ಶುಕ್ರವಾರ, ನವೆಂಬರ್ 22, 2019
25 °C

ಮಹಾರಾಷ್ಟ್ರ ರಾಜಕಾರಣ | ಶಿವಸೇನೆಯೊಂದಿಗೆ ಮೈತ್ರಿ ಪ್ರಶ್ನೆಯೇ ಇಲ್ಲ: ಶರದ್ ಪವಾರ್

Published:
Updated:

ಮುಂಬೈ: ಮಹಾರಾಷ್ಟ್ರದ ಜನರು ನಮಗೆ ವಿರೋಧಪಕ್ಷದ ಸ್ಥಾನದಲ್ಲಿ ಕೂರಲು ಹೇಳಿದ್ದಾರೆ. ಜನಾದೇಶವನ್ನು ನಾವು ವಿಧೇಯರಾಗಿ ಪಾಲಿಸುತ್ತೇವೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಹೇಳಿದ್ದಾರೆ.

ಬಿಜೆಪಿ–ಶಿವಸೇನಾ ನಡುವೆ ಅಧಿಕಾರದ ಹಗ್ಗಜಗ್ಗಾಟ ಬಿರುಸಾದ ಕಾರಣ ಎನ್‌ಸಿಪಿ ಜತೆಗೂಡಿ ಶಿವಸೇನಾ ಸರ್ಕಾರ ರಚಿಸಬಹುದು ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಪವಾರ್‌ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಅಧಿಕಾರ ಹಂಚಿಕೆ ಮತ್ತು ಮುಖ್ಯಮಂತ್ರಿ ಸ್ಥಾನದ ಅವಧಿ ಹಂಚಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಶಿವಸೇನಾ ನಡೆದುಕೊಳ್ಳುತ್ತಿರುವ ರೀತಿ ಪ್ರಬುದ್ಧವಾಗಿಲ್ಲ. ಇನ್ನಾದರೂ ಅವರು ತಮ್ಮ ವರ್ತನೆ ಸುಧಾರಿಸಿಕೊಳ್ಳಬೇಕು ಎಂದು ಪವಾರ್‌ ಸಲಹೆ ಮಾಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಗಾಗಿ ಬಿಜೆಪಿ ಮತ್ತು ಶಿವಸೇನಾ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಬಿಜೆಪಿ 105, ಶಿವಸೇನಾ 56, ಎನ್‌ಸಿಪಿ 54 ಮತ್ತು ಕಾಂಗ್ರೆಸ್ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 145 ಸ್ಥಾನಗಳು ಬೇಕು.

ಫಲಿತಾಂಶ ಘೋಷಣೆಯಾದ ನಂತರ ಬಿಜೆಪಿ ಮತ್ತು ಶಿವಸೇನಾ ನಡುವೆ ಅಧಿಕಾರ ಹಂಚಿಕೆಗಾಗಿ ಹಗ್ಗಜಗ್ಗಾಟ ಆರಂಭವಾಗಿತ್ತು.

ಶಿವಸೇನೆಯ ಬೆಂಬಲದೊಂದಿಗೆ ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರ ರಚಿಸುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದರು.

ಅಧಿಕಾರಕ್ಕಾಗಿ ಬಿಜೆಪಿ–ಶಿವಸೇನೆ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಜನರು ಅವರಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನು ಬಳಸಿಕೊಳ್ಳಬೇಕು. ಇಂಥ ಅಪ್ರಬುದ್ಧ ಹುಡುಕಾಟಗಳನ್ನು ನಿಲ್ಲಿಸಬೇಕು’ ಎಂದರು.

ಪ್ರತಿಕ್ರಿಯಿಸಿ (+)