ಸೋಮವಾರ, ಜೂನ್ 27, 2022
26 °C

ನೀವು ಹೇಳಿದಂತೆ ರಫೇಲ್ ತೀರ್ಪಿನಲ್ಲಿ ಉಲ್ಲೇಖಿಸಿಲ್ಲ: ರಾಹುಲ್‌ಗೆ ನೋಟಿಸ್‌

ಏಜನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ರಕ್ಷಣಾ ಸಚಿವಾಲಯದಿಂದ ಸೋರಿಕೆಯಾಗಿರುವ ರಫೇಲ್‌ ದಾಖಲೆಗಳನ್ನು ಪರಿಶೀಲನೆಗೆ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ರಾಹುಲ್‌ ಗಾಂಧಿ ಅವರು ಬೇರೆಯದ್ದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಪ್ರಕರಣವನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್‌ ಸ್ಪಷ್ಟನೆಗೆ ಕೇಳಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ನೋಟಿಸ್‌ ಜಾರಿ ಮಾಡಿದೆ. ‌

 ‘ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರು ಮಾಧ್ಯಮ ಮತ್ತು ಸಾರ್ವಜನಿಕವಾಗಿ ನೀಡಿರುವ ಹೇಳಿಕೆಯು ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಉಲ್ಲೇಖವಾಗಿಲ್ಲ. ರಾಹುಲ್‌ ಗಾಂಧಿ ಅವರು ಹೇಳಿರುವಂತೆ ಈ ಕೋರ್ಟ್‌ ಎಲ್ಲಿಯೂ ಹೇಳಿಲ್ಲ. ಸರ್ಕಾರದಿಂದ ಸೋರಿಕೆಯಾಗಿರುವ ದಾಖಲೆಗಳನ್ನು ಪರಿಶೀಲನೆಗೆ ಪರಿಗಣಿಸುವುದಾಗಿ ಮಾತ್ರ ಕೋರ್ಟ್‌ ಹೇಳಿದೆ,’ ಎಂದು ಮೂವರು ನ್ಯಾಯಮೂರ್ತಿಗಳುಳ್ಳ ಸುಪ್ರೀಂ ಕೋರ್ಟ್‌ನ ಪೀಠ ಇಂದು ತಿಳಿಸಿತು. 

ಇದೇ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರಿಗೆ ಸ್ಪಷ್ಟನೆ ಕೇಳಿ ನೋಟಿಸ್‌ ಜಾರಿ ಮಾಡಿದ ಸುಪ್ರೀಂ ಕೋರ್ಟ್‌ ಮುಂದಿನ ವಿಚಾರಣೆಯೊಳೆಗೆ ಸ್ಪಷ್ಟನೆ ನೀಡುವಂತೆ ಹೇಳಿ ಪ್ರಕರಣವನ್ನು ಮಂಗಳವಾರಕ್ಕೆ ಮುಂದೂಡಿತು. 

ರಕ್ಷಣಾ ಸಚಿವಾಲಯದಿಂದ ಸೋರಿಕೆಯಾಗಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ದಾಖಲೆಗಳನ್ನು ರಫೇಲ್‌ ತೀರ್ಪಿನ ಮರು ಪರಿಶೀಲನಾ ಅರ್ಜಿಯಲ್ಲಿ ಸಾಕ್ಷ್ಯವಾಗಿ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿತ್ತು. ಅದೇ ದಿನ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿ ಅವರು, ‘ನಾನು ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಅರ್ಪಿಸುತ್ತೇನೆ. ಚೌಕಿದಾರ ಕಳ್ಳ ಎಂದು ಇಡೀ ದೇಶವೇ ಹೇಳುತ್ತಿದೆ. ಸುಪ್ರೀಂ ಕೋರ್ಟ್‌ ನ್ಯಾಯದ ಪರ ಮಾತನಾಡಿದೆ. ಇದು ಸಂಭ್ರಮದ ದಿನ,’ ಎಂದು ಉತ್ತರ ಪ್ರದೇಶದ ಅಮೇಥಿಯಲ್ಲಿ ಹೇಳಿದ್ದರು. 

ಆದರೆ, ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿದ್ದ ಬಿಜೆಪಿ, ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖ ಮಾಡದ ಅಂಶಗಳನ್ನು ರಾಹುಲ್‌ ಹೇಳಿದ್ದಾರೆ ಎಂದು ಆರೋಪಿಸಿತ್ತು. ಇದು ನ್ಯಾಯಾಂಗ ನಿಂದನೆಯಾಗಲಿದೆ ಎಂದಿತ್ತು. ಅಷ್ಟೇ ಅಲ್ಲ, ಬಿಜೆಪಿಯ ಸಂಸದೆ ಮೀನಾಕ್ಷಿ ಲೇಖಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು