ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀನ್ಯಾಕೆ ಕುಂಕುಮ ಇಟ್ಟಿಲ್ಲ ಎಂಬುದು ಪೊಲೀಸರ ಪ್ರಶ್ನೆಯಾಗಿತ್ತು

ಪೊಲೀಸ್ ಶೋಧ ಕಾರ್ಯಾಚರಣೆ ಕುರಿತು ಪ್ರೊ.ಕೆ.ಸತ್ಯನಾರಾಯಣ ಪ್ರತಿಕ್ರಿಯೆ
Last Updated 30 ಆಗಸ್ಟ್ 2018, 8:51 IST
ಅಕ್ಷರ ಗಾತ್ರ

ಹೈದರಾಬಾದ್: ‘ನಿಮ್ಮ ಯಜಮಾನರು ದಲಿತರು. ಅವರಂತೂ ಯಾವುದೇ ಸಂಪ್ರದಾಯ ಅನುಸರಿಸಲ್ಲ. ಆದರೆ ನಿಮಗೇನಾಗಿದೆ? ನೀವು ಬ್ರಾಹ್ಮಣ ಜಾತಿಗೆ ಸೇರಿದವರಲ್ಲವೇ? ನೀವ್ಯಾಕೆ ಒಡವೆ ಹಾಕಿಕೊಂಡಿಲ್ಲ? ಕುಂಕುಮ ಇಟ್ಟಿಲ್ಲ? ಸಾಂಪ್ರದಾಯಿಕ ಗೃಹಿಣಿ ಥರ ಕಾಣಿಸೋದೆ ಇಲ್ಲ ಏಕೆ? ಅಪ್ಪನಂತೆಯೇ ಮಗಳೂ ಇರಬೇಕೆ?

ಹೈದರಾಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತಿ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಸತ್ಯನಾರಾಯಣ ಅವರ ಪತ್ನಿ ಕೆ.ಪವನಾ ಅವರಿಗೆ ಪುಣೆ ಮತ್ತು ತೆಲಂಗಾಣ ಪೊಲೀಸರು ಕೇಳಿದ ಪ್ರಶ್ನೆಗಳ ಸ್ಯಾಂಪಲ್ ಇದು.

ತೆಲುಗು ಕವಿ ವರವರ ರಾವ್ ಅವರ ಪುತ್ರಿ ಪವನಾ. ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾವೋವಾದಿಗಳ ನಂಟು ಜಾಲಾಡುತ್ತಿರುವ ಪುಣೆ ಪೊಲೀಸರು ಬಂಧಿಸಿದ್ದ ಐವರ ಪೈಕಿ ವರವರ ರಾವ್‌ ಸಹ ಒಬ್ಬರು.

ತಮ್ಮ ಮನೆಯ ಮೇಲಾದ ಪೊಲೀಸರ ದಾಳಿ ಕುರಿತು ಪ್ರೊ.ಕೆ.ಸತ್ಯನಾರಾಯಣ ಮಾತನಾಡಿದ್ದ ವಿಡಿಯೊ ಕ್ಲಿಪಿಂಗ್‌ಗಳನ್ನು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿದ್ದರು. ಸತ್ಯನಾರಾಯಣ ಅವರ ಪ್ರತಿಕ್ರಿಯೆ ಆಧರಿಸಿ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಸುದ್ದಿತಾಣ ವರದಿಯನ್ನು ಪ್ರಕಟಿಸಿದೆ. ಸತ್ಯನಾರಾಯಣ ಅವರ ಮಾತುಗಳ ಸಂಗ್ರಹ ರೂಪ ಇಲ್ಲಿದೆ.

‘ಮಂಗಳವಾರ ಬೆಳಿಗ್ಗೆ 8.30ಕ್ಕೆ ನನ್ನ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು ಸಂಜೆ 5.30ರವರೆಗೆ ಮನೆಯನ್ನು ಅವರ ಸುಪರ್ದಿಯಲ್ಲಿಯೇ ಇಟ್ಟುಕೊಂಡಿದ್ದರು. ನನಗೆ ಮತ್ತು ನನ್ನ ಹೆಂಡತಿಗೆ ಸಿಲ್ಲಿಸಿಲ್ಲಿ ಪ್ರಶ್ನೆ ಕೇಳುತ್ತಿದ್ದರು. ನನಗೆ ಒಂದೊಂದು ಸಲ ರೇಗಿ ಹೋಗುತ್ತಿತ್ತು. ಅದು ಭಯ ಹುಟ್ಟಿಸುವ ಕೆಟ್ಟ ಅನುಭವ.

‘ಮನೆಗೆ ಬಂದ ಆರಂಭದಲ್ಲಿ ಪೊಲೀಸರು ನನ್ನ ಮಾವ ವರವರ ರಾವ್ ಅವರನ್ನು ಹುಡುಕುತ್ತಿದ್ದೇವೆ ಎಂದರು. ಅವರು ಸಿಗದಿದ್ದಾಗ ನನ್ನ ಪುಸ್ತಕ ಕಪಾಟುಗಳನ್ನು, ಮೇಜುಗಳನ್ನು ಮತ್ತು ಕಪ್‌ಬೋರ್ಡ್‌ಗಳನ್ನು ತಡಕಾಡಲು ಶುರುಮಾಡಿದರು. ಮಾವೋವಾದಿಗಳೊಂದಿಗೆ ಇರುವ ಸಂಪರ್ಕಕ್ಕೆ ಆಧಾರ ಹುಡುಕುತ್ತಿದ್ದೇವೆ ಎಂದರು. ನಿಮ್ಮ ಮನೆಯಲ್ಲಿ ವರವರ ರಾವ್ ಏನಾದರೂಬಚ್ಚಿಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು. ಎಲ್ಲವನ್ನೂ ಹಾಳುಮಾಡಿದರು.

‘ನಿಮ್ಮ ಮನೆಯಲ್ಲಿ ಅಷ್ಟೊಂದು ಪುಸ್ತಕಗಳು ಏಕಿವೆ? ನೀವು ನಿಜಕ್ಕೂ ಅವನ್ನೆಲ್ಲಾ ಓದುವಿರಾ? ಏಕೆ ಅಷ್ಟೊಂದು ಪುಸ್ತಕ ಕೊಂಡಿದ್ದೀರಿ? ನೀವು ಅಷ್ಟೊಂದು ಪುಸ್ತಕ ಯಾಕೆ ಓದಬೇಕು? ಮನೆಯಲ್ಲಿರುವ ಹೆಚ್ಚಿನ ಪುಸ್ತಕಗಳು ಮಾವೋ ಮತ್ತು ಮಾರ್ಕ್ಸ್‌ ಬಗ್ಗೆಯೇ ಏಕೆ ಇವೆ? ಚೀನಾದಲ್ಲಿಯೂ ಪುಸ್ತಕಗಳನ್ನು ಖರೀದಿಸಿದ್ದೀರಿ ಏಕೆ? ಗದ್ದರ್ ಹಾಡುಗಳನ್ನು ಏಕೆ ಕೇಳ್ತೀರಿ? ನಿಮ್ಮ ಮನೆಯಲ್ಲಿ ಫುಲೆ ಮತ್ತು ಅಂಬೇಡ್ಕರ್ ಫೋಟೊಗಳು ಏಕಿವೆ? ದೇವರ ಚಿತ್ರಪಟಗಳು ಒಂದೂ ಇಲ್ಲ ಏಕೆ? ಎನ್ನುವುದು ಅವರ ಪ್ರಶ್ನೆಗಳಾಗಿದ್ದವು. ಒಬ್ಬ ಅಧಿಕಾರಿಯಂತೂ, ‘ವಿಪರೀತ ಪುಸ್ತಕಗಳನ್ನು ಓದಿ ಹುಡುಗರನ್ನು ಹಾಳು ಮಾಡ್ತಿದ್ದೀರಿ’ ಎಂದು ತೀರ್ಪುಕೊಟ್ಟರು.

‘ಪ್ರತಿಷ್ಠಿತ ವಿವಿಯ ಪ್ರಾಧ್ಯಾಪಕ ಮತ್ತು ಸಂಶೋಧಕನಾದ ನನ್ನೊಡನೆ ಪೊಲೀಸರು ಸರಿಯಾಗಿ ನಡೆದುಕೊಳ್ಳಲಿಲ್ಲ. ಸಂಶೋಧಕನಾಗಿ ನಾನು ಹಲವು ರೀತಿಯ ಪುಸ್ತಕಗಳನ್ನು ಓದುತ್ತೇನೆ. ಅದು ಎಡ, ಬಲ ಅಥವಾ ದಲಿತ ಸಿದ್ಧಾಂತಗಳಿಗೆ ಸೇರಿವೆಯೇ ಎಂಬುದು ನನಗೆ ಮುಖ್ಯವಲ್ಲ. ಆದರೆ ದಲಿತ ಚಿಂತನೆಗೆ ಸಂಬಂಧಿಸಿದ ಮತ್ತು ಕೆಂಪು ಬಣ್ಣದ ರಕ್ಷಾಪುಟ ಹೊಂದಿರುವ ಪುಸ್ತಕಗಳ ಬಗ್ಗೆ ಪೊಲೀಸರಿಗೆ ವಿಪರೀತ ಅನುಮಾನವಿತ್ತು. ಸಲ್ಲದ ಪ್ರಶ್ನೆಗಳನ್ನು ಮೇಲಿಂದ ಮೇಲೆ ಕೇಳಿದರು.

‘ಪೊಲೀಸರು ನನ್ನ ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್ ಹೊತ್ತೊಯ್ದಿದ್ದಾರೆ. ಆನ್‌ಲೈನ್‌ನಲ್ಲಿ ಖರೀದಿಸಿದ್ದ ಪುಸ್ತಕಗಳ ಸಾಫ್ಟ್‌ ಪ್ರತಿಗಳು, ಎರಡು ಹೊಸ ಪುಸ್ತಕಗಳಿಗಾಗಿ ಸಿದ್ಧಪಡಿಸಿದ್ದ ಕರಡು, ಸಂಶೋಧನಾ ಪ್ರಬಂಧಗಳು, ದಲಿತ ಸಾಹಿತ್ಯಕ್ಕೆ ಸಂಬಂಧಿಸಿದ ಸಂಶೋಧನಾ ಆಕರಗಳು ಅದರಲ್ಲಿ ಇದ್ದವು.ನನ್ನ 20 ವರ್ಷಗಳ ಅಧ್ಯಯನ ಪರಿಶ್ರಮ ಈಗ ಪೊಲೀಸರ ಮರ್ಜಿಯಲ್ಲಿದೆ.

‘ಪೊಲೀಸರ ದಬ್ಬಾಳಿಕೆಯಿಂದ ನನ್ನ ವೃತ್ತಿ ಸುಮಾರು 25 ವರ್ಷ ಹಿನ್ನಡೆ ಅನುಭವಿಸಿದಂತೆ ಆಗಿದೆ. ಈ ಅನಾಹುತದಿಂದ ನಾನು ಎಂದಾದರೂ ಚೇತರಿಸಿಕೊಳ್ಳಲು ಸಾಧ್ಯವೇ ಎನ್ನುವುದೂ ನನಗೆ ಗೊತ್ತಿಲ್ಲ. ಕಂಪ್ಯೂಟರ್‌ನಲ್ಲಿ ಶೇಖರಿಸಿಟ್ಟಿದ್ದ ಎಲ್ಲವನ್ನೂ ಅವರು ಹೊತ್ತೊಯ್ದಿದ್ದಾರೆ. ನನ್ನ ಹತ್ತಿರ ಬೇರೆ ಪ್ರತಿಗಳೂ ಇಲ್ಲ. ದಕ್ಷಿಣ ಭಾರತದ 40 ದಲಿತ ಲೇಖಕರ ಕೃತಿಗಳ ಸಂಗ್ರಹ ‘ನೋ ಆಲ್ಫಬೆಟ್ ಇನ್‌ ಸೈಟ್’ ಮತ್ತು ‘ಸ್ಟೀಲ್ ನಿಬ್ಸ್‌ ಆರ್ ಸ್ಪ್ರೌಟಿಂಗ್’ ಪುಸ್ತಕಗಳ ಕರಡು ಅದರಲ್ಲಿತ್ತು. ನನಗೆ ಇವನ್ನು ಯಾವಾಗ ವಾಪಸ್ ಕೊಡ್ತೀರಿ ಎಂದು ಕೇಳಿದೆ. ಅವರು ‘ನೀವು ಅರ್ಜಿ ಸಲ್ಲಿಸಬೇಕು’ ಎಂದು ಹೇಳಿ ಸುಮ್ಮನಾದರು.

‘ನಾನೀಗ ಸಂಸ್ಕೃತಿ ಅಧ್ಯಯನದಲ್ಲಿ ಹೊಸ ಸಂಶೋಧನಾ ವಿಧಾನಗಳ ಕುರಿತು ಪಾಠ ಮಾಡುತ್ತಿದ್ದೇನೆ. ಸುಮಾರು 50 ಪುಸ್ತಕಗಳಿಂದ ಬೋಧನಾ ವಿಷಯ ಸಂಗ್ರಹಿಸಿ ನನ್ನ ವಿದ್ಯಾರ್ಥಿಗಳೊಂದಿಗೆ ಪ್ರತಿದಿನ ಡ್ರಾಪ್‌ಬಾಕ್ಸ್ ಮತ್ತು ಇಮೇಲ್ ಮೂಲಕ ಹಂಚಿಕೊಳ್ಳುತ್ತಿದ್ದೆ. ಹಾರ್ಡ್‌ಡಿಸ್ಕ್‌ನಲ್ಲಿದ್ದ ಅವೆಲ್ಲವನ್ನೂ ಪೊಲೀಸರು ಈಗ ಹೊತ್ತೊಯ್ದಿದ್ದಾರೆ. ನಾನು ಮತ್ತೆ ಆ ಎಲ್ಲ ವಿಷಯಗಳನ್ನು ಸಂಗ್ರಹಿಸಿ ಪಾಠ ಶುರುಮಾಡಲು ಕೆಲ ತಿಂಗಳುಗಳೇ ಬೇಕಾಗಬಹುದು.

‘ನನ್ನ ಮನೆಯನ್ನು ಏಕೆ ಶೋಧಿಸುತ್ತಿದ್ದೀರಿ ಎಂದು ನಾನು ಪೊಲೀಸರನ್ನು ಪ್ರಶ್ನಿಸಿದೆ. ಅವರು ‘ನೀವು ವರವರ ರಾವ್ ಅವರ ಅಳಿಯ. ಅದಕ್ಕೆ ನಿಮ್ಮ ಮನೆಯ ಮೇಲೆ ದಾಳಿ ಮಾಡಿದ್ದೇವೆ’ ಎಂದರು.ಪ್ರತಿಷ್ಠಿತ ವಿವಿಯ ಪ್ರತಿಷ್ಠಿತ ಪ್ರಾಧ್ಯಾಪಕ ಎನ್ನುವ ನನ್ನ ಅಸ್ತಿತ್ವವನ್ನೇ ಪೊಲೀಸರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಮನೆಯಲ್ಲಿ ಏನೋ ಬಚ್ಚಿಟ್ಟುಕೊಂಡಿರುವ ಅಪರಾಧಿ ಎನ್ನುವ ಭಾವ ಅನುಭವಿಸುವಂತೆ ಮಾಡಿದರು. ಇಮೇಲ್ ವಿಳಾಸಗಳ ಪಾಸ್‌ವರ್ಡ್‌ ಕೊಡುವಂತೆ ಒತ್ತಾಯಿಸಿದರು. ನಾನು ಪಾಸ್‌ವರ್ಡ್‌ ಕೊಡದಿದ್ದರೆ ‘ಶೋಧ ಕಾರ್ಯಾಚರಣೆಯಲ್ಲಿ ಸಹಕರಿಸಿಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸುವುದಾಗಿ ಬೆದರಿಸಿದರು. ಮಾವೋವಾದವನ್ನು ಬೆಂಬಲಿಸಬೇಡಿ ಎಂದು ನಿಮ್ಮ ಮಾವನಿಗೆ ತಿಳಿಹೇಳಿ ಎಂದು ಉಪನ್ಯಾಸಕೊಟ್ಟರು. ವರವರ ರಾವ್‌ಗೆ ಈಗ ವಯಸ್ಸಾಗಿದೆ. ಅವರು ಸಾಮಾಜಿಕ ಚಳವಳಿಗಳಿಂದ ನಿವೃತ್ತರಾಗಿ ಮನೆಯಲ್ಲಿ ಖುಷಿಯಾಗಿ ಕಾಲ ಕಳೆಯಬೇಕು ಎಂದು ಹೇಳಿದರು.

ಸಂಪೂರ್ಣ ಸುಳ್ಳು

ಪೊಲೀಸರು ಕೇಳಿರುವ ಈ ಅಸಂಬದ್ಧ ಪ್ರಶ್ನೆಗಳ ಕುರಿತು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿಗಾರರು ಪುಣೆಯ ಜಂಟಿ ಪೊಲೀಸ್ ಆಯುಕ್ತ ಶಿವಾಜಿ ಭೋಡ್ಕೆ ಅವರ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. ‘ಸತ್ಯನಾರಾಯಣ ಅವರ ಆರೋಪ ಸಂಪೂರ್ಣ ಸುಳ್ಳು. ಇಂಥ ಪ್ರಶ್ನೆಗಳನ್ನು ಪೊಲೀಸರು ಕೇಳಿಯೇ ಇಲ್ಲ. ನಿಯಮಗಳಿಗೆ ಅನುಗುಣವಾಗಿಯೇ ದಾಳಿ ನಡೆದಿದೆ’ ಎಂದು ಭೋಡ್ಕೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT