ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಗೊಂಡರ ಭೇಟಿಗೆ ಹೊರಟ ಪ್ರಿಯಾಂಕಾಗೆ ತಡೆ

ಬುಡಕಟ್ಟು ಸಮುದಾಯದ ಹತ್ತು ಮಂದಿಯ ಹತ್ಯೆ
Last Updated 19 ಜುಲೈ 2019, 19:54 IST
ಅಕ್ಷರ ಗಾತ್ರ

ಲಖನೌ/ನವದೆಹಲಿ: ಗುಂಡಿನ ದಾಳಿಗೆ ಒಳಗಾಗಿ ಪ್ರಾಣ ತೆತ್ತಿರುವ ಹತ್ತು ಮಂದಿಯ ಕುಟುಂಬದವರನ್ನು ಭೇಟಿಮಾಡಲು ಸೋನ್‌ಭದ್ರಕ್ಕೆ ಹೊರಟಿದ್ದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಶುಕ್ರವಾರ ಪೊಲೀಸರು ತಡೆದು ನಿಲ್ಲಿಸಿದರು.

ಸರ್ಕಾರದ ಕ್ರಮವನ್ನು ಖಂಡಿಸಿ ಪ್ರಿಯಾಂಕಾ ಹಾಗೂ ಅವರ ಬೆಂಬಲಿಗರು ರಸ್ತೆಯಲ್ಲೇ ಪ್ರತಿಭಟನೆಗಿಳಿದರು. ಆ ಸಂದರ್ಭದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ಸರ್ಕಾರಿ ಅತಿಥಿಗೃಹಕ್ಕೆ ಕರೆದೊಯ್ದರು.

ಸೋನ್‌ಭದ್ರದ ಘೋರವಾಲ್‌ ಪ್ರದೇಶದಲ್ಲಿ ಜಮೀನೊಂದಕ್ಕೆ ಸಂಬಂಧಿಸಿದಂತೆ ಗ್ರಾಮದ ಮುಖ್ಯಸ್ಥ ಹಾಗೂ ಗೊಂಡ ಬುಡಕಟ್ಟು ಜನರ ಮಧ್ಯೆ ಈಚೆಗೆ ಮಾರಾಮಾರಿ ನಡೆದಿತ್ತು. ಈ ಸಂದರ್ಭದಲ್ಲಿ ಬುಡಕಟ್ಟು ಜನರ ಮೇಲೆ ಗ್ರಾಮದ ಮುಖ್ಯಸ್ಥರ ಕಡೆಯವರು ಗುಂಡಿನ ದಾಳಿ ನಡೆಸಿದ್ದರಿಂದ ಹತ್ತು ಮಂದಿ ಹತರಾಗಿ, 18 ಮಂದಿ ಗಾಯಗೊಂಡಿದ್ದರು. ಈ ಘಟನೆಯು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟುಮಾಡಿತ್ತು.

‘ಪ್ರಕರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲಾಗುವುದು’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದರು. ಮಾತ್ರವಲ್ಲದೆ ಐವರು ಅಧಿಕಾರಿಗಳನ್ನು ಮಾನತುಗೊಳಿಸಲಾಗಿದೆ. ಗ್ರಾಮದ ಮುಖ್ಯಸ್ಥ, ಅವರ ಸಹೋದರ ಸೇರಿ 29 ಮಂದಿಯನ್ನು ಬಂಧಿಸಲಾಗಿದೆ. ‘ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಲಾಗಿದ್ದು, 10 ದಿನದೊಳಗೆ ಈ ಸಮಿತಿಯು ವರದಿ ಸಲ್ಲಿಸಲಿದೆ’ ಎಂದು ಸಿ.ಎಂ ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದವರನ್ನು ಆಸ್ಪತ್ರೆಯಲ್ಲಿ ಭೇಟಿಮಾಡಿದ ಬಳಿಕ ಪ್ರಿಯಾಂಕಾ ಅವರು ಶುಕ್ರವಾರ ಸೋನ್‌ಭದ್ರ ಗ್ರಾಮದತ್ತ ಹೊರಟಿದ್ದರು. ಅವರನ್ನು ವಾರಾಣಸಿ– ಮಿರ್ಜಾಪುರ ಗಡಿಯಲ್ಲಿ ಪೊಲೀಸರು ತಡೆದರು.

‘ನನ್ನ ಮಗನ ವಯಸ್ಸಿನ ಬಾಲಕನಿಗೆ ಗುಂಡು ಹೊಡೆಯಲಾಗಿದೆ. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂತ್ರಸ್ತರನ್ನು ಭೇಟಿಮಾಡಿ ಸಾಂತ್ವನ ಹೇಳಲು ನಾನು ಸೋನ್‌ಭದ್ರಕ್ಕೆ ಹೊರಟಿದ್ದೆ. ಯಾವ ಕಾನೂನಿನಡಿ ನನ್ನನ್ನು ಬಂಧಿಸಲಾಗಿದೆ ಎಂಬುದನ್ನು ಪೊಲೀಸರು ತಿಳಿಸಬೇಕು’ ಎಂದು ಪ್ರಿಯಾಂಕಾ ಆಗ್ರಹಿಸಿದರು.

‘ಪ್ರಿಯಾಂಕಾ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಉತ್ತರಪ್ರದೇಶ ಸರ್ಕಾರವು ಪ್ರಜಾತಂತ್ರವನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದರು.

‘ಸಂತ್ರಸ್ತರ ಪರಿವಾರಕ್ಕೆ ಸಾಂತ್ವನ ಹೇಳುವುದು ಜನಪ್ರತಿನಿಧಿಗಳ ಕರ್ತವ್ಯ. ಅದಕ್ಕೆ ಅಡ್ಡಿಪಡಿಸುವ ಮೂಲಕ ಉತ್ತರಪ್ರದೇಶ ಸರ್ಕಾರ ಪ್ರಜಾಪ್ರಭುತ್ವವನ್ನು ಅವಮಾನಿಸಿದೆ. ಪ್ರಿಯಾಂಕಾ ಅವರನ್ನು ತಡೆಯುವ ಮೂಲಕ ಬುಡಕಟ್ಟು ಜನರ ಹತ್ಯೆಯ ಘಟನೆಯನ್ನು ಮುಚ್ಚಿಡಲಾದೀತೇ’ ಎಂದು ಕಾಂಗ್ರೆಸ್‌ ವಕ್ತಾರ ರಣ್‌ದೀಪ್‌ ಸುರ್ಜೆವಾಲಾ ಟ್ವೀಟ್‌ ಮೂಲಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

*
ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪ್ರಿಯಾಂಕಾ ಅವರನ್ನು ಬಂಧಿಸಲಾಗಿದೆ. ಈ ಕ್ರಮವು ಸರ್ಕಾರದ ಅಭದ್ರತೆಯ ಭಯವನ್ನು ಬಿಂಬಿಸುತ್ತಿದೆ.
-ರಾಹುಲ್‌ ಗಾಂಧಿ,ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT