ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರಪಟ್ಟಕ್ಕೆ ಪುಲ್ವಾಮಾ ದಾಳಿಯೂ ಕಾರಣ

Last Updated 2 ಮೇ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ‘ಜಾಗತಿಕ ಉಗ್ರ’ ಎಂದು ಘೋಷಿಸುವಲ್ಲಿ ಪುಲ್ವಾಮಾ ಮೇಲಿನ ಭಯೋತ್ಪಾದನಾ ದಾಳಿಯ ಪಾತ್ರವೂ ಇದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಪುಲ್ವಾಮಾ ದಾಳಿಯಲ್ಲಿನ ಪಾತ್ರವೂ ಸೇರಿ ಅಜರ್‌ ಬಗ್ಗೆ ಇರುವ ಎಲ್ಲ ‘ರಾಜಕೀಯ ಉಲ್ಲೇಖ’ಗಳನ್ನು ಕೈಬಿಡುವ ಭರವಸೆ ಕೊಟ್ಟ ಬಳಿಕವೇ ಆತನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಒಪ್ಪಿಗೆ ಕೊಟ್ಟಿದ್ದಾಗಿ ಪಾಕಿಸ್ತಾನ ಹೇಳಿದೆ. ಅದಕ್ಕೆ ಭಾರತ ಈ ರೀತಿ ಪ್ರತಿಕ್ರಿಯೆ ಕೊಟ್ಟಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಭಾರಿ ರಾಜತಾಂತ್ರಿಕ ಹಿನ್ನಡೆಯಿಂದ ಗಮನ ಬೇರೆಡೆಗೆ ಸೆಳೆಯುವುದಕ್ಕಾಗಿ ಪಾಕಿಸ್ತಾನ ಹೀಗೆ ಹೇಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

‘ಯಾವುದೇ ನಿರ್ದಿಷ್ಟ ಘಟನೆಯ ಆಧಾರದಲ್ಲಿ ಆತನನ್ನು ಜಾಗತಿಕ ಉಗ್ರ ಎಂದು ಹೆಸರಿಸಲಾಗಿಲ್ಲ. ಬದಲಿಗೆ ನಾವು ಸಲ್ಲಿಸಿರುವ ವಿವಿಧ ಸಾಕ್ಷ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್ ಹೇಳಿದ್ದಾರೆ.

ವಿಶ್ವ ಸಂಸ್ಥೆಯ ಅಧಿಸೂಚನೆಯು ಆತ ನಡೆಸಿರುವ ಎಲ್ಲ ಭಯೋತ್ಪಾದನಾ ಕೃತ್ಯಗಳನ್ನೂ ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವುದಕ್ಕೆ ಒಡ್ಡಿದ್ದ ತಡೆಯನ್ನು ಹಿಂದಕ್ಕೆ ಪಡೆಯಲು ಚೀನಾಕ್ಕೆ ಭಾರತ ಯಾವುದಾದರೂ ಭರವಸೆ ಕೊಟ್ಟಿದೆಯೇ ಎಂಬ ಪ್ರಶ್ನೆಗೆ, ‘ದೇಶದ ಸುರಕ್ಷತೆಯ ವಿಚಾರದಲ್ಲಿ ಭಾರತ ಯಾವುದೇ ರಾಜಿಗೆ ಸಿದ್ಧ ಇಲ್ಲ. ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವುದಷ್ಟೇ ನಮ್ಮ ಗುರಿಯಾಗಿತ್ತು’ ಎಂದರು.

ಚೀನಾದ ಕ್ರಮದಿಂದಾಗಿ ಭಾರತದ ಜತೆಗಿನ ಆ ದೇಶದ ಸಂಬಂಧವು ಇನ್ನಷ್ಟು ಉತ್ತಮಗೊಳ್ಳಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಎಲ್ಲರೂ ನಿರ್ಬಂಧ ಪಾಲಿಸಲಿ’: ‘ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಯು ಜಾಗತಿಕ ಉಗ್ರ ಮಸೂದ್ ಅಜರ್‌ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಪಾಲಿಸಬೇಕು’ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.

ಇಮ್ರಾನ್‌ ಚೀನಾ ಭೇಟಿ ನಿರ್ಣಾಯಕ
ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಚೀನಾಕ್ಕೆ ಇತ್ತೀಚೆಗೆ ನೀಡಿದ ಭೇಟಿಯು ಅಜರ್‌ನನ್ನು ‘ಉಗ್ರ’ ಎಂದು ಘೋಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು ಎಂದು ಮಾಧ್ಯಮಗಳು ವರದಿ ಮಾಡಿವೆ. ಅಜರ್‌ನ ನಿಷೇಧಕ್ಕೆ ಒಡ್ಡಿದ್ದ ವಿರೋಧವನ್ನು ಕೈಬಿಡಲು ಎರಡೂ ದೇಶಗಳು ಈ ಸಭೆಯಲ್ಲಿ ಒಪ್ಪಿಕೊಂಡವು ಎಂದು ಹೇಳಲಾಗಿದೆ.

ಅಜರ್‌ಗೆ ನಿಷೇಧ ಹೇರುವ ವಿಚಾರದಲ್ಲಿ ಪಾಕಿಸ್ತಾನ ಮತ್ತು ಚೀನಾ ವ್ಯಾಪಕವಾದ ಸಮಾಲೋಚನೆ ನಡೆಸಿವೆ ಎಂದು ಅಜರ್‌ನನ್ನು ಉಗ್ರ ಎಂದು ಘೋಷಿಸಿದ ಬಳಿಕ ‘ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹೇಳಿದೆ.

ಬಿಜೆಪಿಗೆ ಬಲ ತುಂಬಿದ ನಿರ್ಣಯ
ಈ ಚುನಾವಣೆಯಲ್ಲಿ ರಾಷ್ಟ್ರೀಯತೆಯನ್ನೇ ಮುಖ್ಯ ವಿಚಾರವಾಗಿ ಇರಿಸಿಕೊಂಡಿರುವ ಬಿಜೆಪಿಗೆ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಿರುವುದು ಮತ್ತಷ್ಟು ಬಲ ತುಂಬಿದೆ. ಪಕ್ಷವು ಗೆಲ್ಲುವ ಸಾಧ್ಯತೆಯನ್ನು ಈ ಬೆಳವಣಿಗೆ ಉಜ್ವಲಗೊಳಿಸಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

2014ರ ಚುನಾವಣೆಯಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿತ್ತು. ಈ ಪ‍್ರದೇಶ ಮತ್ತು ಇತರೆಡೆಗಳಲ್ಲಿನ 169 ಕ್ಷೇತ್ರಗಳಿಗೆ ಇನ್ನಷ್ಟೇ ಮತದಾನ ನಡೆಯಬೇಕಿದೆ. ಹಾಗಾಗಿ, ರಾಷ್ಟ್ರೀಯತೆಯನ್ನು ಮುಂದಿರಿಸಿಕೊಂಡು ಅಲೆ ಸೃಷ್ಟಿಸಲು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಧಾರ ನೆರವಾಗಲಿದೆ ಎಂದು ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ನರೇಂದ್ರ ಮೋದಿ ಅವರಂತಹ ಪ್ರಬಲ ನಾಯಕ ದೇಶಕ್ಕೆ ಬೇಕಾಗಿದೆ ಎಂಬುದರ ಸುತ್ತವೇ ಬಿಜೆಪಿಯ ರಾಷ್ಟ್ರೀಯತೆ ಕಾರ್ಯಸೂಚಿ ಸುತ್ತುತ್ತಿದೆ. ಅಜರ್‌ ಮೇಲಿನ ನಿಷೇಧ ಪ್ರಧಾನಿಯ ಕಿರೀಟಕ್ಕೆ ಮತ್ತೊಂದು ಗರಿಯಾಗಿದೆ. ವಿಶ್ವಸಂಸ್ಥೆಯ ನಿರ್ಧಾರವು ಬಿಜೆಪಿಗೆ ಅತ್ಯಂತ ಅನುಕೂಲಕರ ಸಮಯದಲ್ಲಿ ಹೊರಬಿದ್ದಿದೆ ಎಂದು ಬಿಜೆಪಿಯ ಮುಖಂಡರೊಬ್ಬರು ಹೇಳಿದ್ದಾರೆ.

‘ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಇದು ಮೂಡಿಸಲಿದೆ’ ಎಂದು ಜೆಎನ್‌ಯು ಪ್ರಾಧ್ಯಾಪಕ ಹರಿ ಓಂ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

‘ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಿ’
ಭಯೋತ್ಪಾದನೆಗೆ ಹಣಕಾಸು ಹರಿವನ್ನು ತಡೆಯುವ ಅಂತರರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಲು ಪಾಕಿಸ್ತಾನವು ವಿಫಲವಾಗಿದೆ. ಹಾಗಾಗಿ, ಆ ದೇಶವನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಹಣಕಾಸು ಕಾರ್ಯಪಡೆಯನ್ನು (ಎಫ್‌ಎಟಿಎಫ್‌) ಒತ್ತಾಯಿಸಿದ್ದಾರೆ.

ಭಯೋತ್ಪಾದನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಮತ್ತು ಹಣ ಪೂರೈಕೆಯನ್ನು ತಡೆಯಲು ಪಾಕಿಸ್ತಾನ ಶಕ್ತವಾಗಿಲ್ಲ ಎಂಬ ಕಾರಣಕ್ಕೆ ಪಾಕಿಸ್ತಾನವನ್ನು ಈಗಾಗಲೇ ‘ಬೂದು ಪಟ್ಟಿ’ಗೆ ಎಫ್‌ಎಟಿಎಫ್‌ ಸೇರಿಸಿದೆ. ಭಯೋತ್ಪಾದನೆಗೆ ಹಣಕಾಸು ಪೂರೈಕೆಯ ಮೇಲೆ ಕಣ್ಣಿಡುವ ಕೆಲಸವನ್ನು ಎಫ್‌ಎಟಿಎಫ್‌ ಮಾಡುತ್ತಿದೆ. ಸಂಘಟನೆಯಲ್ಲಿ ಸದಸ್ಯತ್ವ ಹೊಂದಿರುವ ರಾಷ್ಟ್ರಗಳ ವಿಚಾರದಲ್ಲಿ ಎಫ್‌ಎಟಿಎಫ್‌ ಶಿಫಾರಸುಗಳನ್ನು ಮಾಡುತ್ತದೆ. ಆದರೆ, ನಿರ್ಬಂಧ ಹೇರುವ ಅಧಿಕಾರ ಈ ಸಂಘಟನೆಗೆ ಇಲ್ಲ.

ಗೆಲುವು ನಿಮ್ಮೊಬ್ಬರದ್ದೇ ಅಲ್ಲ
ಇದು ನಿಮ್ಮ ಒಂದು ಸರ್ಕಾರದ ಸಾಧನೆ ಎಂದು ಬೆನ್ನುತಟ್ಟಿಕೊಳ್ಳುವುದನ್ನು ನಿಲ್ಲಿಸಿ. ಇಂತಹ ಒಂದು ಪ್ರಸ್ತಾವವನ್ನು ಮೊದಲು ಇರಿಸಿದ್ದು ಯುಪಿಎ ಸರ್ಕಾರ. ಉಗ್ರ ಹಫೀಸ್ ಸಯೀದ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ನಾವು ಸೇರಿಸಿದ್ದೆವು. ಆದರೆ ಬಿಜೆಪಿ ಸರ್ಕಾರ ಮಸೂದ್ ಅಜರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು. ಈ ಸತ್ಯವನ್ನು ನೀವೇಕೆ ಹೇಳುವುದಿಲ್ಲ? ಇದು ನಮ್ಮ ರಾಜತಾಂತ್ರಿಕ ಗೆಲುವು ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ.ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲುಪುಲ್ವಾಮಾ ದಾಳಿಯೊಂದೇ ಕಾರಣವಲ್ಲ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಪಾಕಿಸ್ತಾನದ ಈ ದುರ್ನಡತೆ ವಿರುದ್ಧ ಸರ್ಕಾರವು ತಕ್ಷಣವೇ ತನ್ನ ಅಸಮಾಧಾನ ದಾಖಲಿಸಬೇಕು. ಸಾಧ್ವಿ ಪ್ರಜ್ಞಾ ಅವರ ಶಾಪದಿಂದ ಜನ ಸಾಯುವುದು ನಿಜವಾದರೆ, ಮಸೂದ್‌ಗೆ ಶಾಪ ನೀಡುವಂತೆ ಪ್ರಜ್ಞಾ ಅವರನ್ನು ಬಿಜೆಪಿ ಕೇಳಿಕೊಳ್ಳಲಿ
–ರಾಜೀವ್ ಶುಕ್ಲಾ,ಕಾಂಗ್ರೆಸ್ ವಕ್ತಾರ

***
ವಿಪಕ್ಷಗಳಿಗೆ ಸೋಲಿನ ಭಯ
ಇದು ಭಾರತೀಯರಿಗೆ ಹೆಮ್ಮೆಯ ವಿಷಯ. ಇಡೀ ದೇಶ ಈಗ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುತ್ತಿದೆ. ಆದರೆ ಈ ಸಂಭ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳು ಹಿಂದೇಟು ಹಾಕುತ್ತಿವೆ. ನಮ್ಮ ಈ ಗೆಲುವಿನ ಕಾರಣಕ್ಕೆ ತಾವು ಚುನಾವಣೆಯಲ್ಲಿ ಬೆಲೆ ತೆರಬೇಕಾಗುತ್ತದೆ ಎಂಬ ಭಯವಿಪಕ್ಷಗಳಿಗೆ ಇರಬೇಕು. ದೇಶದ ವಿವಿಧ ಜೈಲಿನಲ್ಲಿದ್ದ 25 ಉಗ್ರರನ್ನು ಯುಪಿಎ ಬಿಡುಗಡೆ ಮಾಡಿತ್ತು. ವಿಶ್ವಸಂಸ್ಥೆಯದ್ದು ಉಗ್ರರ ಪಟ್ಟಿಯೇ ಹೊರತು, ಉಗ್ರರ ವೈಯಕ್ತಿಕ ವಿವರಗಳ ಕಡತವಲ್ಲ. ಅದರಲ್ಲಿ ಉಗ್ರರ ಎಲ್ಲಾ ಚಟುವಟಿಕೆಗಳನ್ನು ನಮೂದಿಸಲು ಸಾಧ್ಯವಿಲ್ಲ
–ಅರುಣ್ ಜೇಟ್ಲಿ,ಕೇಂದ್ರ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT