ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಉತ್ಪಲ್ ಪರ್‍ರೀಕರ್ ಆರೋಪ

ತಂದೆಯ ಅನಾರೋಗ್ಯ ರಾಜಕೀಯಕ್ಕೆ ಬಳಸಿಕೊಳ್ಳಲೆತ್ನಿಸಿದ್ದ ರಾಹುಲ್: ಪರ್‍ರೀಕರ್ ಪುತ್ರ

ಪಿಟಿಐ Updated:

ಅಕ್ಷರ ಗಾತ್ರ : | |

ರಾಹುಲ್ ಗಾಂಧಿ ಮತ್ತು ಮನೋಹರ್ ಪರ್‍ರೀಕರ್ (ಸಂಗ್ರಹ ಚಿತ್ರ)

ಪಣಜಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನಾರೋಗ್ಯಪೀಡಿತರಾಗಿದ್ದ ನನ್ನ ತಂದೆಯನ್ನು ನೋಡಲು ಬಂದು ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದರು’ ಎಂದು ಕೇಂದ್ರದ ಮಾಜಿ ರಕ್ಷಣಾ ಸಚಿವ ಮನೋಹರ್ ಪರ್‍ರೀಕರ್ ಪುತ್ರ ಉತ್ಪಲ್ ‍ಪರ್‍ರೀಕರ್ ಗುರುವಾರ ಆರೋಪಿಸಿದ್ದಾರೆ.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

‘ರಫೇಲ್‌ ತೀರ್ಪು ಹೊರಬಿದ್ದಿದೆ. ಇದು ರಾಹುಲ್‌ ಗಾಂಧಿಗೆ ಒಳ್ಳೆಯ ಪಾಠ ಎಂದು ನಾನು ಭಾವಿಸಿದ್ದೇನೆ. ಅವರು ಮಾಡಿದ್ದು ಅಷ್ಟೊಂದು ಚತುರವಲ್ಲದ ರಾಜಕೀಯ ತಂತ್ರದ ಭಾಗ ಆಗಿರಬಹುದು. ಯಾಕೆಂದರೆ, ಅನಾರೋಗ್ಯಪೀಡಿತರಾಗಿದ್ದ ನನ್ನ ತಂದೆಯನ್ನು ನೋಡಲು ಅವರು ಬಂದದ್ದು ಕೂಡ ಹಾಗೆಯೇ’ ಎಂದು ಮೊದಲ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಬ್ರಿಟನ್‌ ಮೂಲದ ರಕ್ಷಣಾ ಗುತ್ತಿಗೆದಾರರ ಜತೆಗೆ ರಾಹುಲ್‌ ಕಾಣಿಸಿಕೊಂಡಿದ್ದರು ಮತ್ತು ಡೋಕ್ಳಾಮ್ ಬಿಕ್ಕಟ್ಟಿನ ಸಂದರ್ಭದಲ್ಲಿ ಎದುರಾಳಿ ದೇಶದ (ಚೀನಾ) ರಾಯಭಾರಿಯನ್ನು ರಹಸ್ಯವಾಗಿ ಭೇಟಿಯಾಗಿದ್ದರು ಎಂದು ಮಾಧ್ಯಮ ವರದಿಗಳು ಪ್ರಕಟವಾಗಿದ್ದವು. ಇವನ್ನು ನಂಬುವುದಾದರೆ (ರಾಹುಲ್‌ ಮಾಡಿರುವುದು) ಕೈಗಾರಿಕಾ ಬೇಹುಗಾರಿಕೆ ಎಂಬ ಅನುಮಾನ ಮೂಡುತ್ತದೆ. ಆದರೆ, ಯಾವುದೇ ಗಟ್ಟಿ ಸಾಕ್ಷ್ಯಗಳು ಇಲ್ಲದ ಕಾರಣ ಅವರಿಗೆ ಲಾಭವಾಗಿದೆ. ಈ ಎಲ್ಲದರಿಂದ ಅವರು ಪಾಠ ಕಲಿತಿರಬಹುದು ಎಂದು ಆಶಿಸುತ್ತೇನೆ ಎಂದು ಉಳಿದೆರಡು ಟ್ವೀಟ್‌ಗಳಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪರ್‍ರೀಕರ್ ಭೇಟಿಯಾದ ರಾಹುಲ್ ಗಾಂಧಿ

ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿದ್ದ ಪರ್‍ರೀಕರ್ ಅವರನ್ನು ರಾಹುಲ್ ಗಾಂಧಿ ಗೋವಾ ಪ್ರವಾಸದ ವೇಳೆ ಜನವರಿ 29ರಂದು ಭೇಟಿ ಮಾಡಿದ್ದರು. ಬಳಿಕ, ಬೇಗನೆ ಗುಣಮುಖರಾಗುವಂತೆ ಹಾರೈಸಲು ಗೋವಾ ಮುಖ್ಯಮಂತ್ರಿ ಮನೋಹರ್ ಪರ್‍ರೀಕರ್ ಅವರನ್ನು ಭೇಟಿಯಾದೆ. ಇದು ಸೌಜನ್ಯದ ಭೇಟಿ ಎಂದು ಹೇಳಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಪರ್‍ರೀಕರ್ ಹೆಸರು ಉಲ್ಲೇಖಿಸಿದ್ದರು. ರಫೇಲ್ ಒಪ್ಪಂದ ಪ್ರಕರಣದಲ್ಲಿನ ತಮ್ಮ ಪಾತ್ರವನ್ನು ಪರ್‍ರೀಕರ್ ನಿರಾಕರಿಸಿದ್ದಾರೆ ಎಂದು ರಾಹುಲ್ ಹೇಳಿದ್ದರು. ಇದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ರಫೇಲ್ ಒಪ್ಪಂದದಲ್ಲಿ ತಮ್ಮ ಪಾತ್ರ ನಿರಾಕರಿಸಿದ ಪರ್ರೀಕರ್: ರಾಹುಲ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು