ಸೋಮವಾರ, ಜೂನ್ 21, 2021
30 °C

ಗೋಡ್ಸೆ ಬೇಕೇ, ಗಾಂಧಿ ಬೇಕೇ? ಪ್ರಶಾಂತ್‌ ಕಿಶೋರ್‌ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಬಿಜೆಪಿ ಜತೆಗಿನ ಮೈತ್ರಿಗಾಗಿ ಸೈದ್ಧಾಂತಿಕ ನೆಲೆಯಲ್ಲಿ ರಾಜಿಮಾಡಿಕೊಂಡಿದ್ದಾರೆ ಎಂದು ಚುನಾವಣಾ ಕಾರ್ಯತಂತ್ರಜ್ಞ ಮತ್ತು ರಾಜಕಾರಣಿ ಪ್ರಶಾಂತ್‌ ಕಿಶೋರ್‌ ಆರೋಪಿಸಿದ್ದಾರೆ.

ನಿತೀಶ್‌ ಪ್ರತಿಪಾದಿಸುತ್ತಿರುವ ಅಭಿವೃದ್ಧಿ ಮಾದರಿಯನ್ನೂ ಅವರು ಪ್ರಶ್ನಿಸಿದ್ದಾರೆ. ನಿತೀಶ್‌ ಅವರು ಮಹಾತ್ಮ ಗಾಂಧಿ ಸಿದ್ಧಾಂತ
ಗಳ ಜತೆಗೆ ಇದ್ದಾರೆಯೇ ಅಥವಾ ನಾಥೂರಾಮ್‌ ಗೋಡ್ಸೆಯ ಬೆಂಬಲಿಗರ ಸಿದ್ಧಾಂತದ ಜತೆಗೆ ಇದ್ದಾರೆಯೇಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಿಶೋರ್‌ ಒತ್ತಾಯಿಸಿದ್ದಾರೆ. 

‘ಗಾಂಧಿ, ಜೆಪಿ ಮತ್ತು ಲೋಹಿಯಾ ಸಿದ್ಧಾಂತಗಳನ್ನು ಬಿಟ್ಟು ಬಿಡುವುದು ಎಂದಿಗೂ ಸಾಧ್ಯವಿಲ್ಲ ಎಂದು ನಿತೀಶ್‌ ಯಾವಾಗಲೂ ಹೇಳುತ್ತಾರೆ. ಆದರೆ, ಅದೇ ಹೊತ್ತಿಗೆ ಅವರು ಗೋಡ್ಸೆ ಸಿದ್ಧಾಂತವನ್ನು ಬೆಂಬಲಿಸುವವರ ಜತೆಗೂ ಇದ್ದಾರೆ. ಈ ಎರಡೂ ಜತೆಗೆ ಸಾಗುವುದು ಸಾಧ್ಯವಿಲ್ಲ. ಅವರು ಬಿಜೆಪಿಯ ಜತೆಗೇ ಮುಂದುವರಿದರೆ ನನಗೆ ಸಮಸ್ಯೆಯೇನೂ ಇಲ್ಲ. ಆದರೆ, ಏಕಕಾಲಕ್ಕೆ ಎರಡೂ ಕಡೆಗಳಲ್ಲಿ ಇರುವುದಕ್ಕೆ ಸಾಧ್ಯವಿಲ್ಲ’ ಎಂದು ಕಿಶೋರ್‌ ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

‘ನಿತೀಶ್‌ ಮತ್ತು ನನ್ನ ನಡುವೆ ಬಹಳಷ್ಟು ಚರ್ಚೆ ನಡೆದಿದೆ. ಅವರಿಗೆ ಅವರ ಚಿಂತನೆ, ನನಗೆ ನನ್ನ ಚಿಂತನೆ. ಆದರೆ, ಗಾಂಧಿ ಮತ್ತು ಗೋಡ್ಸೆ ಜತೆಗೆ ಸಾಗುವುದು ಸಾಧ್ಯವಿಲ್ಲ. ಪಕ್ಷದ ನಾಯಕರಾಗಿರುವ ನೀವು, ಯಾವ ಕಡೆಗೆ ಇದ್ದೀರಿ ಎಂಬುದನ್ನು ಹೇಳಬೇಕು’ ಎಂದು ಕಿಶೋರ್ ಒತ್ತಾಯಿಸಿದ್ದಾರೆ.  

ನಿತೀಶ್‌ ಪ್ರತಿಪಾದಿಸುವ ಆಡಳಿತದ ಮಾದರಿಯನ್ನೂ ಅವರು ಟೀಕಿಸಿದ್ದಾರೆ. 2005ರಲ್ಲಿ ಬಿಹಾರವು ದೇಶದ ಅತ್ಯಂತ ಬಡ ರಾಜ್ಯವಾಗಿತ್ತು. ಈಗಲೂ ಹಾಗೆಯೇ ಇದೆ. 15 ವರ್ಷಗಳಲ್ಲಿ ಬಿಹಾರದಲ್ಲಿ ಪ್ರಗತಿ ಆಗಿದೆ. ಆದರೆ, ಅದರ ವೇಗವು ಯಾವ ಪ್ರಮಾಣದಲ್ಲಿ ಇರಬೇಕಿತ್ತೋ ಅಷ್ಟು ಇಲ್ಲ’ ಎಂದು ಅವರು ಹೇಳಿದ್ದಾರೆ. 

ರಾಜ್ಯದ ಅಭಿವೃದ್ಧಿಯ ಕುರಿತಂತೆ ಬಹಿರಂಗ ಚರ್ಚೆಗೆ ಬರುವಂತೆ ನಿತೀಶ್‌ಗೆ ಅವರು ಸವಾಲು ಎಸೆದಿದ್ದಾರೆ. 

ಬಿಹಾರಕ್ಕಾಗಿ ನಿತೀಶ್ ಮಾಡಿರುವುದೇನು ಮತ್ತು ಇನ್ನೊಂದು ಬಾರಿ ಅವರು ಅಧಿಕಾರಕ್ಕೆ ಬಂದರೆಏನು ಮಾಡಲಿದ್ದಾರೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಕಿಶೋರ್‌ ಅವರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇದುವೇ ನಿತೀಶ್‌ ಮತ್ತು ಕಿಶೋರ್‌ ನಡುವಣ ಜಟಾಪಟಿಗೆ ಕಾರಣವಾಗಿತ್ತು.ಕಿಶೋರ್‌ ಅವರು ಜೆಡಿಯುನ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಆದರೆ, ಜನವರಿ
ಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಪಕ್ಷದ ಶಿಸ್ತನ್ನು ಕಾಯ್ದುಕೊಳ್ಳುವ ಇಚ್ಛೆ ಇಲ್ಲ ಎಂಬುದನ್ನು ಅವರು ಇತ್ತೀಚೆಗೆ ಹಲವು ಬಾರಿ ಸಾಬೀತು ಮಾಡಿದ್ದಾರೆ ಎಂದು ಜೆಡಿಯು ಹೇಳಿತ್ತು. ನಿತೀಶ್‌ ಬಗ್ಗೆ ‘ಅವಮಾನಕಾರಿ ಮಾತು’ಗಳನ್ನು ಹೇಳಿದ್ದಾರೆ ಎಂಬುದೂ ಉಚ್ಚಾಟನೆಗೆ ಕಾರಣವಾಗಿತ್ತು.

‘ಬಾತ್‌ ಬಿಹಾರ್‌ ಕಿ’
ಕಿಶೋರ್‌ ಅವರು ವಿವಿಧ ಪಕ್ಷಗಳ ಹಲವು ಚುನಾವಣಾ ಅಭಿಯಾನಗಳ ಯಶಸ್ಸಿನ ಹಿಂದಿನ ರೂವಾರಿ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ಬಿಜೆಪಿಯ ಕಾರ್ಯತಂತ್ರ ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಈ ಬಾರಿ, ಅವರು ‘ಬಿಹಾರ್‌ ಕಿ ಬಾತ್‌’ ಎಂಬ ಅಭಿಯಾನ ಆರಂಭಿಸುವುದಾಗಿ ಹೇಳಿದ್ದಾರೆ. ಬಿಹಾರವನ್ನು ದೇಶದ ಅತ್ಯುತ್ತಮ 10 ರಾಜ್ಯಗಳಲ್ಲಿ ಒಂದಾಗಿ ಮಾಡುವುದು ತಮ್ಮ ಉದ್ದೇಶ ಎಂದು ಅವರು ಹೇಳಿಕೊಂಡಿದ್ದಾರೆ. ಈ ಅಭಿಯಾನಕ್ಕೆ ಗುರುವಾರ ಚಾಲನೆ ನೀಡುವುದಾಗಿಯೂ ಅವರು ತಿಳಿಸಿದ್ದಾರೆ. 

ಬಿಹಾರದ ಯುವ ನಾಯಕರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿಯೂ ಅವರು ಹೇಳಿದ್ದಾರೆ. 

*
ಬೇರೊಂದು ರಾಜಕೀಯ ಪಕ್ಷ ಸೇರುವ ಇಚ್ಛೆ ಇಲ್ಲ. ಬಿಹಾರವು ಅತ್ಯುತ್ತಮ 10 ರಾಜ್ಯಗಳಲ್ಲಿ ಒಂದಾಗಬೇಕು ಎಂದು ಬಯಸುವವರನ್ನು ಒಟ್ಟಾಗಿಸಲು ಮುಂದಿನ ನೂರು ದಿನ ಕೆಲಸ ಮಾಡುತ್ತೇನೆ.
-ಪ್ರಶಾಂತ್‌ ಕಿಶೋರ್‌, ಚುನಾವಣಾ ಕಾರ್ಯತಂತ್ರಜ್ಞ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು