ಮಂಗಳವಾರ, ಮೇ 18, 2021
24 °C
17ನೇ ಲೋಕಸಭೆ ಅಧಿವೇಶನದ ಮೊದಲ ದಿನ * ಆಸಕ್ತಿಕರ ವಿದ್ಯಮಾನಗಳಿಗೆ ಸಾಕ್ಷಿಯಾದ ಸದನ * ಪ್ರತಿಜ್ಞಾ ವಿಧಿ ಸ್ವೀಕಾರದ ವೇಳೆ ಮೊಳಗಿದ ಘೋಷಣೆ

ನೂತನ ಸಂಸದರ ಪ್ರಮಾಣ; ಸಂಸತ್ತಿನಲ್ಲಿ ಹಬ್ಬದ ಸಂಭ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 17ನೇ ಲೋಕಸಭೆ ಕಲಾಪಕ್ಕೆ ಸೋಮವಾರ ಚಾಲನೆ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಉಳಿದ ಸದಸ್ಯರು ಮಂಗಳವಾರ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳಿಗೂ ಸದನ ಸಾಕ್ಷಿಯಾಯಿತು. 

ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ತಮ್ಮ ಆಧ್ಯಾತ್ಮಿಕ ಗುರು ಸ್ವಾಮಿ ಪೂರ್ಣ ಚೇತನಾನಂದ ಅವಧೀಶಾನಂದ ಗಿರಿ ಅವರ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲು ಮುಂದಾದಾಗ ತೀವ್ರ ಆಕ್ಷೇಪ ವ್ಯಕ್ತವಾಯಿತು. 

‘ಇದು ನನ್ನ ಪೂರ್ಣ ಹೆಸರು’ ಎಂದು ಅವರು ಸಮಜಾಯಿಷಿ ನೀಡಿದರೂ, ‘ಇಂತಹ ಯತ್ನಗಳಿಗೆ ಅವಕಾಶವಿಲ್ಲ’ ಎಂದು ವಿರೋಧ ಪಕ್ಷಗಳ ಸದಸ್ಯರು ತಿರುಗೇಟು ನೀಡಿದರು.

ಮಧ್ಯಪ್ರವೇಶಿಸಿದ ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಅವರು, ಪ್ರಮಾಣಪತ್ರದಲ್ಲಿರುವ ಹೆಸರನ್ನು ಮಾತ್ರ ಹೇಳುವಂತೆ ಸಾಧ್ವಿಗೆ ಸೂಚಿಸಿದರು. ಸಂಸ್ಕೃತದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಅವರು ಕೊನೆಯಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗಿದರು. ಈ ಬಳಿಕ ಬಿಜೆಪಿ ಸದಸ್ಯರು ವಿರೋಧ ಪಕ್ಷದವರನ್ನು ಕೀಟಲೆ ಮಾಡಲು ‘ಭಾರತ್ ಮಾತಾ ಕಿ ಜೈ’ ಘೋಷಣೆಯನ್ನು ಹಲವು ಬಾರಿ ಕೂಗಿದರು.

ನೂತನ ಸಂಸದರ ಹುರುಪು: ಲೋಕಸಭೆಯ ಮೊದಲ ದಿನದ ಅಧಿವೇಶನದಲ್ಲಿ ನೂತನವಾಗಿ ಆಯ್ಕೆಯಾದ ಸಂಸದರಿಂದಾಗಿ ಸಂಸತ್ ಭವನದಲ್ಲಿ ಹಬ್ಬದ ಸಂಭ್ರಮ ಇತ್ತು. ಹೊಸ ಸಂಸದರು ಬಣ್ಣಬಣ್ಣದ ದಿರಿಸು, ಸಾಂಪ್ರದಾಯಿಕ ಶಾಲು ಹಾಗೂ ಪೇಟ, ರುಮಾಲುಗಳನ್ನು ಧರಿಸಿ ಗಮನ ಸೆಳೆದರು. 

ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಅವರು ತಮ್ಮ ಎಂದಿನ ಶೈಲಿಯ ಕುರ್ತಾ, ಪೈಜಾಮ, ಅರ್ಧತೋಳಿನ ಜಾಕೆಟ್ ತೊಟ್ಟಿದ್ದರು. ಸಚಿವರಾದ ಪ್ರಹ್ಲಾದ ಜೋಶಿ, ಗಿರಿರಾಜ್ ಸಿಂಗ್ ಹಾಗೂ ಜಿ.ಕೆ. ರೆಡ್ಡಿ ಅವರು ಕೇಸರಿ ಬಣ್ಣದ ಉಡುಪು ಧರಿಸಿದ್ದರು. 

ಬಿಹಾರದ ಸಂಸದ ಗೋಪಾಲ್‌ ಜೀ ಠಾಕೂರ್ ಮತ್ತು ಆಶೋಕ್ ಕುಮಾರ್ ಯಾದವ್ ಅವರು ಸಾಂಪ್ರದಾಯಿಕ ಮೈಥಿಲ್ ದಿರಿಸು ಹಾಗೂ ಟರ್ಬನ್‌ನಿಂದ ಗಮನ ಸೆಳೆದರು. ಅಸ್ಸಾಂನಿಂದ ಆಯ್ಕೆಯಾದ ಬಹುತೇಕ ಸಂಸದರು ರಾಜ್ಯದ ಸಾಂಪ್ರದಾಯ ಬಿಂಬಿಸುವ ಗಮ್‌ಛಾ ಹೊದ್ದಿದ್ದರು. 

ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಸಂಸದರು ಪಕ್ಷದ ಅಧ್ಯಕ್ಷ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರನ್ನು ಚುಕ್ಕೆಗಳಲ್ಲಿ ಚಿತ್ರಿಸಿರುವ ಅಂಗವಸ್ತ್ರಗಳೊಂದಿಗೆ ಸದನಕ್ಕೆ ಹಾಜರಾಗಿದ್ದರು. 

ಪರಿಚಿತ ಮುಖಗಳು: ರಾಜಕೀಯವಾಗಿ ಪರಿಚಿತವಿರುವ ಹಾಗೂ ಕಳೆದ ಲೋಕಸಭೆಯ ಭಾಗವಾಗಿರದ ಕೆಲವು ಸಂಸದರು ಸೋಮವಾರ ಆರಂಭವಾದ ಅಧಿವೇಶನದಲ್ಲಿ ಸಂಸತ್‌ ಭವನದಲ್ಲಿ ಕಂಡುಬಂದರು.  ಕಳೆದ ಬಾರಿ ರಾಜ್ಯಸಭೆ ಸದಸ್ಯರಾಗಿದ್ದು ಲೋಕಸಭೆಗೆ ಸ್ಪರ್ಧಿಸಿ, ಆಯ್ಕೆಯಾಗಿದ್ದ ಅಮಿತ್ ಶಾ, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ, ಕನಿಮೊಳಿ ಅವರು ಲೋಕಸಭೆ ಕಲಾಪದ ಮೊದಲ ದಿನ ಹಾಜರಿದ್ದರು.

ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರು ಕನಿಮೊಳಿ ಅವರನ್ನು ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ತಮ್ಮ ಪಕ್ಷದ ಇಬ್ಬರು ಸಂಸದರನ್ನು ಸೋನಿಯಾ ಗಾಂಧಿ, ಫಾರೂಕ್ ಅಬ್ದುಲ್ಲಾ ಹಾಗೂ ಕೆಲವು ಸಚಿವರಿಗೆ ಪರಿಚಯ ಮಾಡಿಕೊಟ್ಟರು.

ಪ್ರಧಾನಿ ಮೋದಿ ಅವರು ಸೋನಿಯಾ, ಮುಲಾಯಂ, ಟಿಎಂಸಿ ನಾಯಕರಾದ ಸುದೀಪ್ ಬಂಡೋಪಾಧ್ಯಾಯ ಹಾಗೂ ಕಲ್ಯಾಣ್ ಬ್ಯಾನರ್ಜಿ ಅವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. 

ಸದನದಲ್ಲಿ ಕಂಡಿದ್ದು.. ಕೇಳಿದ್ದು..

* ಪ್ರಮಾಣ ವಚನ ಸ್ವೀಕರಿಸಲು ಮೋದಿ ಅವರ ಹೆಸರನ್ನು ಕೂಗುತ್ತಿದ್ದಂತೆಯೇ ಎನ್‌ಡಿಎ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ‘ಮೋದಿ ಮೋದಿ’, ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳು ಮೊಳಗಿದವು

* ರಾಹುಲ್ ಗಾಂಧಿ ವಿರುದ್ಧ ಗೆದ್ದು, ಲೋಕಸಭೆ ಪ್ರವೇಶಿಸಿದ ಸಚಿವೆ ಸ್ಮೃತಿ ಇರಾನಿ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಬಿಜೆಪಿ ಸದಸ್ಯರು ದೀರ್ಘ ಅವಧಿಯ ಕರತಾಡನ ಮಾಡಿದರು. ಮೋದಿ, ಅಮಿತ್ ಶಾ, ಸಚಿವರು ಹಾಗೂ ಬಿಜೆಪಿ ಸದಸ್ಯರು ತುಂಬಾ ಹೊತ್ತು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು. 

* ಪ್ರಮಾಣ ವಚನ ಸ್ವೀಕರಿಸಿದ ರಾಹುಲ್‌ ಗಾಂಧಿ ಅವರು ತಮ್ಮ ಸ್ಥಾನಕ್ಕೆ ಹೋಗುವ ಮುನ್ನ ಹಾಜರಿ ಪುಸ್ತಕದಲ್ಲಿ ಸಹಿ ಹಾಕಲು ಮರೆತರು. ರಾಜನಾಥ್ ಸಿಂಗ್ ಹಾಗೂ ಅಧಿಕಾರಿಗಳು ನೆನಪಿಸಿದ ಬಳಿಕ ಅವರು ವಾಪಸ್‌ ಬಂದು ಸಹಿ ಹಾಕಿದರು. 

* ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿರುವ ಬಿಜೆಪಿ ಸದಸ್ಯರಾದ ಬಾಬುಲ್ ಸುಪ್ರಿಯೊ ಹಾಗೂ ದೇಬಶಿಶ್ ಚೌಧರಿ ಅವರು ಪ್ರಮಾಣವಚನ ಸ್ವೀಕರಿಸಲು ಬರುತ್ತಿದ್ದಂತೆ ಬಿಜೆಪಿ ಸದಸ್ಯರು ‘ಜೈ ಶ್ರೀರಾಮ್’ ಎಂಬ ಘೋಷಣೆ ಕೂಗಿದರು (ಈ ಘೋಷಣೆ ಕೂಗಿದ್ದಕ್ಕಾಗಿ ಪಶ್ಚಿಮ ಬಂಗಾಳದಲ್ಲಿ 31 ಜನರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಧಿಸಿದ್ದರು).

* ರಾಜ್ಯದ ಹೆಚ್ಚಿನ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸುರೇಶ್ ಅಂಗಡಿ ಇಂಗ್ಲಿಷ್‌ನಲ್ಲಿ ಮತ್ತು ಅನಂತಕುಮಾರ್ ಹೆಗಡೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

* ಸಚಿವರಾದ ಹರ್ಷವರ್ಧನ್, ಶ್ರೀಪಾದ ನಾಯಕ್, ಅಶ್ವಿನಿ ಚೌಬೆ ಮತ್ತು ಪ್ರತಾಪ್ ಚಂದ್ರ ಸಾರಂಗಿ ಅವರು ಸಂಸ್ಕೃತದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು

* ಬಿಹಾರದ ಬಿಜೆಪಿ ಸದಸ್ಯ ಜನಾರ್ದನ್ ಸಿಂಗ್ ಸಿಗ್ರಿವಾಲ್ ಅವರು ಭೋಜ್‌ಪುರಿ ಭಾಷೆಯಲ್ಲಿ ವಚನ ತೆಗೆದುಕೊಳ್ಳಲು ಮುಂದಾದರು. ಆದರೆ ಸಂವಿಧಾನದ ಎಂಟನೇ ಪರಿಚ್ಚೇದಲ್ಲಿ ಭೋಜ್‌ಪುರಿ ಭಾಷೆ ಇಲ್ಲ ಎಂದು ಅವರ ಗಮನಕ್ಕೆ ತರಲಾಯಿತು. 

* ಪ್ರಧಾನಿ ಸೇರಿದಂತೆ ಬಹುತೇಕ ಸಚಿವರು ಹಿಂದಿ ಭಾಷೆಯಲ್ಲಿ ಶಪಥಗೈದರು. ಆಂಧ್ರ, ಒಡಿಶಾ ಸಂಸದರು ತಮ್ಮ ರಾಜ್ಯದ ಭಾಷೆಯಲ್ಲೇ ಪ್ರಮಾಣ ಸ್ವೀಕರಿಸಿದರು. 

* ಲೋಕಸಭೆಯ ಕಾರ್ಯದರ್ಶಿ ಸ್ನೇಹಲತಾ ಶ್ರೀವಾಸ್ತವ ಅವರು ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೆಸರನ್ನು ಕರೆದರು. ಆದರೆ ಅವರು ರಾಜ್ಯಸಭೆ ಸದಸ್ಯರು ಎಂದು ಬಳಿಕ ಗೊತ್ತಾಗಿ, ತಪ್ಪನ್ನು ಸರಿಪಡಿಸಿಕೊಂಡರು

* ಅಖಿಲೇಶ್ ಯಾದವ್ ಅವರು ಕೊನೆಯ ಸಾಲಿನಲ್ಲಿ ಕುಳಿತಿದ್ದರೆ, ಅವರ ತಂದೆ ಮುಲಾಯಂ ಸಿಂಗ್ ಅವರು ಮೊದಲ ಸಾಲಿನಲ್ಲಿ ಇದ್ದರು. ಮುಲಾಯಂ ಗಾಲಿಕುರ್ಚಿಯಲ್ಲಿ ಬಂದಿದ್ದರು.


ಬಿಜೆಪಿ ಸಂಸದ ಗೋಪಾಲ್‌ ಠಾಕೂರ್ ಹೂವಿನ ಹಾರ ಹಾಗೂ ಪಕ್ಷದ ಚಿಹ್ನೆಯಿರುವ ಟೋಪಿ ಧರಿಸಿದ್ದರು


ಗಾಲಿಕುರ್ಚಿಯಲ್ಲಿ ಸಂಸತ್‌ಗೆ ಬಂದ ಮುಲಾಯಂ ಸಿಂಗ್ ಯಾದವ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು