ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನ'ಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

Last Updated 20 ಜೂನ್ 2020, 9:18 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19 ಬಿಕ್ಕಟ್ಟಿನ ಮಧ್ಯೆ ತವರಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಅವರವರ ಊರುಗಳಲ್ಲೇ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು 'ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನ'ಕ್ಕೆ ಚಾಲನೆ ನೀಡಿದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ಬಿಹಾರದ ಖಗೇರಿಯಾ ಜಿಲ್ಲೆಯ ತೆಲಿಹಾರ್ ಗ್ರಾಮದಿಂದ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಇದೊಂದು ಐತಿಹಾಸಿಕ ದಿನ. ಬಡವರ ಕಲ್ಯಾಣ ಮತ್ತು ಜೀವನೋಪಾಯಕ್ಕಾಗಿ ಒಂದು ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದನ್ನು ಕಾರ್ಮಿಕರಿಗೆ, ಗ್ರಾಮಗಳಲ್ಲಿ ವಾಸಿಸುವ ಯುವಕರಿಗೆ ಮತ್ತು ಮಹಿಳೆಯರಿಗೆ ಸಮರ್ಪಿಸಲಾಗಿದೆ. ಇವುಗಳಲ್ಲಿ ಬಹುಪಾಲು ಕೆಲಸಗಳು ಲಾಕ್‌ಡೌನ್ ಸಮಯದಲ್ಲಿ ತಮ್ಮ ಗ್ರಾಮಗಳಿಗೆ ಮರಳಿದವರಿಗಾಗಿವೆ. ಅವರು ತಮ್ಮ ಪ್ರಯತ್ನ ಮತ್ತು ಕೌಶಲ್ಯದ ಮೂಲಕ ತಮ್ಮ ಗ್ರಾಮವನ್ನು ಅಭಿವೃದ್ಧಿಪಡಿಸಲು ಬಯಸುತ್ತಾರೆ ಎಂದು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ದೇಶವು ನಿಮ್ಮ ಭಾವನೆಗಳು ಮತ್ತು ಅಗತ್ಯತೆಗಳನ್ನು ಅರ್ಥ ಮಾಡಿಕೊಂಡಿದೆ. ಈ ಕಾರ್ಯಕ್ರಮವು ಇಂದು ಖಗೇರಿಯಾ ಮೂಲಕ ಪ್ರಾರಂಭಿಸಲಾಗಿದ್ದು, ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮಾಧ್ಯಮವಾಗಿದೆ. ಆರು ರಾಜ್ಯಗಳ 116 ಹಳ್ಳಿಗಳಲ್ಲಿ ಇದನ್ನು ನಡೆಸಲಾಗುವುದು. ಈ ಯೋಜನೆಯನ್ನು ಪ್ರಾರಂಭಿಸುವ ಕಲ್ಪನೆಯನ್ನು ಕಾರ್ಮಿಕರೇ ನೀಡಿದ್ದಾರೆ ಎಂದರು.

ಜೂನ್ 15-16 ರಂದು ಲಡಾಖ್ನಲ್ಲಿ ಚೀನಾದ ಸೈನ್ಯದೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಬಿಹಾರ ರೆಜಿಮೆಂಟ್‌ನ 16 ಸಿಬ್ಬಂದಿ ತೋರಿಸಿದ ಶೌರ್ಯವುಪ್ರತಿ ಬಿಹಾರಿಯು ಹೆಮ್ಮೆಪಡುವಂತದ್ದು. ಲಡಾಖ್‌ನಲ್ಲಿ ನಮ್ಮ ಧೈರ್ಯಶಾಲಿಗಳು ಮಾಡಿದ ತ್ಯಾಗದ ಬಗ್ಗೆ ದೇಶ ಹೆಮ್ಮೆಪಡುತ್ತದೆ. ಇಂದು ನಾನು ಬಿಹಾರದ ಜನರೊಂದಿಗೆ ಮಾತನಾಡುವಾಗ, ಶೌರ್ಯವು ಬಿಹಾರ ರೆಜಿಮೆಂಟ್‌ನದ್ದಾಗಿತ್ತು ಎಂದುಹೇಳುತ್ತೇನೆ, ಪ್ರತಿಯೊಬ್ಬ ಬಿಹಾರಿಯೂ ಅದರ ಬಗ್ಗೆ ಹೆಮ್ಮೆ ಪಡುತ್ತಾನೆ. ರಾಷ್ಟ್ರಕ್ಕಾಗಿ ಪ್ರಾಣ ಅರ್ಪಿಸಿದ ಧೈರ್ಯಶಾಲಿಗಳಿಗೆ ನಾನು ಗೌರವ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಪಾಲ್ಗೊಂಡಿದ್ದರು.

ಇವರೊಂದಿಗೆ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ಒಡಿಶಾ ಮತ್ತು ಝಾರ್ಖಂಡ್ ಮುಖ್ಯ ಕಾರ್ಯದರ್ಶಿಗಳು, ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಇತರರು ಭಾಗವಹಿಸಿದ್ದರು.

ಲಾಕ್‌ಡೌನ್ ಸಂಕಷ್ಟದಲ್ಲಿ ನಗರ ಪ್ರದೇಶಗಳಿಂದ ಹಿಂದಿರುಗಿರುವ ವಲಸೆ ಕಾರ್ಮಿಕರು ಮತ್ತು ಗ್ರಾಮೀಣ ನಾಗರಿಕರಿಗೆ ಉದ್ಯೋಗ ಒದಗಿಸಲು ಬೃಹತ್ ಗ್ರಾಮೀಣ ಲೋಕೋಪಯೋಗಿ ಯೋಜನೆ 'ಗರಿಬ್ ಕಲ್ಯಾಣ್ ರೋಜರ್ ಅಭಿಯಾನ್' ಪ್ರಾರಂಭಿಸಲು ಭಾರತ ಸರ್ಕಾರ ನಿರ್ಧರಿಸಿದೆ. 6 ರಾಜ್ಯಗಳ 116 ಜಿಲ್ಲೆಗಳಲ್ಲಿ 125 ದಿನಗಳಲ್ಲಿ ಈ ಅಭಿಯಾನವು ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವ ಗುರಿಯನ್ನು ಹೊಂದಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಒದಗಿಸಲು ಮತ್ತು ಮೂಲಸೌಕರ್ಯಗಳನ್ನು ಸೃಷ್ಟಿಸಲು 25 ಬಗೆಯ ಕೆಲಸಗಳನ್ನು ಗುರುತಿಸಲಾಗಿದ್ದು, ಇವುಗಳ ಕೇಂದ್ರೀಕೃತ ಅನುಷ್ಠಾನವನ್ನು ಇದು ಒಳಗೊಂಡಿರುತ್ತದೆ. ಅಭಿಯಾನಕ್ಕಾಗಿ ₹ 50,000 ಕೋಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಪಿಎಂಒ ಕಚೇರಿ ತಿಳಿಸಿದೆ.

ಮೇ 5ರ ಹೊತ್ತಿಗೆ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ಅಡಿಯಲ್ಲಿ ಕೋವಿಡ್- 19 ಲಾಕ್‌ಡೌನ್ ಮಧ್ಯೆ ಸುಮಾರು 39 ಕೋಟಿ ಜನರು ₹34,800 ಕೋಟಿ ಹಣವನ್ನು ಪರಿಹಾರವಾಗಿ ಪಡೆದಿದ್ದಾರೆ. ಇದನ್ನು ಮಾರ್ಚ್ 26ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್-19 ಲಾಕ್‌ಡೌನ್‌ನಿಂದ ಉಂಟಾಗುವ ಸಂಕಷ್ಟದಿಂದ ರಕ್ಷಿಸಲು ಡಿಜಿಟಲ್ ಪಾವತಿ ಮೂಲಸೌಕರ್ಯಗಳ ಮೂಲಕ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT