ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ: ₹50 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ

ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಕರ್ಯ ವೃದ್ಧಿಗೆ ಒತ್ತು l ರೈಲ್ವೆಗೆ ₹65,837 ಕೋಟಿ ಹಂಚಿಕೆ
Last Updated 5 ಜುಲೈ 2019, 18:26 IST
ಅಕ್ಷರ ಗಾತ್ರ

ನವದೆಹಲಿ: ರೈಲ್ವೆ ಕ್ಷೇತ್ರದಲ್ಲಿ ಖಾಸಗಿಯವರಿಗೆ ಬಂಡವಾಳ ಹೂಡಲು ಅವಕಾಶ ನೀಡಿದ್ದು, ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲು 2030ರ ವೇಳೆಗೆ ₹50 ಲಕ್ಷ ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ತ್ವರಿತವಾಗಿ ಮೂಲಸೌಕರ್ಯಗಳನ್ನು ಒದಗಿಸಲು ಈ ಬಾರಿಯ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಒಟ್ಟಾರೆ ಈ ಸಲದ ಬಜೆಟ್‌ನಲ್ಲಿ ರೈಲ್ವೆಗೆ ₹65,837 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ಬಾರಿ ₹55,088 ಕೋಟಿ ನೀಡಲಾಗಿತ್ತು.

ರೈಲ್ವೆಗೆ ಸಂಬಂಧಿಸಿದ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಜನರಿಗೆ ಉತ್ತಮ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ಖಾಸಗಿಯವರಿಗೆ ಬಂಡವಾಳ ಹೂಡಲು ಅವಕಾಶ ನೀಡಲಾಗಿದೆ. ಸಬ್‌ ಅರ್ಬನ್‌ ರೈಲು ಯೋಜನೆ ಮತ್ತು ಮೆಟ್ರೊಗೆ ಸಂಪರ್ಕ ಕಲ್ಪಿಸುವ ಯೋಜನೆಗಳಲ್ಲೂ ಖಾಸಗಿ ಹೂಡಿಕೆಗೆ ಅವಕಾಶ ನೀಡಲಾಗಿದೆ. ಅಲ್ಲದೆ ಸಬ್‌ ಅರ್ಬನ್‌ ರೈಲು ಯೋಜನೆಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡಲು ವಿಶೇಷ ಉದ್ದೇಶವಾಹಕ (ಎಸ್‌ಪಿವಿ) ರಚಿಸಲಾಗುತ್ತದೆ.

ಹೊಸ ಮಾರ್ಗಗಳ ನಿರ್ಮಾಣಕ್ಕೆ ₹7,255 ಕೋಟಿ, ಗೇಜ್‌ ಪರಿವರ್ತನೆಗೆ ₹2,200 ಕೋಟಿ, ಜೋಡಿ ಮಾರ್ಗ ಅಭಿವೃದ್ಧಿಗೆ ₹700 ಕೋಟಿ, ಸಿಗ್ನಲಿಂಗ್‌ ಮತ್ತು ಟೆಲಿಕಾಂಗೆ ₹1,750 ಕೋಟಿ ಹಂಚಿಕೆ ಮಾಡಲಾಗಿದೆ. ಉಳಿದಂತೆ ಕಳೆದ ಫೆಬ್ರುವರಿಯಲ್ಲಿ ಆಗಿನ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಅವರು ಮಂಡಿಸಿದ ಬಜೆಟ್‌ನಲ್ಲಿ ಮಾಡಿದ್ದ ಹಂಚಿಕೆ ಮತ್ತು ಯೋಜನೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ರೈಲ್ವೆ ನಿಲ್ದಾಣಗಳ ಆಧುನಿಕರಣಕ್ಕೂ ಈ ಬಾರಿ ಒತ್ತು ನೀಡಲಾಗಿದೆ. ಆದರೆ, ದರ ಏರಿಕೆಯ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಹೀಗಾಗಿ ಪ್ರಯಾಣಿಕರಿಗೆ ಈ ವರ್ಷ ಯಾವುದೇ ಹೊರೆಯಾಗುವುದಿಲ್ಲ.

ರೈಲ್ವೆಯಲ್ಲಿ ವೆಚ್ಚದ್ದೇ ದೊಡ್ಡ ಸಮಸ್ಯೆಯಾಗಿದ್ದು ಸಿಬ್ಬಂದಿಯ ವೇತನಕ್ಕಾಗಿ ₹86,554.31 ಕೋಟಿ ಬೇಕಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ₹14,000 ಕೋಟಿ ಹೆಚ್ಚಾಗುತ್ತದೆ. ರೈಲ್ವೆ ಇಲಾಖೆಯ ಒಟ್ಟಾರೆ ಗಾತ್ರ ₹1.60 ಲಕ್ಷ ಕೋಟಿ. ನಿರ್ಭಯಾ ನಿಧಿಗೆ ₹267.64 ಕೋಟಿ ಹಂಚಿಕೆ ಮಾಡಲಾಗಿದೆ.

ಅಧಿಕ ಹಣ: ರೈಲು ಪ್ರಯಾಣಿಕರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ₹ 3,000 ಕೋಟಿಗೂ ಅಧಿಕ ಹಣವನ್ನು ಹಂಚಿಕೆ ಮಾಡಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 200ರಷ್ಟು ಹೆಚ್ಚಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಪ್ರಯಾಣಿಕರಿಗೆ ಸೌಕರ್ಯಗಳನ್ನು ಕಲ್ಪಿಸಿಕೊಡಲು ₹1,657 ಕೋಟಿ ನೀಡಲಾಗಿತ್ತು. ಆದರೆ, ಈ ವರ್ಷ 3,422.57 ಕೋಟಿ ನೀಡಲಾಗಿದೆ. 2017–18ನೇ ಸಾಲಿನಲ್ಲಿ ಈ ಉದ್ದೇಶಕ್ಕೆ 1,100.90 ಕೋಟಿ ನೀಡಲಾಗಿತ್ತು.

‘ಟ್ರೈನ್‌ 18’ ಮತ್ತು ‘ಟ್ರೈನ್‌ 20’ ಸಂಖ್ಯೆಯನ್ನು ಜಾಸ್ತಿ ಮಾಡುವುದು, 2020ರ ವೇಳೆಗೆ ಪ್ರಯಾಣಿಕರಿಗೆ ವಿಶ್ವದರ್ಜೆಯ ಆಧುನಿಕ ಸೌಲಭ್ಯಗಳು ಇರುವ ರೈಲುಗಳ ಸೇವೆ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ರೈಲ್ವೆ ಸಚಿವ ‍ಪೀಯೂಷ್‌ ಗೋಯಲ್‌ ಹೊಂದಿದ್ದಾರೆ. ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ ರೈಲುಗಳ ಬದಲು ಗುಣಮಟ್ಟದ ಸೌಲಭ್ಯಗಳು ಇರುವ ಹೊಸ ರೈಲುಗಳನ್ನು ಪರಿಚಯಿಸುವ ಗುರಿಯನ್ನು ಹೊಂದಲಾಗಿದೆ.

ವೈಫೈ ಸೌಲಭ್ಯ, ಕುಡಿಯುವ ನೀರು, ಪ್ರಯಾಣಿಕರಿಗೆ ಮಾಹಿತಿ ನೀಡುವ ಕಿಯಾಸ್ಕ್‌ ಅಳವಡಿಕೆ, ವಿಶ್ರಾಂತಿ ಕೊಠಡಿಗಳನ್ನು ಮೇಲ್ದರ್ಜೆಗೆ ಏರಿಸುವುದು, ಟಿ.ವಿ ವೀಕ್ಷಣೆಗೆ ಅವಕಾಶ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಉದ್ದೇಶದಿಂದ 600 ಪ್ರಮುಖ ರೈಲು ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ತೀರ್ಮಾನಿಸಲಾಗಿದೆ.

ರಾಜ್ಯದ ಯೋಜನೆಗಳಿಗೆ ₹ 2536 ಕೋಟಿ

ಜೋಡಿ ರೈಲು ಮಾರ್ಗ, ನಿಲ್ದಾಣಗಳ ಆಧುನೀಕರಣ ಒಳಗೊಂಡಂತೆ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು ನೈರುತ್ಯ ರೈಲ್ವೆಗೆ ಪ್ರಸಕ್ತ ಸಾಲಿನಲ್ಲಿ ₹ 2,536 ಕೋಟಿ ಒದಗಿಸಿದೆ.

ಒಟ್ಟು 266 ಕಿಲೋ ಮೀಟರ್‌ ಜೋಡಿ ರೈಲು ಮಾರ್ಗದ ಅಭಿವೃದ್ಧಿ, 466 ಕಿಲೋ ಮೀಟರ್‌ ಮಾರ್ಗದ ವಿದ್ಯುದೀಕರಣ, ಗಿಣಿಗೇರಾ– ರಾಯಚೂರು ನೂತನ ಮಾರ್ಗದ ಗಂಗಾವತಿ– ಕಾರಟಗಿ ನಡುವಣ 28 ಕಿಲೋ ಮೀಟರ್‌ ಹಳಿಗಳ ಜೋಡಣೆ ಕಾರ್ಯವನ್ನು ಪ್ರಸಕ್ತ ವರ್ಷ ಪೂರ್ಣಗೊಳಿಸಲು ಶುಕ್ರವಾರ ಮಂಡಿಸಲಾದ ಬಜೆಟ್‌ನಲ್ಲಿ ಅನುಮೋದನೆ ದೊರೆತಿದೆ.

ಉಪನಗರ ರೈಲು ಯೋಜನೆಯನ್ನು ಉತ್ತೇಜಿಸಲು ಅನುದಾನ ಒದಗಿಸುವುದಾಗಿ ಘೋಷಸಲಾಗಿದ್ದು, ರಾಜ್ಯ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಅಡ್ಡಿ– ಆತಂಕಗಳನ್ನು ಸರಿಪಡಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಮೊದಲ ಹಂತದಲ್ಲೇ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಸಾಕಾರಗೊಳ್ಳಲಿದೆ.

ಜೋಡಿ ಮಾರ್ಗಕ್ಕೆ ತ್ವರಿತಗತಿ:ರೈಲುಗಳ ತ್ವರಿತ ಸಂಚಾರದ ಉದ್ದೇಶದಿಂದ ರೂಪಿಸಲಾದ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗಿದ್ದು, ಕಾಮಗಾರಿಗೆ ವೇಗ ನೀಡುವ ಮೂಲಕ ಪೂರ್ಣಗೊಳಿಸಿ ಸೌಲಭ್ಯ ಕಲ್ಪಿಸಲಾಗುವುದು. ಪುಣೆಯಿಂದ ಬೆಂಗಳೂರುವರೆಗಿನ ಜೋಡಿ ರೈಲು ಮಾರ್ಗಗಳ ಕಾಮಗಾರಿಗಳನ್ನು ತ್ವರಿತಗೊಳಿಸಲು ಇಲಾಖೆಯು ನಿರ್ಧರಿಸಿದೆ.

***

ಪುಣೆಯಿಂದ ಮಿರಜ್‌, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ತಿಪಟೂರು, ತುಮಕೂರು ಮೂಲಕ ಬೆಂಗಳೂರರಿಗೆ ಸಂಪರ್ಕ ಕಲ್ಪಿಸುವ ಜೋಡಿ ರೈಲು ಮಾರ್ಗದ ಕಾಮಗಾರಿ ತ್ವರಿತಗೊಳ್ಳಲಿದೆ.

- ಸುರೇಶ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT