ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಷ್ಟ ಜನಾದೇಶ: ಅಸ್ಥಿರತೆಯಿಂದ ಸ್ಥಿರತೆಯತ್ತ ಜಾರ್ಖಂಡ್‌

Last Updated 30 ಡಿಸೆಂಬರ್ 2019, 2:48 IST
ಅಕ್ಷರ ಗಾತ್ರ

ರಾಂಚಿ: ಬಿಹಾರವನ್ನು ವಿಭಜಿಸಿ 2000ದಲ್ಲಿ ಜಾರ್ಖಂಡ್‌ ರಾಜ್ಯ ರಚಿಸಲಾಯಿತು. ಆಗಿನಿಂದ ಈವರೆಗಿನ 19 ವರ್ಷಗಳಲ್ಲಿ, ಬುಡಕಟ್ಟು ಸಮುದಾಯಗಳ ಪ್ರಾಬಲ್ಯದ ಜಾರ್ಖಂಡ್‌ನ ರಾಜಕಾರಣ ಪ್ರಕ್ಷುಬ್ಧವಾಗಿಯೇ ಇತ್ತು. ಈ ಅವಧಿಯಲ್ಲಿ ಈ ರಾಜ್ಯ 11 ಮುಖ್ಯಮಂತ್ರಿಗಳನ್ನು ಕಂಡಿದೆ.

ಮೂರು ಬಾರಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಭಾರತದ ಯಾವ ರಾಜ್ಯವೂ ರಾಜಕೀಯವಾಗಿ ಇಷ್ಟೊಂದು ಅಸ್ಥಿರವಾಗಿ ಇರಲಿಲ್ಲ. ಹಾಗಾಗಿಯೇ, ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಳೆದ ಸೋಮವಾರ ನಡೆದಾಗ ಸ್ಪಷ್ಟ ಜನಾದೇಶ ಬರಬಹುದೇ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇತ್ತು.

2014ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಸ್ಪಷ್ಟ ಬಹುಮತ ಗಳಿಸಿದ ಬಳಿಕವೇ ಜಾರ್ಖಂಡ್‌ನಲ್ಲಿ ರಾಜಕೀಯ ಸ್ಥಿರತೆ ಕಾಣಿಸಿಕೊಂಡಿತು. ಈ ಸರ್ಕಾರದ ನೇತೃತ್ವ ವಹಿಸಿದ್ದ ರಘುವರ್‌ ದಾಸ್‌ ಅವರೇ ಇಲ್ಲಿ ಅವಧಿ ಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿ. ಆ ಚುನಾವಣೆಯಲ್ಲಿ ಬಿಜೆಪಿಗೆ 37 ಮತ್ತು ಮೈತ್ರಿಕೂಟದ ಭಾಗವಾಗಿದ್ದ ಎಜೆಎಸ್‌ಯುಗೆ ಐದು ಕ್ಷೇತ್ರಗಳಲ್ಲಿ ಗೆಲುವು ದೊರಕಿತ್ತು.

ಬಾಬುಲಾಲ್‌ ಮರಾಂಡಿ ನೇತೃತ್ವದ ಜಾರ್ಖಂಡ್‌ ವಿಕಾಸ್‌ ಮೋರ್ಚಾದ ಆರು ಶಾಸಕರನ್ನು ಸೆಳೆದುಕೊಳ್ಳುವ ಮೂಲಕ ಬಿಜೆಪಿ ಬಲ ಹೆಚ್ಚಿಸಿಕೊಂಡಿತ್ತು. ಒಂದೊಂದು ವರ್ಷಕ್ಕೆ ಸರ್ಕಾರ ಕುಸಿಯುವ ಪರಂಪರೆಯ ಜಾರ್ಖಂಡ್‌ನಲ್ಲಿ ರಘುವರ್‌ ಅವರು ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದರು. ಜಾರ್ಖಂಡ್‌ ಮಟ್ಟಿಗೆ ಇದು ದಾಖಲೆ. ಈಗ, ಎರಡನೇ ಅವಧಿಗೆ ಪೂರ್ಣ ಬಹುಮತದ ಮೈತ್ರಿಕೂಟವೊಂದು ಸರ್ಕಾರ ರಚಿಸಿದೆ. ಮೂರು ಪಕ್ಷಗಳ ಈ ಮೈತ್ರಿಕೂಟವು ಸ್ಥಿರ ಸರ್ಕಾರ ಕೊಡಬಹುದೇ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT