ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು, ವಿಮಾನ ಸೇವೆ ಪುನರಾರಂಭಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ: ಜಾವಡೇಕರ್

Last Updated 19 ಏಪ್ರಿಲ್ 2020, 9:39 IST
ಅಕ್ಷರ ಗಾತ್ರ

ನವದೆಹಲಿ: ರೈಲು, ವಿಮಾನ ಸೇವೆ ಪುನರಾರಂಭಿಸುವ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಚರ್ಚೆ ಬೇಡ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಸಾರ್ವಜನಿಕ ಸಾರಿಗೆ ಆರಂಭಿಸಲು ಸರ್ಕಾರ ಸಮಯ ನಿಗದಿಪಡಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಒಂದಲ್ಲ ಒಂದು ದಿನ ಅದು ಪುನರಾರಂಭಗೊಳ್ಳಲೇ ಬೇಕು. ಆದರೆ ಆ ದಿನ ಯಾವುದೆಂದು ಈಗ ಹೇಳಲಾಗದು. ಪ್ರತಿ ದಿನದ ಪರಿಸ್ಥಿತಿಯನ್ನು ನಾವು ಅವಲೋಕಿಸುತ್ತಿದ್ದೇವೆ. ಹಾಗಾಗಿ ಆ ಬಗ್ಗೆ ಈಗ ಚರ್ಚೆ ಬೇಡ’ ಎಂದು ಹೇಳಿದ್ದಾರೆ.

ಕೆಲವು ವಿಮಾನಯಾನ ಸಂಸ್ಥೆಗಳು ಮೇ 4ರಿಂದ ಟಿಕೆಟ್ ಬುಕಿಂಗ್‌ ಆರಂಭಿಸಲು ನಿರ್ಧರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಮಾನ ಸಂಚಾರ ಪುನರಾರಂಭಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಹರ್‌ದೀಪ್ ಸಿಂಗ್ ಪುರಿ ಶನಿವಾರವೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ವದಂತಿ ಹರಡಬೇಡಿ ಎಂದು ಜಾವಡೇಕರ್ ಹೇಳಿದ್ದಾರೆ.

ಮೇ 3ರ ಬಳಿಕವೂ ವಿಮಾನ, ರೈಲು ಸಂಚಾರ ಅನುಮಾನ: ಲಾಕ್‌ಡೌನ್ ಅವಧಿಯ ಕೊನೆಯ ದಿನವಾದ ಮೇ 3ರ ಬಳಿಕವೂ ರೈಲು, ವಿಮಾನ ಸಂಚಾರ ಪುನರಾರಂಭಗೊಳ್ಳುವುದು ಅನುಮಾನ ಎಂದು ಕೆಲವು ಮೂಲಗಳು ಹೇಳಿವೆ. ವಿಮಾನ, ರೈಲು ಸಂಚಾರ ಪುನರಾರಂಭಿಸುವ ಬಗ್ಗೆ ಶನಿವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ನಡೆದ ಸಚಿವರ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ ಎನ್ನಲಾಗಿದೆ.

ಮೇ 4ರಿಂದ ದೇಶೀಯ ಮತ್ತು ಜೂನ್ 1ರಿಂದ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಬಹುದು ಎಂದು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಶನಿವಾರ ಹೇಳಿತ್ತು. ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಹರ್‌ದೀಪ್ ಸಿಂಗ್ ಪುರಿ, ನಾಗರಿಕ ವಿಮಾಯಾನ ಸಚಿವಾಲಯ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ಕಾರ ತೀರ್ಮಾನ ಕೈಗೊಂಡ ಬಳಿಕವೇ ಬುಕಿಂಗ್ ಆರಂಭಿಸುವುದು ಉತ್ತಮ ಎಂದು ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿದ್ದರು.

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಏಪ್ರಿಲ್ 15ರಿಂದ ಮೇ 3ರ ವರೆಗೆ ಎರಡನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT