ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಖಾಸಗೀಕರಣ ಇಲ್ಲವೇ ಇಲ್ಲ

ಕೆಲವು ಘಟಕದಲ್ಲಿ ಮಾತ್ರ ಖಾಸಗಿ ಹೂಡಿಕೆ: ಲೋಕಸಭೆಯಲ್ಲಿ ಸಚಿವ ಪೀಯೂಷ್‌ ಸ್ಪಷ್ಟನೆ
Last Updated 12 ಜುಲೈ 2019, 19:46 IST
ಅಕ್ಷರ ಗಾತ್ರ

ನವದೆಹಲಿ: ರೈಲ್ವೆಯನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅಲ್ಲಗಳೆದಿದ್ದಾರೆ. ಖಾಸಗೀಕರಣದ ಪ್ರಶ್ನೆಯೇ ಇಲ್ಲ. ಆದರೆ, ಹೊಸ ತಂತ್ರಜ್ಞಾನ ಅಳವಡಿಕೆ, ಮಾರ್ಗ ಮತ್ತು ಹೊಸ ಯೋಜನೆಗಳಿಗಾಗಿ ಖಾಸಗಿ ಹೂಡಿಕೆ ಆಹ್ವಾನಿಸಲಾಗುವುದು. ಇದು ರಾಷ್ಟ್ರೀಯ ಹಿತಾಸಕ್ತಿಯಿಂದ ಮಾತ್ರ ಎಂದು ಅವರು ಹೇಳಿದ್ದಾರೆ.

ರೈಲ್ವೆಯ ಅನುದಾನ ಬೇಡಿಕೆ ಮೇಲಿನ ಚರ್ಚೆಗೆ ಅವರು ಲೋಕಸಭೆಯಲ್ಲಿ ಉತ್ತರಿಸಿದರು. ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ಹಿಂದಿನ ಯುಪಿಎ ಸರ್ಕಾರಕ್ಕಿಂತ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಹೆಚ್ಚಿನ ಮಹತ್ವ ಕೊಟ್ಟಿದೆ ಎಂಬುದನ್ನು ತೋರಿಸುವ ಅಂಕಿ ಅಂಶಗಳನ್ನು ಅವರು ಮುಂದಿಟ್ಟರು.

ಸುಮಾರು ಒಂದು ತಾಸಿನ ಭಾಷಣದ ವೇಳೆಯಲ್ಲಿ ಹಲವು ಬಾರಿ ಕಾಂಗ್ರೆಸ್‌ ಸಂಸದರು ಗದ್ದಲ ಎಬ್ಬಿಸಿದರು. ಗೋಯಲ್‌ ಅವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಅಧಿರ್ ರಂಜನ್‌ ಚೌಧರಿ ಅವರು ಆರೋಪಿಸಿದರು. ಅದಕ್ಕೆ ಕಾಂಗ್ರೆಸ್‌ ಸಂಸದರು ಬೆಂಬಲ ವ್ಯಕ್ತಪಡಿಸಿದರು.

‘ರೈಲ್ವೆ ಖಾಸಗೀಕರಣದ ಪ್ರಶ್ನೆಯೇ ಇಲ್ಲ. ಅದು ಸಾಧ್ಯವೂ ಇಲ್ಲ. ಆದರೆ, ರೈಲ್ವೆಯಲ್ಲಿ ಸೌಲಭ್ಯಗಳನ್ನು ಹೆಚ್ಚಿಸಬೇಕಿದ್ದರೆ ಹೂಡಿಕೆ ಅಗತ್ಯ. ಹಾಗಾಗಿ, ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕೆಲವು ಘಟಕಗಳಲ್ಲಿ ಖಾಸಗಿಯವರಿಗೆ ಅವಕಾಶ ಕೊಡಲಾಗುವುದು’ ಎಂದು ಪೀಯೂಷ್‌ ಹೇಳಿದರು.

ವಿರೋಧ ಪಕ್ಷವನ್ನು ಹಣಿಯಲು ಈ ಅವಕಾಶವನ್ನು ರೈಲ್ವೆ ಸಚಿವರು ಬಳಸಿಕೊಂಡರು. ಸರಕು ಸಾಗಾಟದ ವಿಶೇಷ ಮಾರ್ಗದ ನಿರ್ಮಾಣ ಕಾರ್ಯವನ್ನು 2007ರಲ್ಲಿ ಆರಂಭಿಸಲಾಗಿತ್ತು. ಅವರಿಗೆ ಒಂದು ಕಿಲೋಮೀಟರ್‌ ಮಾರ್ಗ ನಿರ್ಮಾಣವೂ ಸಾಧ್ಯವಾಗಲಿಲ್ಲ. ಆದರೆ, ನಮ್ಮ ಸರ್ಕಾರವು ಐದೇ ವರ್ಷದಲ್ಲಿ 1,900 ಕಿ.ಮೀ. ಮಾರ್ಗವನ್ನು ನಿರ್ಮಿಸಿದೆ ಎಂದು ಅವರು ಹೇಳಿದರು.

ರಾಯಬರೇಲಿಯ ಮಾಡರ್ನ್‌ ಕೋಚ್‌ ಫ್ಯಾಕ್ಟರಿಯಲ್ಲಿ 2007ರಿಂದ 2014ರ ಅವಧಿಯಲ್ಲಿ ಒಂದು ಬೋಗಿಯೂ ನಿರ್ಮಾಣ ಆಗಿಲ್ಲ. ಆದರೆ, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಲ್ಲಿ ಮೊದಲ ಬೋಗಿ ನಿರ್ಮಾಣ ಆಯಿತು. ಈ ಕಾರ್ಖಾನೆಯ ಸಾಮರ್ಥ್ಯವನ್ನು ವರ್ಷಕ್ಕೆ 5,000 ಬೋಗಿ ನಿರ್ಮಿಸುವ ಮಟ್ಟಕ್ಕೆ ಹೆಚ್ಚಿಸಲು ಬಯಸಿದ್ದೇವೆ. ಇಲ್ಲಿ ತಯಾರಾದ ಬೋಗಿಗಳು ಜಗತ್ತಿನ ವಿವಿಧೆಡೆಗೆ ಹೋಗಬೇಕು. ಇದನ್ನು ಜಗತ್ತಿನ ಅತ್ಯಂತ ದೊಡ್ಡ ಬೋಗಿ ಕಾರ್ಖಾನೆಯಾಗಿ ಪರಿವರ್ತಿಸಬೇಕು ಎಂಬುದು ನಮ್ಮ ಉದ್ದೇಶ ಎಂದು ಅವರು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮುನ್ನೋಟದಿಂದಾಗಿಯೇ ರೈಲ್ವೆ ಅಭಿವೃದ್ಧಿ ಹೊಂದುತ್ತಿದೆ ಎಂದೂ ಅವರು ಹೇಳಿದರು.

‘ಸ್ಪರ್ಧೆಯ ವಯಸ್ಸು 18ಕ್ಕೆ ಇಳಿಯಲಿ’
ಸಂಸತ್ತು ಮತ್ತು ವಿಧಾನಸಭೆಗೆ ಸ್ಪರ್ಧಿಸಲು ಕನಿಷ್ಠ ವಯಸ್ಸನ್ನು 18 ವರ್ಷಕ್ಕೆ ಇಳಿಸಬೇಕು ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಒತ್ತಾಯಿಸಿದ್ದಾರೆ. ಸ್ಪರ್ಧೆಗೆ ಅರ್ಹತೆಯ ವಯಸ್ಸನ್ನು ಈಗಿನ 25ರಿಂದ 18ಕ್ಕೆ ಇಳಿಸಲು ಖಾಸಗಿ ಸದಸ್ಯರ ಮಸೂದೆಯನ್ನು ಲೋಕಸಭೆಯಲ್ಲಿ ಶುಕ್ರವಾರ ಅವರು ಮಂಡಿಸಿದರು.

‘ದೇಶದ ಬಹುಸಂಖ್ಯಾತರ ವಯಸ್ಸು ಚುನಾವಣೆಯಲ್ಲಿ ಸ್ಪರ್ಧಿಸುವ ವಯಸ್ಸಿಗಿಂತ ಕಡಿಮೆ ಇದೆ. ಆದರೆ, ಅವರ ಸಾಕ್ಷರತೆಯು ಸ್ವಾತಂತ್ರ್ಯ ಬಂದ ದಿನಕ್ಕೆ ಹೋಲಿಸಿದರೆ ಹಲವು ಪಟ್ಟು ಹೆಚ್ಚಾಗಿದೆ. ಹಾಗಾಗಿ, ನಮ್ಮನ್ನು ಪ್ರತಿನಿಧಿಗಳಾಗಿ ಆಯ್ಕೆ ಮಾಡುವ ಜನರಿಗೆ 18 ವರ್ಷದಲ್ಲಿಯೇ ಸ್ಪರ್ಧಿಸುವ ಅವಕಾಶವನ್ನು ನೀಡಬೇಕಾಗಿದೆ’ ಎಂದು ತರೂರ್‌ ಮಸೂದೆಯಲ್ಲಿ ಹೇಳಿದ್ದಾರೆ.

7,000 ಶಿಕ್ಷಕರ ಹುದ್ದೆ ಭರ್ತಿ
ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರ ಸರ್ಕಾರದ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಎಲ್ಲ ಶಿಕ್ಷಕ ಹುದ್ದೆಗಳನ್ನು 6 ತಿಂಗಳೊಳಗೆ ಭರ್ತಿ ಮಾಡಲಾ ಗುವುದು ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಲೋಕಸಭೆಗೆ ತಿಳಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಕೇಂದ್ರೀಯ ಬುಡಕಟ್ಟು ವಿ.ವಿ. ಸೇರಿ ಎರಡು ಕೇಂದ್ರೀಯ ವಿ.ವಿ. ಸ್ಥಾಪನೆಯ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ.

ಕೇಂದ್ರೀಯ ವಿ.ವಿ. ಮತ್ತು ಇತರ ಸಂಸ್ಥೆಗಳಲ್ಲಿ ಶಿಕ್ಷಕರ ಒಟ್ಟು 7 ಸಾವಿರ ಹುದ್ದೆಗಳು ಖಾಲಿ ಇವೆ.

**

ಬಾಲ್ಯದಲ್ಲಿ ರೈಲುಗಳ ಮುಂದೆ ಚಹಾ ಮಾರುತ್ತಿದ್ದ ವ್ಯಕ್ತಿ (ಮೋದಿ) ಈ ದೇಶವನ್ನು ನೋಡಿದರು. ರೈಲ್ವೆಯ ಮಹತ್ವವನ್ನು ಅರ್ಥ ಮಾಡಿಕೊಂಡರು.
-ಪೀಯೂಷ್‌ ಗೋಯಲ್‌, ರೈಲ್ವೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT