ಮಂಗಳವಾರ, ಮಾರ್ಚ್ 9, 2021
31 °C

ಸಾಕಾರವಾಗದ ‘ಬಯಲು ಶೌಚ ಮುಕ್ತ’ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತವನ್ನು ‘ಬಯಲು ಶೌಚ ಮುಕ್ತ ದೇಶ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಿಸಿದ್ದಾರೆ. ಆದರೆ ದೇಶವು ಶೇ 100ರಷ್ಟು ಪ್ರಮಾಣದಲ್ಲಿ ‘ಬಯಲು ಶೌಚ ಮುಕ್ತ’ವಾಗಿಲ್ಲ ಎಂದು ಕೇಂದ್ರ ಸರ್ಕಾರದ್ದೇ ದತ್ತಾಂಶಗಳು ಮತ್ತು ಸಮೀಕ್ಷಾ ವರದಿಗಳು ಹೇಳುತ್ತವೆ. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಈಚೆಗೆ ಬಿಡುಗಡೆ ಮಾಡಿರುವ ‘ರಾಷ್ಟ್ರೀಯ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ: 2018–19’ರ (ಎನ್‌ಎಆರ್‌ಎಸ್‌ಎಸ್‌) ವರದಿಯೂ ಇದನ್ನೇ ದೃಢಪಡಿಸುತ್ತದೆ. ಆದರೆ ಸ್ವಚ್ಛಭಾರತ ಅಭಿಯಾನದ ಜಾಲತಾಣದಲ್ಲಿ ಇರುವ ದತ್ತಾಂಶಗಳಿಗೂ, ಈ ವರದಿಯಲ್ಲಿ ಪತ್ತೆಯಾದ ಅಂಶಗಳಿಗೂ ವ್ಯತ್ಯಾಸವಿದೆ.

ಎನ್‌ಎಆರ್‌ಎಸ್‌ಎಸ್‌ ವರದಿ

ಸ್ವಚ್ಛ ಭಾರತ ಅಭಿಯಾನದ ಜಾಲತಾಣದಲ್ಲಿನ ದತ್ತಾಂಶಗಳನ್ನು ಮರುಪರಿಶೀಲಿಸುವ ಉದ್ದೇಶದಿಂದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಈ ಸಮೀಕ್ಷೆಯನ್ನು ನಡೆಸಿತ್ತು. ಮೂರು ಸ್ವಯಂಸೇವಾ ಸಂಸ್ಥೆಗಳು ಸರ್ಕಾರದ ಪರವಾಗಿ ಈ ಸಮೀಕ್ಷೆಯನ್ನು ನಡೆಸಿದ್ದವು.

* 2018ರ ನವೆಂಬರ್‌ನಿಂದ 2019ರ ಫೆಬ್ರುವರಿ ಅಂತ್ಯದವರೆಗೆ ಸಮೀಕ್ಷೆ ನಡೆಸಲಾಗಿತ್ತು

* ಇದೇ ಅವಧಿಯಲ್ಲಿ ಸ್ವಚ್ಛ ಭಾರತ ಅಭಿಯಾನದ ಜಾಲತಾಣದಲ್ಲಿ ಪ್ರಕಟವಾದ/ಲಭ್ಯವಿದ್ದ ದತ್ತಾಂಶಗಳಿಗೂ ಮತ್ತು ಸಮೀಕ್ಷೆ ವೇಳೆ ಪತ್ತೆಯಾದ ದತ್ತಾಂಶಗಳಿಗೂ ಭಾರಿ ವ್ಯತ್ಯಾಸವಿತ್ತು

* 93.1 % ರಷ್ಟು ಕುಟುಂಬಗಳಿಗೆ ಮಾತ್ರ ಶೌಚಾಲಯದ ಲಭ್ಯತೆ ಇದೆ (ಆದರೆ ಸ್ವಚ್ಛ ಭಾರತ ಅಭಿಯಾನದ ಜಾಲತಾಣದಲ್ಲಿ ಈ ಪ್ರಮಾಣ ಶೇ 96ರಷ್ಟು ಎಂದು ತೋರಿಸಲಾಗಿತ್ತು)

* 96.5 % ರಷ್ಟು ಜನರು ಮಾತ್ರ ತಮ್ಮ ಮನೆಯಲ್ಲಿರುವ ಶೌಚಾಲಯ ಬಳಸುತ್ತಾರೆ

* 3.5 % ರಷ್ಟು ಜನರು ಶೌಚಾಲಯವಿದ್ದರೂ, ವಿವಿಧ ಕಾರಣಗಳಿಂದ ಅವನ್ನು ಬಳಸುತ್ತಿಲ್ಲ

* 90.7 % ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದ್ದ ಗ್ರಾಮಗಳಲ್ಲಿ ನಿಜವಾಗಿಯೂ ‘ಬಯಲು ಶೌಚ ಮುಕ್ತ’ವಾಗಿದ್ದ ಗ್ರಾಮಗಳ ಪ್ರಮಾಣ

* 9.3 % ಬಯಲು ಶೌಚ ಮುಕ್ತವಾಗದೇ ಇದ್ದರೂ, ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿರುವ ಗ್ರಾಮಗಳು

* 44 %  ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದಲ್ಲಿ ಶೌಚಾಲಯವಿದ್ದರೂ ಅವುಗಳನ್ನು ಬಳಸದೇ ಇರುವವರ ಪ್ರಮಾಣ (ರೈಸ್‌ ಸಮೀಕ್ಷಾ ವರದಿಯಲ್ಲಿ ಉಲ್ಲೇಖ)

ಬಯಲು ಶೌಚ ಮುಕ್ತವಲ್ಲದ ಗ್ರಾಮಗಳ ಚಿತ್ರಣ

1. ಗ್ರಾಮದ ಎಲ್ಲಾ ಮನೆಗಳಲ್ಲೂ ಶೌಚಾಲಯ ಇಲ್ಲ

2. ಶೌಚಾಲಯಗಳಿದ್ದರೂ, ಅವುಗಳ ನಿರ್ಮಾಣ ಅವೈಜ್ಞಾನಿಕವಾಗಿಕ ಇವೆ. ಬಳಕೆಗೆ ಯೋಗ್ಯವಾಗಿಲ್ಲದೇ ಇವೆ

3. ಶೌಚಾಲಯವಿದ್ದರೂ, ಬಳಕೆ ಇಲ್ಲ

4. ಗ್ರಾಮದ ಶಾಲೆ– ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯಗಳಿಲ್ಲ

5. ಗ್ರಾಮದಲ್ಲಿ, ಗ್ರಾಮದ ಹೊರವಲಯದಲ್ಲಿ ಮಾನವ ತ್ಯಾಜ್ಯ ಇದ್ದೇ ಇದೆ

ಬಯಲಲ್ಲಿ ಶೌಚಕ್ಕೆ ಹತ್ಯೆಯ ಶಿಕ್ಷೆ

ರಸ್ತೆಯಲ್ಲಿ ಶೌಚ ಮಾಡಿದರು ಎಂಬ ಕಾರಣಕ್ಕೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಭಾವ್ಕೇಡಿ ಗ್ರಾಮದಲ್ಲಿ ಈಚೆಗೆ (ಸೆಪ್ಟೆಂಬರ್‌ 25) ಇಬ್ಬರು ಬಾಲಕರನ್ನು ಹೊಡೆದು ಕೊಲ್ಲಲಾಗಿತ್ತು.

‘ಈ ಇಬ್ಬರು ಬಾಲಕರು ಸೋದರರಾಗಿದ್ದು, ಅವರ ಮನೆಯಲ್ಲಿ ಶೌಚಾಲಯ ಇರಲಿಲ್ಲ. ಹೀಗಾಗಿ ಅವರು ಬಯಲಿನಲ್ಲಿ ಶೌಚ ಮಾಡುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಗ್ರಾಮದ ಇಬ್ಬರು ವ್ಯಕ್ತಿಗಳು ಬಾಲಕರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಬಾಲಕರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

‘ಈ ಗ್ರಾಮವನ್ನು 2018ರ ಏಪ್ರಿಲ್‌ 4ರಂದು ‘ಬಯಲು ಶೌಚ ಮುಕ್ತ’ ಗ್ರಾಮ ಎಂದು ಘೋಷಿಸಲಾಗಿದೆ. ಆದರೆ ಸಂತ್ರಸ್ತ ಬಾಲಕರ ಮನೆಯಲ್ಲಿ ಶೌಚಾಲಯ ಇಲ್ಲ’ ಎಂದು ಶಿವಪುರಿ ಜಿಲ್ಲಾಧಿಕಾರಿ ಅನುಗ್ರಹ ಅವರು ದೃಢಪಡಿಸಿದ್ದಾರೆ.

ಬಾಲಕರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಲ್ಲೆ ನಡೆಸಿದವರು ಯಾದವ ಸಮುದಾಯದವರಾಗಿದ್ದಾರೆ. ಗ್ರಾಮದಲ್ಲಿ ಇನ್ನೂ ಅಸ್ಪೃಶ್ಯತೆ ಚಾಲ್ತಿಯಲ್ಲಿದೆ. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಚಾಂಡೇಲ್‌ ಮಾಹಿತಿ ನೀಡಿದ್ದಾರೆ.

‘ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ಸುಗೊಳಿಸುವುದು ಸರ್ಕಾರದ ಮುಖ್ಯ ಗುರಿ. ಶೌಚಾಲಯದ ಸವಲತ್ತು ಎಲ್ಲರಿಗೂ ಸಿಗುವಂತೆ ಮಾಡಬೇಕಿದೆ. ಯಾವುದೇ ಕಾರಣಕ್ಕೂ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು’ ಎಂದು ಕೇಂದ್ರ ಸರ್ಕಾರವು ಈ ಘಟನೆಯ ಬೆನ್ನಲ್ಲೇ ಎಲ್ಲಾ ರಾಜ್ಯಗಳಿಗೂ ಸುತ್ತೋಲೆ ಹೊರಡಿಸಿತ್ತು.

ಆಧಾರ: ರಾಯಿಟರ್ಸ್‌, ಪಿಟಿಐ, ಎಎಫ್‌ಪಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು