ಬುಧವಾರ, ಜನವರಿ 29, 2020
30 °C

Video| ಎಡವಿ ಬಿದ್ದ ಪ್ರಧಾನಿ ಮೋದಿ: ನಮಾಮಿ ಗಂಗಾ ಯೋಜನೆ ಪರಿಶೀಲನೆ ವೇಳೆ ಘಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನ್ಪುರ: ನಮಾಮಿ ಗಂಗಾ ಯೋಜನೆಯನ್ನು ಪರಿಶೀಲಿಸಲು ಮೋದಿ ಕಾನ್ಪುರಕ್ಕೆ ತೆರಳಿದ್ದ ವೇಳೆ ಗಂಗಾಘಾಟ್‌ನಲ್ಲಿ ಮೆಟ್ಟಿಲುಗಳನ್ನು ಏರುವಾಗ ಎಡವಿ ಬಿದ್ದಿದ್ದು, ಪಕ್ಕದಲ್ಲೇ ಇದ್ದ ಭದ್ರತಾ ಸಿಬ್ಬಂದಿ ಹಿಡಿದುಕೊಂಡಿದ್ದಾರೆ. 

ನಮಾಮಿ ಗಂಗಾ ಯೋಜನೆಯ ಮುಂದಿನ ಹಂತ ಮತ್ತು ಹೊಸ ಯೋಜನೆಯ ಕುರಿತು ಚರ್ಚಿಸಲು ಮೋದಿ ತೆರಳಿದ್ದರು. 

ಯೋಜನೆಯ ಪರಿಣಾಮಗಳನ್ನು ಪರಿಶೀಲಿಸಲು ಮೋದಿ ದೋಣಿ ವಿಹಾರ ಕೈಗೊಂಡಿದ್ದರು. ಅಲ್ಲಿಂದ ಹಿಂತಿರುಗುವಾಗ ಮೆಟ್ಟಿಲುಗಳನ್ನು ಏರುತ್ತಾ ಎಡವಿ ಬಿದ್ದಿದ್ದಾರೆ. ಈ ವೇಳೆ ಎಸ್‌ಪಿಜಿ ಸಿಬ್ಬಂದಿ ಕೂಡಲೇ ಮೋದಿ ಸಹಾಯಕ್ಕೆ ಧಾವಿಸಿ ಮೇಲೆತ್ತಿದ್ದಾರೆ. 

ರಾಷ್ಟ್ರೀಯ ಕಾಯಕಲ್ಪ, ಗಂಗಾ ನದಿ ರಕ್ಷಣೆ ಮತ್ತು ನಿರ್ವಹಣೆ ಮಂಡಳಿ(ನ್ಯಾಷನಲ್ ಗಂಗಾ ಕೌನ್ಸಿಲ್) ನೊಂದಿಗೆ ಶುಕ್ರವಾರ ಮೊದಲ ಸಭೆ ನಡೆಸಿದ್ದರು. ಬಳಿಕ ಕಾರ್ಯದ ಪ್ರಗತಿ ಮತ್ತು ಗಂಗಾ ನದಿ ಸ್ವಚ್ಛಗೊಳಿಸುವ ಪ್ರಮುಖ ಉದ್ದೇಶಗಳ ಕುರಿತು ಪರಿಶೀಲನಾ ಕಾರ್ಯ ಹಮ್ಮಿಕೊಂಡಿದ್ದರು.  

ದೋಣಿ ವಿಹಾರಕ್ಕಾಗಿ ಡಬಲ್ ಡೆಕ್ಕರ್ ಮೋಟರ್ ಬೋಟನ್ನು ಪ್ರಯಾಗ್‌ರಾಜ್‌ನಿಂದ ತರಿಸಲಾಗಿತ್ತು.

ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ರಾವತ್, ಬಿಹಾರ್ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮತ್ತು ಹಲವು ಅಧಿಕಾರಿಗಳು ಭಾಗಿಯಾಗಿದ್ದರು.

ಗಂಗಾ ಮತ್ತು ಅದರ ಉಪ ನದಿಗಳ ಮಾಲಿನ್ಯ ನಿಯಂತ್ರಣ ಮತ್ತು ಪುನರುಜ್ಜೀವನಕ್ಕಾಗಿ ನಮಾಮಿ ಗಂಗಾ ಯೋಜನೆಯನ್ನು ಕೇಂದ್ರ ಸರ್ಕಾರ 2014ರಲ್ಲಿ ಜಾರಿಗೆ ತಂದಿದೆ.

ಈ ಜವಾಬ್ದಾರಿಯನ್ನು ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯದ ಹೆಗಲಿಗೆ ನೀಡಲಾಗಿದೆ. ಯೋಜನೆಯ ಅವಧಿ 18 ವರ್ಷ. 2019-20ರ ವೇಳೆಗೆ ಗಂಗಾ ನದಿ ಶುದ್ಧೀಕರಣಕ್ಕಾಗಿ ಸರ್ಕಾರ ₹ 20,000 ಕೋಟಿಗಳನ್ನು ಮೀಸಲಿಟ್ಟಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು