ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಹಿಂದುತ್ವ ತೊರೆದಿಲ್ಲ, ನನ್ನ ಬಣ್ಣ ಬದಲಾಗಿಲ್ಲ: ಉದ್ಧವ್ ಠಾಕ್ರೆ

Last Updated 24 ಜನವರಿ 2020, 5:00 IST
ಅಕ್ಷರ ಗಾತ್ರ

ನವದೆಹಲಿ:ರಾಜ್ಯ ರಾಜಕೀಯದಲ್ಲಿ ಹೊಸ ಮಿತ್ರಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಕೂಡ ನಾನು 'ಹಿಂದುತ್ವವನ್ನು' ತೊರೆದಿಲ್ಲ ಅಥವಾ 'ಬಣ್ಣ'ವನ್ನು ಬದಲಾಯಿಸಿಲ್ಲ ಎಂದು ಶಿವಸೇನಾ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಿಳಿಸಿದ್ದಾರೆ.

ಶಿವಸೇನಾದ ಸಂಸ್ಥಾಪಕ ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರ ಜನ್ಮ ದಿನಾಚರಣೆ ವೇಳೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಳೆಯ ಮಿತ್ರ ಪಕ್ಷದಿಂದ ಬೆನ್ನಿಗೆ ಚೂರಿ ಹಾಕಿಸಿಕೊಂಡಿದ್ದರಿಂದಾಗಿಯೇ ನಾವು ಬೇರೊಂದು ದಾರಿಯನ್ನು ಕಂಡುಕೊಳ್ಳಬೇಕಾಯಿತು. ಅವರು ನಮ್ಮ ನಂಬಿಕೆಯನ್ನು ಹಾಳುಗೆಡವಿದರು ಮತ್ತು ಅವರು ನೀಡಿದ್ದ ಭರವಸೆಯನ್ನು ಈಡೇರಿಸಲಿಲ್ಲ. ನನ್ನನ್ನು ಸುಳ್ಳುಗಾರನೆಂದು ಬಿಂಬಿಸಲು ಪ್ರಯತ್ನಿಸಿದರು. ಹೀಗಾಗಿಯೇ ನಾನು ಬೇರೆಯವರೊಂದಿಗೆ ಸೇರಿ ಸರ್ಕಾರ ರಚಿಸಬೇಕಾಯಿತು.ಇದರರ್ಥ ನಾನು ಹಿಂದುತ್ವವನ್ನು ತೊರೆದಿದ್ದೇನೆ ಅಥವಾ ನನ್ನ ಬಣ್ಣವನ್ನು ಬದಲಿಸಿದ್ದೇನೆ ಎಂದಲ್ಲ ಎಂದು ಹೇಳಿದ್ದಾರೆ.

ಒಂದಲ್ಲ ಒಂದು ದಿನ ಶಿವಸೇನಾದವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಪಕ್ಷದ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರಿಗೆ ಅಂದು ಮಾತು ನೀಡಿದ್ದು ಇಂದು ನನಗೆ ನೆನಪಿದೆ. ಆ ಮಾತನ್ನು ಇಂದು ಈಡೇರಿಸಿದ್ದೇವೆ. ನನ್ನ ಭರವಸೆಯನ್ನು ಈಡೇರಿಸುವಲ್ಲಿ ಇದು ಮೊದಲ ಹೆಜ್ಜೆ ಎಂದು ಹೇಳಿದರು.

2014ರಲ್ಲಿಯೂ ಕೂಡ ಕಾಂಗ್ರೆಸ್‌ನೊಂದಿಗೆ ಸೇರಿ ಸರ್ಕಾರ ರಚಿಸಲು ಶಿವಸೇನಾ ಒಪ್ಪಿಕೊಂಡಿತ್ತು ಎನ್ನುವ ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚೌಹಾಣ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, 2014ರಲ್ಲಿಯೂ ಕೂಡ ಅವರು (ಬಿಜೆಪಿ) ನಮ್ಮ ನಂಬಿಕೆಯನ್ನು ಮುರಿದರು. ಆಗ ನಾನು ಮುಖ್ಯಮಂತ್ರಿಯಾಗಬೇಕೆಂಬ ಯೋಚನೆಯಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬೇರೆಯದ್ದೇ ಇದೆ ಮತ್ತು ನಾನು ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ನಿರ್ಧಾರ ಮಾಡಿದೆ ಎಂದು ಹೇಳಿದರು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಂತರ ಠಾಕ್ರೆ ಬಿಜೆಪಿಯನ್ನು ಕೈಬಿಟ್ಟು, ರಾಜಕೀಯ ವಿರೋಧಿಗಳಾದ ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT