಲಿ ಚುನಾವಣೆಯ ಕಾವು ತೀವ್ರಗೊಂಡಿದ್ದು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಜೆಡಿಯು ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಬಿಹಾರದಲ್ಲಿ ವಿಧಾನಸಭೆ ಚುನಾವಣೆಯು ಬರುವ ಆಕ್ಟೋಬರ್‌ ಅಥವಾ ನವೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆಗಳಿವೆ. ಕೊರೊನಾ ವೈರಸ್ ಸೋಂಕಿನ ಭೀತಿಯಲ್ಲಿ ಸಾರ್ವಜನಿಕ, ಬಹಿರಂಗ ಸಭೆಗಳು ನಡೆಯದ ಕಾರಣ ವರ್ಚುವಲ್‌ ವಿಡಿಯೊ ಕಾನ್ಫರೆನ್ಸ್‌ಗಳನ್ನು ನಡೆಸಲಾಗುತ್ತಿದೆ. 

ಈಗಾಗಲೇ ಬಿಜೆಪಿಯು ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಚುನಾವಣೆ ಪ್ರಚಾರವನ್ನು ಆರಂಭಿಸಿದ್ದು ಪಕ್ಷದ ಕಾರ್ಯಕರ್ತರ ಜೊತೆಗೆ ವಿಡಿಯೊ ಸಂವಾದ ಮಾಡುತ್ತಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಅಮಿತ್‌ ಶಾ ಸೇರಿದಂತೆ ಹಿರಿಯ ನಾಯಕರು ಕಾರ್ಯಕರ್ತರ ಜೊತೆಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದ್ದು ಮತ್ತೆ ಮೈತ್ರಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ.

ಇತ್ತ ಜೆಡಿಯು ಕೂಡ ಮತ್ತೆ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಕಳೆದ ಭಾನುವಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ವರ್ಚುವಲ್‌ ವಿಡಿಯೊ ಕಾನ್ಫರೆನ್ಸ್ ನಡೆಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕೈಮೂರ್ ಮತ್ತು ರೋಟಸ್‌ ಜಿಲ್ಲೆಗಳ ಪಕ್ಷದ ಕಾರ್ಯಕರ್ತರ ಜೊತೆ ನಿತೀಶ್‌ ಕುಮಾರ್ ಮಾತನಾಡಿದ್ದರು. ಈ ಎರಡು ಜಿಲ್ಲೆಗಳಿಂದ ಹತ್ತು ಸಾವಿರ ಕಾರ್ಯಕರ್ತರು ಭಾಗಿಯಾಗಿದ್ದರು. 

ಈಗಾಗಲೇ ಮೈತ್ರಿ ಪಕ್ಷ ಬಿಜೆಪಿ ನಿತೀಶ್‌ ಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿರುವುದರಿಂದ ನಿತೀಶ್‌ ಅವರ ಮುಖ್ಯಮಂತ್ರಿ ಹಾದಿ ಸುಗಮಗೊಂಡಿದೆ. ಇನ್ನು ಬಿಜೆಪಿಯೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಅವರ ಮುಂದಿರುವ ಗುರಿ. ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿರುವ ನಿತೀಶ್‌ ಜನರಿಗೆ ಹೊಸ ಹೊಸ ಭರವಸೆಗಳನ್ನು ಕೊಟ್ಟಿದ್ದಾರೆ.

ಕೈಮೂರ್ ಜಿಲ್ಲೆಯ ಕಾರ್ಯಕರ್ತರೊಂದಿಗೆ ಮಾತನಾಡುತ್ತ ನೀರಾವರಿ ಅಭಿವೃದ್ದಿಯ ಭರವಸೆ ನೀಡಿರುವುದು ದೇಶದ ಗಮನ ಸೆಳೆದಿದೆ. ಬಿಹಾರದಲ್ಲಿ ಶೇ 80 ರಷ್ಟು ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಆಗಾಗಿ ಎಲ್ಲಾ ಕೃಷಿ ಭೂಮಿಗೂ ನೀರಾವರಿ ಸೌಕರ್ಯ ಕಲ್ಪಿಸುವ ಭರವಸೆ ನೀಡಿರುವುದು ವಿರೋಧ ಪಕ್ಷಗಳ ನಿದ್ದೆಗೆಡಿಸಿದೆ.

ಚುನಾವಣೆ ಹೊಸ್ತಿಲಲ್ಲಿ ನಿತೀಶ್‌ ನೀಡಿದ ಭರವಸೆಗಳು....

* ಎಲ್ಲಾ ಕೃಷಿ ಭೂಮಿಗೂ ನೀರಾವರಿ ಸೌಕರ್ಯ 
* ಪ್ರತಿ ಮನೆಗೂ ನಲ್ಲಿ ಮೂಲಕ ಕುಡಿಯುವ ನೀರು ಸರಬರಾಜು
* ಪ್ರತಿ ಮನೆಗೂ ವಿದ್ಯುತ್‌
* ಕೃಷಿಗೆ ಸಮರ್ಪಕ ವಿದ್ಯುತ್‌ ಪೂರೈಕೆಗಾಗಿ ಕೃಷಿ ಫೀಡರ್‌ಗಳನ್ನು ಒದಗಿಸುವುದು

ಪ್ರಮುಖವಾದ ಈ ನಾಲ್ಕು ಭರವಸೆಗಳು ಬಿಹಾರದ ಜನರಲ್ಲಿ ಹೊಸ ಕನಸು ಬಿತ್ತಿವೆ. ತವರಿಗೆ ಮರಳಿರುವ ಕಾರ್ಮಿಕರಲ್ಲೂ ಇಲ್ಲೇ ಉಳಿಯುವ ಆಶಾಭಾವನೆಯನ್ನು ಮೂಡಿಸಿವೆ. ಇನ್ನು ಅಮಿತ್ ಶಾ ಜಂಗಲ್‌ ರಾಜ್ಯ, ಲಾಟೀನು ರಾಜ್ಯವಾಗಿದ್ದ ಬಿಹಾರವನ್ನು ನಿತೀಶ್‌ ಕುಮಾರ್‌ ಎಲ್‌ಇಡಿ ರಾಜ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ನಿತೀಶ್‌ ಅವರ ಪ್ರಚಾರ ಕಾರ್ಯ ಮತ್ತಷ್ಟು ಚುರುಕುಗೊಳ್ಳಲಿದೆ ಎಂಬುದು ರಾಜಕೀಯ ಪಂಡಿತರು ಲೆಕ್ಕಚಾರ.

ಈ ಬಾರಿಯು ಅಧಿಕಾರದ ಗದ್ದುಗೆ ಹಿಡಿಯಲು ನಿತೀಶ್‌ ಕುಮಾರ್ ಹೊಸ ಭರವಸೆಗಳ ಮೂಲಕ ಮತದಾರರ ಮನವೊಲಿಸಲು ಮುಂದಾಗಿದ್ದಾರೆ. ಇವರ ಪ್ರಯತ್ನದ ಫಲಿತಾಂಶ ಮತದಾನದ ಬಳಿಕವಷ್ಟೇ ಅನಾವರಣಗೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು