ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಾಝಿ
ಶ್ರೀನಗರ: ಕೇಂದ್ರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸಾಗುತ್ತಿದ್ದ ಬಸ್ನ ಮೇಲೆ ಆತ್ಮಹತ್ಯಾ ದಾಳಿ ನಡೆಸಿದ್ದು ಜೈಷ್-ಎ-ಮೊಹಮ್ಮದ್ ಸಂಘಟನೆಯ ಆದಿಲ್ ಅಹಮದ್ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಗುಪ್ತಚರ ವಿಭಾಗ ಹೇಳುತ್ತಿರುವಂತೆ ಈತ ಯೋಜನೆಯನ್ನು ಕಾರ್ಯರೂಪಕ್ಕೆ ತಂದವನು ಮಾತ್ರ. ಈ ಯೋಜನೆಯನ್ನು ರೂಪಿಸಿದ್ದು ಮತ್ತೊಬ್ಬ. ಅವನೇ ಜೈಷ್ನ ಕಮಾಂಡರ್ ಅಬ್ದುಲ್ ರಶೀದ್ ಘಾಝಿ.
ಅಬ್ಲುಲ್ ರಶೀದ್ ಘಾಝಿ ಅಫ್ಘಾನಿಸ್ಥಾನದಲ್ಲಿ ತರಬೇತುಗೊಂಡದ್ದಷ್ಟೇ ಅಲ್ಲದೆ ಅಲ್ಲಿ ತಾಲಿಬಾನಿಗಳಿಗಾಗಿ ಸಕ್ರಿಯವಾಗಿದ್ದವನು. ಇವನ ‘ತಜ್ಞತೆ’ ಇರುವುದು ಸುಧಾರಿತ ಸ್ಫೋಟಕಗಳ ಬಳಕೆಯಲ್ಲಿ. ಇದೇ ಕಾರಣಕ್ಕಾಗಿ ಜೈಷ್-ಎ-ಮೊಹಮ್ಮದ್ ಸಂಘಟನೆ ಇವನಿಗೆ ಪುಲ್ವಾಮ ದಾಳಿಯನ್ನು ಯೋಜಿಸುವ ಹೊಣೆಯನ್ನು ನೀಡಿತ್ತು. ಡಿಸೆಂಬರ್ನಿಂದಲೇ ಈತ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಕೆಲಸದಲ್ಲಿ ಮಗ್ನನಾಗಿದ್ದರ ಬಗ್ಗೆ ಈಗಾಗಲೇ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸಂಸತ್ ಭವನದ ಮೇಲಿನ ದಾಳಿ ಪ್ರಕರಣದಲ್ಲಿ ಅಪರಾಧಿ ಅಫ್ಜಲ್ ಗುರುವಿನ ಮರಣದಂಡನೆಯ ದಿನವಾದ ಫೆ.9ರಂದೇ ಈ ದಾಳಿಗೆ ಸಿದ್ಧತೆಗಳಾಗಿದ್ದವು. ಜೈಷ್ ಉಗ್ರರ ವೈರ್ಲೆಸ್ ಸಂದೇಶಗಳಲ್ಲಿ ಈ ಅಂಶ ಪ್ರಸ್ತಾಪವಾಗಿದ್ದನ್ನು ಭಾರತದ ಗುಪ್ತಚರ ವಿಭಾಗ ಗಮನಿಸಿತ್ತು.
‘ಬಡೋ ಹೋನಾ ಚಾಹಿಯೆ. ಹಿಂದುಸ್ಥಾನ್ ರೋನಾ ಚಾಹಿಯೇ’ (ದಾಳಿ ಭಾರತ ಅಳುವಷ್ಟು ದೊಡ್ಡದಾಗಿರಬೇಕು) ಎಂಬ ಸಂದೇಶಕ್ಕನುಸಾರವಾಗಿ ಜೈಷ್ ಮುಖ್ಯಸ್ಥ ಮಸೂದ್ ಅಝರ್ ಸ್ಫೋಟಕ ತಜ್ಞ ಅಬ್ದುಲ್ ರಶೀದ್ ಘಾಝಿಯನ್ನು ಭಾರತಕ್ಕೆ ಕಳುಹಿಸಿದ್ದ ಎಂದು ವರದಿಗಳು ಹೇಳುತ್ತಿವೆ. ಡಿಸೆಂಬರ್ ತಿಂಗಳ ಮಧ್ಯದಲ್ಲೇ ಘಾಝಿ ಭಾರತಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.
ಈತ ಕಾಶ್ಮೀರಕ್ಕೆ ಬಂದದ್ದು ಮತ್ತು ಅಲ್ಲಿಂದ ಪುಲ್ವಾಮ ತಲುಪಿದ್ದೆಲ್ಲವೂ ಸಾರ್ವಜನಿಕ ಸಾರಿಗೆಯಲ್ಲಿ ಮತ್ತು ಕಾಲ್ನಡಿಗೆಯಲ್ಲಿ. ಖಾಸಗಿ ವಾಹನಗಳನ್ನು ಬಳಸದೇ ಇದ್ದುದರಿಂದ ಈತನ ಚಲನವಲನಗಳು ಯಾರ ಕಣ್ಣಿಗೂ ಬಿದ್ದಿಲ್ಲ. ಭಾರತೀಯ ಭದ್ರತಾ ಪಡೆಗಳು ಜೈಷ್ನ ಇನ್ನಿತರ ಕಮಾಂಡರ್ಗಳಾದ ತಲ್ಹಾ ಮತ್ತು ಉಸ್ಮಾನ್ರನ್ನು ಬಲಿ ಹಾಕಿದ್ದಕ್ಕೆ ಪ್ರತೀಕಾರವಾಗಿ ದಾಳಿಯನ್ನು ಯೋಜಿಸಲಾಯಿತು. ಉಸ್ಮಾನ್ನ ಅಂತ್ಯದ ವೇಳೆಯೇ ಜೈಷ್ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿಕೊಂಡಿತ್ತು. ಅದನ್ನು ಘಾಸಿ ಅನುಷ್ಠಾನಗೊಳಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಜೈಷ್-ಎ-ಮೊಹಮ್ಮದ್ ಸಂಘಟನೆಯ ಅಫ್ಝಲ್ ಗುರು ಸ್ಕ್ವಾಡ್ಗೂ ಈ ದಾಳಿಯಲ್ಲಿ ಪಾಲಿರಬೇಕೆಂದು ಊಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ತನಿಖೆಗಳೂ ನಡೆಯುತ್ತಿವೆ. ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಜೈಷ್ ಪರ ಒಲವುಳ್ಳ ಟೆಲಿಗ್ರಾಂ ಗ್ರೂಪ್ಗಳಲ್ಲಿ ‘ನಾವು ಭಾರತದ ವಿರುದ್ಧ ಸೇಡು ತೀರಿಸಿಕೊಂಡೆವು’ ಎಂಬರ್ಥದ ಸಂದೇಶಗಳು ಓಡಾಡಿದ್ದವು. ಇದರ ಹಿಂದೆಯೇ ದಾಳಿ ನಡೆಸಿದ ಭಯೋತ್ಪಾದ ಆದಿಲ್ ಅಹಮದ್ನ ವಿಡಿಯೋಗಳೂ ಪ್ರತ್ಯಕ್ಷವಾದವು. ಈ ವಿಡಿಯೋದಲ್ಲಿ ಅವನು ಭಾರತೀಯ ಸೇನೆ ಮಸೂದ್ ಅಝರ್ನ ಸಂಬಂಧಿಗಳನ್ನುಹತ್ಯೆಗೈದದ್ದೇ ಈ ದಾಳಿಗೆ ಕಾರಣ ಎಂದು ಅವನು ಹೇಳಿದ್ದಾನೆ.
ದಾಳಿಗೆ ಮುನ್ನ ಭಾರತೀಯ ಭದ್ರತಾಪಡೆಗಳನ್ನು ಹಾದಿ ತಪ್ಪಿಸುವ ಕೆಲಸವನ್ನೂ ಜೈಷ್ ಮಾಡಿತ್ತು. ಫೆ.10ರಂದು ಅದು ನಡೆಸಿದ ಗ್ರೆನೇಡ್ ದಾಳಿಯ ಉದ್ದೇಶ ಭದ್ರತಾ ಪಡೆಗಳ ಗಮನವನ್ನು ಬೇರೆಡೆಗೆ ಸೆಳೆಯುವುದಾಗಿತ್ತು. ಆ ದಿನ ಅಫ್ಜಲ್ ಗುರು ಸ್ಕ್ವಾಡ್ನ ಸದಸ್ಯರು ಶ್ರೀನಗರದ ಲಾಲ್ ಚೌಕ್ನಲ್ಲಿ ಸಿಆರ್ಪಿಎಫ್ನ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು. ಫೆ.14ರ ದಾಳಿಯ ಯೋಜನೆಗಳನ್ನು ಸೇನೆ ಗಮನಿಸದೇ ಇರಲಿ ಎಂಬುದು ಈ ದಾಳಿಯ ಉದ್ದೇಶವಾಗಿತ್ತೆಂದು ಗುಪ್ತಚರ ವಿಭಾಗ ಅನುಮಾನಿಸುತ್ತಿದೆ.
ಇವನ್ನೂ ಒದಿ...
* ಕಾಶ್ಮೀರದ ಅವಂತಿಪೋರಾದಲ್ಲಿ ಉಗ್ರರ ದಾಳಿ: 44 ಯೋಧರು ಬಲಿ
* ‘ಉಗ್ರರ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವುದರಲ್ಲಿ ವಿಫಲವಾದದ್ದೇ ದಾಳಿಗೆ ಕಾರಣ’
* ಯೋಧರ ತ್ಯಾಗಕ್ಕೆ ಪ್ರತೀಕಾರ ಖಚಿತ
* ರಕ್ಷಣಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ, ಯೋಧರ ಶೌರ್ಯದಲ್ಲಿ ನಂಬಿಕೆ ಇದೆ: ಮೋದಿ
* ಪುಲ್ವಾಮಾ ದಾಳಿ ಪಾಕಿಸ್ತಾನ ‘ಹತಾಶೆ’ಯ ಫಲಿತಾಂಶ: ಸತ್ಯಪಾಲ್ ಮಲಿಕ್ ಹೇಳಿಕೆ
* ದಾಳಿ ನಡೆಸಿದ ಉಗ್ರ ಸಂಘಟನೆ ಮುಖ್ಯಸ್ಥ ಅಜರ್ಗೆ ಪಾಕ್ನಲ್ಲಿ ಪೂರ್ಣ ಸ್ವಾತಂತ್ರ್ಯ
* ‘ಪಾಕಿಸ್ತಾನ ನಾಶವಾಗದ ಹೊರತು, ವಿಶ್ವ ಶಾಂತಿ–ಪ್ರಾದೇಶಿಕ ಭದ್ರತೆ ಅಸಾಧ್ಯ’
* ಸೇನಾ ಶಿಬಿರದಲ್ಲಿ ಹುತಾತ್ಮ ಯೋಧರಿಗೆ ನಮನ
* ಹುತಾತ್ಮ ಯೋಧನಿಗೆ ಸ್ವಂತ ಜಮೀನು ಇಲ್ಲ: ಸರ್ಕಾರಿ ಭೂಮಿಯಲ್ಲಿ ಅಂತ್ಯಕ್ರಿಯೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.