ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಕೈಗೆಟುಕದ ಅಧಿಕಾರ

Last Updated 3 ಜುಲೈ 2019, 19:56 IST
ಅಕ್ಷರ ಗಾತ್ರ

ನವದೆಹಲಿ: ಸುಮಾರು ಆರೂವರೆ ವರ್ಷಗಳ ಹಿಂದೆ, 2013ರ ಜನವರಿ 20ರಂದು ರಾಹುಲ್‌ ಗಾಂಧಿ ಅವರು ಎಐಸಿಸಿಯ ಕಾರ್ಯದರ್ಶಿ ಹುದ್ದೆಯಿಂದ ಬಡ್ತಿ ಪಡೆದು ಪಕ್ಷದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಬಳಿಕ ಅವರು ಮಾಡಿದ ಭಾಷಣದಲ್ಲಿ ಮುಖ್ಯವಾಗಿ ಉಲ್ಲೇಖಿಸಿದ್ದು, ‘ಅಧಿಕಾರ ಎಂಬ ವಿಷ’ದ ವಿಚಾರವನ್ನು. ಅಧಿಕಾರ ಯಾವತ್ತೂ ಅವರ ಕೈಗೆಟುಕಲೇ ಇಲ್ಲ ಎಂಬುದು ವಿಪರ್ಯಾಸ.

ಅದಾಗಿ ಸುಮಾರು ನಾಲ್ಕು ವರ್ಷಗಳ ಬಳಿಕ, ಅಂದರೆ 2017ರಲ್ಲಿ ರಾಹುಲ್‌ ಅವರು ಕಾಂಗ್ರೆಸ್‌ನ ಅಧ್ಯಕ್ಷ ಗಾದಿಯನ್ನು ಏರಿದರು. ಆದರೆ ಅಲ್ಲಿ ಹೆಚ್ಚುಕಾಲ ಉಳಿಯಲಾಗದೆ, ಇತ್ತೀಚೆಗೆ ರಾಜೀನಾಮೆ ನೀಡಿ ಅಧಿಕಾರದಿಂದ ದೂರ ಉಳಿಯಲು ಬಯಸಿದರು.

‘ಬಲಿಷ್ಠರು ಅಧಿಕಾರಕ್ಕೆ ಅಂಟಿಕೊಂಡೇ ಇರುವುದು ಭಾರತದಲ್ಲಿ ಸಾಮಾನ್ಯ. ಇಲ್ಲಿ ಅಧಿಕಾರವನ್ನು ಯಾರೂ ತ್ಯಾಗ ಮಾಡುವುದಿಲ್ಲ. ಆದರೆ ಅಧಿಕಾರದ ದಾಹವನ್ನು ಬಿಟ್ಟು, ತೀವ್ರವಾದ ಸೈದ್ಧಾಂತಿಕ ಹೋರಾಟ ಮಾಡದ ಹೊರತು ನಾವು ನಮ್ಮ ವೈರಿಗಳ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಿಲ್ಲ...’ ತಮ್ಮ ರಾಜೀನಾಮೆಯ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪುನರುಚ್ಚರಿಸಿರುವ ರಾಹುಲ್‌ ಗಾಂಧಿ ಅವರು ಬುಧವಾರ ಆಡಿರುವ ಮಾತುಗಳಿವು.

2013ರಲ್ಲಿ ಜೈಪುರದಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಉಪಾಧ್ಯಕ್ಷ ಹುದ್ದೆಗೆ ಏರಿದ್ದ ರಾಹುಲ್‌, ‘ಅಧಿಕಾರದ ವಿಷ’ ಹೇಗೆ ಮನುಷ್ಯನನ್ನು ಆವರಿಸಿಕೊಳ್ಳುತ್ತದೆ ಎಂಬುದನ್ನು ತಮ್ಮ ತಾಯಿ, ಅಜ್ಜಿಯರು ಅನುಭವಿಸಿದ ಕಷ್ಟಗಳನ್ನು ಉಲ್ಲೇಖಿಸುತ್ತ ವಿವರಿಸಿದ್ದರು.

ಪಕ್ಷದ ಅಧ್ಯಕ್ಷರಾದಾಗ, ‘ಕಾಂಗ್ರೆಸ್‌ ಪಕ್ಷವು ದೇಶದ ಎಲ್ಲಾ ಭಾಗಗಳ, ಎಲ್ಲಾ ಸಮುದಾಯಗಳ ಪಕ್ಷವಾಗಬೇಕು. ಸಿದ್ಧಾಂತಗಳಿಗೆ ಬದ್ಧವಾದ ಪಕ್ಷವಾಗಿರಬೇಕು’ ಎಂದು ಕರೆ ಕೊಟ್ಟಿದ್ದರು. ‘ನನ್ನ ಹೋರಾಟ ರಾಜಕೀಯ ಅಧಿಕಾರ ಪಡೆಯಲು ಸೀಮಿತವಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ಹಾಗೂ ಅವರು ಸಾಂವಿಧಾನಿಕ ಸಂಸ್ಥೆಗಳನ್ನು ಹಾಳುಮಾಡುತ್ತಿರುವುದರ ವಿರುದ್ಧ ನಾನು ಹೋರಾಡಿದ್ದೇನೆ’ ಎಂದರು. ಜೊತೆಗೆ ‘ಅನೇಕ ಸಂದರ್ಭಗಳಲ್ಲಿ ನಾನು ಏಕಾಂಗಿಯಾಗಿದ್ದೆ...’ ಎಂದು ಹೇಳಲು ಮರೆಯಲಿಲ್ಲ.

2014ರ ಲೋಕಸಭಾಚುನಾವಣೆಯಲ್ಲಾದ ಸೋಲು ಮತ್ತು ಆ ನಂತರ ಉತ್ತರ ಪ್ರದೇಶವಿಧಾನಸಭೆ ಚುನಾವಣೆಯಲ್ಲಿ ಆದ ಸೋಲಿನಿಂದ ರಾಹುಲ್‌ ಅವರ ‘ಮತಗಳನ್ನು ಸೆಳೆಯುವ ಶಕ್ತಿ’ಯ ಬಗ್ಗೆ ಪ್ರಶ್ನೆಗಳೆದ್ದವು. ಸರಣಿ ಸೋಲಿನಿಂದ ಕಂಗೆಟ್ಟ ರಾಹುಲ್‌, 2015ರಲ್ಲಿ ಕೆಲವು ದಿನಗಳ ಕಾಲ ಅಜ್ಞಾತ ಸ್ಥಳಕ್ಕೆ ತೆರಳಿ ವಿಶ್ರಾಂತಿ ಪಡೆದರು. ಬಿಜೆಪಿಯವರು ಇದನ್ನೇ ಟೀಕೆಗೆ ಅಸ್ತ್ರವಾಗಿಸಿಕೊಂಡರು.

2019ರ ಲೋಕಸಭಾ ಚುನಾವಣೆಯು ಒಂದರ್ಥದಲ್ಲಿ ರಾಹುಲ್‌ ಅವರು ಅಧ್ಯಕ್ಷ ಹುದ್ದೆಯನ್ನು ತೊರೆಯುವುದನ್ನು ಅನಿವಾರ್ಯ
ವಾಗಿಸಿತು. ಕಾಂಗ್ರೆಸ್‌ ಪಕ್ಷವು ಇತಿಹಾಸದಲ್ಲಿ ಎರಡನೇ ಅತಿ ಕೆಟ್ಟ ಸ್ಥಿತಿಗೆ ಕುಸಿದದ್ದು ಒಂದೆಡೆಯಾದರೆ, ಪಾರಂಪರಿಕವಾಗಿ ಗಾಂಧಿ ಪರಿವಾರಕ್ಕೆ ಸೇರಿದ್ದು ಎನ್ನಲಾದ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್‌ ಸೋತದ್ದು ಅವರಿಗೆ ಬಹುದೊಡ್ಡ ಹಿನ್ನಡೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT