ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಪ್ರಧಾನಿ ಮೋದಿ ನೀಡಿದ ಸಲಹೆಗಳು..

Last Updated 3 ಮಾರ್ಚ್ 2020, 11:30 IST
ಅಕ್ಷರ ಗಾತ್ರ

ನವದೆಹಲಿ: ಕಳೆದ 48 ಗಂಟೆಗಳಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಾಬರಿಯಾಗುವ ಅಗತ್ಯವಿಲ್ಲ ಮತ್ತು ವೈರಸ್ ಹರಡುವುದನ್ನು ತಪ್ಪಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ಒಟ್ಟಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಆತಂಕಪಡುವ ಅಗತ್ಯವಿಲ್ಲ. ನಾವು ಒಟ್ಟಾಗಿ ಕೆಲಸ ಮಾಡಬೇಕಿದೆ, ಸ್ವರಕ್ಷಣೆಗಾಗಿ ಕೆಲ ಸಣ್ಣ ಮತ್ತು ಪ್ರಮುಖ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕು ಹರಡದಿರಲು ವೈಯಕ್ತಿಕವಾಗಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಗ್ರಾಫಿಕ್ ಚಿತ್ರವನ್ನೊಳಗೊಂಡ ಮತ್ತೊಂದು ಟ್ವೀಟ್‌ನಲ್ಲಿ, ಎಲ್ಲರಿಗೂ ಬೇಕಿರುವ ಮೂಲ ರಕ್ಷಣಾ ಕ್ರಮಗಳನ್ನು ಪಟ್ಟಿ ಮಾಡಿದ್ದಾರೆ.

* ಕೈಗಳನ್ನು ತೊಳೆಯುವುದು

* ಸಾಮಾಜಿಕ ಸಂಪರ್ಕದ ಅಂತರವನ್ನುಕಾಪಾಡಿಕೊಳ್ಳಿ

* ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟುವುದನ್ನು ತಪ್ಪಿಸುವುದು,

* ಸೀನುವಾಗ ಅಥವಾ ಕೆಮ್ಮುವಾಗ ಟಿಶ್ಯೂನಿಂದಬಾಯಿಯನ್ನು ಮುಚ್ಚುವುದು.

* ಜ್ವರ, ಕಫ ಮತ್ತು ಉಸಿರಾಡಲು ತೊಂದರೆ ಎದುರಾದಾಗ ಶೀಘ್ರವಾಗಿ ಅಗತ್ಯ ವೈದ್ಯಕೀಯ ಕ್ರಮ ಕೈಗೊಳ್ಳುವುದು

* ಆರೋಗ್ಯ ಕೇಂದ್ರಗಳಿಂದ ಅಗತ್ಯ ಮಾಹಿತಿ ಮತ್ತು ಸಲಹೆಗಳನ್ನು ಪಾಲಿಸುವಂತೆ ಮೋದಿ ತಿಳಿಸಿದ್ದಾರೆ.

ದೇಶದಲ್ಲಿನ COVID-19 ನಾವೆಲ್ ಕೊರೊನಾ ವೈರಸ್‌ ಭೀತಿಯ ಪರಿಸ್ಥಿತಿಯನ್ನು ನಿಭಾಯಿಸಲು ಅವಲೋಕನನಡೆಸಲಾಗಿದೆ. ಇತರೆಡೆಗಳಿಂದ ಭಾರತಕ್ಕೆ ಆಗಮಿಸುವ ಜನರನ್ನು ಪರೀಕ್ಷಿಸುವುದರಿಂದ ಹಿಡಿದು ತ್ವರಿತ ವೈದ್ಯಕೀಯ ಚಿಕಿತ್ಸೆ ನೀಡುವವರೆಗೆ ವಿವಿಧ ಸಚಿವಾಲಯಗಳು ಮತ್ತು ರಾಜ್ಯಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಬಗ್ಗೆ ಚರ್ಚೆ ನಡೆಸಿದ್ದರು. ಮತ್ತೊಂದೆಡೆ, ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುವ ಬಗ್ಗೆ ಅರವಿಂದ ಕೇಜ್ರಿವಾಲ್ ಅವರು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದ್ದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿ, ನಿಜವಾದ ನಾಯಕ ಎನಿಸಿಕೊಂಡವರು ವೈರಸ್‌ನಿಂದ ದೇಶ ಮತ್ತು ಆರ್ಥಿಕತೆಯ ಮೇಲಾಗುತ್ತಿರುವ ಬಿಕ್ಕಟ್ಟನ್ನು ತಪ್ಪಿಸಲು ಸಂಪೂರ್ಣವಾಗಿ ಗಮನಹರಿಸಬೇಕು ಎಂದು ಹೇಳಿದ್ದರು.

ಜಾಗತಿಕವಾಗಿ ಮೂರು ಸಾವಿರಕ್ಕೂ ಅಧಿಕ ಜನರನ್ನು ಬಲಿಪಡೆದಿರುವ ಕೊರೊನಾ ವೈರಸ್ ಸೋಂಕು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಹೈದರಾಬಾದ್‌ನ ಸಾಫ್ಟ್‌ವೇರ್ ಎಂಜಿನಿಯರ್‌ (24 ವರ್ಷ) ಹಾಗೂ ದೆಹಲಿಯ ವ್ಯಕ್ತಿಯೊಬ್ಬರಲ್ಲಿ ದೃಢಪಟ್ಟಿದೆ ಎಂದು ಸೋಮವಾರವಷ್ಟೇ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT