ಅಲಹಾಬಾದ್, ಫೈಜಾಬಾದ್ ಆಯ್ತು ಇನ್ನು ಕರ್ಣಾವತಿ ಆಗಲಿದೆ ಅಹಮದಾಬಾದ್

7
ಮರುನಾಮಕರಣಕ್ಕೆ ಸಿದ್ಧ ಎಂದ ಗುಜರಾತ್ ಸರ್ಕಾರ

ಅಲಹಾಬಾದ್, ಫೈಜಾಬಾದ್ ಆಯ್ತು ಇನ್ನು ಕರ್ಣಾವತಿ ಆಗಲಿದೆ ಅಹಮದಾಬಾದ್

Published:
Updated:

ಅಹಮದಾಬಾದ್: ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದೂ ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದೂ ಉತ್ತರ ಪ್ರದೇಶ ಸರ್ಕಾರ ಮರುನಾಮಕರಣ ಮಾಡಿದ ಬೆನ್ನಲ್ಲೇ ಗುಜರಾತ್ ಸರ್ಕಾರವೂ ಇಂತಹ ಕ್ರಮಕ್ಕೆ ಮುಂದಾಗಿದೆ. ಯಾವುದೇ ಕಾನೂನು ತೊಡಕು ಎದುರಾಗದಿದ್ದರೆ ಅಹಮದಾಬಾದ್‌ಗೆ ಕರ್ಣಾವತಿ ಎಂದು ಮರುನಾಮಕರಣ ಮಾಡಲು ಸಿದ್ಧವಿರುವುದಾಗಿ ಗುಜರಾತ್ ಸರ್ಕಾರ ಹೇಳಿದೆ.

ಇದನ್ನೂ ಓದಿ: ಅಲಹಾಬಾದ್‌ ಇನ್ನು ಪ್ರಯಾಗ್‌ರಾಜ್: ಯೋಗಿ ಆದಿತ್ಯನಾಥ್ ಸಂಪುಟ ಸಮ್ಮತಿ

ಅಹಮದಾಬಾದ್ ಮರುನಾಮಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗುಜರಾತ್‌ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಕರ್ಣಾವತಿ ಎಂದು ಮರುನಾಮಕರಣ ಮಾಡಬೇಕು ಎಂಬುದೇ ಹಿಂದೆಯೂ ಈಗಲೂ ಜನರ ಆಶಯವಾಗಿದೆ. ಕಾನೂನು ತೊಡಕುಗಳನ್ನು ಮೆಟ್ಟಿನಿಲ್ಲಲು ಸಾಕಷ್ಟು ಬೆಂಬಲ ನಮಗೆ ದೊರೆತರೆ ಮರುನಾಮಕರಣ ಮಾಡಲು ನಾವು ಸದಾ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫೈಜಾಬಾದ್‌ ಜಿಲ್ಲೆಗೆ ಅಯೋಧ್ಯೆ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ

ಫೈಜಾಬಾದ್‌ ಜಿಲ್ಲೆಯ ಹೆಸರನ್ನು ಅಯೋಧ್ಯೆ ಎಂದು ಬದಲಾಯಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರವನ್ನು ಅವರು ಅಭಿನಂದಿಸಿದ್ದಾರೆ. ಕರ್ಣಾವತಿ ಎಂಬ ಹೆಸರು ಹಲವು ರೀತಿಯಲ್ಲಿ ಬಳಕೆಯಲ್ಲಿದೆ. ಗುಜರಾತ್‌ನ ಮತ್ತು ಅಹಮದಾಬಾದ್‌ನ ಜನ ಆ ಹೆಸರನ್ನು ಇಷ್ಟಪಡುತ್ತಾರೆ. ಅದನ್ನು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮುಘಲ್‌ಸರೈ ರೈಲು ನಿಲ್ದಾಣ ಈಗ ದೀನ್‌ ದಯಾಳ್‌ ಉಪಾಧ್ಯಾಯ ಜಂಕ್ಷನ್‌

ಅಹಮದಾಬಾದ್ ಸುತ್ತಮುತ್ತಲ ಪ್ರದೇಶದಲ್ಲಿ 11ನೇ ಶತಮಾನದ ನಂತರ ಜನರು ವಾಸಿಸಲು ಆರಂಭಿಸಿದರು ಎಂದು ಇತಿಹಾಸ ಹೇಳುತ್ತದೆ. ಆಗ ಈ ಪ್ರದೇಶಕ್ಕೆ ಅಶ್ವಲ್ ಎನ್ನುವ ಹೆಸರಿತ್ತು. ಅನ್‌ಹಿಲ್ವಾರಾದಲ್ಲಿ (ಇಂದಿನ ಪಟಾನ್ ನಗರ) ಆಳ್ವಿಕೆ ನಡೆಸುತ್ತಿದ್ದ ಚಾಲುಕ್ಯರ ರಾಜ ಕರ್ಣ ಅಶ್ವಲ್‌ನಲ್ಲಿದ್ದ ಭಿಲ್ಲ ಜನಾಂಗದ ದೊರೆಯ ವಿರುದ್ಧ ಯುದ್ಧ ಸಾರಿ ಜಯಗಳಿಸಿದ. ಸಾಬರ್‌ಮತಿ ನದಿ ದಂಡೆಯ ಮೇಲೆ ಕರ್ಣವತಿ ಹೆಸರಿನ ನಗರವನ್ನು ನಿರ್ಮಿಸಿದ. 1411ರಲ್ಲಿ ಸುಲ್ತಾನ್ ಅಹ್ಮದ್ ಶಾ ಕರ್ಣವತಿ ಸುತ್ತ ಕೋಟೆಯೊಂದನ್ನು ಕಟ್ಟಿಸಿದ. ಆ ಕಾಲದಲ್ಲಿ ಅಹ್ಮದ್ ಹೆಸರಿನ ನಾಲ್ವರು ಸಂತರು ಇದ್ದರು. ಅವರ ಗೌರವಾರ್ಥ ನಗರಕ್ಕೆ ಅಹಮದಾಬಾದ್ ಎಂದು ಹೆಸರಿಟ್ಟ ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಚುನಾವಣಾ ಗಿಮಿಕ್ ಎಂದ ಕಾಂಗ್ರೆಸ್: ಅಹಮದಾಬಾದ್ ಮರುನಾಮಕರಣಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಮರುನಾಮಕರಣದ ಭರವೆ ಇನ್ನೊಂದು ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್‌ನ ಗುಜರಾತ್ ಘಟಕದ ವಕ್ತಾರ ಮನೀಶ್ ಧೋಶಿ ಟೀಕಿಸಿದ್ದಾರೆ.

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಅಹಮದಾಬಾದ್ ಮರುನಾಮಕರಣ ವಿಷಯಗಳು ಬಿಜೆಪಿ ಪಾಲಿಗೆ ಹಿಂದೂಗಳ ಮತಗಳಿಕೆಯ ಅಸ್ತ್ರ. ಅಧಿಕಾರಕ್ಕೆ ಬಂದ ನಂತರ ಇಂತಹ ಭರವಸೆಗಳನ್ನು ಬಿಜೆಪಿ ನಾಯಕರು ಮರೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಹಿಂದೂಗಳನ್ನು ವಂಚಿಸುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ‘ಶ್ಯಾಮಲಾ’ ಎಂದಾಗಲಿದೆಯೇ ಶಿಮ್ಲಾ?

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪಾವಳಿ ಸಂದರ್ಭದಲ್ಲಿ ಫೈಜಾಬಾದ್ ಜಿಲ್ಲೆಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಅಲಹಾಬಾದ್‌ ಅನ್ನು ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !