ಶನಿವಾರ, ಫೆಬ್ರವರಿ 27, 2021
31 °C
ಸಣ್ಣ ಪಕ್ಷಗಳ ಮೇಲೂ ಪರಿಣಾಮ ಬೀರುತ್ತಿರುವ ಕಾಂಗ್ರೆಸ್‌ನ ಹಿನ್ನಡೆ

ಬಿಜೆಪಿ ಯುವ ಸಂಸದರಿಂದ ಆಕ್ರಮಣಕಾರಿ ಧೋರಣೆ ಪ್ರದರ್ಶನ: ಮಂಕಾಗಿವೆ ವಿಪಕ್ಷಗಳು

ಸಾಗರ್‌ ಕುಲಕರ್ಣಿ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಂಗ್ರೆಸ್‌ ಪಕ್ಷಕ್ಕೆ ಎದುರಾಗಿರುವ ನಾಯಕತ್ವದ ಸಮಸ್ಯೆ ಆ ಪಕ್ಷಕ್ಕಷ್ಟೇ ಸೀಮಿತವಾಗಿಲ್ಲ. ಲೋಕಸಭೆಯಲ್ಲಿ ವಿರೋಧಪಕ್ಷಗಳ ಒಗ್ಗಟ್ಟಿನ ಮೇಲೂ ಅದು ಪರಿಣಾಮ ಬೀರುತ್ತಿದೆ. ಎನ್‌ಡಿಎ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂಬ ವಿರೋಧಪಕ್ಷಗಳ ಉದ್ದೇಶ ಈಡೇರಿಕೆಗೆ ಕಾಂಗ್ರೆಸ್‌ ಒಳಗಿನ ಬಿಕ್ಕಟ್ಟು ಅಡ್ಡಿಯಾಗುತ್ತಿದೆ.

ಸಂಸತ್ತಿಗೆ, ವಿಶೇಷವಾಗಿ ಲೋಕಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಸಂಸದರು ಅಧಿವೇಶನದ ಸಂದರ್ಭದಲ್ಲಿ ತೀವ್ರವಾದ ಆಕ್ರಮಣಶೀಲತೆ ಪ್ರದರ್ಶಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವಿರೋಧಪಕ್ಷಗಳ ನೇತೃತ್ವವನ್ನು ಕಾಂಗ್ರೆಸ್‌ ವಹಿಸಬೇಕು ಎಂದು ಸಣ್ಣ ಪಕ್ಷಗಳು ನಿರೀಕ್ಷಿಸುತ್ತಿವೆ.

‘ವಿರೋಧ ಪಕ್ಷದ ನಾಯಕರು ಈವರೆಗೆ ಒಂದು ಸಭೆಯನ್ನು ಮಾತ್ರ ನಡೆಸಿದ್ದಾರೆ, ಅದೂ ಸಣ್ಣ ಪಕ್ಷಗಳವರ ಒತ್ತಾಯದ ಮೇರೆಗೆ. ಎನ್‌ಡಿಎ ವಿರುದ್ಧ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ದೊಡ್ಡ ಪಕ್ಷಗಳು ಯಾವುದೇ ಹೆಜ್ಜೆಯನ್ನು ಈವರೆಗೆ ಇಟ್ಟಿಲ್ಲ. ಸೋನಿಯಾ ಗಾಂಧಿ ಅವರು ಯುಪಿಎ ನಾಯಕಿಯಾಗಿದ್ದರೂ, ಲೋಕಸಭೆಯಲ್ಲಿ ವಿರೋಧಪಕ್ಷಗಳ ವಿಚಾರ ಬಂದಾಗ ನಾಯಕತ್ವದ ಬಿಕ್ಕಟ್ಟು ಕಾಣಿಸುತ್ತದೆ’ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

‘ಅಧಿವೇಶನದ ಸಂದರ್ಭದಲ್ಲಿ ಸಭೆ ನಡೆಸಿ ಚರ್ಚಿಸಲು ನಾವು ಒಪ್ಪಿದ್ದೆವು. ಆದರೆ ಮೊದಲ ಸಭೆಯ ನಂತರ ಆ ವಿಚಾರವಾಗಿ ಯಾರೂ ಮಾತನಾಡುತ್ತಿಲ್ಲ’ ಎಂದು ಅವರು ಹೇಳುತ್ತಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ 52 ಸ್ಥಾನಗಳನ್ನು ಪಡೆದು ಅತಿ ದೊಡ್ಡ ವಿರೋಧಪಕ್ಷ ಎನಿಸಿಕೊಂಡಿರುವುದು ನಿಜ. ಆದರೆ ಡಿಎಂಕೆ  (23), ತೃಣಮೂಲ ಕಾಂಗ್ರೆಸ್‌ (22), ವೈಎಸ್‌ಆರ್‌ ಕಾಂಗ್ರೆಸ್‌ (22), ಬಿಜೆಡಿ (12), ಬಿಎಸ್‌ಪಿ (10) ಹಾಗೂ ಟಿಆರ್‌ಎಸ್‌ (9) ಪಕ್ಷಗಳೂ ಗಮನಾರ್ಹ ಪ್ರಮಾಣದಲ್ಲಿ ಸ್ಥಾನಗಳನ್ನು ಹೊಂದಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಳ್ಳುವುದಾಗಿ ವೈಎಸ್‌ಆರ್‌ ಕಾಂಗ್ರೆಸ್‌, ಬಿಜೆಡಿ ಹಾಗೂ ಟಿಆರ್‌ಎಸ್‌ ಘೋಷಿಸಿವೆ. ಆದರೆ ತ್ರಿವಳಿ ತಲಾಖ್‌ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಚಾರಗಳ ಚರ್ಚೆ ನಡೆದ ಸಂದರ್ಭದಲ್ಲಿ ಈ ಪಕ್ಷಗಳು ಎನ್‌ಡಿಎ ಕಡೆಗೆ ವಾಲಿರುವುದು ಸ್ಪಷ್ಟವಾಗಿ ಗೋಚರಿಸಿದೆ.

ಸಂಸತ್ತಿನಲ್ಲಿ ನಾಲ್ವರು ಪಕ್ಷೇತರ ಸಂಸದರಿದ್ದಾರೆ. ಅವರಲ್ಲಿ ಮಂಡ್ಯ ಕ್ಷೇತ್ರದಿಂದ ಗೆದ್ದಿರುವ ಸುಮಲತಾ ಮತ್ತು ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಎನ್‌ಸಿಪಿ ಬೆಂಬಲದೊಂದಿಗೆ ಗೆದ್ದಿರುವ ನವನೀತ್‌ ರಾಣಾ ಅವರು ಬಿಜೆಪಿ ಸದಸ್ಯರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಂಜಾಬ್‌ ಮೂಲದ, ಮುಂಬೈಯಲ್ಲಿ ಹುಟ್ಟಿ ತೆಲುಗು ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿರುವ ನವನೀತ್‌ ರಾಣಾ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಮಾಡಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ಪಕ್ಷೇತರ ಶಾಸಕರೂ ಆಗಿರುವ ಅವರ ಪತಿ ರವಿ ರಾಣಾ ಸಹ ಜೊತೆಗಿದ್ದರು.

‘ನಾವು ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಳ್ಳುವ ನೀತಿ ಅನುಸರಿಸುತ್ತೇವೆ’ ಎಂದು ರವಿ ರಾಣಾ ಈಚೆಗೆ ಹೇಳಿದ್ದಾರೆ. ಆದರೆ, ಬರುವ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಆ ಸಂದರ್ಭದಲ್ಲಿ ಯಾವ ಪಕ್ಷದ ಜೊತೆ ಹೋಗಬೇಕು ಎಂಬುದನ್ನು ಈ ದಂಪತಿ ನಿರ್ಧರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಸ್ಸಾಂನ ಕೊಕ್ರಝಾರ್‌ ಕ್ಷೇತ್ರವನ್ನು ಪ್ರತಿನಿಧಿಸುವ ಪಕ್ಷೇತರ ಸಂಸದ ಶರಣ್ಯ ಅವರು ವಿರೋಧ ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದರೆ, ದಾದ್ರಾ ಮತ್ತು ನಗರ್‌ ಹವೇಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ದೇಲ್ಕರ್‌ ಅವರು (ಹಿಂದೆ ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿದ್ದರು) ಲೋಕಸಭೆಯಲ್ಲಿ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು