ಭಾನುವಾರ, ಜನವರಿ 19, 2020
25 °C
ಭಾರತ–ಅಮೆರಿಕ ಸಂಬಂಧ ಕುರಿತು ಟ್ರಂಪ್‌– ಮೋದಿ ಮಾತುಕತೆ

ಪ್ರಾದೇಶಿಕ ಭದ್ರತೆಗೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ವಾಷಿಂಗ್ಟನ್‌/ನವದೆಹಲಿ: ಭಾರತ ಮತ್ತು ಅಮೆರಿಕದ ಸಹಭಾಗಿತ್ವ ಮತ್ತಷ್ಟು ಬಲಪಡಿಸಲು ಮತ್ತು ಪ್ರಾದೇಶಿಕ ಭದ್ರತಾ ವಿಷಯಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.

ಇರಾನ್‌ನ ಕಮಾಂಡರ್‌ ಜನರಲ್ ಖಾಸಿಂ ಸುಲೇಮಾನಿ ಹತ್ಯೆ ಬಳಿಕ ಕೊಲ್ಲಿ ರಾಷ್ಟ್ರಗಳಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಮೋದಿ ಮತ್ತು ಟ್ರಂಪ್‌ ಮಾತುಕತೆ ಮಹತ್ವ ಪಡೆದಿದೆ. ಹೊಸ ವರ್ಷದಲ್ಲಿ ಉಭಯ ನಾಯಕರ ಮೊದಲ ಮಾತುಕತೆ ಇದಾಗಿದೆ.

‘ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಧಾನಿ  ಜತೆ ಮಾತುಕತೆ ನಡೆಸಿ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು’ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಆದರೆ, ಭದ್ರತಾ ವಿಷಯಗಳ ಕುರಿತು ವಿವರಗಳನ್ನು ನೀಡಿಲ್ಲ.

ನವದೆಹಲಿಯಲ್ಲೂ ಪ್ರಧಾನಿ ಕಚೇರಿ ನೀಡಿದ ಪ್ರಕಟಣೆಯಲ್ಲಿ, ಉಭಯ ರಾಷ್ಟ್ರಗಳ ಹಿತಾಸಕ್ತಿಗೆ ಸಂಬಂಧಿಸಿದ ಕ್ಷೇತ್ರಗಳನ್ನು ಬಲಪಡಿಸುವ ಕುರಿತು ಉಭಯ ನಾಯಕರು ಚರ್ಚಿಸಿದರು. ಭಾರತ ಮತ್ತು ಅಮೆರಿಕ ಸಂಬಂಧಗಳು ವಿಶ್ವಾಸ, ಪರಸ್ಪರ ಗೌರವ ಮತ್ತು ತಿಳಿವಳಿಕೆ ಆಧಾರದ ಮೇಲೆ ವೃದ್ಧಿಯಾಗಿವೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು ಎಂದು ವಿವರಿಸಲಾಗಿದೆ.

 ಸುಲೇಮಾನಿ ಹತ್ಯೆ ಬಳಿಕ ಇಬ್ಬರು ನಾಯಕರು ನಡೆಸಿರುವ ಮಾತುಕತೆ ಇದಾಗಿರುವುದರಿಂದ ಇರಾನ್‌ನಲ್ಲಿನ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆದಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಅಂತರರಾಷ್ಟ್ರೀಯ ಸಂಬಂಧಗಳ ತಜ್ಞರು ವಿಶ್ಲೇಷಿಸಿದ್ದಾರೆ.

 ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಜತೆ ಭಾನುವಾರ ಮಾತುಕತೆ ನಡೆಸಿ ಕೊಲ್ಲಿ ರಾಷ್ಟ್ರಗಳಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

‘ಅಮೆರಿಕನ್ನರು ಮತ್ತು ನಮ್ಮ ಸ್ನೇಹಿತರ ಸುರಕ್ಷತೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ಯಾವುದೇ ರೀತಿ ಕ್ರಮಕ್ಕೂ ಹಿಂಜರಿಯುವುದಿಲ್ಲ’ ಎಂದು ಪಾಂಪಿಯೊ ಅವರು ಜೈಶಂಕರ್‌ಗೆ ತಿಳಿಸಿದ್ದರು.

ಇರಾನ್‌, ಯುಎಇ, ಕತಾರ್‌ ಮತ್ತು ಜೋರ್ಡನ್‌ನ ವಿದೇಶಾಂಗ ಸಚಿವರ ಜತೆಯೂ ಜೈಶಂಕರ್‌ ಸಮಾಲೋಚನೆ ನಡೆಸಿದ್ದರು. ಈ ಮಾತುಕತೆಗಳ ಬಳಿಕ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು