ಮಂಗಳವಾರ, ನವೆಂಬರ್ 19, 2019
29 °C
ಒಂದು ದೇಶ ಒಂದು ಭಾಷೆ ಪ್ರಸ್ತಾವಕ್ಕೆ ಹೆಚ್ಚಿದ ವಿರೋಧ l ಗೃಹಸಚಿವ ಅಮಿತ್‌ ಶಾಗೆ ಕಮಲ್‌ ಹಾಸನ್‌ ಎಚ್ಚರಿಕೆ

ಶಾ, ಸುಲ್ತಾನರಿಂದಲೂ ಹಿಂದಿ ಹೇರಲಾಗದು: ಕಮಲ್ ಹಾಸನ್

Published:
Updated:
Prajavani

ಚೆನ್ನೈ: ‘ಮಾತೃಭಾಷೆಗೆ ಸಂಬಂಧಿಸಿದಂತೆ ಸಂವಿಧಾನವು ನಾಗರಿಕರಿಗೆ ನೀಡಿರುವ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಯಾವುದೇ ‘ಶಾ’, ‘ಸುಲ್ತಾನ’ ಅಥವಾ ‘ಬಾದ್‌ಶಾ’ ಮಾಡಬಾರದು’ ಎಂದು ಬಹುಭಾಷಾ ನಟ, ಮಕ್ಕಳ್‌ ನೀಧಿ ಮಯ್ಯಂನ ಅಧ್ಯಕ್ಷ ಕಮಲ್‌ ಹಾಸನ್‌ ಹೇಳಿದ್ದಾರೆ.

ಹಿಂದಿ ಹೇರಿಕೆ ಕುರಿತು ಎದ್ದಿರುವ ವಿವಾದದ ಬಗ್ಗೆ ಸೋಮವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಸಂದೇಶದ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಇತರ ಭಾಷಿಕರ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನ ಮಾಡಿದರೆ ಜಲ್ಲಿಕಟ್ಟು ನಿಷೇಧಿಸಲು ಮುಂದಾದಾಗ ಮಾಡಿದ್ದ ಪ್ರತಿಭಟನೆಗಿಂದ ತೀವ್ರವಾದ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

‘ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಆದರೆ ತಮಿಳು ನಮ್ಮ ಮಾತೃಭಾಷೆ. ಜಲ್ಲಿಕಟ್ಟು ನಿಷೇಧದ ವಿರುದ್ಧ ನಡೆಸಿದ್ದು ಸಣ್ಣ ಹೋರಾಟ ಮತ್ತು ಅದು ಸಣ್ಣ ಗೆಲುವು. ಭಾಷೆಯನ್ನು ಕುರಿತ ಹೋರಾಟವು ಇದಕ್ಕಿಂತ ತೀವ್ರ ಸ್ವರೂಪದ್ದಾಗಿರುತ್ತದೆ ಎಂದಿದ್ದಾರೆ.

ಸ್ವಾತಂತ್ರ್ಯಾನಂತರ, ರಾಜಾಡಳಿತದ ಪ್ರದೇಶಗಳನ್ನೆಲ್ಲಾ ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಿರುವ ವಿಚಾರವನ್ನು ಪ್ರಸ್ತಾಪಿಸಿದ ಕಮಲ್‌, ‘ಒಕ್ಕೂಟ ರಚನೆಯಾಗುವ ಸಂದರ್ಭದಲ್ಲಿ ತಮ್ಮ ಭಾಷೆ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಕಳೆದುಕೊಳ್ಳದಿರಲು ಅನೇಕ ಪ್ರದೇಶಗಳ ಜನರು ದೃಢ ನಿರ್ಧಾರ ಮಾಡಿದ್ದರು. 1950ರಲ್ಲಿ ಭಾರತವು ಸಂವಿಧಾನವನ್ನು ಅಂಗೀಕರಿಸುವಾಗ ‘ವೈವಿಧ್ಯದಲ್ಲಿ ಏಕತೆ’ ಕಾಪಾಡುವ ಭರವಸೆಯನ್ನು ಈಡೇರಿಸಲಾಗಿತ್ತು. ಯಾವುದೇ ಶಾ, ಸುಲ್ತಾನ ಅಥವಾ ಸಾಮ್ರಾಟ ಆ ಅಧಿಕಾರವನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ಮಾಡಬಾರದು’ ಎಂದಿದ್ದಾರೆ.

‘ಬಂಗಾಳಿ ಭಾಷೆಯಲ್ಲಿರುವ ನಮ್ಮ ರಾಷ್ಟ್ರಗೀತೆಯನ್ನು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಹಾಡುತ್ತಾನೆ. ಮುಂದೆಯೂ ಹಾಡುತ್ತಾರೆ. ಟ್ಯಾಗೋರರು ಆ ಹಾಡಿನೊಳಗೇ ಎಲ್ಲಾ ಭಾಷೆ ಮತ್ತು ಸಂಸ್ಕೃತಿಗಳಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿದ್ದಾರೆ. ‘ಎಲ್ಲರನ್ನೂ ಒಳಗೊಳ್ಳುವಂಥ’ ಭಾರತವನ್ನು ‘ಕೆಲವರನ್ನು ಹೊರಗಿಡುವ’ ಭಾರತವನ್ನಾಗಿ ಪರಿವರ್ತಿಸಬೇಡಿ’ ಎಂದು ಅವರು ಹೇಳಿದ್ದಾರೆ.

ಹಿಂದಿ ಹೇರಿಕೆಯನ್ನು ವಿರೋಧಿಸುವ ವಿಚಾರದಲ್ಲಿ 1960ರಿಂದಲೇ ತಮಿಳುನಾಡು ಮುಂಚೂಣಿಯಲ್ಲಿದೆ. ಭಾಷಾ ಹೇರಿಕೆಯ ಪ್ರಯತ್ನ ನಡೆದಾಗಲೆಲ್ಲಾ ತಮಿಳುನಾಡು ಅದರ ವಿರುದ್ಧ ಭಾರಿ ಪ್ರತಿಭಟನೆಯನ್ನೇ ನಡೆಸಿತ್ತು. ‘ಇಂಗ್ಲಿಷ್‌’  ಭಾಷೆಯನ್ನು ಸಂವಹನದ ಕೊಂಡಿಯಾಗಿ ಬಳಸಲಾಗುವುದು ಎಂದು ಜವಾಹರಲಾಲ್‌ ನೆಹರೂ ಅವರು 1963ರಲ್ಲಿ ಭರವಸೆ ನೀಡಿದ ನಂತರ, ಹಿಂದಿ ಹೇರಿಕೆ ವಿರುದ್ಧದ ಹೋರಾಟ ತಮಿಳುನಾಡಿನಲ್ಲಿ ತಣ್ಣಗಾಗಿತ್ತು. ಈಗ ಕಮಲ್‌ಹಾಸನ್‌ ನೀಡಿರುವ ಪ್ರತಿಕ್ರಿಯೆಯನ್ನು ಗೃಹಸಚಿವ ಅಮಿತ್‌ ಶಾ ವಿರುದ್ಧ ಮಾಡಿದ ವಾಗ್ದಾಳಿ ಎಂದು ವಿಶ್ಲೇಷಿಸಲಾಗುತ್ತಿದೆ.

ತಮಿಳರು ಕೃತಜ್ಞತೆ ಇಲ್ಲದವರು: ಪೊನ್‌
ಚೆನ್ನೈ: ‘ತಮಿಳುನಾಡಿನ ಜನರು ಕೃತಜ್ಞತೆ ಇಲ್ಲದವರು’ ಎಂದು ಹೇಳುವ ಮೂಲಕ ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಪೊನ್‌ ರಾಧಾಕೃಷ್ಣನ್‌ ಅವರು ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿವಾದದ ಕಾವು ಹೆಚ್ಚುವಂತೆ ಮಾಡಿದ್ದಾರೆ.

‘ಅತ್ಯಂತ ಪುರಾತನ ಭಾಷೆಯಾದ ತಮಿಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆಯೇ ಹೊಗಳಿದ್ದರು. ತಮಿಳು ಭಾಷೆಯು ವಿಶ್ವದ ಪುರಾತನ ಭಾಷೆಗಳಲ್ಲಿ ಒಂದು ಎಂದು ಹೇಳಿರುವ ದೇಶದ ಮೊದಲ ಪ್ರಧಾನಿ ಮೋದಿ. ಆದರೆ ಇಲ್ಲಿಯ ಜನರು ಅವರ ಕಾಳಜಿಯನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ರಾಧಾಕೃಷ್ಣನ್‌ ಹೇಳಿದ್ದಾರೆ. ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

‘ರಾಧಾಕೃಷ್ಣನ್‌ ತಮ್ಮ ಮಾತೃಭಾಷೆಯನ್ನು ಬದಲಿಸಿದ್ದಾರೆಯೇ’ ಎಂದು ನಟ ಕಮಲ್‌ ಹಾಸನ್‌ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನ ತಮಿಳುನಾಡು ಘಟಕವು ‘ರಾಧಾಕೃಷ್ಣನ್‌ ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌, ‘ಹಿಂದಿ ಹೇರಿಕೆಯನ್ನು ವಿರೋಧಿಸಿ ಸೆ. 20ರಂದು ನಡೆಸಲಿರುವ ರಾಜ್ಯವ್ಯಾಪಿ ಪ್ರತಿಭಟನೆಯಲ್ಲಿ ಈ ಎಲ್ಲಾ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುತ್ತೇವೆ’ ಎಂದಿದ್ದಾರೆ.

ಕ್ಷಮೆ ಯಾಚಿಸಲು ಒತ್ತಾಯ

(ನವದೆಹಲಿ ವರದಿ): ಹಿಂದಿ ಭಾಷೆಯ ಬಗ್ಗೆ ಪಕ್ಷಪಾತದ ಹೇಳಿಕೆ ನೀಡಿರುವುದಕ್ಕೆ ಕ್ಷಮೆ ಯಾಚಿಸುವಂತೆ ಗೃಹಸಚಿವ ಅಮಿತ್‌ ಶಾ ಅವರಿಗೆ ಸೂಚನೆ ನೀಡಬೇಕು ಎಂದು ಸಿಪಿಎಂ ಸಂಸದೀಯ ಪಕ್ಷದ ನಾಯಕ ಬಿನೋಯ್‌ ವಿಶ್ವಂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

‘ಆಧುನಿಕ ಭಾರತದ ನಿರ್ಮಾಣದಲ್ಲಿ ಹಿಂದಿ ಭಾಷೆಯ ಕಾಣಿಕೆಯನ್ನು ಯಾರೂ ಅಲ್ಲಗಳೆಯಲಾರರು. ಆದರೆ, ‘ ಹಿಂದಿ ಭಾಷೆಯೊಂದೇ ದೇಶದ ಜನರನ್ನು ಒಗ್ಗೂಡಿಸಬಲ್ಲದು’ ಎಂಬ ಭಾವನೆಯು ದೇಶದ ವಾಸ್ತವದ ವಿರುದ್ಧ ಕುರುಡಾದಂತೆ ಕಾಣಿಸುತ್ತದೆ. ಆ ಹೇಳಿಕೆಯು ದೇಶದ ಒಗ್ಗಟ್ಟಿಗೆ ಮಹತ್ವದ ಕಾಣಿಕೆಯನ್ನು ನೀಡಿದ ಇತರ ಎಲ್ಲಾ ಭಾಷೆಗಳನ್ನು ಅವಮಾನಿಸುವಂಥದ್ದು. ಬಹುಭಾಷೆಯ ರಾಷ್ಟ್ರವಾದ ಭಾರತದ ಗೃಹಸಚಿವರ ಈ ಹೇಳಿಕೆಯನ್ನು ಸ್ವೀಕರಿಸಲಾಗದು. ಅವರು ಕ್ಷಮೆ ಯಾಚಿಸಬೇಕು’ ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಅಮಿತ್‌ ಶಾಗೆ ಬುದ್ಧಿ ಕಡಿಮೆ: ಸಿದ್ದರಾಮಯ್ಯ

ಮೈಸೂರು: ‘ಹಿಂದಿ ಕಲಿಕೆಗೆ ನಮ್ಮ ವಿರೋಧವಿಲ್ಲ; ಆದರೆ ಬಲವಂತವಾಗಿ ಹೇರುವುದಕ್ಕೆ ವಿರೋಧವಿದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದಿ ಸಾರ್ವಭೌಮ ಭಾಷೆಯಲ್ಲ. ರಾಷ್ಟ್ರೀಯ ಭಾಷೆಯೂ ಅಲ್ಲ; ಅಧಿಕೃತ ಭಾಷೆಯೂ ಅಲ್ಲ. ಅಮಿತ್‌ ಶಾ ಅವರಿಗೆ ಬುದ್ಧಿ ಕಡಿಮೆ’ ಎಂದು ಟೀಕಿಸಿದರು. ‘ಕರ್ನಾಟಕದಲ್ಲಿ ಯಾವುದೇ ಪರೀಕ್ಷೆ ನಡೆದರೂ ಅದು ಕನ್ನಡದಲ್ಲಿರಬೇಕು. ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು. ಹಾಗೆ ಮಾಡದಿದ್ದರೆ ಅದು ಕನ್ನಡಿಗರಿಗೆ ಮಾಡುವ ಅನ್ಯಾಯ. ಈ ಬಗ್ಗೆ ಕನ್ನಡ ಸಂಘಟನೆಗಳು ದನಿ ಎತ್ತಬೇಕು. ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.

**
ಹಿಂದಿ ಬೆಳೆಯುತ್ತಲೇ ಇದೆ, ಬೆಳೆಯಬೇಕು ಎಂಬುದು ನಮ್ಮ ಅಭಿಲಾಷೆ ಕೂಡ. ಆದರೆ ಈ ವಿಚಾರವನ್ನು ಮತಗಳಿಕೆಗೆ ಬಳಸುವುದು ಸರಿಯಲ್ಲ. ಹಲವು ಭಾಷೆಗಳಿರುವುದು ಭಾರತದ ದೌರ್ಬಲ್ಯ ಅಲ್ಲ
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

**

‌ರಾಷ್ಟ್ರಭಾಷೆಯಾಗಿ ಹಿಂದಿಯನ್ನು ವಿರೋಧಿಸುವವರಿಗೆ ದೇಶದ ಮೇಲೆ ಪ್ರೀತಿ ಇಲ್ಲ. ದೇಶದ ಹೆಚ್ಚಿನ ಜನರು ಹಿಂದಿ ಮಾತನಾಡುತ್ತಾರೆ. ಹಾಗಾಗಿ, ಹಿಂದಿಯನ್ನು ರಾಷ್ಟ್ರಭಾಷೆ ಮಾಡಬೇಕು ಎಂಬುದಕ್ಕೆ ನನ್ನ ಬೆಂಬಲ
– ವಿಪ್ಲವ್‌ ಕುಮಾರ್‌ ದೇವ್‌, ತ್ರಿಪುರಾ ಮುಖ್ಯಮಂತ್ರಿ

**

ಜಾಗತಿಕ ಮಟ್ಟದಲ್ಲಿ ಭಾರತದ್ದು ಎಂದು ಗುರುತಿಸಲು ಒಂದು ಭಾಷೆ ಬೇಕು ಎಂದಷ್ಟೇ ಶಾ ಹೇಳಿದ್ದಾರೆ. ಅವರು ಯಾವುದೇ ಭಾಷೆ ವಿರುದ್ಧ ಮಾತನಾಡಿಲ್ಲ. ವಿಪಕ್ಷಗಳು ಇದನ್ನು ವಿವಾದ ಮಾಡಿವೆ
– ದಿಲೀಪ್‌ ಘೋಷ್‌, ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)