ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಯು ದೇಶದ್ರೋಹವಲ್ಲ: ಬಾಂಬೆ ಹೈಕೋರ್ಟ್‌

ಶಾಂತಿಯುತ ಮಾರ್ಗದಲ್ಲಿ ಪ್ರತಿರೋಧ ವ್ಯಕ್ತಪಡಿಸಲು ಅವಕಾಶ
Last Updated 15 ಫೆಬ್ರುವರಿ 2020, 20:41 IST
ಅಕ್ಷರ ಗಾತ್ರ

ಮುಂಬೈ: ‘ಒಂದು ಕಾನೂನಿನ ವಿರುದ್ಧವಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರನ್ನು ‘ವಂಚಕರು’ ಅಥವಾ ‘ದೇಶದ್ರೋಹಿಗಳು’ ಎಂದು ಕರೆಯಲಾಗದು’ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಹೇಳಿದೆ.

ಸಿಎಎ ವಿರೋಧಿಸಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕೆಂದು ಕೋರಿ ಇಫ್ತೆಕಾರ್ ಶೇಖ್ ಎನ್ನುವವರು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಶೇಖ್ ಅವರಿಗೆ ಪ್ರತಿಭಟನೆ ನಡೆಸಲು ಪೊಲೀಸರು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿ ನಿರಾಕರಿಸಿದ್ದರು.

‘ಶಾಂತಿಯುತವಾಗಿ ಪ್ರತಿಭಟಿಸುವ ಇಂತಹ ವ್ಯಕ್ತಿಗಳ ಹಕ್ಕನ್ನು ಪರಿಗಣಿಸಬೇಕು. ಕಾನೂನು ವಿರೋಧಿಸುವ ಕಾರಣಕ್ಕಾಗಿ ಅವರನ್ನು ದೇಶದ್ರೋಹಿಗಳು ಎಂದು ಹೇಳಲಾಗದು. ಇದು ಕೇವಲ ಸಿಎಎ ಕಾರಣಕ್ಕಾಗಿ ಸರ್ಕಾರದ ವಿರುದ್ಧ ನಡೆಯುವ ಪ್ರತಿಭಟನೆ’ ಎಂದು ನ್ಯಾಯಮೂರ್ತಿಗಳಾದ ಟಿ.ವಿ. ನಲವಾಡೆ ಹಾಗೂ ಎಂ.ಜಿ. ಸೇವಲಿಕರ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಚೆನ್ನೈನಲ್ಲಿ ಪ್ರತಿಭಟನಕಾರರ ಮೇಲೆ ಲಾಠಿಚಾರ್ಜ್ (ಚೆನ್ನೈ ವರದಿ): ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಕ್ಕೆ ಡಿಎಂಕೆ ನೇತೃತ್ವದಲ್ಲಿ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ಲಾಠಿಚಾರ್ಜ್ ನಡೆಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.

ಈ ಸಂಬಂಧ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ‘ಪ್ರಚೋದನಕಾರಿ’ ಸಂದೇಶಗಳನ್ನು ಹಂಚಿಕೊಳ್ಳಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಇದರ ನಡುವೆಯೇ ತಮಿಳುನಾಡಿನ ವಿವಿಧೆಡೆ ಮುಸ್ಲಿಂ ಸಮುದಾಯದವರಿಂದ ಪ್ರತಿಭಟನೆ ಮುಂದುವರಿದಿತ್ತು.

‘ಶುಕ್ರವಾರದ ಪ್ರತಿಭಟನೆ ಶಾಂತಿಯುತವಾಗಿತ್ತು. ಆದರೆ ಅವರ ಮೇಲೆ ಪೊಲೀಸರು ಏಕೆ ಅನಗತ್ಯವಾಗಿ ಲಾಠಿಚಾರ್ಜ್ ಮಾಡಿದರೆಂದು ತಿಳಿಯಬೇಕು. ಪೊಲೀಸರ ಈ ಕ್ರಮದಿಂದ ರಾಜ್ಯದೆಲ್ಲೆಡ ಜನರು ಬೀದಿಗಿಳಿದು ಪ್ರತಿಭಟಿಸುವಂತಾಯಿತು’ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.‌

‌ಮುಸ್ಲಿಮರ ರಕ್ಷಣೆ: ‘ಅಮ್ಮ ಸರ್ಕಾರ’ ಸದಾ ಮುಸ್ಲಿಮರ ಅಭಿವೃದ್ಧಿಗೆ ಶ್ರಮಿಸುತ್ತಿತ್ತು ಎಂದು ಕಂದಾಯ ಸಚಿವ ಆರ್.ಬಿ. ಉದಯಕುಮಾರ್ ಹೇಳಿದ್ದಾರೆ.

‘ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರು ಮುಸ್ಲಿಮರನ್ನು ತಮ್ಮ ಮಕ್ಕಳು ಹಾಗೂ ಕುಟುಂಬ ಸದಸ್ಯರ ರೀತಿ ರಕ್ಷಿಸುತ್ತಿದ್ದಾರೆ. ಆದರೆ ಇದನ್ನು ಸಹಿಸಲಾರದವರು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಇದರಿಂದ ಅವರಿಗೆ ಲಾಭವಿಲ್ಲ. ಜನರು ಅವರನ್ನು ನಂಬುವುದಿಲ್ಲ’ ಎಂದಿದ್ದಾರೆ.

ದೆಹಲಿಯಲ್ಲಿ ಪ್ರತಿಭಟನೆ
ನವದೆಹಲಿ (ಪಿಟಿಐ): ಚೆನ್ನೈನಲ್ಲಿ ಸಿಎಎ ವಿರೋಧಿ ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದನ್ನು ಖಂಡಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಜನರ ಗುಂಪೊಂದು ಶನಿವಾರ ಇಲ್ಲಿ ಪ್ರತಿಭಟನೆ ನಡೆಸಿತು.

ಇಲ್ಲಿನ ಬಿಹಾರ ಭವನದಿಂದ ತಮಿಳುನಾಡು ಹೌಸ್‌ವರೆಗೆ ರ್‍ಯಾಲಿ ನಡೆಸಲು ಯತ್ನಿಸಿದ ಗುಂಪು ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರೋಧಿ ಘೋಷಣೆಗಳನ್ನು ತಮಿಳಿನಲ್ಲಿ ಕೂಗಿತು. ರ್‍ಯಾಲಿ ಮಧ್ಯೆ ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

‘7 ಮಹಿಳೆಯರು ಸೇರಿದಂತೆ 27 ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು’ ಎಂದು ಹೆಚ್ಚುವರಿ ಉಪಪೊಲೀಸ್ ಆಯುಕ್ತ ದೀಪಕ್ ಯಾದವ್ ತಿಳಿಸಿದ್ದಾರೆ.

ಅಮಿತ್‌ ಶಾ ಭೇಟಿಗಾಗಿ ಮೆರವಣಿಗೆ ಇಂದು
ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ವಿರೋಧಿಸಿ ಇಲ್ಲಿನ ಶಹೀನ್‌ಬಾಗ್‌ನಲ್ಲಿ ಹೋರಾಟ ನಡೆಸುತ್ತಿರುವ ಪ್ರತಿಭಟನಕಾರರು ಗೃಹಸಚಿವ ಅಮಿತ್‌ ಶಾ ಅವರ ನಿವಾಸದವರೆಗೆ ಭಾನುವಾರ ಮೆರವಣಿಗೆ ನಡೆಸಲು
ತೀರ್ಮಾನಿಸಿದ್ದಾರೆ.

‘ಸಿಎಎ ಕುರಿತು ಯಾರಿಗಾದರೂ ಆಕ್ಷೇಪಗಳಿದ್ದರೆ ಮೂರು ದಿನಗಳೊಳಗೆ ಬಂದು ನನ್ನನ್ನು ಭೇಟಿಮಾಡಿ ಚರ್ಚಿಸಬಹುದು, ಯಾವ ವೇಳೆಯಲ್ಲಾದರೂ ಬರಬಹುದು’ ಎಂದು ಶಾ ಅವರು ಟಿ.ವಿ ವಾಹಿನಿಯೊಂದರ ಮೂಲಕ ಹೇಳಿಕೆ ನೀಡಿದ್ದರು. ನಾವು ಗೃಹಸಚಿವರನ್ನು ಭೇಟಿಮಾಡಲು ತೀರ್ಮಾನಿಸಿದ್ದೇವೆ. ಇಬ್ಬರು– ಮೂವರು ಮಾತ್ರವಲ್ಲ, ಪ್ರತಿಭಟನೆಯಲ್ಲಿ ತೊಡಗಿಕೊಂಡಿರುವ ಎಲ್ಲರೂ ಅವರನ್ನು ಭೇಟಿಮಾಡಲು ಹೋಗುತ್ತೇವೆ. ಸಿಎಎಯನ್ನು ಹಿಂತೆಗೆದುಕೊಳ್ಳುವುದಾಗಿ ಅವರು ಕೋರ್ಟ್‌ಗೆ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು ಎಂಬುದು ನಮ್ಮ ಬೇಡಿಕೆ. ಅದು ಈಡೇರುವವರೆಗೆ ಹೋರಾಟ ಮುಂದುವರಿಯುವುದು’ ಎಂದು ಪ್ರತಿಭಟನಾನಿರತ ಮಹಿಳೆಯೊಬ್ಬರು ಶನಿವಾರ ಹೇಳಿದ್ದಾರೆ.

‘ನಾವು ಗೃಹಸಚಿವರನ್ನು ಭೇಟಿಮಾಡಲು ಸಿದ್ಧರಿದ್ದೇವೆ. ಆದರೆ ಎಷ್ಟು ಜನರನ್ನು ಭೇಟಿಮಾಡಲು ಅವರು ಇಚ್ಛಿಸುತ್ತಾರೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು’ ಎಂದು ಆಯೋಜಕರಲ್ಲಿ ಒಬ್ಬರಾದ ಸೈಯದ್‌ ಅಹಮದ್‌ ತಸೀರ್‌ ಅವರು ಹೇಳಿದ್ದಾರೆ.

ಅನುಮತಿ ಪಡೆದಿಲ್ಲ: ನಗರದಲ್ಲಿ ಮೆರವಣಿಗೆ ನಡೆಸಲು ಪ್ರತಿಭಟನಕಾರರು ಪೊಲೀಸರ ಅನುಮತಿ ಪಡೆದಿಲ್ಲ. ಆದ್ದರಿಂದ ಒಂದುವೇಳೆ ಭಾನುವಾರ ಮೆರವಣಿಗೆ ನಡೆಸಿದರೂ, ಪೊಲೀಸರು ಅವರನ್ನು ಮಧ್ಯದಲ್ಲೇ ತಡೆಯುವ ಸಾಧ್ಯತೆ ಇದೆ.

ಶಹೀನ್‌ ಬಾಗ್‌ ಪ್ರತಿಭಟನೆಯು ಶನಿವಾರ ಎರಡು ತಿಂಗಳು ಪೂರೈಸಿದೆ. ಪ್ರತಿಭಟನಾಕಾರರನ್ನು ಭೇಟಿಮಾಡಿ ಚರ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈವರೆಗೆ ಯಾವುದೇ ಆಸಕ್ತಿಯನ್ನು ವ್ಯಕ್ತಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT