ಮಂದಿರಕ್ಕೆ ತಕ್ಷಣ ಸುಗ್ರೀವಾಜ್ಞೆ ಇಲ್ಲ: ಮೋದಿ

7

ಮಂದಿರಕ್ಕೆ ತಕ್ಷಣ ಸುಗ್ರೀವಾಜ್ಞೆ ಇಲ್ಲ: ಮೋದಿ

Published:
Updated:
Prajavani

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಕ್ಕಾಗಿ ತಕ್ಷಣವೇ ಸುಗ್ರೀವಾಜ್ಞೆ ಜಾರಿ ಮಾಡುವುದು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ಈ ನಿಟ್ಟಿನಲ್ಲಿ ಯೋಚಿಸಬಹುದು ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ ಮೋದಿ ಅವರು, ಅಯೋಧ್ಯೆ ವಿಚಾರಕ್ಕೆ ಸಂಬಂಧಿಸಿ ಕಾನೂನು ಪ್ರಕ್ರಿಯೆ ಸುಗಮವಾಗಿ ಸಾಗಲು ಕಾಂಗ್ರೆಸ್‌ ಮತ್ತು ಆ ಪಕ್ಷದಲ್ಲಿರುವ ಕೆಲವು ವಕೀಲರು ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.

ಅಯೋಧ್ಯೆ ಬಿಕ್ಕಟ್ಟಿಗೆ ಸಂವಿಧಾನದ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿತ್ತು ಎಂಬುದನ್ನು ಮೋದಿ ನೆನಪಿಸಿದರು.

‘ಅಯೋಧ್ಯೆ ವಿವಾದ ಪರಿಹಾರ ಆಗದಂತೆ ನೋಡಿಕೊಳ್ಳಲು ಕಳೆದ 70 ವರ್ಷಗಳಲ್ಲಿ ಅಧಿಕಾರದಲ್ಲಿದ್ದವರು ಎಲ್ಲ ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಯಾರೂ ನಿರಾಕರಿಸಲಾಗದು’ ಎಂದು ಅವರು ಹೇಳಿದರು. ರಾಮಮಂದಿರ ವಿಚಾರವನ್ನು ರಾಜಕೀಯವಾಗಿ ನೋಡಬಾರದು ಎಂದು ಅವರು ಪಕ್ಷಗಳಿಗೆ ಕಿವಿ ಮಾತು ಹೇಳಿದರು.

ಬಾಬರಿ ಮಸೀದಿ–ರಾಮಮಂದಿರ ನಿವೇಶನ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿ ಈ ವಾರ ವಿಚಾರಣೆಗ ಬರಲಿದೆ.

ಹಿಂದಿ ಭಾಷಿಕ ಮೂರು ರಾಜ್ಯಗಳಲ್ಲಿ ಸೋತ ಬಳಿಕ ಬಿಜೆಪಿಯ ಸ್ಥೈರ್ಯ ಕುಸಿದಿದೆ ಎಂಬುದನ್ನೂ ಮೋದಿ ಅಲ್ಲಗಳೆದರು. ‘ಆತ್ಮಸ್ಥೈರ್ಯ ಕುಸಿಯಲು ಕಾರಣಗಳೇ ಇಲ್ಲ. ನಾವು ಬಹಳ ಆತ್ಮವಿಶ್ವಾಸದಿಂದಲೇ ಮುಂದೆ ಹೋಗುತ್ತಿದ್ದೇವೆ. 2019ರಲ್ಲಿ ಜನರು ನಂಬುವ ಮತ್ತು ಜನರ ಜತೆಗೆ ಸಂಬಂಧ ಹೊಂದಿರುವ ಏಕೈಕ ಪಕ್ಷ ಬಿಜೆಪಿ ಮಾತ್ರ’ ಎಂದು ಅವರು ಹೇಳಿದರು.

ಜನರ ಆಕಾಂಕ್ಷೆಗಳನ್ನು ಈಡೇರಿಸುವವರು ಮತ್ತು ಇಂತಹ ಆಕಾಂಕ್ಷೆಗಳಿಗೆ ಅಡ್ಡಿಯಾಗಿರುವವರ ನಡುವೆ ಮುಂದಿನ ಲೋಕಸಭಾ ಚುನಾವಣೆಯು ನಡೆಯಲಿದೆ ಎಂದರು.

ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಫಲಿತಾಂಶವನ್ನು ಅವರು ವಿಶ್ಲೇಷಿಸಿದರು. ಮಿಜೋರಾಂ ಮತ್ತು ತೆಲಂಗಾಣದಲ್ಲಿ ಬಿಜೆಪಿ ಗೆಲ್ಲಬಹುದು ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಛತ್ತೀಸಗಡದಲ್ಲಿ ಸ್ಪಷ್ಟ ಫಲಿತಾಂಶ ಬಂದಿದೆ. ಆದರೆ, ಉಳಿದ ಎರಡು ರಾಜ್ಯಗಳಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬಂದಿಲ್ಲ ಎಂದು ಅವರು ಹೇಳಿದರು.

ಕೃಷಿ ಸಂಕಷ್ಟದ ಬಗ್ಗೆ ಮಾತನಾಡಿದ ಅವರು, ಸಾಲ ಮನ್ನಾ ಮಾಡುವುದು ರೈತರ ಸಮಸ್ಯೆಗಳಿಗೆ ದೀರ್ಘಾವಧಿ ಪರಿಹಾರ ಅಲ್ಲ ಎಂದು ಪ್ರತಿಪಾದಿಸಿದರು. ಸಾಲ ಮನ್ನಾ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದೆ ಎಂದೂ ಅವರು ಆಪಾದಿಸಿದರು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !