ಮಂಗಳವಾರ, ಡಿಸೆಂಬರ್ 10, 2019
20 °C

ಶಿವಸೇನಾ ನೇತೃತ್ವದಲ್ಲಿ ಡಿಸೆಂಬರ್ ಮೊದಲ ವಾರದಲ್ಲೇ 'ಮಹಾ' ಸರ್ಕಾರ: ಸಂಜಯ್ ರಾವುತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಚಾರದಲ್ಲಿ ನಿಗೂಢತೆಯನ್ನು ಉಳಿಸಿಕೊಂಡಿರುವ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಶಿವಸೇನಾದೊಂದಿಗೆ ಮೈತ್ರಿ ಮಾತುಕತೆ ನಡೆಸುತ್ತಲೇ ಇರುವ ಬೆನ್ನಲ್ಲೇ ಸೇನಾ ಸಂಸದ ಸಂಜಯ್ ರಾವುತ್, ಸರ್ಕಾರ ರಚನೆಗೆ ಇದ್ದ ಎಲ್ಲ ಅಡೆತಡೆಗಳು ಈಗ ಬಗೆಹರಿದಿವೆ ಮತ್ತು ನಾಳೆಯ ಹೊತ್ತಿಗೆ ಇದು ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10-15 ದಿನಗಳಿಂದ ಇದ್ದ ಎಲ್ಲ ಅಡೆತಡೆಗಳು ಮುಗಿದಿವೆ. ನಾಳೆಯಷ್ಟೊತ್ತಿಗೆ ಇದರ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಿರುವ ಬೆನ್ನಲ್ಲೇ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. 

ರಾಜ್ಯದ ರೈತರ ಸಮಸ್ಯೆಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸುವಂತೆ  ನಾನೇ ಪವಾರ್ ಅವರಿಗೆ ಮನವಿ ಮಾಡಿಕೊಂಡಿದ್ದೆ. ಇವರಿಬ್ಬರ ಭೇಟಿಯಲ್ಲಿ ಯಾವುದೇ ವಿಶೇಷವಿಲ್ಲ. ರಾಜ್ಯದ ಸಮಸ್ಯೆ ಕುರಿತು ಪ್ರಧಾನಿಯೊಂದಿಗೆ ಚರ್ಚಿಸುತ್ತಾರೆ ಹೊರತು ಬೇರೆ ವಿಚಾರಗಳ ಕುರಿತು ಚರ್ಚೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಶಿವಸೇನಾ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್‌ನಲ್ಲಿ ಕೆಲವು ಆಂತರಿಕ ಪ್ರಕ್ರಿಯೆಗಳಿವೆ. ಸೇನಾದ ಮುಖ್ಯಮಂತ್ರಿ ನೇತೃತ್ವದ ಸರ್ಕಾರವು ಡಿಸೆಂಬರ್ ಮೊದಲ ವಾರದಲ್ಲಿ ಅಧಿಕಾರ ಸ್ವೀಕರಿಸಲಿದೆ. ಈ ಎಲ್ಲ ಸಭೆಗಳಿಗೂ ಶೀಘ್ರದಲ್ಲೇ ಪೂರ್ಣ ವಿರಾಮ ಬೀಳುತ್ತದೆ ಎಂದು ಹೇಳಿದರು. 

ಕಳೆದ ತಿಂಗಳು ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ 105 ಮತ್ತು ಸೇನಾ 56 ಕ್ಷೇತ್ರಗಳಲ್ಲಿ ಜಯ ಸಾಧಿಸುವುದರೊಂದಿಗೆ ಸರಳ ಬಹುಮತವನ್ನು ಸಾಧಿಸಿದ್ದರೂ ಕೂಡ ಸೇನಾದ ಮುಖ್ಯಮಂತ್ರಿ ಹುದ್ದೆ ಹಂಚಿಕೆ ವಿಚಾರವಾಗಿ ಎರಡು ಪಕ್ಷಗಳು ಮೈತ್ರಿಯನ್ನು ಕಡಿದುಕೊಂಡಿವೆ. ಇದೀಗ ಶಿವಸೇನಾ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸುವ ಭರವಸೆಯಲ್ಲಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು