ಗುರುವಾರ , ಏಪ್ರಿಲ್ 15, 2021
24 °C
‘ಹೋರಾಟವನ್ನು ಸಂಚು ಎನ್ನುವುದೇ ದೊಡ್ಡ ಸಂಚು’

ಹೋರಾಟಗಾರರ ಬಂಧನದ ವಿರುದ್ಧ ಕವಿ ವರವರ ರಾವ್ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹೈದರಾಬಾದ್: ಹೋರಾಟಗಾರರನ್ನು ಸಂಚುಕೋರರು ಎಂದು ಕರೆಯುವುದಕ್ಕಿಂತ ದೊಡ್ಡ ಸಂಚು ಮತ್ತೊಂದಿಲ್ಲ ಎಂದು ಕ್ರಾಂತಿಕಾರಿ ಕವಿ ಪಿ.ವರವರ ರಾವ್ ಹೇಳಿದ್ದಾರೆ.

ಪುಣೆ ಪೊಲೀಸರು ವರವರ ರಾವ್ ಅವರನ್ನು ಪುಣೆಯಿಂದ ಹೈದರಾಬಾದ್‌ಗೆ ಕರೆತಂದ ವೇಳೆ ಅವರು ಈ ಮಾತು ಹೇಳಿದ್ದಾರೆ.

‘ಧರ್ಮಾಂಧ ನೀತಿಗಳ ವಿರುದ್ಧ ಹೋರಾಟವನ್ನು ಸಂಘಟಿಸಿದ ಒಂದೇ ಕಾರಣಕ್ಕೆ, ಸಂಚು ರೂಪಿಸಿದ ಆರೋಪದಲ್ಲಿ ನಮ್ಮ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವೇ ಒಂದು ಸಂಚಿನಂತಿದೆ. ಸುಪ್ರೀಂ ಕೋರ್ಟ್‌ನ ಆದೇಶದಿಂದ ಸರ್ಕಾರದ ಕಪಾಳಕ್ಕೆ ಬಾರಿಸಿದಂತಾಗಿದೆ. ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಬೇಕೇ ಹೊರತು, ಹೋರಾಟಗಾರರ ಮೇಲಲ್ಲ’ ಎಂದು ಅವರು ಆಗ್ರಹಿಸಿದ್ದಾರೆ.

ಭೀಮಾ ಕೋರೆಂಗಾವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಕವಿ ವರವರ ರಾವ್, ಸಾಮಾಜಿಕ ಹೋರಾಟಗಾರರಾದ ಸುಧಾ ಭಾರದ್ವಾಜ್, ಗೌತಮ್ ನವಲಖಾ, ಅರುಣ್ ಫೆರೀರಾ ಮತ್ತು ವೆರ್ನಾನ್ ಗೊನ್ಸಾಲ್ವಿಸ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದರು. ಈ ಬಂಧನದ ವಿರುದ್ಧ ಬಂಧಿತರ ಸಂಬಂಧಿಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಹೋರಾಟಗಾರರನ್ನೆಲ್ಲಾ ಸೆ.5ರವರೆಗೆ ಗೃಹಬಂಧನದಲ್ಲಿ ಇರಿಸಿ ಎಂದು ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಹೀಗಾಗಿ ಐವರು ಹೋರಾಟಗಾರರನ್ನೂ ಅವರವರ ಮನೆಗಳಿಗೆ ವಾಪಸ್ ಕರೆತಂದು, ಗೃಹಬಂಧನದಲ್ಲಿ ಇರಿಸಲಾಗಿದೆ.

ಕಾರಣ ಬಹಿರಂಗಪಡಿಸಲು ಕಾಂಗ್ರೆಸ್ ಆಗ್ರಹ

‘ಸಾಮಾಜಿಕ ಹೋರಾಟಗಾರರನ್ನು ಒಮ್ಮಿಂದೊಮ್ಮೆಲೆ ಬಂಧಿಸಿದ್ದರ ಹಿಂದಿನ ಕಾರಣವನ್ನು ಸರ್ಕಾರವು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

‘ಕಾರಣವನ್ನು ಬಹಿರಂಗಪಡಿಸದ್ದಿದ್ದರೆ, ಇದನ್ನು ರಾಜಕೀಯ ದ್ವೇಷ ಎಂದೇ ಕರೆಯಬೇಕಾಗುತ್ತದೆ’ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.

‘ಆ ಹೋರಾಟಗಾರರ ವಿಚಾರಗಳನ್ನು ನಾವು ಒಪ್ಪದೇ ಇರಬಹುದು. ಅವರ ವಿಚಾರಗಳಿಗೆ ನಮ್ಮ ವಿರೋಧವೂ ಇರಬಹುದು. ಆದರೆ ಅವರು ತಮ್ಮದೇ ವಿಚಾರ/ದೃಷ್ಟಿಕೋನಗಳನ್ನು ಹೊಂದಿರಬಾರದು ಎಂಬ ಕೇಂದ್ರ ಸರ್ಕಾರದ ನಿಲುವನ್ನು ಮಾತ್ರ ನಾವು ಒಪ್ಪುವುದಿಲ್ಲ’ ಎಂದು ತಿವಾರಿ ಸ್ಪಷ್ಟಪಡಿಸಿದ್ದಾರೆ.

‘ತನ್ನ ಚಿಂತನೆಗಿಂತ ಭಿನ್ನವಾದ ಚಿಂತನೆಗಳು ಇರಲೇಬಾರದು ಎಂಬಂತೆ ಈ ಸರ್ಕಾರ ವರ್ತಿಸುತ್ತಿದೆ. ನೀವು ಬಿಜೆಪಿಯನ್ನು ಪ್ರಶ್ನಿಸಿದ ತಕ್ಷಣ ನಿಮ್ಮನ್ನು ದೇಶವಿರೋಧಿ ಎನ್ನಲಾಗುತ್ತದೆ. ಸರ್ಕಾರವನ್ನು ವಿರೋಧಿಸಿದ ತಕ್ಷಣ ನಿಮ್ಮನ್ನು ದೇಶದ್ರೋಹಿ ಎಂದು ಕರೆಯಲಾಗುತ್ತದೆ. ವ್ಯವಸ್ಥೆಯನ್ನು ಪ್ರಶ್ನಿಸಿದರೆ ನೀವು ಸಂಚುಕೋರ ಆಗುತ್ತೀರಿ’ ಎಂದು ಅವರು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನಷ್ಟು...

ನೀನ್ಯಾಕೆ ಕುಂಕುಮ ಇಟ್ಟಿಲ್ಲ ಎಂಬುದು ಪೊಲೀಸರ ಪ್ರಶ್ನೆಯಾಗಿತ್ತು

ನಕ್ಸಲ್‌ ನಂಟು ಆರೋಪದಲ್ಲಿ ಐವರ ಬಂಧನ ಪ್ರಕರಣ: ’ಸೆರೆಮನೆ ಬದಲು ಮನೆಸೆರೆ’

ಬಂಧನ ಪರ್ವ: ಪೊಲೀಸರ ವಶದಲ್ಲಿರುವವರ ಇತ್ಯೋಪರಿ

* ಮೋದಿ ಹತ್ಯೆಗೆ ಸಂಚು: ಕವಿ ವರ ವರರಾವ್ ಬಂಧನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು