ಸೋಮವಾರ, ಜನವರಿ 20, 2020
18 °C

ದೆಹಲಿಯಲ್ಲಿ ಉಚಿತ ವೈಫೈಗೆ ಕೇಜ್ರಿವಾಲ್ ಚಾಲನೆ ಕೊಟ್ಟ ದಿನವೇ ಇಂಟರ್ನೆಟ್ ಸ್ಥಗಿತ!

ಪಿಟಿಐ Updated:

ಅಕ್ಷರ ಗಾತ್ರ : | |

ಉಚಿತ ವೈಫೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌

ನವದೆಹಲಿ: ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಕಾವೇರುತ್ತಿದ್ದಂತೆ ನಗರದಲ್ಲಿ ಇಂಟರ್‌ನೆಟ್‌ ಸೇವೆ ಸ್ಥಗಿತಗೊಂಡಿದ್ದರೆ, ಇದೇ ದಿನ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಉಚಿತ ವೈಫೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. 

ಪೌರತ್ವ ಸಾಬೀತು ಪಡಿಸಿಕೊಳ್ಳಲು ದೇಶದ ಶೇ 70ರಷ್ಟು ಜನರಲ್ಲಿ ಸೂಕ್ತ ದಾಖಲೆಗಳಿಲ್ಲ, ಹಾಗಾಗಿ ಜನರು ಹೆದರಿದ್ದಾರೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. 

'ಉಚಿತ ವೈಫೈ ಯೋಜನೆಗೆ ಚಾಲನೆ ನೀಡುತ್ತಿರುವ ದಿನವೇ ಪೊಲೀಸರು ಇಂಟರ್‌ನೆಟ್‌ ಸ್ಥಗಿತಗೊಳಿಸಿರುವುದು ವಿರೋಧಾಭಾಸವಾಗಿದೆ. ಶೀಘ್ರವೇ ಪರಿಸ್ಥಿತಿ ಸಹಜತೆಗೆ ಮರಳಲಿದ್ದು, ಇಂಟರ್‌ನೆಟ್‌ ಸೇವೆಗಳು ಪುನರಾರಂಭಗೊಳ್ಳುವ ಭರವಸೆ ಇದೆ' ಎಂದಿದ್ದಾರೆ. 

ಇದನ್ನೂ ಓದಿ: ಪೌರತ್ವ ಕಾಯ್ದೆ ಪ್ರತಿಭಟನೆ Live |ಪ್ರತಿಭಟನೆಯಿಂದ ಹಿಂದೆ ಸರಿಯಬೇಡಿ–ಮಮತಾ ಬ್ಯಾನರ್ಜಿ

‘ಪೌರತ್ವ ತಿದ್ದುಪಡಿ ಕಾಯ್ದೆಯ ಅವಶ್ಯಕತೆಯಿಲ್ಲ, ಸರ್ಕಾರವು ಯುವಜನತೆಗೆ ಉದ್ಯೋಗ ನೀಡುವ ಬಗ್ಗೆ ಗಮನ ಹರಿಸಬೇಕು. ಕೇಂದ್ರ ಸರ್ಕಾರಕ್ಕೆ ನಾನು ಕೈಜೋಡಿಸಿ ಕೇಳುತ್ತಿದ್ದೇನೆ, ಈಗ ಈ ಕಾಯ್ದೆ ಜಾರಿಗೊಳಿಸುವುದು ಬೇಡ' ಎಂದು ಕೇಜ್ರಿವಾಲ್‌ ಕೋರಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ದೂರಸಂಪರ್ಕ ಸೇವಾದಾರ ಸಂಸ್ಥೆಗಳಿಗೆ ಪೊಲೀಸರು ಸಂಪರ್ಕ ಕಡಿತಗೊಳಿಸುವ ಸೂಚನೆ ನೀಡಿದರು. ಇದರಿಂದಾಗಿ ದೆಹಲಿ–ಎನ್‌ಸಿಆರ್‌ ವಲಯದಲ್ಲಿ ಇಂಟರ್‌ನೆಟ್‌, ಕರೆ ಮತ್ತು ಸಂದೇಶ ರವಾನೆ ಸ್ಥಗಿತಗೊಂಡಿತು. 

‘ಆಮ್‌ ಆದ್ಮಿ ಪಾರ್ಟಿ 2015ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನೂ ಸರ್ಕಾರ ಈಡೇರಿಸಿದೆ. ವಿಶ್ವದಲ್ಲಿ ಉಚಿತ ವೈಫೈ ಸೇವೆ ಒಳಗೊಂಡಿರುವ ಮೊದಲ ನಗರ ಎಂಬ ಹೆಗ್ಗಳಿಕೆಗೆ ದೆಹಲಿ ಪಾತ್ರವಾಗಲಿದೆ' ಎಂದು ಕೇಜ್ರಿವಾಲ್‌ ಹೇಳಿದರು.

ಬಸ್‌ ನಿಲ್ದಾಣಗಳು, ಮಾರುಕಟ್ಟೆ ಪ್ರದೇಶ ಹಾಗೂ ವಸತಿ ಪ್ರದೇಶಗಳು ಸೇರಿದಂತೆ ಸುಮಾರು 11,000 ಹಾಟ್‌ಸ್ಪಾಟ್‌ಗಳ ಮೂಲಕ ವೈಫೈ ಸೇವೆ ದೊರೆಯಲಿದೆ. ಮುಂದಿನ ಆರು ತಿಂಗಳಲ್ಲಿ ಹಾಟ್‌ಸ್ಪಾಟ್‌ಗಳು ಕಾರ್ಯಾರಂಭ ಮಾಡಲಿವೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು