ಸೋಮವಾರ, ಜೂನ್ 14, 2021
26 °C
ಹಳ್ಳಿಗಳಲ್ಲೇ ನಗದು ವಿತರಣೆ | ಪಂಚಾಯಿತಿ ಕಚೇರಿಗಳ ಬಳಕೆ

ಬ್ಯಾಂಕ್‌ಗಳಲ್ಲಿ ನಗದು ಪಡೆಯಲು ಜನಜಾತ್ರೆ: ನಿಯಂತ್ರಣಕ್ಕೆ ‘ಒಡಿಶಾ ಮಾದರಿ' ಮದ್ದು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಲಾಕ್‌ಡೌನ್, ಸೀಲ್‌ಡೌನ್‌, ಕ್ಲಾಂಪ್‌ಡೌನ್... ಹೀಗೆ ಹಲವು ಹೆಸರಿನಲ್ಲಿ ನಿರ್ಬಂಧಗಳನ್ನು ಘೋಷಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಅನಿವಾರ್ಯವೂ ಹೌದೆನ್ನಿ. ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು, ಕಂಗೆಟ್ಟಿರುವ ಜನರ ಆಸರೆಗೆ ಸರ್ಕಾರ ನೇರ ನಗದು ವರ್ಗಾವಣೆ ಯೋಜನೆಯಡಿ ಸಹಾಯಧನ ಬಿಡುಗಡೆ ಮಾಡಿದೆ. ಆದರೆ ಈ ಹಣ ಪಡೆದುಕೊಳ್ಳುವುದು ಸಂಕಷ್ಟದಲ್ಲಿರುವ ಜನರ ಪಾಲಿಗೆ ದೊಡ್ಡ ಸವಾಲಾಗಿದೆ.

ಈಗಾಗಲೇ ಹತ್ತಾರು ಬಗೆಯ ಒತ್ತಡದಲ್ಲಿರುವ ಬ್ಯಾಂಕ್ ಸಿಬ್ಬಂದಿಯ ಮೇಲೆಯೂ ನೇರ ನಗದು ವರ್ಗಾವಣೆ ಒತ್ತಡ ಹೇರಿದೆ. ಬ್ಯಾಂಕ್‌, ಪೋಸ್ಟ್‌ ಆಫೀಸ್‌ಗಳ ಎದುರು ಸಾಲುಗಟ್ಟಿ ನಿಲ್ಲುತ್ತಿರುವ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡುವುದು ಸಿಬ್ಬಂದಿಯ ಪಾಲಿಗೆ ದೊಡ್ಡ ಸವಾಲು. ಅನೇಕ ಕಡೆ ಬ್ಯಾಂಕ್ ಅಧಿಕಾರಿಗಳಿಗೆ ಪೊಲೀಸರು ಮತ್ತು ನಗರಾಡಳಿತ ಸಂಸ್ಥೆಗಳ ಸದಸ್ಯರು ನೊಟೀಸ್‌ಗಳನ್ನೂ ಜಾರಿ ಮಾಡಿದ್ದಾರೆ. ಟ್ವಿಟರ್‌ನ ಇಂಡಿಯಾ ಟ್ರೆಂಡಿಂಗ್‌ ವಿಭಾಗದಲ್ಲಿ ಇಂದು (ಏಪ್ರಿಲ್ 12)  #BankerHaiPoliceNahin (ನಾವು ಬ್ಯಾಂಕರ್‌ಗಳು ಪೊಲೀಸರಲ್ಲ) ಟ್ರೆಂಡ್‌ ಆಗುತ್ತಿದೆ.

ಬ್ಯಾಂಕ್‌ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು ಮತ್ತು ಫಲಾನುಭವಿಗಳ ತಲೆಬಿಸಿಯನ್ನು ಏಕಕಾಲಕ್ಕೆ ಕಡಿಮೆ ಮಾಡಬಲ್ಲ ವಿಶಿಷ್ಟ ಕ್ರಮವೊಂದನ್ನು ಒಡಿಶಾ ಸರ್ಕಾರ ಜಾರಿ ಮಾಡಿದೆ. ಕೆಲ ದಿನಗಳ ಮೊದಲು, ಫಲಾನುಭವಿಗಳ ಮನೆಗೆ ಪಿಂಚಣಿ ಹಣ ತಲುಪಿಸುವ ಯೋಜನೆಯನ್ನು ಆಂಧ್ರ ಸರ್ಕಾರ ಜಾರಿಗೆ ತಂದಿದ್ದು ನಿಮಗೆ ನೆನಪಿರಬಹುದು. ಇದೀಗ ಒಡಿಶಾ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಯೋಜನೆಯೂ ಫಲಾನುಭವಿಗಳಿಗೆ ಅವರ ಗ್ರಾಮದಲ್ಲಿಯೇ ಸಹಾಯಧನ ವಿತರಣೆಗೆ ಅನುವು ಮಾಡಿಕೊಟ್ಟಿದೆ.

ಈ ಮಾದರಿಯನ್ನು ಇತರ ರಾಜ್ಯ ಸರ್ಕಾರಗಳೂ ಪರಿಶೀಲಿಸಬೇಕು ಎಂದು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂ) ಬೋಧಕಿ ರಿತಿಕಾ ಖೇರಾ ಲೇಖನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ನಮ್ಮೂರಲ್ಲೇ ನಮ್ಮ ಪಿಂಚಣಿ

ಒಡಿಶಾದ ಗ್ರಾಮ ಪಂಚಾಯಿತಿ ಕಚೇರಿ ಎದುರಿನ ತೆರೆದ ಬಯಲಿನಲ್ಲಿ ಪ್ರತಿ ತಿಂಗಳ 15ನೇ ತಾರೀಖಿಗೆ ಪಂಚಾಯಿತಿ ಕಾರ್ಯದರ್ಶಿ ಟೇಬಲ್‌ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಪಿಂಚಣಿ ದಾಖಲಾತಿ ಪುಸ್ತಕದಲ್ಲಿರುವ ಹೆಸರನ್ನು ಕೂಗುತ್ತಾರೆ. ಆ ಪಿಂಚಣಿದಾರರು ಮುಂದಕ್ಕೆ ಬಂದು ದಾಖಲಾತಿ ಪುಸ್ತಕದಲ್ಲಿ ಸಹಿ ಅಥವಾ ಹೆಬ್ಬೆಟ್ಟಿನ ಗುರುತು ಹಾಕುತ್ತಾರೆ. ಕಾರ್ಯದರ್ಶಿಯು 500 ರೂಪಾಯಿಯ ಪಿಂಚಣಿಯನ್ನು ಫಲಾನುಭವಿಗಳ ಕೈಗೆ ನೀಡುತ್ತಾರೆ.

ಇಂಥ ಕ್ರಮಗಳು ಇದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡಬಹುದು ಎಂಬ ಪ್ರಶ್ನೆಯೂ ಉದ್ಭವಿಸಬಹುದು. ಆದರೆ, ಸಾರ್ವಜನಿಕ ಪ್ರದೇಶದಲ್ಲಿ ಎಲ್ಲರ ಎದುರು ಫಲಾನುಭವಿಯ ಕೈಗೆ ಪಿಂಚಣಿಯನ್ನು ನೀಡುವುದರಿಂದ ಲಂಚ ಪಡೆಯುವುದು ಸುಲಭವಲ್ಲ. ಜೊತೆಗೆ ಫಲಾನುಭವಿಗಳ ಕುಟುಂಬದಲ್ಲಿ ಅರಿವು ಹಾಗೂ ಸಾಕ್ಷರತೆ ಪ್ರಮಾಣ ಹೆಚ್ಚಾಗಿರುವುದರಿಂದ ಇದು ಭ್ರಷ್ಟಾಚಾರಕ್ಕೆ ಆಸ್ಪದ ನೀಡುತ್ತಿಲ್ಲ. 

ಹಣ ವಿತರಿಸುವಾಗ ಜನದಟ್ಟಣೆಯನ್ನು ಇನ್ನೂ ಕಡಿಮೆ ಮಾಡಲು ಬಯಸಿದರೆ ರಾಜ್ಯ ಸರ್ಕಾರವು ಆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ಪಿಂಚಣಿ ವಿತರಿಸಬಹುದಾಗಿದೆ. ಅಂಗನವಾಡಿ ಕಾರ್ಯಕರ್ತೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಯನ್ನು ಬಳಸಿಕೊಂಡು ಇದು ಸಮರ್ಪಕವಾಗಿ ನಿರ್ವಹಣೆಯಾಗುವಂತೆ ನೋಡಿಕೊಳ್ಳಬಹುದಾಗಿದೆ.  
ಇಷ್ಟೆಲ್ಲ ಚರ್ಚೆಯ ಬಳಿಕ ಉದ್ಭವಿಸುವ ಇದನ್ನು ‘ಯಾರು’ ಹಾಗೂ ‘ಎಷ್ಟರ ಮಟ್ಟಿಗೆ’ ಮಾಡಬೇಕು ಎಂಬ ಯಕ್ಷ ಪ್ರಶ್ನೆಗೆ ಉತ್ತರವಿಲ್ಲ. 

ಸರ್ಕಾರ ಜನಧನ ಖಾತೆಗೆ ಮೊದಲ ಹಂತವಾಗಿ ಹಾಕಿದ 500 ರೂಪಾಯಿ ಬಡವರಿಗೆ ಸಾಕಾಗುವುದಿಲ್ಲ. ಲಾಕ್‌ಡೌನ್‌ ಮುಂದುವರಿದರೆ ತಕ್ಷಣವೇ ಇನ್ನಷ್ಟು ಪರಿಹಾರವನ್ನು ಘೋಷಿಸುವುದು ಅನಿವಾರ್ಯ. ಆಗಲೂ ಹಣವನ್ನು ಈಗ ಮಾಡಿದಂತೆ ಬ್ಯಾಂಕ್‌ಗಳಿಗೆ ವರ್ಗಾಯಿಸಿದರೆ, ಜನರಿಗೆ ಹಣ ಪಡೆದುಕೊಳ್ಳುವುದು ಕಷ್ಟವಾಗಬಹುದು.

ಹೆಣಗಾಡುತ್ತಿವೆ ಬ್ಯಾಂಕ್‌ಗಳು

ಕೊರೊನಾ ಸೋಂಕು ತಡೆಯಲು ಘೋಷಿಸಿರುವ ‘ಲಾಕ್‌ಡೌನ್‌’ ಹಿನ್ನೆಲೆಯಲ್ಲಿ ಪರಿಹಾರ ರೂಪದಲ್ಲಿ ‘ಜನ ಧನ’ ಖಾತೆಗೆ ಸರ್ಕಾರ ಹಾಕಿದ್ದ 500 ರೂಪಾಯಿಯನ್ನು ಪಡೆಯಲು ಬ್ಯಾಂಕಿಗೆ ಬಂದಿದ್ದ ಮಹಿಳೆಯೊಬ್ಬರನ್ನು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂಬ ಕಾರಣಕ್ಕೆ ಮಧ್ಯ ಪ್ರದೇಶದ ಭಿಂಡ್‌ನಲ್ಲಿ ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು. ಭಾರತದ ಆರ್ಥಿಕ ರಾಜಧಾನಿಯಾದ ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಜನದಟ್ಟಣೆ ನಿರ್ವಹಣೆ ಮಾಡಲು ಬ್ಯಾಂಕ್‌ಗಳು ಹೆಣಗಾಡುತ್ತಿವೆ. ಗ್ರಾಹಕರೂ ಪಾಳಿಗಳಲ್ಲಿ ನಿಂತು ಬಸವಳಿದಿದ್ದಾರೆ.

ನಗದು ರೂಪದಲ್ಲಿ ಪರಿಹಾರ ನೀಡಿದಾಗ ಇಂತಹ ಸಮಸ್ಯೆ ಎದುರಾಗುವುದು ಸಹಜ. ಹೀಗಿದ್ದರೂ ಇತರ ಪರಿಹಾರ ಕಾರ್ಯದ ಜೊತೆಗೆ ಹಣವನ್ನೂ ನೀಡಬೇಕು ಎಂಬ ಆರ್ಥಿಕ ತಜ್ಞರ, ವಿಶ್ಲೇಷಕರ ಒಕ್ಕೊರಲಿನ ಕೂಗನ್ನು ಅನುಷ್ಠಾನಕ್ಕೆ ತರುವುದು ಸುಲಭದ ವಿಷಯವಲ್ಲ. ಅಸಂಘಟಿತ ವಲಯದ ಲಕ್ಷಾಂತರ ಜನ ದುಡಿಮೆ ಇಲ್ಲದೇ ಇರುವಾಗ ಅವರಿಗೆ ಹಣಕಾಸಿನ ನೆರವು ನೀಡುವುದು ಸಮಯೋಚಿತ ನಿರ್ಧಾರ. ಆದರೆ, ಪರಿಹಾರ ಮಾರ್ಗವು ಕೇವಲ ಹಣ ಪಾವತಿಯನ್ನಷ್ಟೇ ಅವಲಂಬಿಸಿದರೆ ಅದರ ನೈಜ ಉದ್ದೇಶ ಈಡೇರುವುದಿಲ್ಲ.

ನಗದು ಪಡೆದುಕೊಳ್ಳುವ ಸವಾಲು

ತಮ್ಮ ಖಾತೆಗೆ ಸರ್ಕಾರ ಹಾಕಿದ ಪರಿಹಾರ ಹಣವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಗ್ರಾಹಕರನ್ನು ಕಾಡುತ್ತಿದೆ. ಡಿಜಿಟಲ್‌ ಪೇಮೆಂಟ್‌ ಬಳಕೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗಿದ್ದರೂ ಗ್ರಾಮೀಣ ಪ್ರದೇಶಗಳ ಜನರಲ್ಲಿ ಈ ಪ್ರಮಾಣ ಕಡಿಮೆ ಇದೆ. 2017ರರ ಗ್ಲೋಬಲ್‌ ಫೈನಾನ್ಷಿಯಲ್‌ ಇನ್‌ಕ್ಲೂಷನ್‌ ಇಂಡೆಕ್ಸ್‌ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು ಯುವಕರು (15 ವರ್ಷ ಮೇಲಿನವರು) ಡೆಬಿಟ್‌ ಕಾರ್ಡ್‌ ಅಥವಾ ಡಿಜಿಟಲ್‌ ಪೇಮೆಂಟ್‌ ಸೌಲಭ್ಯ ಬಳಸುತ್ತಿದ್ದಾರೆ. ಶೇ 4ರಷ್ಟು ಜನ ಮೊಬೈಲ್‌ ಅಥವಾ ಇಂಟರ್‌ನೆಟ್‌ ಬ್ಯಾಂಕಿಂಗ್ ಮೂಲಕ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಕೇವಲ ಶೇ 1ರಷ್ಟು ಜನ ಮೊಬೈಲ್‌ ಅಕೌಂಟ್‌ ಹೊಂದಿದ್ದಾರೆ. 

ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಜನ ಹಣ ಪಡೆಯಲು ಬ್ಯಾಂಕಿಗೆ ಹೋಗುತ್ತಾರೆ. ಆದರೆ, ಈಗ ಗ್ರಾಮೀಣ ಪ್ರದೇಶದ ಬ್ಯಾಂಕ್‌ಗಳಲ್ಲಿ ನಗರದ ಶಾಖೆಗಳಿಗಿಂತ ಕಡಿಮೆ ಜನದಟ್ಟಣೆ ಇದೆ. ಜನಸಂಚಾರದ ಮೇಲೆ ನಿರ್ಬಂಧ ಹೇರಿರುವುದು, ಸಾರ್ವಜನಿಕ ಸಾರಿಗೆ ಸೌಲಭ್ಯ ಇಲ್ಲದಿರುವುದು ಹಾಗೂ ಪೊಲೀಸರು ದೌರ್ಜನ್ಯ ನಡೆಸುತ್ತಾರೆ ಎಂಬ ಭೀತಿಯಿಂದಾಗಿ ಗ್ರಾಮೀಣ ಭಾಗದ ಜನರಿಗೆ ಬ್ಯಾಂಕ್‌ಗೆ ಹೋಗುವುದು ಕಷ್ಟವಾಗಿದೆ.

ಸಾಮಾನ್ಯ ದಿನಗಳಲ್ಲೇ ಬ್ಯಾಂಕಿನಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ. ಲಾಕ್‌ಡೌನ್‌ ಇರುವುದರಿಂದ ಬ್ಯಾಂಕಿನಲ್ಲೂ ಕಡಿಮೆ ಸಿಬ್ಬಂದಿ ಕೆಲಸ ಮಾಡುತ್ತಿರುತ್ತಾರೆ. ಹೀಗಿರುವಾಗ ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆ ಮಾಡಿದರೆ ಇದನ್ನು ನಿರ್ವಹಿಸುವುದು ಬ್ಯಾಂಕ್‌ಗಳಿಗೂ ಕಷ್ಟವಾಗಲಿದೆ. ಬ್ಯಾಂಕಿನ ಕೌಂಟರ್‌ನಿಂದ ಹಣ ಪಡೆಯುವುದು ಈ ಮೊದಲಿನಷ್ಟು ಸುಲಭವಲ್ಲ. ಅದರಲ್ಲೂ ಗ್ರಾಮೀಣ ಭಾಗದ ಜನರ ನಡುವೆ ನೂಕುನುಗ್ಗಲು ಇರುತ್ತದೆ.

ಜನರ ಮನೆ ಬಾಗಿಲಿಗೇ ಹೋಗುವ ‘ಬ್ಯಾಂಕ್‌ ಮಿತ್ರ’ರು (ಬ್ಯಾಂಕಿಂಗ್‌ ಕರೆಸ್ಪಾಂಡೆಂಟ್ಸ್) ಬಯೋಮೆಟ್ರಿಕ್‌ ಪಡೆದು ಹಣ ನೀಡುತ್ತಿರುವುದರಿಂದ ಇತ್ತೀಚೆಗೆ ಬ್ಯಾಂಕ್‌ಗಳ ಮೇಲೆ ಸ್ವಲ್ಪ ಮಟ್ಟಿಗೆ ಹೊರೆ ಕಡಿಮೆಯಾಗಿದೆ. ಕೆಲ ಬಾರಿ ಇವರು ಅನಧಿಕೃತವಾಗಿ ಶುಲ್ಕವನ್ನು ಪಡೆಯುತ್ತಿದ್ದರೂ ಈ ಸಂದರ್ಭದಲ್ಲಿ ಅದನ್ನು ಕಡೆಗಣಿಸಬಹುದು. ಕೊರೊನಾ ವೈರಸ್‌ ಹರಡುತ್ತಿರುವ ಈ ವೇಳೆಯಲ್ಲಿ ಬಯೋಮೆಟ್ರಿಕ್‌ ಬಳಸುವುದು ಅಪಾಯಕಾರಿ. ಬಯೋಮೆಟ್ರಿಕ್‌ ಪಡೆದು ಹಣ ನೀಡುತ್ತಿರುವುದು ಬ್ಯಾಂಕಿನ ಸಿಬ್ಬಂದಿ ಹಾಗೂ ಬ್ಯಾಂಕ್‌ ಮಿತ್ರರಲ್ಲಿ ಆತಂಕವನ್ನೂ ಉಂಟುಮಾಡಿದೆ. 

ಇತ್ತೀಚೆಗೆ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಆಧಾರ್‌ ಪೇಮೆಂಟ್‌ ಜಾರಿಗೆ ತಂದಿರುವುದು ಆಶಾದಾಯವಾಗಿದೆ. ಆದರೆ, ಇದರಲ್ಲಿ ಹಣ ಬೇರೆ ಖಾತೆಗೆ ವರ್ಗಾವಣೆಯಾಗುತ್ತಿರುವುದು, ತಿರಸ್ಕೃತಗೊಳ್ಳುವಂತಹ ಹೊಸ ಸಮಸ್ಯೆಗಳು ಹುಟ್ಟಿಕೊಂಡಿವೆ. 

ಹಣವೊಂದೇ ಪರಿಹಾರವಲ್ಲ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಆತಂಕಕ್ಕೆ ಒಳಗಾಗಿರುವ ಜನ, ಅದರಲ್ಲೂ ವಿಶೇಷವಾಗಿ ಆನ್‌ಲೈನ್‌ ಗ್ರಾಹಕರು ಸಹ ಖರೀದಿಗಾಗಿ ಬೀದಿಗೆ ಬರುತ್ತಿದ್ದಾರೆ. ಅಕ್ರಮ ದಾಸ್ತಾನು ಮಾಡಿ ಹೆಚ್ಚಿನ ಹಣಕ್ಕೆ ಸಾಮಗ್ರಿಗಳನ್ನು ಮಾರುವ ದಂಧೆಯ ಬಗ್ಗೆಯೂ ವರದಿಯಾಗುತ್ತಿದೆ. ಬೆಲೆ ಏರಿಕೆಯ ಬಿಸಿ ಇನ್ನೂ ತಟ್ಟಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಈ ಸಮಸ್ಯೆಯೂ ಜನರನ್ನು ಬಾಧಿಸುವ ಸಾಧ್ಯತೆ ಇದೆ. 

ಇಂಥ ಸಂದರ್ಭದಲ್ಲಿ ಬೇಲೆ ಏರಿಕೆಯು ಹಣ ವರ್ಗಾವಣೆಯ ಉದ್ದೇಶದ ಮೌಲ್ಯವನ್ನೇ ಕ್ಷೀಣಿಸುವಂತೆ ಮಾಡಲಿದೆ. ಈ ಕಾರಣಕ್ಕಾಗಿಯೇ ಹಣ ನೀಡುವುದರ ಜೊತೆಗೆ ಆಹಾರ ಧಾನ್ಯವನ್ನೂ ವಿತರಿಸುವ ವ್ಯವಸ್ಥೆಯಾಗಬೇಕು. ಈಗಾಗಲೇ ಪಡಿತರ ಕಾರ್ಡ್‌ದಾರರಿಗೆ ಆಹಾರ ಧಾನ್ಯ ನೀಡುವುದಾಗಿ ಘೋಷಿಸಲಾಗಿದೆ. ಆದರೆ, ಮೂರನೇ ಒಂದು ಭಾಗದಷ್ಟು ಜನ ಇದರಿಂದಲೂ ವಂಚಿತರಾಗಲಿದ್ದಾರೆ. ಅಂಥವರಿಗೂ ಆಹಾರ ನೆರವು ನೀಡುವ ಅಗತ್ಯವಿದೆ. 

ಸಾರ್ವಜನಿಕ ಪಡಿತರ ವ್ಯವಸ್ಥೆಯ ಹೊರತಾಗಿ, ಜೀವನಾವಶ್ಯಕ ವಸ್ತುಗಳನ್ನು ಮಾರಾಟ ಮಾಡುವವರು ಹಾಗೂ ಖರೀದಿಸುವವರಿಗೆ ರಸ್ತೆಯ ಮೇಲೆ ಕಾವಲು ಕಾಯುತ್ತಿರುವ ಪೊಲೀಸರೂ ಅವಕಾಶ ಮಾಡಿಕೊಡಬೇಕಾಗಿದೆ. ಈ ಹಿಂದೆ ಈರುಳ್ಳಿ ಹಾಗೂ ಬೇಳೆಕಾಳಿನ ಬೆಲೆ ಏರಿಕೆಯಾದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವುಗಳ ಬೆಲೆಯ ಮೇಲೆ ನಿರ್ಬಂಧ ಹೇರಿತ್ತು. ಈಗಲೂ ಅದೇ ರೀತಿ ನಿರ್ಬಂಧ ಹಾಕಬೇಕು. ದೆಹಲಿಯಲ್ಲಿ ‘ಸಫಲ್‌’, ಬೆಂಗಳೂರಿನಲ್ಲಿ ‘ಹಾಪ್‌ಕಾಮ್ಸ್‌’ನಂತಹ ಸಂಸ್ಥೆಗಳ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಜೊತೆಗೆ ಹೆಚ್ಚಿನ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಿದಾಗ ಮಾತ್ರ ಬಡವರ ಖಾತ್ರೆಗೆ ಹಣ ಹಾಕಿದ ಉದ್ದೇಶ ಸಾರ್ಥಕವಾಗಲಿದೆ.

(ಬರಹ: ವಿನಾಯಕ ಭಟ್, ದಾವಣಗೆರೆ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು