ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದವಡೆ ಮುರಿದರೂ ಪಟ್ಟಿ ಕಟ್ಟಿಕೊಂಡು ಆಡಿದ್ದ ಅನಿಲ್ ಕುಂಬ್ಳೆಯಿಂದ ಮೋದಿಗೆ ಧನ್ಯವಾದ

ಪರೀಕ್ಷಾ ಪೆ ಚರ್ಚಾ
Last Updated 22 ಜನವರಿ 2020, 10:15 IST
ಅಕ್ಷರ ಗಾತ್ರ

ನವದೆಹಲಿ: ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ಟೆಸ್ಟ್‌ ಕ್ರಿಕೆಟ್‌ ಪಂದ್ಯವೊಂದರ ವೇಳೆ ಗಾಯಾಳಾಗಿದ್ದ ಅನಿಲ್‌ ಕುಂಬ್ಳೆ ತಲೆಗೆ ಪಟ್ಟಿಕಟ್ಟಿಕೊಂಡು ಆಡಿದ್ದ ಸಂದರ್ಭವನ್ನು ಉದಾಹರಣೆಯಾಗಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸುರುವ ಲೆಗ್‌ ಸ್ಪಿನ್ನರ್‌ ಕುಂಬ್ಳೆ ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಸಂವಾದ ಕಾರ್ಯಕ್ರಮದ ತುಣುಕೊಂದನ್ನು ಹಂಚಿಕೊಂಡಿರುವ ಅವರು, ‘ಪರಿಕ್ಷಾ ಪೆ ಚರ್ಚಾ ಸಂವಾದದಲ್ಲಿ ನಮ್ಮನ್ನು ಉಲ್ಲೇಖಿಸಿ ಮಾತನಾಡಿರುವುದು ಗೌರವದ ಸಂಗತಿ. ಗೌರವಾನ್ವಿತ ಪ್ರಧಾನಿ ಮೋದಿಗೆ ಧನ್ಯವಾದಗಳು. ಪರೀಕ್ಷೆ ಬರೆಯಲಿರುವ ಎಲ್ಲರಿಗೂ ಶುಭವಾಗಲಿ’ ಎಂದು ಬರೆದುಕೊಂಡಿದ್ದಾರೆ.

10ನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆ ಸಮೀಪಿಸುತ್ತಿರುವ ಸಲುವಾಗಿ ಪ್ರಧಾನಿ ಮೋದಿ ನಡೆಸಿದ ಸಂವಾದದಲ್ಲಿ ರಾಜಸ್ಥಾನದ ವಿದ್ಯಾರ್ಥಿನಿ ಯಶಶ್ರೀ ಮೊದಲ ಪ್ರಶ್ನೆ ಕೇಳಿದ್ದರು. ಅವರು, ‘ಪರೀಕ್ಷೆಗಳು ನಮ್ಮನ್ನು ನಿರುತ್ಸಾಹಗೊಳಿಸುತ್ತವೆ. ಅದಕ್ಕೇನು ಮಾಡಬೇಕು’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ,‘2001ರಲ್ಲಿ ನಡೆದ ಭಾರತ–ಆಸ್ಟ್ರೇಲಿಯಾ ಪಂದ್ಯವನ್ನು ನೆನಪಿಸಿಕೊಳ್ಳಿ.ನಮ್ಮ ಕ್ರಿಕೆಟ್‌ ತಂಡವೂ ಹಿನ್ನಡೆ ಅನುಭವಿಸಿತ್ತು. ಆಗ ಪರಿಸ್ಥಿತಿಚೆನ್ನಾಗಿರಲಿಲ್ಲ. ಆದರೆ ಅಂತಹ ಸಂದರ್ಭದಲ್ಲೂ ದಿಟ್ಟ ಆಟವಾಡಿದ್ದ ರಾಹುಲ್‌ ಮತ್ತು ಲಕ್ಷ್ಮಣ್‌ ಅವರನ್ನು ಮರೆಯಲು ಸಾಧ್ಯವೇ? ಅವರು ಪಂದ್ಯದ ಚಿತ್ರಣ ಬದಲಿಸಿದ್ದರು. ಅದೇ ರೀತಿ, ಗಾಯಗೊಂಡಿದ್ದರೂ ತಲೆಗೆಪಟ್ಟಿ (ಬ್ಯಾಂಡೇಜ್‌) ಕಟ್ಟಿಕೊಂಡು ಆಡಿದ್ದ ಅನಿಲ್‌ ಕುಂಬ್ಳೆಯವರನ್ನು ಯಾರು ಮರೆಯುತ್ತಾರೆ? ಇದು ಉತ್ಸಾಹ ಮತ್ತು ಧನಾತ್ಮಕ ಚಿಂತನೆಯ ಶಕ್ತಿ’ ಎಂದು ಪ್ರೋತ್ಸಾಹಿಸಿದ್ದರು.

ತಲೆಗೆ ಪಟ್ಟಿಕಟ್ಟಿಕೊಂಡು ಕುಂಬ್ಳೆ ಬೌಲಿಂಗ್
2002ರಲ್ಲಿ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಂಡಿದ್ದ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಮೊದಲ ಮೂರು ಪಂದ್ಯಗಳಲ್ಲಿ ತಲಾ ಒಂದೊಂದು ಗೆಲುವು ಸಾಧಿಸಿದ್ದ ಉಭಯ ತಂಡಗಳು ಒಂದು ಡ್ರಾ ಕಂಡಿದ್ದವು. ಹೀಗಾಗಿ ಸರಣಿ ಗೆಲ್ಲಲು ನಾಲ್ಕನೇ ಪಂದ್ಯದ ಮೇಲೆ ಕಣ್ಣಿಟ್ಟಿದ್ದ ಎರಡೂ ತಂಡಗಳು, ಕಠಿಣ ಪರಿಶ್ರಮದೊಂದಿಗೆ ಆಡಿದ್ದವು.

ಆಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ವಿಂಡೀಸ್‌ ಭಾರತಕ್ಕೆ ಬ್ಯಾಟಿಂಗ್‌ ಬಿಟ್ಟುಕೊಟ್ಟಿತ್ತು. ಗಂಗೂಲಿ ಪಡೆ 196 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 513 ರನ್ ಗಳಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು.ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ವಿಂಡೀಸ್‌ ಬಳಗ ಒರೋಬ್ಬರಿ 248 ಓವರ್‌ ಬ್ಯಾಟ್‌ ಮಾಡಿತ್ತ. 9 ವಿಕೆಟ್‌ಗೆ 629 ರನ್ ಗಳಿಸಿದ್ದ ವೇಳೆ ಪಂದ್ಯ ಡ್ರಾ ಘೋಷಣೆ ಮಾಡಲಾಗಿತ್ತು.

ವಿಶೇಷವೆಂದರೆ,ಬ್ಯಾಟಿಂಗ್ ಮಾಡುತ್ತಿದ್ದಾಗ ಚೆಂಡು ಬಡಿದು ದವಡೆ ಮುರಿದುಕೊಂಡಿದ್ದ ಅನಿಲ್‌ ಕುಂಬ್ಳೆ ತಲೆಗೆ ಪಟ್ಟಿ ಕಟ್ಟಿಕೊಂಡೇ 14 ಓವರ್‌ ಎಸೆದಿದ್ದರು. ಇದರಲ್ಲಿ 5 ಮೇಡನ್‌ ಸಹಿತ 29 ರನ್ ಬಿಟ್ಟುಕೊಟ್ಟಿದ್ದ ಅವರು ಬ್ಯಾಟಿಂಗ್ ದಿಗ್ಗಜ ಬ್ರಯಾನ್‌ ಲಾರಾ ಅವರ ವಿಕೆಟ್‌ ಪಡೆದು ಮಿಂಚಿದ್ದರು. ಕುಂಬ್ಳೆ ಆಟಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

‌‌‌‌2001ರಲ್ಲಿ ನಡೆದ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸೋಲಿನ ದವಡೆಗೆ ಸಿಲುಕಿದ್ದ ಭಾರತ ತಂಡವನ್ನು ದ್ರಾವಿಡ್‌ ಮತ್ತು ಲಕ್ಷ್ಮಣ್‌ ಪಾರುಮಾಡಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಐದನೇ ವಿಕೆಟ್‌ಗೆ 376 ರನ್ ಜೊತೆಯಾಟವಾಡಿದ್ದರು.

ಮೊದಲ ಇನಿಂಗ್ಸ್‌ನಲ್ಲಿ274 ರನ್‌ ಹಿನ್ನಡೆ ಅನುಭವಿಸಿದ್ದ ಭಾರತ,ದ್ರಾವಿಡ್‌ ಮತ್ತು ಲಕ್ಷ್ಮಣ್‌ ಸಾಹಸಮಯ ಬ್ಯಾಟಿಂಗ್‌ನಿಂದಾಗಿ ಎರಡನೇ ಇನಿಂಗ್ಸ್‌ನಲ್ಲಿ ಪುಟಿದೆದ್ದು 171 ರನ್‌ ಅಂತರದ ಗೆಲುವು ಸಾಧಿಸಲು ಸಾಧ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT