‘ಎನ್‌ಟಿಸಿಎ ನಿಯಮ ಅನುಸರಿಸಲಾಗಿದೆ’

7
ನರಭಕ್ಷಕ ಹೆಣ್ಣುಹುಲಿ ‘ಅವನಿ’ ಹತ್ಯೆ ಪ್ರಕರಣ

‘ಎನ್‌ಟಿಸಿಎ ನಿಯಮ ಅನುಸರಿಸಲಾಗಿದೆ’

Published:
Updated:
Deccan Herald

ಮುಂಬೈ: ನರಭಕ್ಷಕ ಹೆಣ್ಣುಹುಲಿ ‘ಅವನಿ’ ಹತ್ಯೆಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುನಗಂಟಿವಾರ್ ಅವರು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ನಿಯಮಾವಳಿಗಳು ಹಾಗೂ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆ ಎಂದು ತಿಳಿಸಿದ್ದಾರೆ. 

‘ಅವನಿ’ಗೆ ಅರಿವಳಿಕೆ ಚುಚ್ಚುಮದ್ದು ನೀಡುವ ಆದೇಶ ಹೊರಡಿಸುವಾಗ ಹಾಗೂ ಹತ್ಯೆ ಮಾಡುವಾಗ ಎನ್‌ಟಿಸಿಎ ನಿಯಮಾವಳಿಗಳನ್ನು ಅನುಸರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ಹತ್ಯೆಯಂತಹ ಆದೇಶಗಳನ್ನು ಯಾವುದೇ ಅರಣ್ಯ ಸಚಿವರು ನೀಡಲು ಬರುವುದಿಲ್ಲ. ಇದನ್ನು ನೀಡಿದ್ದು ನಾನಲ್ಲ, ಅರಣ್ಯ ಇಲಾಖೆ. ಬಾಂಬೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಎರಡೂ ಕಡೆ ಅರಣ್ಯ ಇಲಾಖೆಯ ಆದೇಶವನ್ನೇ ಎತ್ತಿಹಿಡಿಯಲಾಯಿತು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

‘ಹುಲಿಯ ಭೀತಿಯಿಂದಾಗಿ ಸ್ಥಳೀಯರು ಹೊಲಗಳಿಗೆ ಹೋಗುವುದನ್ನು ನಿಲ್ಲಿಸಿದ್ದರು. ಅವರ ಜೀವನೋಪಾಯದ ಮೇಲೆ ಇದರಿಂದ ಪರಿಣಾಮ ಉಂಟಾಗುತ್ತಿತ್ತು. ಆದ್ದರಿಂದ ಇಂತಹ ಕ್ರಮ ಕೈಗೊಳ್ಳಲಾಯಿತು’ ಎಂದು ಅವರು ಹೇಳಿದ್ದಾರೆ. 

ಮಾಹಿತಿ ಕೊರತೆ: ‘ಅವನಿ’ ಹತ್ಯೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ಟೀಕೆ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಸುಧೀರ್ ಅವರು, ‘ಅವರಿಗೆ ಇಡೀ ಪ್ರಕರಣದ ಕುರಿತು ಮಾಹಿತಿ ಕೊರತೆ ಇದೆ. ಒಂದು ದೂರವಾಣಿ ಕರೆಯಿಂದ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದಿತ್ತು’ ಎಂದಿದ್ದಾರೆ.

ಮಧ್ಯಪ್ರವೇಶ ಕೋರಿ ಪ್ರಧಾನಿಗೆ ಪತ್ರ
ಅವನಿ ಹತ್ಯೆ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಮುಂಬೈ ಮೂಲದ ಎನ್‌ಜಿಒ ರೆಸ್ಕಿಂಕ್ ಅಸೋಸಿಯೇಷನ್ ಫಾರ್ ವೈಲ್ಡ್‌ಲೈಫ್‌ (ಆರ್‌ಎಡಬ್ಲ್ಯುಡಬ್ಲ್ಯು) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

‘ಸೂರ್ಯೋದಯದ ನಂತರ ಹಾಗೂ ಸೂರ್ಯಾಸ್ತದ ಮೊದಲಿನ ಅವಧಿಯಲ್ಲಿ ಮಾತ್ರ ಕಾರ್ಯಾಚರಣೆಗೆ ನಡೆಸಬೇಕೆಂದು ಎನ್‌ಟಿಸಿಎ ನಿಯಮವಿದೆ. ಕಾರ್ಯಾಚರಣೆ ವೇಳೆ ಕಾನೂನಿನ ಅರ್ಧ ಡಜನ್‌ಗೂ ಹೆಚ್ಚು ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

‘ವೈದ್ಯರ ಗೈರು ಪ್ರಶ್ನಾರ್ಹ’
ಮುಂಬೈ (ಪಿಟಿಐ): 
‘ಅವನಿ’ ಹತ್ಯೆ ಕಾರ್ಯಾಚರಣೆ ವೇಳೆ ಪಶುವೈದ್ಯರು ಗೈರಾಗಿದ್ದ ಕುರಿತು ಹರಿಯಾಣದ ಪಶು ಚಿಕಿತ್ಸಕ ಮಹಾಸಂಘ ಪ್ರಶ್ನಿಸಿದೆ. 

‘ಅರಿವಳಿಕೆ ಚುಚ್ಚುಮದ್ದು ನೀಡಿ ಹುಲಿ ಸೆರೆಹಿಡಿಯಲು ನೀಡಿದ್ದ ಆದೇಶ, ಭಾರತೀಯ ಪಶುವೈದ್ಯಕೀಯ ಮಂಡಳಿ ಕಾಯ್ದೆ 1984ರ ಸೆಕ್ಷನ್ 30(ಬಿ) ಉಲ್ಲಂಘನೆಯಾಗಿದೆ. ಏಕೆಂದರೆ ಚುಚ್ಚುಮದ್ದು ನೀಡುವ ಹೊಣೆಯನ್ನು ಖಾಸಗಿ ಶಾರ್ಪ್‌ಶೂಟರ್‌ಗೆ ವಹಿಸಲಾಗಿತ್ತು. ಅವರು ನೋಂದಾಯಿತ ಪಶುವೈದ್ಯ ಅಲ್ಲ’ ಎಂದು ರಾಜ್ಯದ ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !