ಮಂಗಳವಾರ, ಜನವರಿ 21, 2020
20 °C

ಪೌರತ್ವ: ಸಿಂಧುತ್ವ ಪರಿಶೀಲನೆಗೆ ಒಪ್ಪಿಗೆ, ಕಾಯ್ದೆಗೆ ತಡೆ ನೀಡಲು ‘ಸುಪ್ರೀಂ’ ನಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರಿ ವಿವಾದ, ಪ್ರತಿಭಟನೆ ಮತ್ತು ಸಂಘರ್ಷಕ್ಕೆ ಕಾರಣವಾಗಿರುವ ಪೌರತ್ವ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ಬುಧವಾರ ನಿರ್ಧರಿಸಿದೆ. ಆದರೆ, ಅದರ ಜಾರಿಗೆ ತಡೆ ನೀಡಲು ನಿರಾಕರಿಸಿದೆ. 

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಪೌರತ್ವ ನೀಡುವುದು ಈ ಕಾಯ್ದೆಯ ಉದ್ದೇಶ. ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 59 ಅರ್ಜಿಗಳ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ತ್ರಿಸದಸ್ಯ ಪೀಠವು ಒಪ್ಪಿದೆ. ಕೇಂದ್ರಕ್ಕೆ ನೋಟಿಸ್‌ ನೀಡಿದೆ. ಮುಂದಿನ ವರ್ಷ ಜನವರಿ 22ರಂದು ವಿಚಾರಣೆ ಆರಂಭವಾಗಲಿದೆ. 

ಮುಸ್ಲಿಂ ಲೀಗ್‌, ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಮುಂತಾದವರು ಅರ್ಜಿದಾರರಲ್ಲಿ ಸೇರಿದ್ದಾರೆ. ಕಾಯ್ದೆಯ ಉದ್ದೇಶ ಮತ್ತು ಸಂಬಂಧಿಸಿ ಇತರ ವಿಚಾರಗಳ ಬಗ್ಗೆ ಜನವರಿಗೆ ತಿಳಿವಳಿಕೆ ಮೂಡಿಸಬೇಕು ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಕೋರಿದ್ದರು. ಈ ವಿಚಾರದಲ್ಲಿ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದರು. 

ಕಾಯ್ದೆಗೆ ತಡೆ ನೀಡಬೇಕು ಎಂದು ಕೆಲವು ಅರ್ಜಿದಾರರ ವಕೀಲರು ಕೋರಿದರು. ಆದರೆ, ವೇಣುಗೋಪಾಲ್‌ ಅವರು ಇದನ್ನು ವಿರೋಧಿಸಿದರು. ಅಧಿಸೂಚನೆ ಪ್ರಕಟವಾದ ಬಳಿಕ ಕಾಯ್ದೆಗೆ ತಡೆ ನೀಡಲು ಅವಕಾಶ ಇಲ್ಲ ಎಂದು ನಾಲ್ಕು ತೀರ್ಪುಗಳು ಬಂದಿವೆ ಎಂದು ಅವರು ತಿಳಿಸಿದರು.

ಕಾಯ್ದೆಯ ಅಡಿಯಲ್ಲಿ ನಿಯಮ ರೂಪಿಸುವಿಕೆಯಂತಹ ಹಲವು ಕೆಲಸಗಳು ಇನ್ನೂ ಆಗಿಲ್ಲ. ಕಾಯ್ದೆಗೆ ಈಗಲೇ ತಡೆ ಕೋರುವ ಅಗತ್ಯ ಇಲ್ಲ ಎಂದು ಕೆಲವು ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಜೀವ್‌ ಧವನ್‌ ಹೇಳಿದರು. 

ಹಾಗಾಗಿ, ತಡೆ ಕೋರುವುದಕ್ಕೆ ಸಂಬಂಧಿಸಿದ ವಾದ–ಪ್ರತಿವಾದಗಳನ್ನು ಜನವರಿ 22ರಂದು ಮಂಡಿಸಬಹುದು ಎಂದು ಪೀಠ ಹೇಳಿತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು