ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ್ಯವಾದಾಗ ಸುವಾಸನೆ!

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

1. ನನ್ನ ವಯಸ್ಸು 32. ನನಗೊಂದು ವಿಚಿತ್ರವಾದ ಕಾಯಿಲೆ ಇದೆ. ಅದೇನೆಂದರೆ ನನಗೆ ಯಾವುದಾದರೂ ವಾಸನೆ ಮೂಗಿಗೆ ಬಡಿದ ಕೂಡಲೇ ತಲೆನೋವು ಆರಂಭವಾಗುತ್ತದೆ. ಗುಟ್ಕಾ, ಸೆಂಟು, ಊದಿನಕಡ್ಡಿ – ಹೀಗೆ ಏನೇ ಇರಲಿ ಅದರ ವಾಸನೆ ನನಗೆ ಸಹಿಸಲು ಸಾಧ್ಯವಾಗುವುದಿಲ್ಲ. ಗುಟ್ಕಾ, ಪಾನ್ ಅಥವಾ ಸೆಂಟನ್ನು ಪೂಸಿಕೊಂಡವರು ಬಳಿಗೆ ಬಂದ ತಕ್ಷಣ ಮೂಗಿಗೆ ಬಟ್ಟೆ ಕಟ್ಟಿಕೊಳ್ಳುತ್ತೇನೆ. ಇದರಿಂದ ಅವರಿಗೆ ತುಂಬಾನೇ ಮುಜುಗರವಾಗುತ್ತದೆ, ಆದರೂ ನನ್ನಿಂದ ಹಾಗೇ ಮಾಡದಿರಲು ಸಾಧ್ಯವಿಲ್ಲ. ಈ ಸಮಸ್ಯೆಗೆ ಪರಿಹಾರ ತಿಳಿಸಿ.
ಲತಾ, ಬೆಂಗಳೂರು

ಹಲವು ಜನರು ಸುಗಂಧ ಸಂವೇದನೆಯಿಂದ ಬಳಲುತ್ತಿರುತ್ತಾರೆ. ಈ ಸ್ಥಿತಿಯೂ ಸೀನು, ಅತಿಯಾದ ತಲೆನೋವು, ಮೈಗ್ರೇನ್ ಮತ್ತು ಇನ್ನೂ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು. ಅನೇಕರಿಗೆ ಈ ರೀತಿ ಸುಗಂಧ ಬೀರುವ ವಸ್ತುಗಳು ಕಿರಿಕಿರಿ ಉಂಟು ಮಾಡುತ್ತದೆ. ಪರ್ಪ್ಯೂಮ್‌ ಮತ್ತು ಸೆಂಟುಗಳು ಅಥವಾ ಅತಿಯಾದ ಸುವಾಸನೆ ಬೀರುವ ವಸ್ತುಗಳಲ್ಲಿ ಅಲರ್ಜಿ ತರುವ ರಾಸಾಯನಿಕ ಅಂಶಗಳು ಇರುವುದಿಲ್ಲ. ಆದರೂ ಕೆಲವೊಬ್ಬರಿಗೆ ಇದರಲ್ಲಿನ ಅಂಶ ಉದ್ರೇಕಗೊಳಿಸುತ್ತದೆ. ಇದರಿಂದ ಅವರಿಗೆ ತಲೆನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಈ ಅಂಶವು ಸೀನಿನಂತಹ ಅಲರ್ಜಿಗೂ ಕಾರಣವಾಗಬಹುದು. ಈ ರೀತಿಯ ಇರಿಟೆಂಸ್ಸ್ ಎನ್ನಿಸುವ ಅಂಶಗಳಿಂದ ಜನರಲ್ಲಿ ಅತಿಯಾದ ತಲೆನೋವು ಹಾಗೂ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ.

ಯಾವಾಗ ನಿಮಗೆ ಇತರರು ಪೂಸಿಕೊಳ್ಳುವ ಸೆಂಟ್ ಅಥವಾ ತಿನ್ನುವ ತಂಬಾಕಿನ ವಾಸನೆ ಸಹಿಸಲು ಸಾಧ್ಯವಾಗುವುದಿಲ್ಲವೋ ಅಥವಾ ನಿಮ್ಮ ನಿಯಂತ್ರಣಕ್ಕೆ ಬರುವುದಿಲ್ಲವೋ ಆಗ ಈ ಕೆಲವು ದಾರಿಗಳನ್ನು ನೀವು ಅನುಸರಿಬಹುದು. ಇದರಿಂದ ನಿಮ್ಮ ತಲೆನೋವು ಕಡಿಮೆಯಾಗಬಹುದು.

ಸುವಾಸನೆಯನ್ನು ಸಹಿಸಲು ಸಾಧ್ಯವಾಗದೇ ಇದ್ದಾಗ ಅದನ್ನು ನಿಯಂತ್ರಿಸಲು ಇರುವ ಉತ್ತಮ ಮಾರ್ಗವೆಂದರೆ ಅದನ್ನು ನಿರಾಕರಿಸಿ. ನೀವೇ ಉಪಯೋಗಿಸುವ ಯಾವುದೇ ಒಂದು ಪರ್ಪ್ಯೂಮ್ ನಿಮಗೆ ಆಗುತ್ತಿಲ್ಲ ಎಂದರೆ ಅದನ್ನು ಉಪಯೋಗಿಸುವುದನ್ನು ನಿಲ್ಲಿಸಿ. ನಿಮ್ಮ ಸ್ನೇಹಿತ ಅಥವಾ ಜೊತೆ ಕೆಲಸ ಮಾಡುವ ವ್ಯಕ್ತಿಯ ಪರ್ಪ್ಯೂಮ್ ನಿಮಗೆ ಇಷ್ಟವಾಗುತ್ತಿಲ್ಲ ಎಂದರೆ ಅವರ ಬಳಿ ಅದನ್ನು ಬದಲಾಯಿಸಿಕೊಳ್ಳುವಂತೆ ವಿನಂತಿಸಿಕೊಳ್ಳಿ. ಯಾರೂ ನಿಮ್ಮ ಮಾತನ್ನು ಕೇಳಿಸಿಕೊಳ್ಳದಿದ್ದರೆ ನಿಮಗೆ ಸಹ್ಯವಾಗದ ವಾಸನೆ ಬರುವವರ ಬಳಿ ಹೋಗುವುದನ್ನು ನಿಲ್ಲಿಸಿ. ತಲೆನೋವಿನಿಂದ ಹೊರಬರಲು ಇರುವ ಇನ್ನೂ ಒಂದು ದಾರಿಯೆಂದರೆ ಕಡಿಮೆಯಾಗುವವರೆಗೂ ಕತ್ತಲೆಕೋಣೆಯಲ್ಲಿ ಮಲಗಿ ಮತ್ತು ನಿಮಗೆ ಆರಾಮ ಎನ್ನಿಸುವವರೆಗೂ ಹಣೆಯನ್ನು ಮಸಾಜ್ ಮಾಡಿಕೊಳ್ಳಿ

ನಿಮಗೆ ಸಹ್ಯವಾಗದ ವಾಸನೆಯನ್ನು ತಡೆಯಲು ನಿಮ್ಮ ಮೂಗಿಗೆ ಬಟ್ಟೆಯನ್ನು ಕಟ್ಟಿಕೊಳ್ಳಲು ಹಿಂಜರಿಯಬೇಡಿ. ನಿಮ್ಮ ಸುತ್ತಲಿನ ಜನರೊಂದಿಗೆ ಪ್ರಾಮಾಣಿಕವಾಗಿ ನಿಮಗಿರುವ ಸಮಸ್ಯೆಯ ಬಗ್ಗೆ ತಿಳಿಸಿ. ಆಗ ಅವರು ನಿಮ್ಮನ್ನು ತಪ್ಪಾಗಿ ತಿಳಿಯುವುದಿಲ್ಲ. ನೀವು ಮೈಗ್ರೇನ್‌ನಿಂದ ಬಳಲುತ್ತಿರಬಹುದು. ಯಾವ ಅಂಶ ನಿಮ್ಮಲ್ಲಿ ಮೈಗ್ರೇನ್‌ಗೆ ಕಾರಣವಾಗುತ್ತಿದೆ ಎಂಬುದನ್ನು ನೀವೇ ತಿಳಿದುಕೊಳ್ಳಿ. ಉತ್ತಮ ಡಾಕ್ಟರ್‌ ಅನ್ನು ನೋಡಿ. ಅವರು ನಿಮಗಿರುವುದು ಅಲರ್ಜಿಯೇ ಅಥವಾ ಮೈಗ್ರೇನ್‌ ಸಮಸ್ಯೆಯೇ ಎಂಬುದನ್ನು ತಿಳಿಸುತ್ತಾರೆ. ಚಿಕಿತ್ಸೆ ನೀಡುವ ಮೂಲಕ ನಿಮಗಿರುವ ತಲೆನೋವು ಹೋಗಿಸಲು ಸಹಾಯ ಮಾಡುತ್ತಾರೆ.

2. ನನಗೆ 28 ವರ್ಷ. ನನಗೆ ಜೀವನವೇ ಸಾಕಾಗಿದೆ; ಏಕೆ ಎಂಬುದು ಅರ್ಥವಾಗುತ್ತಿಲ್ಲ. ಕೆಲಸ ಇದೆ, ಇನ್ನು ಮದುವೆ ಆಗಿಲ್ಲ. ಜೀವನಪೂರ್ತಿ ಒಂಟಿಯಾಗಿ ಕಳೆದುಬಿಡುತ್ತೇನೆ ಎಂಬ ಭಯ ಶುರುವಾಗಿದೆ. ನನಗೆ ಸಿಟ್ಟು ಜಾಸ್ತಿ. ಅದರಿಂದಾಗಿಯೇ ಎಲ್ಲರನ್ನೂ ಕಳೆದುಕೊಳ್ಳುತ್ತೇನೆ ಎನ್ನುವ ಭಯ ಶುರುವಾಗಿದೆ. ಯಾವಾಗಲೂ ಸಾಯುತ್ತೇನೆ ಎನ್ನುವ ಭಯವೇ ಕಾಡುತ್ತಿದೆ. ಒಂಟಿತನದ ಆತಂಕ ಹೋಗಲು ಏನು ಮಾಡಬೇಕು?
ಹೆಸರು, ಊರು ಬೇಡ

ತಾಳ್ಮೆಯನ್ನು ಕಳೆದುಕೊಂಡು, ಕೋಪವನ್ನು ಮಾಡಿಕೊಳ್ಳುವುದು ನಿಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ನೀವು ಮುಂಗೋಪಿ ಎನ್ನುವುದು ನಿಮಗೆ ತಿಳಿದಿದೆ. ಅದರಿಂದ ಹೊರಗೆ ಬರಲು ಪ್ರಯತ್ನಿಸಿ. ಮೊದಲು ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ. ಅದುವೇ ನಿಮ್ಮ ಜೀವನವನ್ನು ಹೆಚ್ಚು ನಾಶ ಮಾಡುತ್ತದೆ. ಯಾವಾಗ ನಿಮಗೆ ಸಿಟ್ಟು ಬರುತ್ತದೋ ಆಗ ನಿಮ್ಮ ದೇಹ ಒಂದು ರಾಸಾಯನಿಕ ಪ್ರಕ್ರಿಯೆಗೆ ಒಳಪಡುತ್ತದೆ. ದೈಹಿಕವಾಗಿ ಹೋರಾಡಲು ಅಥವಾ ತಪ್ಪಿಸಿಕೊಳ್ಳಲು ಪ್ರತ್ರಿಕ್ರಿಯಿಸುತ್ತದೆ. ಹಾಗಾಗಿ ಕೋಪದ ಕ್ಷಣಗಳ ಬಗ್ಗೆ ಎಚ್ಚರ ವಹಿಸಿ. ಪ್ರಕೋಪಗಳನ್ನು ನಿಯಂತ್ರಿಸಲು ಕಲಿಯಿರಿ ಅಥವಾ ಯಾವ ವಿಷಯ ಹೆಚ್ಚು ಸಿಟ್ಟಿಗೇಳುವಂತೆ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಕೆಲವೊಂದು ನಿರ್ದಿಷ್ಟ ಸಂದರ್ಭಗಳು ನಿಮ್ಮನ್ನು ಸಿಟ್ಟಿಗೇಳುವಂತೆ ಮಾಡುತ್ತದೆ ಎಂದಾದಲ್ಲಿ ಅಂಥವನ್ನು ಕಡೆಗಣಿಸಲು ಪ್ರಯತ್ನಿಸಿ. ಮತ್ತು ಈಗಿನಿಂದ ಯಾವಾಗ ನಿಮಗೆ ಸಿಟ್ಟು ಬರುತ್ತದೋ, ಆಗ ಕೆಲವು ರಿಲ್ಯಾಕ್ಸೇಷನ್ ಮಾರ್ಗಗಳನ್ನು ಅನುಸರಿಸಿ. ಟೆನ್ಸಿಂಗ್ ಮತ್ತು ರೀಲಿಸಿಂಗ್ ವಿಧಾನದಿಂದ ಸ್ನಾಯುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಆಕ್ರಮಣಕಾರಿ ಎನ್ನಿಸುವ ಸಿಟ್ಟಿನ ಸಮಯದಲ್ಲಿ ನೀವು ಈ ಘಟನೆಗೆ ತಕ್ಷಣಕ್ಕೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಬೇಡಿ. ಆ ಪರಿಸ್ಥಿತಿಗೇಅವನ್ನು ಬಿಟ್ಟುಬಿಡಿ. ಅದಕ್ಕೆ ಕಾರಣವಾದವರ ಪರಿಸ್ಥಿತಿಯ ಬಗ್ಗೆ ಯೋಚಿಸಿ ಪ್ರತಿಕ್ರಿಯೆ ನೀಡಿ. ಸಿಟ್ಟು ಕಡಿಮೆಯಾಗುವವರೆಗೂ ಕಾಯಿರಿ.

ಕೆಲವು ವ್ಯಾಯಾಮಗಳು ಹಾಗೂ ಧ್ಯಾನ ನಿಮ್ಮನ್ನು ನೀವು ಸಮಾಧಾನದಿಂದ ಇರಲು ಸಹಾಯ ಮಾಡುತ್ತವೆ. ಸಾಮಾಜೀಕರಣದಿಂದ ಸಮಾನಮನಸ್ಕರ ಜೊತೆ ಬೆರೆಯಲು ಸಾಧ್ಯವಾಗುತ್ತದೆ. ಹೀಗೆ ಬೆರೆಯುವುದರಿಂದ ಧನಾತ್ಮಕವಾಗಿಯೂ ಇರಬಹುದು. ಆಗ ನಿಮ್ಮಲ್ಲಿ ಖಂಡಿತ ‘ಫೀಲ್ ಗುಡ್’ ಭಾವನೆ ಬರುತ್ತದೆ; ಆಗ ಒಂಟಿತನವೂ ದೂರಾಗುತ್ತದೆ. ನಿಮ್ಮ ಸಿಟ್ಟಿನ್ನು ಹೋಗಲಾಡಗಸಿಕೊಳ್ಳುವ ನಿಮ್ಮ ಪ್ರಯತ್ನ ಮತ್ತು ಧನಾತ್ಮಕ ಚಿಂತನೆಗಳು ನಿಮ್ಮ ಒಲವು ಯಾವ ಕಡೆಗೆ ಇದೆ ಎನ್ನುವುದನ್ನು ನಿರ್ಧರಿಸುತ್ತವೆ. ಈ ದಾರಿಯಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾಗುವ ಸಂಗಾತಿಯೂ ಸಿಗಬಹುದು. ಜೀವನದ ಬಗ್ಗೆ ನಿಮ್ಮ ಗುರಿ ಯಾವಾಗಲೂ ಧನಾತ್ಮಕವಾಗಿರಲಿ. ಸರಳವೂ ಸುಲಭವೂ ಆದ ನಿರೀಕ್ಷೆಗಳಿಂದ ಇರಿಸಿಕೊಂಡು ಶಾಂತರಾಗಿ ಜೀವಿಸಿ. ಆಗ ನೀವು ಅಂದುಕೊಂಡಂತೆಯೇ ಜೀವನ ಸಾಗುತ್ತದೆ.

3. ನನಗೆ 27ವರ್ಷ, ಉದ್ಯೋಗದಲ್ಲಿದ್ದೇನೆ. ನನಗೆ ಯಾವುದಾದರೂ ವಿಷಯದ ಮೇಲೆ ಸ್ವಲ್ಪ ದೀರ್ಘವಾಗಿ ಯೋಚಿಸಿದರೆ ಇದ್ದಕ್ಕಿದ್ದಂತೆ ತಲೆನೋವು ಬರುತ್ತದೆ. ಆ ಸಮಯದಲ್ಲಿ ಏನೇ ಯೋಚನೆ ಮಾಡಿದರು ನನಗೆ ತಲೆಯೇ ಓಡುವುದಿಲ್ಲ. ಏನೇನೋ ಯೋಚನೆಗಳು ತಲೆಯಲ್ಲಿ ತುಂಬಿಕೊಳ್ಳುತ್ತವೆ. ಜೊತೆಗೆ ಮುಂದೆ ಆಗುವುದೆಲ್ಲವನ್ನೂ ನೆಗಟಿವ್ ಆಗಿಯೇ ಯೋಚಿಸುತ್ತೇನೆ.  ಇದರಿಂದ ತುಂಬ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇನೆ. ಜೀವನದಲ್ಲಿ ಯಾವುದೇ ನಿರ್ಧಾರವನ್ನೂ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
– ರಮ್ಯಾ, ಮೈಸೂರು

ಅತಿಯಾದ ಯೋಚನೆಗಳು ಆತಂಕಕ್ಕೆ ಎಡೆ ಮಾಡಿಕೊಡುತ್ತವೆ. ಈ ಆತಂಕವೇ ಅಸಮಾಧಾನಕ್ಕೂ ಕಾರಣವಾಗಬಹುದು. ಇದರೊಂದಿಗೆ ಯಾವಾಗಲೂ ಮನಸ್ಸಿನಲ್ಲಿ ಋಣಾತ್ಮಕ ಯೋಚನೆಗಳೇ ಬಂದರೆ ನಿಮ್ಮ ಆತ್ಮವಿಶ್ವಾಸವೂ ನಿಧಾನಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ. ಜೊತೆಗೆ ಜೀವನದ ಬಗ್ಗೆ ಸ್ಪಷ್ಟತೆಯೇ ಇಲ್ಲದಂತಾಗುತ್ತದೆ.

ಅತಿಯಾಗಿ ಯೋಚಿಸುವ ಗುಣ ನಿಮ್ಮ ಮೇಲೆ ನಿಮಗೇ ನಿಯಂತ್ರಣ ಇಲ್ಲದಂತೆ ಮಾಡುತ್ತಿರುತ್ತದೆ. ಈ ಯೋಚನವಿಧಾನದಿಂದ ಹೊರ ಬರಲು ಕಷ್ಟ ಎನ್ನಿಸಬಹುದು. ಆದ್ದರಿಂದ ನಿಮ್ಮ ಯೋಚನೆಗಳ ಮೂಲವನ್ನು ಗುರುತಿಸಲು ಪ್ರಯ್ನತಿಸಿ. ಯಾವಾಗ ನಿಮ್ಮ ಯೋಚನೆಗಳು ಋಣಾತ್ಮಕ ಹಾಗೂ ಸತ್ಯಕ್ಕೆ ದೂರವಾಗಿದೆ ಎಂದು ಅನ್ನಿಸುತ್ತದೋ ಆಗ ನೀವು ನಿಮ್ಮ ಯೋಚನಾ ವಿಧಾನವನ್ನು ಬದಲಾಯಿಸುತ್ತೀರಿ. ಆಗ ಹೆಚ್ಚು ಹೆಚ್ಚು ಋಣಾತ್ಮಕವಾಗಿ ಹಾಗೂ ಸತ್ಯಕ್ಕೆ ಹತ್ತಿರವಾಗುವಂತೆ ಯೋಚಿಸುತ್ತೀರಿ. ಅನುಮಾನಿಸುವುದು ಪಡುವುದು ಹಾಗೂ ಯೋಚಿಸುವುದು – ಇವೆರಡು ಧನಾತ್ಮಕವಾಗಿರುವಂತೆ ನೋಡಿಕೊಳ್ಳಿ. ನಿಮ್ಮೊಳಗೆ ನೀವು ಮಾತನಾಡಿಕೊಳ್ಳುವುದು, ನಿಮ್ಮ ವರ್ತನೆಯ ಮೇಲೂ ಪರಿಣಾಮ ಬೀರಬಹುದು. ನಿಮ್ಮನ್ನು ನೀವು ಟೀಕೆ ಮಾಡಿಕೊಳ್ಳುವುದು, ಕೆಟ್ಟ ಯೋಚನೆಗಳ ಬಗ್ಗೆ ಚಿಂತಿಸುವುದಕ್ಕಿಂತ ನೀವು ಮಾಡಿರುವ ಹಾಗೂ ಮಾಡುತ್ತಿರುವ ಒಳ್ಳೆಯ ಕೆಲಸಗಳ ಮೇಲೆ ಗಮನ ಹರಿಸಿ. ಸ್ನೇಹಿತರಿಂದ ಆಗಾಗ ನಿಮ್ಮ ವರ್ತನೆಯ ಬಗ್ಗೆ ಕೇಳುತ್ತಿರಿ. ನೀವು ಅತಿಯಾಗಿ ವರ್ತಿಸುತ್ತೀರಾ ಹಾಗೂ ಯೋಚನೆ ಮಾಡುತ್ತೀರಾ ಎಂದು ನಂಬಿಕಸ್ತ ಸ್ನೇಹಿತ, ಬಂಧು ಹಾಗೂ ಸಹೋದ್ಯೋಗಿಗಳ ಬಳಿ ಕೇಳಿ ತಿಳಿದುಕೊಳ್ಳುವುದರಿಂದ ನೈಜತೆಯ ಅರಿವಾಗುತ್ತದೆ ನಿಮಲ್ಲಿ ವರ್ತನೆಯಲ್ಲಿ ಬದಲಾವಣೆಗಳನ್ನು ತರಲು ಇದು ಸಹಕಾರಿಯೂ ಆಗಬಹುದು.

ಯೋಚನೆಗಳು ಸದಾಕಾಲ ನೈಜತೆಯನ್ನೇ ಪ್ರತಿಪಾದಿಸುವುದಿಲ್ಲ. ಅವುಗಳು ಅಶಿಸ್ತಿನಿಂದ ಅಥವಾ ತಪ್ಪಿನಿಂದ ಕೂಡಿರುತ್ತವೆ. ದೋಷಪೂರಿತ ಗ್ರಹಿಕೆಗಳನ್ನೇ ನಿಮ್ಮ ಯೋಚನೆಯಲ್ಲಿ ತುಂಬಿಕೊಳ್ಳುವುದಕ್ಕಿಂತ ನಿಮ್ಮಿಂದ ಸಾಧ್ಯವಾಗುವ ಅನೇಕ ವಿಷಯಗಳಿವೆ. ಅವುಗಳ ಮೇಲೆ ಗಮನ ಹರಿಸಿ. ಅತಿಯಾದ ಆಲೋಚನೆಗಳು ಒಳ್ಳೆಯದಲ್ಲ ಎಂಬುದನ್ನು ಒಪ್ಪಿಕೊಳ್ಳಿ.

ನಿಮ್ಮೊಳಗೇ ನಿಧಾನಕ್ಕೆ ‘ಇವೆಲ್ಲಾ ಸುಮ್ಮನೆ ಯೋಚನೆಗಳಷ್ಟೆ; ಇವು ಯಾವುವೂ ಸತ್ಯವಲ್ಲ’ ಎಂದು ಹೇಳಿಕೊಳ್ಳಿ. ಈ ಮಂತ್ರವನ್ನು ನೀವು ಹೇಳಿಕೊಳ್ಳುವುದರಿಂದ ನಿಮ್ಮ ಮನಸ್ಸಿನಲ್ಲಿ ನೆಲೆಯೂರಿರುವ ಆಲೋಚನಾ ಕ್ರಮವನ್ನು ಬದಲಾಯಿಸಿಕೊಳ್ಳಬಹುದು. ಅದರೊಂದಿಗೆ ನಿಮ್ಮ ತಲೆನೋವನ್ನೂ ಕಡಿಮೆ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT